ಯೋಧರಿಂದ ದಾಂಧಲೆ

7

ಯೋಧರಿಂದ ದಾಂಧಲೆ

Published:
Updated:

ಪುಣೆ (ಪಿಟಿಐ): ವಾಹನ ಚಾಲನಾ ನಿಯಮ ಉಲ್ಲಂಘಿಸಿದ ಸೇನಾಧಿಕಾರಿಗಳಿಗೆ ಪೊಲೀಸರು ದಂಡ ವಿಧಿಸಲು ಮುಂದಾದಾಗ, ಯೋಧರು ಮತ್ತು ಸೇನಾಧಿಕಾರಿಗಳ ಗುಂಪು ದಾಂಧಲೆ ಎಬ್ಬಿಸಿ ಪೊಲೀಸ್ ಔಟ್‌ಪೋಸ್ಟ್ ಮೇಲೆ ದಾಳಿ ಮಾಡಿ ಕಾನ್‌ಸ್ಟೆಬಲ್‌ಗಳನ್ನು  ಥಳಿಸಿದ ಘಟನೆ ಇಲ್ಲಿ ನಡೆದಿದೆ. ಇದರಿಂದ ಆಸುಪಾಸಿನ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿತ್ತು.ಮಿಲಿಟರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಸಿಎಂಇ) ವ್ಯಾಸಂಗ ಮಾಡುತ್ತಿರುವ ಯುವ ಅಧಿಕಾರಿಗಳಾದ ಕ್ಯಾಪ್ಟನ್ ಅದ್ವೈತ್ ಮತ್ತು ಲೆಫ್ಟಿನೆಂಟ್ ಎ.ಬಿ.ಪಂಡಿತ್ ಮಂಗಳವಾರ ರಾತ್ರಿ 7.30ರಲ್ಲಿ ಬೈಕ್ ಮೇಲೆ ಸಂಭಾಜಿ ಸೇತುವೆ ಮೇಲೆ ಹೋಗುತ್ತಿದ್ದರು. ನಿಯಮದ ಪ್ರಕಾರ, ಆ ಸೇತುವೆ ಮೇಲೆ ಬೈಕ್ ಓಡಾಟಕ್ಕೆ ಅವಕಾಶವಿಲ್ಲ. ಹೀಗಾಗಿ, ಬೈಕ್ ಸೇತುವೆಯ ಆಚೆ ಕೊನೆಗೆ ಹೋಗುತ್ತಿದ್ದಂತೆ ಅಲ್ಲಿ ಕರ್ತವ್ಯದ ಮೇಲಿದ್ದ ಮಹಿಳಾ ಕಾನ್‌ಸ್ಟೆಬಲ್ ಅದನ್ನು ತಡೆದು ದಂಡ ಪಾವತಿಸಲು ಸೂಚಿಸಿದರು.  ಆಗ ಆರೋಪಿಗಳು ತಮ್ಮನ್ನು ಸೇನಾ ಅಧಿಕಾರಿಗಳೆಂದು ಪರಿಚಯಿಸಿಕೊಂಡರು. ಈ ಹಂತದಲ್ಲಿ ಪರಸ್ಪರ ಮಾತಿನ ಚಕಮಕಿ ಶುರುವಾಯಿತು.ಆಗ ಬೈಕನ್ನು ಅಲ್ಲೇ ಬಿಟ್ಟು ಸಿಎಂಇಗೆ ತೆರಳಿದ ಅಧಿಕಾರಿಗಳು ಸ್ವಲ್ಪ ಹೊತ್ತಿನ ನಂತರ ಯೋಧರು ಹಾಗೂ ಅಧಿಕಾರಿಗಳನ್ನು ಒಳಗೊಂಡ  30-40 ಜನರ ಗುಂಪಿನೊಂದಿಗೆ ಬಂದು ಔಟ್‌ಪೋಸ್ಟ್ ಮೇಲೆ ದಾಳಿ ನಡೆಸಿ, ಗಾಜುಗಳನ್ನು ಪುಡಿಮಾಡಿ, ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಎಸಗಿದರು. ವರದಿ ಮಾಡಲು ತೆರಳಿದ ಮಾಧ್ಯಮದವರ ಕ್ಯಾಮೆರಾಗಳನ್ನೂ ಒಡೆದು ಹಾಕಿದರು.ಈ ಘಟನೆ ಹಿನ್ನೆಲೆಯಲ್ಲಿ ಸೇನೆಯ ಯೋಧರು ಹಾಗೂ ನಾಗರಿಕ ಪೊಲೀಸರು ಪರಸ್ಪರ ದೂಷಣೆಗೆ ಇಳಿದಿದ್ದಾರೆ.  `ಪ್ರದೇಶದಲ್ಲಿ ಉದ್ವಿಗ್ನತೆ ಎಬ್ಬಿಸಿದ ಈ ಘಟನೆ ನಡೆದದ್ದು ದುರದೃಷ್ಟಕರ. ಆದರೆ ಕರ್ತವ್ಯದಲ್ಲಿದ್ದ ಪೊಲೀಸರು ಆಕ್ರಮಣಕಾರಿಯಾಗಿ ವರ್ತಿಸಿದ್ದಾರಲ್ಲದೆ ಅಧಿಕಾರಿಗಳ ನಿಂದನೆಯನ್ನೂ ಮಾಡಿದ್ದಾರೆ~ ಎಂದು ಸೇನೆ ಆಪಾದಿಸಿದೆ. ತಾನು ದಂಡ ಪಾವತಿಸಲು ಒಪ್ಪಿದರೂ ಕಾನ್‌ಸ್ಟೆಬಲ್ ಒರಟಾಗಿ ವರ್ತಿಸಿ ತನ್ನನ್ನು ಅತ್ತಿತ್ತ ತಳ್ಳಿದರು ಎಂದು ಆರೋಪಿ ಅದ್ವೈತ್ ಹೇಳಿಕೆ ನೀಡಿದ್ದಾರೆ.`ಬೈಕ್‌ನಲ್ಲಿ ಹೋಗುತ್ತಿದ್ದ ಅಧಿಕಾರಿಗಳಿಗೆ ಆ ಸೇತುವೆ ಮೇಲೆ ಬೈಕ್ ಸಂಚಾರಕ್ಕೆ ಅವಕಾಶ ಇಲ್ಲವೆಂಬುದು ಗೊತ್ತಿರಲಿಲ್ಲ. ಅಲ್ಲದೇ, ಸಮೀಪದಲ್ಲಿ ಎಲ್ಲೂ ಈ ಬಗ್ಗೆ ಎದ್ದು ಕಾಣುವಂತಹ ಸೂಚನಾ ಫಲಕ ಇರಲಿಲ್ಲ. ಅದರೂ ಕಾನ್‌ಸ್ಟೆಬಲ್, ಬೈಕ್‌ತಡೆದು ದಂಡ ಪಾವತಿಸಲು ಸೂಚಿಸಿದಾಗ ಅಧಿಕಾರಿಗಳು ಅದಕ್ಕೆ ಒಪ್ಪಿದ್ದರು. ಆದರೆ, ಕಾನ್‌ಸ್ಟೆಬಲ್ ಆಕ್ರಮಣಕಾರಿ ವರ್ತನೆ ಮುಂದುವರಿಸಿದ್ದರಿಂದ ಅಧಿಕಾರಿಗಳು ಕೂಡ ಕಾನ್‌ಸ್ಟೆಬಲ್ ಜತೆ ವಾಗ್ವಾದಕ್ಕೆ ಇಳಿದರು~ ಎಂದು ಸೇನಾ ಇಲಾಖೆ ಸಮರ್ಥಿಸಿಕೊಂಡಿದೆ.`ಯುವ ಸೇನಾ ಅಧಿಕಾರಿಗಳು ತಮ್ಮ ಪರಿಚಯ ಹೇಳಿಕೊಂಡು ನಿಯಮದ ಅರಿವಿರಲಿಲ್ಲವೆಂದು ತಿಳಿಸಿದರೂ, ಮಹಿಳಾ ಕಾನ್‌ಸ್ಟೆಬಲ್ ಬೈಕಿನ ಕೀಲಿ ಕಸಿದುಕೊಂಡು ಒರಟಾಗಿ ವರ್ತಿಸಿದರು. ಮಹಿಳಾ ಕಾನ್‌ಸ್ಟೆಬಲ್ ಜತೆಗಿದ್ದ ಮತ್ತೊಬ್ಬ ಪುರುಷ ಸಹೋದ್ಯೋಗಿ ಕ್ಯಾಪ್ಟನ್ ಅದ್ವೈತ್ ಅವರನ್ನು ನಿಂದಿಸಿ, ದಂಡ ಪಾವತಿಸಲು ಒತ್ತಾಯಿಸಿದರು. ಜತೆಗೆ, ಅವರನ್ನು ಅತ್ತಿಂದಿತ್ತ ತಳ್ಳಾಡಿದರು~ ಎಂದೂ ಸೇನಾಧಿಕಾರಿಗಳು ದೂರಿದ್ದಾರೆ.ಆದರೆ ಪೊಲೀಸ್ ಉಪ ಆಯುಕ್ತ ಸಂಜಯ್ ಜಾಧವ್, ಸೇನಾ ಇಲಾಖೆಯ ಆಪಾದನೆಯನ್ನು ಅಲ್ಲಗಳೆದಿದ್ದಾರೆ. `ಸಿಎಂಇ ಅಧಿಕಾರಿಗಳು ಕಾನ್‌ಸ್ಟೆಬಲ್‌ಗಳನ್ನು ನಿಂದಿಸಿ ಅವರ ಮೇಲೆ ಹಲ್ಲೆ ಎಸಗಿದ್ದಾರೆ. ಯೋಧರು ತಮ್ಮ ಸಿಬ್ಬಂದಿ ಮೇಲೆ ಹಲ್ಲೆ ಎಸಗುವ ಜತೆಗೆ ಮಾಧ್ಯಮದವರ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ಪ್ರದೇಶದಲ್ಲಿ ಉಂಟಾದ ಉದ್ವಿಗ್ನತೆಯನ್ನು ತಹಬಂದಿಗೆ ತರಲು ಮೂರು ಗಂಟೆ  ಹಿಡಿಯಿತು~ ಎಂದೂ ಅವರು ಹೇಳಿದ್ದಾರೆ.ಸೇನಾಧಿಕಾರಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ 353ನೇ ಕಲಂ (ಸರ್ಕಾರಿ ನೌಕರನ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಕ್ರಿಮಿನಲ್ ಹಲ್ಲೆ), 147ನೇ ಕಲಂ (ದೊಂಬಿ ಉಂಟುಮಾಡುವುದು), 143ನೇ ಕಲಂ (ನಿಯಮಬಾಹಿರವಾಗಿ ಗುಂಪು ಕೂಡುವುದು) ಹಾಗೂ ಚಾಲನಾ ನಿಯಮ ಉಲ್ಲಂಘನೆಗಾಗಿ ಮೋಟಾರು ವಾಹನ ಕಾಯಿದೆಯಡಿ ದೂರು ದಾಖಲಿಸಿದ್ದಾರೆ. ಇವರ ಜತೆಗೆ ಇನ್ನಿತರ 28 ಸೇನಾ ಸಿಬ್ಬಂದಿ ವಿರುದ್ಧವೂ ದೂರು ದಾಖಲಿಸಲಾಗಿದೆ.ವಿಚಾರಣೆಗೆ ಆದೇಶ: ಈ ಮಧ್ಯೆ ಭಾರಿ ನಾಟಕೀಯ ಬೆಳವಣಿಗೆಗಳ ನಂತರ ಘಟನೆಯ ಕುರಿತು ಸೇನಾ ನ್ಯಾಯಾಲಯದ ವಿಚಾರಣೆಗೆ ಸೇನಾ ಮುಖ್ಯಸ್ಥರು ಆದೇಶಿಸಿದ್ದಾರೆ. ಅದ್ವೈತ್ ಮತ್ತು ಎ.ಬಿ.ಪಂಡಿತ್ ಅವರನ್ನು ಸಿಎಂಇ ಆವರಣದಿಂದ ಹೊರಗೆ ಹೋಗದಂತೆ ನಿರ್ಬಂಧಿಸಲಾಗಿದೆ. ಸಿಎಂಇ ಕೇಂದ್ರ ಕಚೇರಿ ಪೊಲೀಸರೊಂದಿಗೆ ಸಂಪರ್ಕದಲ್ಲಿರುವುದಾಗಿ ಎಂದು ಸೇನಾ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry