ಮಂಗಳವಾರ, ಜೂನ್ 15, 2021
23 °C

ಯೋಜನೆ ಭರಪೂರ, ಆದರೂ ಅಭಿವೃದ್ಧಿಗೆ ಬರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಇದು ಮಂಗಲ ಗ್ರಾಮ. ದೊಡ್ಡ ಊರು. ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಪ್ರಗತಿ ಹಾದಿಯಲ್ಲಿದೆ. ರಾಜ್ಯ ಮೂರನೇ ಹಣಕಾಸು ಆಯೋಗದ ಸದಸ್ಯ ಟಿ.ತಿಮ್ಮೇಗೌಡ ಅವರ ಹುಟ್ಟೂರು ಹೌದು. ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದರೂ, ಸಮಸ್ಯೆಗಳು ಇನ್ನೂ ಉಳಿದಿವೆ ಎಂಬುವುದೇ ವಿಪರ್ಯಾಸ.ಜಿಲ್ಲಾ ಕೇಂದ್ರದಿಂದ 6.3 ಕಿ.ಮೀ. ದೂರದಲ್ಲಿದ್ದು, ಕೊತ್ತತ್ತಿ ಹೋಬಳಿಗೆ ಸೇರುವ ಈ ಊರು, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವು ಹೌದು. ಸುತ್ತಲಿನ ನಾಲ್ಕು ಗ್ರಾಮಗಳು ಪಂಚಾಯಿತಿಗೆ ವ್ಯಾಪ್ತಿಗೆ ಸೇರುತ್ತವೆ. ಈ ಗ್ರಾಮದ ಜನಸಂಖ್ಯೆ 2,921 (2001ಜನಗಣತಿ ಪ್ರಕಾರ).ಗ್ರಾಮದಲ್ಲಿ 3 ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಕೃಷಿ ಪತ್ತಿನ ಸಹಕಾರ ಸಂಘ, ಹಾಲಿನ ಡೇರಿ, ಬ್ಯಾಂಕ್ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಹೊಂದಿದೆ.ವಿಪರ್ಯಾಸ ಎಂದರೆ, ಗ್ರಾಮದ ಒಟ್ಟು 668 ಕುಟುಂಬಗಳ ಪೈಕಿ 166 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯವೇ ಇಲ್ಲ. ಅಲ್ಲದೆ, 160 ವಸತಿ ರಹಿತ; 48 ನಿವೇಶನ ರಹಿತ ಕುಟುಂಬಗಳೂ ಇವೆ!ಸಮುದಾಯ ಶೌಚಾಲಯದ ಅಗತ್ಯವಿದ್ದರೂ, ನಿರ್ಮಾಣ ಆಗಿಲ್ಲ. ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ, ಕಳೆದ ಎರಡೂವರೆ ವರ್ಷಗಳಿಂದ ಔಷಧಿಗಳು ಪೂರೈಕೆ ಆಗಿಲ್ಲ. ಒಆರ್‌ಎಸ್ ಹಾಗೂ ಗರ್ಭಿಣಿಯರಿಗೆ ನೀಡುವ ಫೆರೋಷ್ ಸಲ್ಫೇಟ್ ಔಷಧವನ್ನೂ ಅಪರೂಪಕ್ಕೆ ಪೂರೈಸಲಾಗುತ್ತದೆ.ಗ್ರಾಮದ ಶೇ 75ರಷ್ಟು ರಸ್ತೆಗಳು ಸಿಮೆಂಟ್ ಕಾಂಕ್ರಿಟ್ ಆಗಿದ್ದರೂ, ಚರಂಡಿಗಳಲ್ಲಿ ಕಲ್ಮಶ ನೀರು ಮುಂದೋಗುವುದಿಲ್ಲ. ಗ್ರಾಪಂ ಕೇಂದ್ರವಿದ್ದರೂ ಪೂರ್ಣಕಾಲಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಇಲ್ಲ. ಹನ್ನೆರಡು ವರ್ಷಗಳ ಹಿಂದೆಯೇ ವಿಶ್ವ ಬ್ಯಾಂಕ್ ನೆರವಿನಿಂದ ಪರಿಸರ ನೈರ್ಮಲ್ಯ ಮತ್ತು ಸಮಗ್ರ ನೀರು ಸರಬರಾಜು ಯೋಜನೆಯ ಪರಿಣಾಮ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಹೂಳು ತೆಗೆದಿರುವುದರಿಂದ ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದು, ಕೃಷಿಗೆ ಸಹಕಾರಿಯಾಗಿದೆ.ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಉದ್ಯೋಗ ಖಾತರಿ ಯೋಜನೆಯಡಿ 2011-12ನೇ ಸಾಲಿನಲ್ಲಿ 16 ಕಾಮಗಾರಿಗಳು ನಡೆದಿದ್ದು, 12.83 ಲಕ್ಷ ಹಣ ಬಳಸಲಾಗಿದೆ. ಒಂದು ಕುಟುಂಬವಷ್ಟೇ ನೂರು ದಿನ ಕೆಲಸ ಪೂರೈಸಿದೆ! ಗ್ರಾಮದ ಹೊರವಲಯದಲ್ಲಿನ ಶ್ರೀ ಮಲ್ಲೇಶ್ವರಸ್ವಾಮಿ ಸಮುದಾಯ ಭವನ ಕೆಲಸ ಅರ್ಧಕ್ಕೆ ನಿಂತಿದೆ. ಕಳೆದ 14 ವರ್ಷದಿಂದ ನೆನಗುದಿಗೆ ಬಿದ್ದಿರುವ ಭವನದ ಕೆಲಸವನ್ನು ಪೂರೈಸಿಕೊಡಲು ಜನಪ್ರತಿನಿಧಿಗಳ ಒತ್ತಾಸೆ ಬೇಕು ಎಂಬುದು ಗ್ರಾಮಸ್ಥರು ಆಗ್ರಹ.`ಮಂಗಲ ಕೆಂಪಮ್ಮ~ ಎಂದೇ ಹೆಸರಾದ ಸಂಶೋಧಕಿ, ಇಂಗ್ಲೆಂಡ್‌ನ ಡಾ. ಸ್ಕಾರ್ಲೆಟ್ ಎಫ್ಟೀನ್ ಅವರ ಹೆಸರನ್ನು ಗ್ರಾಮ ಪಂಚಾಯಿತಿ ಸಭಾಂಗಣಕ್ಕೆ ನಾಮಕರಣ ಮಾಡುವ ಮೂಲಕ ಇಲ್ಲಿನ ಜನರು ಅಭಿಮಾನ ಮೆರೆದಿದ್ದಾರೆ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.