ರಂಗದ ಮೇಲೆ ಮಹಿಮಾಪುರದ ಸಿರಿ

7

ರಂಗದ ಮೇಲೆ ಮಹಿಮಾಪುರದ ಸಿರಿ

Published:
Updated:

ಬಹುಪಾಲು ಎಂಜಿನಿಯರ್‌ಗಳನ್ನೇ ಒಳಗೊಂಡ ಬೆಂಗಳೂರಿನ ಹವ್ಯಾಸಿ ತಂಡಗಳಲ್ಲಿ ಒಂದಾದ ರಂಗಸಿರಿ ಪ್ರಸನ್ನ ಅವರ `ಮಹಿಮಾಪುರ~ ಎಂಬ ನಾಟಕವನ್ನು ಸಂದೀಪ್ ಪೈ ಎಂಬ ಯುವನಿರ್ದೇಶಕನ ನಿರ್ದೇಶನದಲ್ಲಿ ಮೊನ್ನೆಯಷ್ಟೇ ರಂಗಶಂಕರದಲ್ಲಿ ಪ್ರದರ್ಶಿಸಿದರು. ಪ್ರತಿ ವರ್ಷಕ್ಕೆ ಎರಡು ಹೊಸ ನಾಟಕಗಳನ್ನು ಪ್ರಯೋಗಿಸುವ ಉದ್ದೇಶ ಇಟ್ಟುಕೊಂಡು ಈಗಾಗಲೇ `ಪ್ರೇಮಚೂರ್ಣ~, `ಕಾನೀನಾ~, `ಅನ್ವೇಷಕರು~, `ಬಾಕಿ ಇತಿಹಾಸ~, `ಪ್ರಮಾಣವೆಂಬುದು ಪ್ರಮಾಣವೆ?~, `ದಂಗೆಯ ಮುಂಚಿನ ದಿನಗಳು~, `ಕೈಲಾಸಂ ಕೊಲಾಜ್~, `ಕಾಯ್ಕಿಣಿ ಕಥಾಂಗಣ~, `ಆರ್ಕನೋಲ~ ಹೀಗೆ ಹಲವಾರು ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ.ಮಹಿಮಾಪುರ ಎಂಬ ಒಂದು ಸಾಧಾರಣ ಹಳ್ಳಿಯಲ್ಲಿನ ಒಬ್ಬ ಬ್ರಹ್ಮಚಾರೀ ಭಗವಂತ ಆಂಜನೇಯನು ಅಲ್ಲಿನ ಮೊಕ್ತೇಸರನ ಕನಸಿನಲ್ಲಿ ದಿನವೂ ಬರುತ್ತಿರುತ್ತಾನೆ. ತನ್ನ ಹೆಂಡತಿಯೊಂದಿಗೆ ಸುಖದ ರಾತ್ರಿ ಕಳೆಯಲೂ ಪುರುಸೊತ್ತು ಕೊಡದಷ್ಟು ಅವನು ಆಂಜನೇಯನ ಕನಸು ಕಾಣುತ್ತಿದ್ದ. ಒಮ್ಮೆ ಹೀಗೆ ಕನಸಿನಲ್ಲಿ ಕಳ್ಳ ಅರ್ಚಕ ತನಗೆ ಅರ್ಪಿಸಿದ ಎಣ್ಣೆಯನ್ನು ಮನೆಗೆ ಕೊಂಡುಹೋಗಿ ಕೋಡಬಳೆ ಕರಿದು ತಿಂದ ಎಂದು ಆಂಜನೇಯ ದೂರುತ್ತಾನೆ. ಮೊಕ್ತೇಸರ ಅರ್ಚಕನನ್ನು ಕೆಲಸದಿಂದ ತೆಗೆಯುತ್ತಾನೆ.ಇದನ್ನು ಕೇಳಿದ ಕಳ್ಳ ಅರ್ಚಕನ ದೂರದ ಸಂಬಂಧಿ ರಾಮಾಚಾರಿಗೆ ತನ್ನ ಬದುಕು ಕಟ್ಟಿಕೊಳ್ಳಲು ಇದೇ ಅವಕಾಶ ಎಂದು ಮಹಿಮಾಪುರಕ್ಕೆ ಬಂದು ಆಂಜನೇಯ ತನ್ನ ಕನಸಿನಲ್ಲಿ ಬರುತ್ತಾನೆ ಎಂದು ನಂಬಿಸಿ ಸಾಕ್ಷಾತ್ ಭಗವಂತನನ್ನೇ ತನ್ನ ವ್ಯವಹಾರದ ಗಾಳವನ್ನಾಗಿ ಬಳಸಿಕೊಂಡು ತನ್ನ ಉದ್ಧಾರ ಹಾಗೂ ದೇವಸ್ಥಾನದ ಉದ್ಧಾರ ಎರಡನ್ನೂ ಮಾಡುತ್ತಾನೆ. ಹೇಗೆ ಮನುಷ್ಯನ ಜಾಹೀರಾತು ಕಲೆ, ಖ್ಯಾತಿ ಮತ್ತು ಪ್ರಸಿದ್ಧಿಯ ಅಮಲಿನಿಂದ ಸಾಕ್ಷಾತ್ ಭಗವಂತನಿಗೆ ಅದು ಬೇಕಿರಲಿ ಬೇಡದಿರಲಿ ಅವನ ಇಚ್ಛೆಯನ್ನೂ ಮೀರಿ ಆಧುನಿಕ ಮನುಷ್ಯನ ದುರಾಸೆ, ಮೂಢನಂಬಿಕೆ, ತಮಗೆ ಬೇಕಾದಂತೆ ಭಗವಂತನನ್ನು ಜಾಹೀರು ಮಾಡುತ್ತಾ ಕಡೆಗೆ ಆಂಜನೇಯನೇ ಅಸಹಾಯಕನಾಗಿ ತನ್ನ ಪರಮಭಕ್ತ ಪರಮ ಕೇಳಿದ ವರವನ್ನೂ ಕೊಡದ ಅಸಹಾಯಕತೆಯಲ್ಲಿ ಸಿಲುಕಿ ಭಗವಂತನ ಲಗಾಮೇ ಮನುಷ್ಯನ ಕೈಸೇರುವ ವಿಚಿತ್ರ ಸಂಘರ್ಷದಲ್ಲಿ ನಾಟಕ ಮುಗಿಯುತ್ತದೆ. ನಾಟಕದಲ್ಲಿನ ಈ ಮುಖ್ಯ ಕಥಾನಕವನ್ನು ಕಟ್ಟಿಕೊಡಲು ವಿಕ್ರಮಾದಿತ್ಯ ಹಾಗೂ ಪ್ರೇತಗಳನ್ನು ಬಳಸಿಕೊಂಡಿರುವುದು ನಾಟಕಕ್ಕೆ ವಾಸ್ತವ ಹಾಗೂ ಪುರಾಣ ಎರಡೂ ಎಲ್ಲೆಗಳನ್ನು ಪ್ರವೇಶಿಸುವ ಮತ್ತು ಮೀರುವ ಶಕ್ತಿ ಒದಗಿಸಿಕೊಟ್ಟಿವೆ. ಮೊಕ್ತೇಸರ, ಅವನ ಮಕ್ಕಳಿಲ್ಲದ ಹೆಂಡತಿ, ಕಳ್ಳ ಅರ್ಚಕ, ಪ್ರೇತಗಳು, ರಾಮಾಚಾರ್ಯ, ಹನುಮಂತ, ನಾರದ, ಊರಿನ ನಾಗರಿಕರು ಇವು ನಾಟಕದ ಪಾತ್ರಧಾರಿಗಳು.ಒಂದು ಕಡೆ ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯವೇ ಮುಂತಾದ ಆಧುನಿಕ ಕ್ಷೇತ್ರಗಳಲ್ಲಿ ಅಗಾಧ ಮುನ್ನಡೆ ಸಾಧಿಸುತ್ತಿದ್ದರೂ ಅದೇ ಪ್ರಮಾಣದಲ್ಲಿ ದೇವರು, ದೇವಸ್ಥಾನ, ಪ್ರಸಾದ, ತೀರ್ಥ, ವಿಭೂತಿ, ಜೇನುತುಪ್ಪ, ಮುಂತಾದ ಮೌಢ್ಯಕ್ಕೆ ಅಂಟಿಕೊಂಡೇ ಬದುಕುತ್ತಿರುವ ಇಂತಹ ವಿಪರ್ಯಾಸದ ಕಾಲಘಟ್ಟದಲ್ಲಿ ಪ್ರಸನ್ನರ ನಾಟಕದ ವಸ್ತು ಪ್ರಸ್ತುತವೆನಿಸುತ್ತದೆ. ಅದನ್ನು ಆಡಲು ಬಯಸಿ ಎತ್ತಿಕೊಂಡ `ರಂಗಸಿರಿ~ಯ ನಿರ್ಧಾರವೂ ಶ್ಲಾಘನೀಯ. ಆದರೆ ಅದನ್ನು ಅಷ್ಟೇ ಯಶಸ್ವಿಯಾಗಿ ನಿರ್ವಹಿಸಿದ್ದಿದ್ದರೆ ಇನ್ನೂ ಸಾರ್ಥಕವಾಗುತ್ತಿತ್ತೇನೋ. ರಂಗಸಜ್ಜಿಕೆ ಎಂಬುದು ಸುಮ್ಮನೆ ಚೆನ್ನಾಗಿ ಕಾಣಲಿಕ್ಕಲ್ಲ.ಎಷ್ಟೇ ಅದ್ಭುತವಾದ ರಂಗಸಜ್ಜಿಕೆಯನ್ನು ವಿನ್ಯಾಸಕಾರ ಹಾಕಿಕೊಟ್ಟರೂ ಅದನ್ನು ನಿರ್ದೇಶಕನಾದವನು ಎಷ್ಟು ಕ್ರಿಯೆಟಿವ್ ಆಗಿ ಬಳಕೆ ಮಾಡಿಕೊಳ್ಳುತ್ತಾನೆ ಎಂಬುದರಿಂದ ಅದರ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ದೃಶ್ಯಗಳ ಕಾಂಪೊಸಿಶನ್ ಕೂಡ ಹೆಚ್ಚೇನೂ ಕ್ರಿಯೆಟಿವ್ ಆಗಿರಲಿಲ್ಲ. ಇಡೀ ಪ್ರಯೋಗದಲ್ಲಿ ರಂಗಸಂಗೀತ ಎಂಬುದು ಇರಲೇ ಇಲ್ಲ, ಬದಲಾಗಿ ಸೀಡಿ ಸಂಗೀತ ಮಾತ್ರ ರಾರಾಜಿಸುತ್ತಿತ್ತು. ಬರೇ ಹಾಡುಗಳು ಮಾತ್ರ ರಂಗಸಂಗೀತವಾಗುವುದಿಲ್ಲ. ಇತ್ತೀಚೆಗೆ ರಂಗಸಂಗೀತ ಎಂಬ ಕಾರ್ಯಕ್ರಮಗಳನ್ನು ಕೊಡುತ್ತಾರೆ; ಅಲ್ಲೆಲ್ಲ ಬರೀ ಪ್ರಸಿದ್ಧ ನಾಟಕಗಳ ಹಾಡುಗಳನ್ನು ಹಾಡುವ ಪರಿಪಾಠವಿದೆ. ಆದರೆ ಬರೀ ಹಾಡುಗಳಷ್ಟೇ ರಂಗಸಂಗೀತವಲ್ಲ.ರಂಗಸಂಗೀತ ಎಂಬುದು ಇಡೀ ರಂಗದಭೂಮಿಯಲ್ಲಿ ನಡೆಯುವ ಎಲ್ಲ ಕ್ರಿಯೆಗಳಿಗೂ ಅನ್ವಯವಾಗುವ ಹಿನ್ನಲೆ ಸಂಗೀತ. ರಂಗಕ್ರಿಯೆಯನ್ನು ಬಿಟ್ಟು ಕೇಳಿದರೆ ಆ ಸಂಗೀತಕ್ಕೆ ಅಸ್ತಿತ್ವವೇ ಇಲ್ಲ ಎನಿಸಬೇಕು, ಅದು ನಿಜವಾದ ರಂಗಸಂಗೀತ ಮತ್ತು ಎಲ್ಲಿ ನಿಜವಾದ ಡ್ರಾಮ ಇದೆಯೋ ಅಲ್ಲಿ ಸಂಗೀತವಿರದೇ ಯಾವಯಾವುದೋ ಭಾಗಗಳಲ್ಲಿ ಸಂಗೀತ ಅನಗತ್ಯ.ಎಲ್ಲೆಲ್ಲಿ ಸಮಕಾಲೀನ ವಿಷಯಗಳಿಗೆ ಆಸ್ಪದವಿದೆಯೋ ಅದನ್ನೆಲ್ಲಾ ನಿರ್ದೇಶಕರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅದು ಕೆಲವೊಮ್ಮೆ ಮಂತ್ರಕ್ಕಿಂತ ಉಗುಳೇ ಜಾಸ್ತಿಯಾಯ್ತೇನೋ ಎನ್ನುವಷ್ಟು ಅತಿಯಾಗುತ್ತದೆ ಕೂಡ. ಇನ್ನು ಅಭಿನಯದ ಬಗ್ಗೆ ಬರೆಯಬೇಕೆಂದರೆ ಇದ್ದುದರಲ್ಲೇ ಪರಮನಾಗಿ ಶ್ರೀಧರ್, ರಾಮಾಚಾರಿಯಾಗಿ ಹವೀಶ್, ಹಾಗೂ ಅರ್ಚಕನಾಗಿ ಸಂದೀಪ್ ತಕ್ಕಮಟ್ಟಿಗೆ ಅಭಿನಯಿಸಿದರು ಎನ್ನಬಹುದು.ರಂಗಸಜ್ಜಿಕೆಯನ್ನು ಬದಲಾಯಿಸುವುದು ಕೂಡ ರಂಗಅಭಿನಯದ ಭಾಗವೇ ಎಂದು ಹಲವರಿಗೆ ಗೊತ್ತೇ ಇಲ್ಲ. ಒಂದು ಹೊಸ ಪಾತ್ರ ತನ್ನ ಪ್ರವೇಶಕ್ಕೆ ಮೊದಲೇ ಯಾವುದೋ ಡಯಾಸು ಹಿಡಿದು ಪ್ರೇಕ್ಷಕರಿಗೆ ಕಾಣಿಸಿಕೊಳ್ಳುವುದು ಆಭಾಸವನ್ನುಂಟುಮಾಡುತ್ತದೆ ಎಂಬ ಸಣ್ಣಸಣ್ಣ ವಿಷಯಗಳನ್ನು ರಂಗವಿಮರ್ಶೆಯ ಪರಿಧಿಯಲ್ಲಿ ಉಲ್ಲೇಖಿಸಲೇಬಾರದು, ಅಂಥ ಚಾನ್ಸನ್ನು ನಿರ್ದೇಶಕ ಕೊಡಲೇಬಾರದು.ಇಂಥ ಎಲ್ಲ ಓರೆಕೋರೆಗಳನ್ನೂ ಬೆಳಕಿನ ವಿನ್ಯಾಸ ಮತ್ತು ಎಫೆಕ್ಟುಗಳಲ್ಲಿ ಮರೆಮಾಚಿಬಿಡುವ ಪ್ರಯತ್ನ ಮಾಡಲಾಗಿದೆಯಾದರೂ ಪ್ರೇಕ್ಷಕರು ಅಷ್ಟು ಸುಲಭವಾಗಿ ಮೋಸಹೋಗುವವರೇನೂ ಅಲ್ಲ ಎಂಬುದನ್ನು ಅರಿಯಬೇಕು. ಒಟ್ಟಾರೆ ತನ್ನ ನಿರಂತರ ರಂಗ ಪಯಣದಲ್ಲಿ ಒಂದೊಂದೇ ಹೆಜ್ಜೆಯಿಡುತ್ತಿರುವ `ರಂಗಸಿರಿ~ ತಂಡ ಮುಂದೆ ಅಭಿನಯ ಕಮ್ಮಟಗಳಲ್ಲಿ ಭಾಗವಹಿಸಿ ಇನ್ನೂ ಹೆಚ್ಚಿನ ರಂಗಭೂಮಿಯ ಪಾಠಗಳನ್ನು ಕಲಿತು ಮತ್ತಷ್ಟು ಉತ್ಸಾಹದಿಂದ ರಂಗಭೂಮಿಯಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸೋಣ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry