ರಂಗತೋರಣದ ಸವಾರಿ 14ರಿಂದ:ಬಳ್ಳಾರಿಯಲ್ಲಿ ಎರಡು ದಿನ ನಾಟಕ ಪ್ರದರ್ಶನ

ಭಾನುವಾರ, ಜೂಲೈ 21, 2019
26 °C

ರಂಗತೋರಣದ ಸವಾರಿ 14ರಿಂದ:ಬಳ್ಳಾರಿಯಲ್ಲಿ ಎರಡು ದಿನ ನಾಟಕ ಪ್ರದರ್ಶನ

Published:
Updated:

ಬಳ್ಳಾರಿ: `ರಂಗತೋರಣ~ ಸಂಸ್ಥೆಯು ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿ ಇರುವ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರದಲ್ಲಿ ಇದೇ 14ರಿಂದ ಎರಡು ದಿನಗಳ ಉಚಿತ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಆರ್.ಭೀಮಸೇನ, ಸದಭಿರುಚಿಯ ಉತ್ತಮ ನಾಟಕಗಳ ಪ್ರದರ್ಶನಕ್ಕೆ ಹೆಸರಾದ ರಂಗತೋರಣ ಮತ್ತೊಂದು ಹೊಸ ಯೋಜನೆ `ಸವಾರಿ- 2012~   ಹೆಸರಿನಡಿ ನಾಟಕಗಳ ಪ್ರದರ್ಶನ ನೀಡಲು ನಿರ್ಧರಿಸಿದೆ ಎಂದರು.`ರಾಮ ಶ್ಯಾಮ ಭಾಮ~, `ವೆಂಕಟ ಇನ್ ಸಂಕಟ~, `ಕಳ್ ಮಂಜ~, `ರಾಜಧಾನಿ~, `ಮುಂಜಾನೆ~ ಮತ್ತಿತರ ಚಲನ ಚಿತ್ರಗಳಿಗೆ ಸಾಹಿತ್ಯ ಒದಗಿಸಿರುವ ರಾಜೇಂದ್ರ ಕಾರಂತ್ ಅವರ ನಿರ್ದೇಶನ ದಲ್ಲಿ `ಮುದ್ದಣ್ಣನ ಪ್ರಮೋಷನ್ ಪ್ರಸಂಗ~ `ಸಂಜೆ ಹಾಡು~ ನಾಟಕಗಳು ಕ್ರಮವಾಗಿ 14 ಮತ್ತು 15ರಂದು  ಪ್ರದರ್ಶನಗೊಳ್ಳಲಿವೆ.

 

ಇವೇ ನಾಟಕಗಳನ್ನು ಜುಲೈ 20ರವರೆಗೆ ಬಳ್ಳಾರಿ ತಾಲ್ಲೂಕಿನ ಎಂ.ಗೋನಾಳ್, ಕಪ್ಪಗಲ್, ಸಿರಿವಾರ, ಗುಗ್ಗರಹಟ್ಟಿ ಹಾಗೂ ಕೌಲ್‌ಬಝಾರ್ ಪ್ರದೇಶ ಗಳಲ್ಲೂ ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು.ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಯುವ ಜನರಲ್ಲಿ ರಂಗಭೂಮಿ ಕುರಿತು ವಿಶೇಷ ಆಸಕ್ತಿ ಮತ್ತು ಕಾಳಜಿ ಮೂಡಿಸುತ್ತಿದ್ದು, ನಾಟಕಗಳನ್ನು ಪ್ರೀತಿಸಿ,  ಪ್ರೋತ್ಸಾಹಿಸಿ ಗೌರವಿಸಬಲ್ಲ ಪ್ರಬುದ್ಧ ಪ್ರೇಕ್ಷಕರನ್ನು ಹೆಚ್ಚಿಸಲೂ ಶ್ರಮಿಸುತ್ತಿದೆ. ರಂಗ ಶಿಬಿರಗಳ ಮೂಲಕ ಅಭಿನಯ ಕಲೆ, ಹಾಗೂ ನಾಟಕ ಪ್ರದರ್ಶನ  ಏರ್ಪಡಿಸುತ್ತಿದೆ.`ಮುದ್ದಣ್ಣನ ಪ್ರಮೋಷನ್ ಪ್ರಸಂಗ~ ನಾಟಕ ಸಂಪೂರ್ಣ ಹಾಸ್ಯಮಯ ವಾಗಿದ್ದು, ಬಳ್ಳಾರಿಯ ವಿದ್ಯಾರ್ಥಿ ಕಲಾವಿದರ ತಂಡ ಅಭಿನಯಿಸಲಿದೆ. ಕುಸಿಯುತ್ತಿರುವ ಕೌಟುಂಬಿಕ ಮೌಲ್ಯಗಳ ವಾಸ್ತವವನ್ನು `ಸಂಜೆ ಹಾಡು~ ನಾಟಕ ಪ್ರೇಕ್ಷಕರ ಮುಂದೆ ತೆರೆದಿಡಲಿದೆ. ಸವಾರಿ ತಂಡ ಬಳ್ಳಾರಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನ ನೀಡಿದ ಬಳಿಕ, ಹೊಸಪೇಟೆ ಹಾಗೂ ಸಿರುಗುಪ್ಪ ತಾಲ್ಲೂಕುಗಳಲ್ಲೂ ನಾಟಕಗಳ ಪ್ರದರ್ಶನ ನೀಡಲಿದೆ. ಬಳಿಕ ಸಿರುಗುಪ್ಪ, ಕೊಪ್ಪಳ, ರಾಯಚೂರು, ಯಾದಗಿರಿ, ಗುಲ್ಬರ್ಗ, ಬೀದರ್, ಹುಬ್ಬಳ್ಳಿ, ವಿಜಾಪುರ ಜಿಲ್ಲೆಗಳಲ್ಲೂ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.ರಂಗಾಯಣ, ನಿನಾಸಂ ತಿರುಗಾಟ, ಸಾಣೇಹಳ್ಳಿ ಶಿವಸಂಚಾರ, ಚಿತ್ರದುರ್ಗದ ಸುತ್ತಾಟ ತಂಡಗಳಂತೆ ರಂಗತೋರಣದ ಸವಾರಿ ತಂಡವೂ ರಾಜ್ಯದ ವಿವಿಧೆಡೆ  ಸಂಚರಿಸಿ ಸದಭಿರುಚಿಯ ನಾಟಕ ಪ್ರದರ್ಶನ ಗಳನ್ನು ಏರ್ಪಡಿಸಲು ನಿರ್ಧರಿಸಿದೆ.ಸವಾರಿಯನ್ನು ತಮ್ಮೂರಿಗೆ ಆಹ್ವಾನಿಸಿ ಪ್ರದರ್ಶನಗಳನ್ನು ಏರ್ಪಡಿಸಬೇಕು ಎಂದು ಅವರು ಸಂಘ- ಸಂಸ್ಥೆಗಳನ್ನು ಕೋರಿದರು.ಜುಲೈ 14ರಂದು ಸಂಜೆ 6ಕ್ಕೆ ಬಳ್ಳಾರಿಯ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರದಲ್ಲಿ ನಾಟಕ ಪ್ರದರ್ಶನಕ್ಕೆ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಚಾಲನೆ ನೀಡಲಿದ್ದು, ಹಿರಿಯ ಕಲಾವಿದ ಟಿ.ಎಚ್.ಎಂ. ಬಸವರಾಜ್, ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ ಹಾಗೂ ಡಾ.ವೈ.ಯೋಗಾನಂದ ರೆಡ್ಡಿ ಉಪಸ್ಥಿತರಿರುವರು.ಜುಲೈ 15ರಂದು ನಡೆಯುವ ನಾಟಕ ಪ್ರದರ್ಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ವಿನೋದ್ ಕುಮಾರ್ ಉದ್ಘಾಟಿಸುವರು. ಹೋಟೆಲ್ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ, ಹೋಟೆಲ್ ಉದ್ಯಮಿ ಮಧುಸೂದನ್ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಚಂದ್ರಶೇಖರ್ ಉಪಸ್ಥಿತರಿರುವರು ಎಂದು ತಿಳಿಸಿದರು.ಸವಾರಿ ತಂಡದ ಸಂಚಾಲಕ ಕೆ.ಗಂಗಾಧರ, ಬಿ.ಎಂ. ಸಿದ್ದೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry