ಮಂಗಳವಾರ, ಅಕ್ಟೋಬರ್ 22, 2019
26 °C

ಯೋಜನೆ ಜಾರಿಗೆ ಹೋರಾಟ ನಾಚಿಕೆಗೇಡು

Published:
Updated:

ಕವಿತಾಳ: ತಮ್ಮದೇ ಸರ್ಕಾರ ಅಧಿಕಾರದಲ್ಲಿ ಇದೆ. ತಾವೇ ಅಧಿಕಾರದಲ್ಲಿದ್ದು ಯೋಜನೆ ಜಾರಿಗೆ ಹೋರಾಟ ಮಾಡುವುದಾಗಿ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಯೋಜನೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ಅದು ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರ ಬರಲಿ ಎಂದು ಮಾಜಿ ಶಾಸಕ ಎನ್.ಎಸ್.ಬೋಸರಾಜು ಯಾರೊಬ್ಬರ ಹೆಸರೂ ಹೇಳದೆ ತೀಕ್ಷ್ಣ ಟೀಕೆ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. 9ಎ ಕಾಲುವೆ, ನಂದವಾಡಗಿ ಏತ ನೀರಾವರಿ ಯೋಜನೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಯೋಜನೆ ಆರಂಭಿಕ ಹಂತದಲ್ಲಿಯೇ ಇದ್ದು ಸರ್ವೇ, ಅಲೈನ್‌ಮೆಂಟ್ ನಂತರ ತಾಂತ್ರಿಕ ಅನುಮೋದನೆ ಪಡೆದು ಯೋಜನೆ ರೂಪಿಸಿ ಆರ್ಥಿಕ ಅನುಮೋದನೆ ನಂತರ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಇದ್ಯಾವುದೂ ಆಗದೆ ಹೋರಾಟ ಮಾಡಿ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳುವ ಮೂಲಕ ಆಡಳಿತ ಪಕ್ಷದ ಜನಪ್ರತಿನಿಧಿಗಳು ರೈತರ ಕಣ್ಣಿಗೆ ಮಣ್ಣೆರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿದ್ಯುತ್, ನೀರಾವರಿ, ಕುಡಿಯುವ ನೀರಿನ ಯೋಜನೆ, ರಸ್ತೆ ಅಭಿವೃದ್ಧಿ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದರು.2004ರಲ್ಲಿ ಚುನಾವಣೆ ಸಂದರ್ಭದಲ್ಲಿ ನಂದವಾಡಗಿ ಏತ ನೀರಾವರಿ ಯೋಜನೆ ಹೆಸರಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡಿದ, ಇಂದು ಅಧಿಕಾರದಲ್ಲಿರುವ ಮುಖಂಡರು ಬಾಯ್ಮುಚ್ಚಿ ಕುಳಿತಿರುವುದನ್ನು ಪ್ರಶ್ನಿಸುವುದಾಗಿ ಅವರು ತಿಳಿಸಿದರು.ಯದ್ಲಾಪುರ, ಯರಮರಸ್ ಮತ್ತು ಛತ್ತೀಸ್‌ಘಡದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಆರಂಭಿಸುವುದಾಗಿ ಹೇಳಿದ ಸರ್ಕಾರ ಇದುವರೆಗೂ ಮೌನವಾಗಿದೆ. ಅಧಿಕಾರ ಬಂದ ದಿನದಿಂದ ಖುರ್ಚಿ ಉಳಿಸಿಕೊಳ್ಳಲು ಮತ್ತು ಭ್ರಷ್ಟಾಚಾರ ನಡೆಸಲು ತೀವ್ರ ಪೈಪೋಟಿ ನಡೆಸಿದ್ದೆ ಬಿಜೆಪಿ ಸರ್ಕಾರದ ಸಾಧನೆ ಎಂದು ಟೀಕಿಸಿದರು.

ಮೂಲ ಯೋಜನೆಯಂತೆ ನಂದವಾಡಗಿ ಮತ್ತು 9ಎ ಯೋಜನೆ ಜಾರಿ ಮಾಡದಿದ್ದರೆ ರೈತರ ಪರವಾಗಿ ಉಗ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ, ಶಾಸಕರಿಗೆ ಅನುದಾನ ಬಿಡುಗಡೆಯಲ್ಲಿ ಸರ್ಕಾರ ತಾರತಮ್ಯ ಮಾಡಿದೆ. ಬರಗಾಲ ಪರಿಹಾರ ಎಂದು ಕ್ಷೇತ್ರಕ್ಕೆ ಕೇವಲ ರೂ. 20 ಲಕ್ಷ ನೀಡಿದ್ದು ಯಾವ ಕಾಮಗಾರಿ ಕೈಗೊಳ್ಳಬೇಕು. ಕೊಳವೆಬಾವಿ ಕೊರೆಸಲು ಇಡೀ ಜಿಲ್ಲೆಗೆ ರೂ.10 ಲಕ್ಷ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ನಾಯಕ, ಅಮರೇಶಪ್ಪ ಹಾಲಾಪುರ, ಪಂಪನಗೌಡ, ಯಮನಪ್ಪ, ರಾಜೇಶ, ಶರಣಬಸವ ಹಣಿಗಿ, ಅಯ್ಯಪ್ಪ ನಿಲೋಗಲ್, ಹನುಮಂತ ಅರಿಕೇರಿ, ಚಾಂದ್‌ಪಾಶಾ, ಮಲ್ಲಿಕಾರ್ಜುನ ಮಲ್ಲಟ ಮತ್ತಿತರರು ಉಪಸ್ಥಿತರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)