ಯೋಜನೆ ಜಾರಿಗೊಳಿಸಿದಲ್ಲಿ ಕೋಟ್ಯಂತರ ಅನುದಾನ

7

ಯೋಜನೆ ಜಾರಿಗೊಳಿಸಿದಲ್ಲಿ ಕೋಟ್ಯಂತರ ಅನುದಾನ

Published:
Updated:

ಬೆಂಗಳೂರು: `ಯೋಜನೆಗಳನ್ನು ಸಮರ್ಥವಾಗಿ ಜಾರಿಗೊಳಿಸುವುದಾದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಲು ಸಿದ್ಧವಿದೆ~ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.ಕಾರ್ಮಿಕರ ರಾಜ್ಯ ವಿಮಾ ನಿಗಮವು ಬೆಂಗಳೂರಿನ ಪೀಣ್ಯದಲ್ಲಿ 116 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಆಸ್ಪತ್ರೆಯ (ದೇಶದ 150ನೇ ಇಎಸ್‌ಐ ಆಸ್ಪತ್ರೆ) ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.ಆಸ್ಪತ್ರೆ, ವೈದ್ಯಕೀಯ ಕಾಲೇಜು, ಭವಿಷ್ಯ ನಿಧಿ ಕಟ್ಟಡ ಮುಂತಾದ ಯೋಜನೆಗೆ ಕೇಂದ್ರ ಕಾರ್ಮಿಕ ಇಲಾಖೆ ಮೂರು ವರ್ಷಗಳಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿ ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಸದ್ಯ ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳನ್ನು ಬಳಸಿಕೊಳ್ಳುವಲ್ಲಿ ಉತ್ಸಾಹ ತೋರುತ್ತಿರುವುದು ಮೆಚ್ಚುವಂತಹ ಸಂಗತಿ ಎಂದು ಅವರು ಹೇಳಿದರು.ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ರಾಜ್ಯ ಸರ್ಕಾರ ಮೀಸಲಿಟ್ಟಿರುವ ಹದಿನೈದು ಕೋಟಿ ರೂಪಾಯಿ ಬಹಳ ಕಡಿಮೆ. ಕೇಂದ್ರ ಸರ್ಕಾರ ಶಿಕ್ಷಣ ಹಕ್ಕನ್ನು ಮೂಲಭೂತ ಹಕ್ಕಾಗಿಸಿದೆ. ಆರರಿಂದ ಹದಿನಾರು ವರ್ಷದ ಮಕ್ಕಳೆಲ್ಲರೂ ಶಾಲೆಗೆ ಹೋಗಬೇಕು ಎಂಬುದು ಉದ್ದೇಶ. ರಾಜ್ಯ ಸರ್ಕಾರ ಹೆಚ್ಚಿನ ಹಣ ಮೀಸಲಿಟ್ಟು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಮತ್ತು ಮಕ್ಕಳಿಗೆ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಮಂಡ್ಯದಲ್ಲಿ ಬೀಡಿ ಕಾರ್ಮಿಕರಿಗಾಗಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಸುಮಾರು ಇನ್ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನೂರು ಹಾಸಿಗೆಗಳ ಆಸ್ಪತ್ರೆ ಮತ್ತು ಚಿಕ್ಕಬಳ್ಳಾಪುರದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈ ಯೋಜನೆಗಳು ಈಗಾಗಲೇ ಜಾರಿ ಹಂತದಲ್ಲಿವೆ ಎಂದು ಅವರು ಮಾಹಿತಿ ನೀಡಿದರು.ಕಾರ್ಮಿಕ ಇಲಾಖೆ ಜಾರಿಗೆ ತಂದಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಪ್ರಧಾನ ಮಂತ್ರಿಗಳು ಈ ಯೋಜನೆಯನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಇಲಾಖೆಗೆ ಹೆಚ್ಚಿನ ಹಣ ನೀಡುವ ಸೂಚನೆಯನ್ನೂ ಅವರು ನೀಡಿದ್ದಾರೆ. ಯುವಕರಿಗೆ ಉದ್ಯೋಗ ಒದಗಿಸುವುದು, ಕೌಶಲ ಅಭಿವೃದ್ಧಿ ಮತ್ತು ಆರೋಗ್ಯ ವಿಷಯಗಳಲ್ಲಿ ಸಹಕಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ಅಮೆರಿಕ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಹೇಳಿದರು.ಬಳಸಿದ್ದು 100 ಕೋಟಿ: ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಸೆಸ್ ರೂಪದಲ್ಲಿ ಸುಮಾರು ಸಾವಿರ ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಈ ಹಣದಲ್ಲಿ ರಾಜ್ಯ ಸರ್ಕಾರ ಕೇವಲ ನೂರು ಕೋಟಿ ರೂಪಾಯಿಯನ್ನು ಮಾತ್ರ ಬಳಸಿಕೊಂಡಿದೆ. ಸಂಪೂರ್ಣ ಹಣ ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಅವರಿಗೆ ಖರ್ಗೆ ತಾಕೀತು ಮಾಡಿದರು. ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಜಾರಿ ಸಹ ನಿಧಾನವಾಗುತ್ತಿದೆ ಎಂದರು.`ಬೇರೆ ಇಲಾಖೆಗಳಿಗೆ ನಾವೇ ಪತ್ರ ಬರೆದು ಅನುದಾನ ಕೇಳುತ್ತೇವೆ. ಆದರೆ ಕಾರ್ಮಿಕ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಯೋಜನೆಗಳನ್ನು ಬಳಸಿಕೊಳ್ಳುವಂತೆ ಎಚ್ಚರಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಕೇಂದ್ರದ ಉಳಿದ ಇಲಾಖೆಗಳೂ ಇದೇ ರೀತಿ ಸಹಕಾರ ನೀಡಿದರೆ ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗುತ್ತದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.`ರಾಜ್ಯದಲ್ಲಿ 18 ಲಕ್ಷ ಮಂದಿ ಇಎಸ್‌ಐ ವಿಮಾದಾರರು ಇದ್ದಾರೆ. ವಿಮಾದಾರರ ಅವಲಂಬಿಗಳೂ ಸೇರಿದರೆ ಈ ಸಂಖ್ಯೆ 90 ಲಕ್ಷವಾಗುತ್ತದೆ. ಅಷ್ಟೂ ಮಂದಿಗೂ ಸರ್ಕಾರ ಸೌಲಭ್ಯ ನೀಡುತ್ತಿದೆ. ಆದ್ದರಿಂದ ಹೆಚ್ಚಿನ ಆಸ್ಪತ್ರೆಗಳ ಅಗತ್ಯ ಇದೆ. ಗುಲ್ಬರ್ಗದಲ್ಲಿ ವೈದ್ಯಕೀಯ ಸಂಕಿರ್ಣ ನಿರ್ಮಾಣಕ್ಕೆ ಖರ್ಗೆ ಅವರು 770 ಕೋಟಿ ರೂಪಾಯಿ ನೀಡಿದ್ದಾರೆ.

 

ಇಂದಿರಾನಗರದ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜು ಆರಂಭಿಸಲು 72 ಕೋಟಿ ರೂಪಾಯಿ ನೀಡಿದ್ದಾರೆ. ಇಎಸ್‌ಐ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಲು ವೈದ್ಯರನ್ನು ರಾಜ್ಯ ಲೋಕಸೇವಾ ಆಯೋಗದ ಮೂಲಕ ನೇಮ ಮಾಡಿಕೊಳ್ಳಲಾಗುತ್ತಿದೆ. 90 ವೈದ್ಯರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ~ ಎಂದು ಬಚ್ಚೇಗೌಡ ಹೇಳಿದರು.ಸಿಎಂಗೆ ಮೋಟಮ್ಮ ಮೆಚ್ಚುಗೆ

ವಿಶಾಲ ದೃಷ್ಟಿಕೋನ ಹೊಂದಿರುವ ಸದಾನಂದಗೌಡ ಅವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

 

ನಗು ನಗುತ್ತಲೇ ಸದಾನಂದಗೌಡ ಕೆಲಸ ಮಾಡುತ್ತಿದ್ದಾರೆ. ಸ್ವಪಕ್ಷದವರು ಅವರ ಕಾಲನ್ನು ಎಳೆಯದೆ ಅವರಿಗೆ ಹೆಚ್ಚಿನ ಸಹಕಾರ ನೀಡಬೇಕು. ಯಾವುದೇ ಯೋಜನೆ ಜಾರಿಗೊಳ್ಳಬೇಕಾದರೆ ಸುಸ್ಥಿರ ಸರ್ಕಾರ ಇರಬೇಕು ಎಂದು ಖರ್ಗೆ ಹೇಳಿದರು. ಐದು ತಿಂಗಳಲ್ಲಿ ರಾಜಾಜಿನಗರದ ವೈದ್ಯಕೀಯ ಆಸ್ಪತ್ರೆ ಉದ್ಘಾಟಿಲಾಗುತ್ತದೆ, ಆ ಕಾರ್ಯಕ್ರಮದಲ್ಲಿಯೂ ಸದಾನಂದಗೌಡ ಅವರು ಇರಲಿ ಎಂಬುದು ಆಶಯ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry