ಯೋಜನೆ ಜನರಿಗೆ ತಲುಪಿಸಿ

7

ಯೋಜನೆ ಜನರಿಗೆ ತಲುಪಿಸಿ

Published:
Updated:

ಯಾದಗಿರಿ: ರಾಜ್ಯ ಸರ್ಕಾರ ಗ್ರಾಮೀಣ ಜನರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಬಿಜೆಪಿ ಮುಖಂಡ ವೆಂಕಟರೆಡ್ಡಿ ಮುದ್ನಾಳ ಹೇಳಿದರು.ಬುಧವಾರ ಗಡಿ ಭಾಗದ ಕಡೆಚೂರ ಗ್ರಾಮದಲ್ಲಿ ಸೈದಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಶಾಸಕ ಚಿಂಚನಸೂರರ ಭ್ರಷ್ಟಾಚಾರದಿಂದ ಮತಕ್ಷೇತ್ರದ ಪ್ರಗತಿಗೆ ಹಿನ್ನಡೆಯಾಗಿದೆ. ಬರುವ ದಿನಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.ಈ ಭಾಗದಲ್ಲಿ ರಾಜ್ಯ ಸರ್ಕಾರ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ನಿರ್ಧರಿಸಿರುವದು ಸ್ವಾಗತಾರ್ಹ. ಒಂದು ಎಕರೆ ಜಮೀನಿಗೆ ರೂ. 6 ಲಕ್ಷ ನೀಡುವುದಾಗಿ ಹೇಳಲಾಗುತ್ತಿದ್ದು, ಇದು ರೈತರಿಗೆ ಸಮಧಾನ ತಂದಿಲ್ಲ. ಅವರಿಗೆ ಸೂಕ್ತ ಬೆಲೆ ದೊರಕಿಸಿ ಕೊಡಲು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಭಾಗದ ಹಲವಾರು ಗ್ರಾಮಗಳಿಗೆ ನದಿಯಿಂದ ಶಾಶ್ವತ ನೀರು ಪೂರೈಸುವ ಯೋಜನೆ ಕಾಮಗಾರಿಯು ಕಳೆದ 4 ವರ್ಷದಿಂದ ಮಂದಗತಿಯಲ್ಲಿ ಸಾಗಿದೆ. ಯೋಜನೆ ಪೂರ್ಣಗೊಳಿಸಲು ಗಮನ ಹರಿಸಲಾಗುವುದು ಎಂದು ಹೇಳಿದರು.ಬಿಜೆಪಿ ವಿಭಾಗಿಯ ಸಂಘಟನಾ ಕಾರ್ಯದರ್ಶಿ ನೀಲಕಂಠರಾಯ ಯಲ್ಹೇರಿ ಮಾತನಾಡಿ, ಕಳೆದ 4 ದಶಕಗಳಿಂದ ಇಲ್ಲಿನ ಜನರಿಂದ ಆಯ್ಕೆಯಾದ ಕಾಂಗ್ರೆಸ್ ಜನಪ್ರತಿನಿಧಿಗಳಾರೂ ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆಸಕ್ತಿ ತೋರಿಸಲಿಲ್ಲ. ಆದರೆ ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ನಿರ್ಧರಿಸಿದೆ. ಇದು ಬದಲಾವಣೆಯ ಸಂಕೇತವಾಗಿದೆ ಎಂದು ಹೇಳಿದರು.ಬ್ಲಾಕ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ, ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಎಪಿಎಂಸಿ ನಿರ್ದೇಶಕ ಭೀಮನಗೌಡ ಕ್ಯಾತನಾಳ ಪ್ರಾಸ್ತಾವಿಕ ಮಾತನಾಡಿದರು.ಬ್ಲಾಕ್ ಬಿಜೆಪಿ ಅಧ್ಯಕ್ಷ ವೆಂಕಟರಾಮರಡ್ಡಿ ವಡವಟ್, ಟಿಎಪಿಎಂಎಸ್ ಅಧ್ಯಕ್ಷ ಸದಾಶಿವರಡ್ಡಿ ಕೊಂಡಾಪುರ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಹಾದೇವಮ್ಮ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಲ್ಲಣಗೌಡ ಪಾಟೀಲ್, ಶಕ್ತಿ ಕೇಂದ್ರದ ಅಧ್ಯಕ್ಷ ವಿರುಪಣ್ಣಗೌಡ ಬೆಳಗುಂದಿ, ಕಡೇಚೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗುರಪ್ಪ ಸಾಹುಕಾರ, ಬಾಡಿಯಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಂದ್ರಪ್ಪ, ಶ್ರೀಧರ ಘಂಟಿ, ತಾಯಪ್ಪ ಬದ್ದೇಪಲ್ಲಿ ಮುಂತಾದವರು ವೇದಿಕೆಯಲ್ಲಿದ್ದರು. ವಲಯದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry