ಮಂಗಳವಾರ, ನವೆಂಬರ್ 19, 2019
26 °C

ಯೋಧ ದುರ್ಗಾನಂದ ನಾಯ್ಕರ ಅಂತ್ಯಕ್ರಿಯೆ

Published:
Updated:

ಅಂಕೋಲಾ: ಅಮೃತಸರದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ತಾಲ್ಲೂಕಿನ ಬೊಬ್ರುವಾಡ ಗ್ರಾಮದ ಯೋಧ ದುರ್ಗಾನಂದ ಜೈವಂತ ನಾಯ್ಕ  ಅವರ ಪಾರ್ಥಿವ ಶರೀರವನ್ನು ಗುರುವಾರ ಸ್ವಗ್ರಾಮಕ್ಕೆ ತರಲಾಯಿತು.ವಿಮಾನದ ಮೂಲಕ ಗೋವಾಕ್ಕೆ ತಂದು ನಂತರ ಸೇನಾಪಡೆಯ ವಾಹನದಲ್ಲಿ ಸ್ವಗ್ರಾಮಕ್ಕೆ ತರಲಾಯಿತು. ತಾಲ್ಲೂಕಿನ ಬಾಳೆಗುಳಿ ಕ್ರಾಸ್‌ನಿಂದ ನೂರಾರು ಯುವಕರು ಬೈಕ್ ರ‌್ಯಾಲಿ ಮೂಲಕ ಮೃತ ಯೋಧನಿಗೆ ಗೌರವ ಸಲ್ಲಿಸಿದರು.ನಂತರ ದೇಹವನ್ನು ಮನೆಗೆ ತಂದಾಗ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

ಮೃತರ ಮನೆಗೆ ಸಾವಿರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ನಂತರ ಪಟ್ಟಣದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.ನ್ಯಾಯಧೀಶ ದ್ಯಾವಪ್ಪ ಎಸ್.ಬಿ., ತಹಶೀಲ್ದಾರ್ ಲಾಲಂಕೆ ರವಿ, ಕಂದಾಯ ನಿರೀಕ್ಷಕ ಆರ್.ಡಿ. ನಾಯ್ಕ, ಅಮರ ನಾಯ್ಕ, ಪಿಎಸ್‌ಐ ನಿಶ್ಚಲಕುಮಾರ, ಗೋವಿಂದ, ಶಿಕ್ಷಣಾಧಿಕಾರಿ ನಾಗರಾಜ ನಾಯಕ ಸೇರಿದಂತೆ ಸಾವಿರಾರು ಜನರು ದುರ್ಗಾನಂದ ನಾಯ್ಕರ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ದುರ್ಗಾನಂದ ನಾಯ್ಕ ಅಮೃತಸರದಲ್ಲಿ ಅರೆಸೇನಾಪಡೆಯ ಯೋಧನಾಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಪ್ರತಿಕ್ರಿಯಿಸಿ (+)