ರಂಗದಲ್ಲಿ ಭಾವನೆ ಹುಡುಕಾಟ ನಡೆಸಿದ ಕಾರಂತ

7

ರಂಗದಲ್ಲಿ ಭಾವನೆ ಹುಡುಕಾಟ ನಡೆಸಿದ ಕಾರಂತ

Published:
Updated:

ಶಿವಮೊಗ್ಗ: ರಂಗಭೂಮಿಯಲ್ಲಿ ಭಾವನೆಗಳ ಹುಡುಕಾಟ ನಡೆಸಿದ ಬಿ.ವಿ. ಕಾರಂತ ನಿಜವಾದ  ರಂಗಶೋಧಕ ಎಂದು ಚಿಂತಕ ಪ್ರೊ.ಜಿ.ಕೆ. ಗೋವಿಂದರಾವ್ ವಿಶ್ಲೇಷಿಸಿದರು.ಬಾಬುಕೋಡಿ ಬಿ.ವಿ. ಕಾರಂತ ಪ್ರತಿಷ್ಠಾನ, ಕರ್ನಾಟಕ ನಾಟಕ ಅಕಾಡೆಮಿ ಸಂಯುಕ್ತವಾಗಿ ನಗರದ ಕುವೆಂಪು ರಂಗಮಂದಿರದಲ್ಲಿ `ಬಿ.ವಿ. ಕಾರಂತ ರಂಗನಮನ~ ಅಂಗವಾಗಿ ಹಮ್ಮಿಕೊಂಡಿರುವ ಮೂರು ದಿನಗಳ ರಾಷ್ಟ್ರೀಯ ನಾಟಕೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ನಾಟಕ ಪ್ರಯೋಗ ಎಂದರೆ ಅದು ಭಾವನೆಗಳ ಹುಡುಕಾಟ. ಉತ್ತಮ ನಿರ್ದೇಶಕನ ಜವಾಬ್ದಾರಿ ಈ ಭಾವನೆಗಳನ್ನು ಪ್ರೇಕ್ಷಕನಿಗೆ ಮುಟ್ಟಿಸುವುದು. ನಿರ್ದೇಶಕ ಸೃಜನಶೀಲನಾದಷ್ಟು ಪ್ರಯೋಗಗಳು ಉತ್ಕೃಷ್ಟವಾಗಿರುತ್ತವೆ ಎಂದರು.ರಂಗಭೂಮಿ ಕಾವ್ಯವಾದರೆ, ಕಾರಂತರು ರಂಗಕವಿ. ಕಾವ್ಯದ ಭಾವವನ್ನು ರಂಗದ ಮೇಲೆ ಸಮರ್ಥವಾಗಿ ಬಿಂಬಿಸಲು ಅವರು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಅವರು ಕತ್ತಲೆ-ಬೆಳಕು, ಸಂಗೀತ ತರುತ್ತಾರೆ. ಯಾವ ವಸ್ತು, ದೃಶ್ಯವೂ ಅಪ್ರಸ್ತುತ ಎನಿಸುವುದಿಲ್ಲ ಎಂದು ಹೇಳಿದರು.ಕಾರಂತರ ವ್ಯಕ್ತಿತ್ವ ಸದಾ ಧ್ಯಾನಸ್ಥ ಸ್ಥಿತಿ. ಮುಖದಲ್ಲಿ ಪ್ರಬುದ್ಧವಾದ ವಿಷಾದದ ಛಾಯೆ ಇರುತ್ತಿತ್ತು. ಆದರೆ, ಅದು ನಿರಾಶೆ ಅಲ್ಲ. ಅವರ ಆತ್ಮಕಥೆ `ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ~ ಅವರ ವ್ಯಕ್ತಿತ್ವಕ್ಕೆ ಪೂರಕವಾಗಿದೆ. ಕನಸು, ಗುಂಗು, ವಿಷಾದ ಎಲ್ಲದರ ಸಂಗಮ ಕಾರಂತರು ಎಂದು ಅರ್ಥೈಸಿದರು.ಪ್ರತಿಭೆಗೆ ತಕ್ಕದಾದ ಸವಾಲುಗಳು ಇಲ್ಲದಾಗ ಹಾಗೂ ಹೋಲಿಕೆ ಸಾಧ್ಯವೇ ಇಲ್ಲದ ಸಂದರ್ಭದಲ್ಲಿ ಮಹಾಪ್ರತಿಭಾವಂತರಿಗೆ ವ್ಯಸನಗಳು ಮುತ್ತಿಕೊಳ್ಳುತ್ತವೆ. ಅವಧೂತರಿಗೆ ವ್ಯಸನಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಶಕ್ತಿ ಇರುತ್ತದೆ.ಅದು ಇಲ್ಲದವರು ವ್ಯಸನಕ್ಕೆ ದಾಸರಾಗುತ್ತಾರೆ ಎಂದು ಹೇಳಿದರು.ಕಾರಂತರಿಗೆ ನಿಜವಾದ ನಮನ ಸಲ್ಲಿಸುವುದು ರಂಗಭೂಮಿಯ ಆಯಾಮಗಳನ್ನು ವಿಸ್ತರಿಸುತ್ತಾ, ಅಲ್ಲಿ ಕಂಡ ಅಚ್ಚರಿಯನ್ನು ಬಳಸಿಕೊಳ್ಳುವುದೇ ಆಗಿದೆ ಎಂದರು. ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಕಾರಂತರಲ್ಲಿ ಒಬ್ಬ ಉತ್ತಮ ಪ್ರೇಕ್ಷಕನಿದ್ದ; ಹಾಗಾಗಿ, ಅವರಲ್ಲಿ ಒಳ್ಳೆಯ ಕೇಳುಗನೂ ಇದ್ದ ಎಂದು ವಿಶ್ಲೇಷಿಸಿದರು.ಕಾರಂತರಗಿದ್ದ ಆತಂಕದಿಂದ ಅವರು ಸೃಜನಶೀಲರಾಗಿದ್ದರು. ಅವರಿಗೆಲ್ಲವೂ ಸಂಭ್ರಮವಾಗಿತ್ತು. ಅವರದ್ದು ಸಂಶಯ ಇಲ್ಲದ ಮುಗ್ಧ ವ್ಯಕ್ತಿತ್ವ ಎಂದುಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ವಿ. ರಾಜಾರಾಮ್, ಉದ್ದೇಶಿತ `ಕಾರಂತರ ರಂಗಭಂಡಾರ~ಕ್ಕೆ ರಂಗಾಸಕ್ತರ ಸಹಕಾರ- ಸಲಹೆ ಕೋರಿದರು. ಜಯರಾಮ್ ಪಾಟೀಲ್ ಇದ್ದರು. ರಂಗನಿರ್ದೇಶಕ ಕೆ.ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಹೊನ್ನಾಳಿ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು.ತದನಂತರ ಎಚ್. ನಾಗವೇಣಿ ಅವರ ಕಾದಂಬರಿ ಆಧಾರಿತ `ಗಾಂಧಿಬಂದ~ ನಾಟಕವನ್ನು ಬೆಂಗಳೂರಿನ ರಂಗಮಂಟಪ ತಂಡ ಪ್ರದರ್ಶಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry