ಯೋಧರ ನಿರ್ಗಮನ ಪಥಸಂಚಲನ

7

ಯೋಧರ ನಿರ್ಗಮನ ಪಥಸಂಚಲನ

Published:
Updated:

ಬೆಳಗಾವಿ: “ದೇಶದ ಸಂರಕ್ಷಣೆಯಲ್ಲಿ ಬದ್ಧತೆ ಹೊಂದುವ ಮೂಲಕ ಯುವ ಸೈನಿಕರು ರೆಜಿಮೆಂಟ್‌ನ ಘನತೆಯನ್ನು ಹೆಚ್ಚಿಸಬೇಕು” ಎಂದು ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಕಮಾಂಡೆಂಟ್ ಬ್ರಿಗೇಡಿಯರ್ ಸಿ.ಕೆ. ರಮೇಶ ಕರೆ ನೀಡಿದರು.ಎಂಎಲ್‌ಐಆರ್‌ಸಿ ಕೇಂದ್ರದಲ್ಲಿ ಶನಿವಾರ ನಡೆದ 3/11ನೇ ಬ್ಯಾಚಿನ 168 ರಿಕ್ರೂಟ್ ಯೋಧರ ನಿರ್ಗಮನ ಪಥ ಸಂಚಲನವನ್ನು ಪರಿವೀಕ್ಷಿಸಿದ ಬಳಿಕ ಯುವ ಸೈನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಯಶಸ್ವಿಯಾಗಿ ತರಬೇತಿ ಪೂರೈಸಿದ 168 ಯುವ ಸೈನಿಕರು ಶೀಘ್ರದಲ್ಲೇ ದೇಶದ ವಿವಿಧ ಭಾಗಗಳಲ್ಲಿ ದೇಶ ರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.“ರೆಜಿಮೆಂಟ್ ಕೇಂದ್ರದಲ್ಲಿ ಪಡೆದಿರುವ ವಿವಿಧ ತರಬೇತಿಯಿಂದಾಗಿ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಹಾಗೂ ಕಾರ್ಯವನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗಲಿದೆ. ಭವಿಷ್ಯದಲ್ಲಿ ಉನ್ನತ ಹುದ್ದೆಯಲ್ಲಿ ಅಲಂಕರಿಸಲು ಸುಲಭವಾಗಲಿದೆ” ಎಂದು ಸಿ.ಕೆ. ರಮೇಶ ಅಭಿಪ್ರಾಯಪಟ್ಟರು.`ತಮ್ಮ ಪ್ರಾಣವನ್ನು ತ್ಯಾಗ ನೀಡಿಯಾದರೂ ಮಾತೃ ದೇಶವನ್ನು ಸಂರಕ್ಷಿಸುತ್ತೇವೆ~ ಎಂದು 168 ಯುವ ಯೋಧರು ರಾಷ್ಟ್ರಧ್ವಜ ಹಾಗೂ ರೆಜಿಮೆಂಟ್ ಕಲರ್ ಸಮ್ಮುಖದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.

ಪಥ ಸಂಚಲನದ ನೇತೃತ್ವ ವಹಿಸಿದ್ದ ರಿಕ್ರೂಟ್ ನಿಮೊಂಕಾರ ಮನೋಜ್ ಅವರಿಗೆ ಪರೇಡ್ ಅಡಜಟಂಟ್ ಮೇಜರ್ ಯೋಗೇಶ ಧುಮಾಲ್ ಸಾಥ್ ನೀಡಿದರು.ತರಬೇತಿಯಲ್ಲಿ  ಸಾಧನೆಗೈದ ಯುವ ಯೋಧರಿಗೆ  ಅಧಿಕಾರಿಗಳು ಪ್ರಶಸ್ತಿಗಳನ್ನು ವಿತರಿಸಿದರು. ಸೇನಧಿಕಾರಿಗಳು ಹಾಗೂ ಕುಟುಂಬದವರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry