ರಂಗದ ಮೋಡಿ ಮಾತಿನ ಖೋಡಿ

7
ಮಾತ್‌ಮಾತಲ್ಲಿ

ರಂಗದ ಮೋಡಿ ಮಾತಿನ ಖೋಡಿ

Published:
Updated:

ನೆಯಲ್ಲಿ ಶುದ್ಧ ಕನ್ನಡ ಭಾಷೆ, ನಾಟಕ ತಂಡದಲ್ಲಿದ್ದ ತಾತನ ನೆನಪು, ಸ್ವತಃ ಗಾಯಕರಾಗಿದ್ದ ತಂದೆ ಹಾಗೂ ಓದಿನ ಪ್ರೀತಿಯನ್ನು ಬೆಳೆಸಿದ ಅಜ್ಜಿ ಇವರೇ ಮಾತಿನರಮನೆಯ ಸ್ಫೂರ್ತಿ.ಶಾಲಾ ದಿನಗಳಿಂದಲೇ ನಾನು ಸಾಂಸ್ಕೃತಿಕ ಹಾಗೂ ನಾಟಕ ತಂಡಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದೆ. ಆ ದಿನಗಳಿಂದಲೂ ಕಾರ್ಯಕ್ರಮಗಳನ್ನು ನಾನೇ ನಿರೂಪಿಸುತ್ತಿದ್ದೆ. ಇನ್ನು ಮಾತುಗಾರಿಕೆಯನ್ನು ತಿದ್ದಿದ ಗುರುಗಳೆಂದರೆ ಮಾಲತಿ ಶರ್ಮಾ, ಡಾ.ಬರಗೂರು ರಾಮಚಂದ್ರಪ್ಪ ಹಾಗೂ ಈಶ್ವರ ದೈತೋಟ. ಅವಕಾಶ ನೀಡಿದ್ದು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ವಾರ್ತಾ ಇಲಾಖೆ. ಮಾತುಗಾರಿಕೆ ಎನ್ನೋದು ಕಲಿಸಿ ಬರುವ ವಿದ್ಯೆ ಅಲ್ಲ. ಪರಿಶ್ರಮ, ಸೃಜನಶೀಲ ವ್ಯಕ್ತಿಗಳ ಒಡನಾಟ ಹಾಗೂ ಸಾಹಿತ್ಯದ ಓದು ನನ್ನನ್ನು ಪಕ್ವಗೊಳಿಸಿದೆ.ಶಾಲಾ ಕಾಲೇಜುಗಳ ಕಾರ್ಯಕ್ರಮ ನಿರೂಪಣೆ ಬಿಟ್ಟರೆ ನಾನೊಬ್ಬ ನಿರೂಪಕಿ ಎಂದು ಕನ್ನಡ ನಾಡಿಗೆ ಪರಿಚಿತಳಾಗಿದ್ದು ದೂರದರ್ಶನದಲ್ಲಿ ಪ್ರಸಾರಗೊಂಡಿದ್ದ ‘ಸಿರಿಗಂಧ’ ಕಾರ್ಯಕ್ರಮದ ಮೂಲಕ. ಎಚ್‌.ಎಲ್‌. ನಾಗೇಗೌಡರ ನಿರ್ಮಾಣದ ವಿ. ಶ್ರೀನಿವಾಸಮೂರ್ತಿ ನಿರ್ದೇಶನದ ಈ ಕಾರ್ಯಕ್ರಮ 125 ಕಂತು ಪ್ರಸಾರವಾಗಿತ್ತು. ಅದಕ್ಕೂ ಮುಂಚೆ ಸಾಕ್ಷ್ಯಚಿತ್ರಗಳಿಗೆ ಧ್ವನಿ ನೀಡುತ್ತಿದ್ದೆ.ನಂತರದ ದಿನಗಳಲ್ಲಿ ನೇರ ಪ್ರಸಾರದ ‘ಬೆಳಗು’, ‘ಮೋಡಿ ಮೋಡಿ ಮಾತಿನ ಮೋಡಿ’, ಉದಯ ಟೀವಿಯಲ್ಲಿ ‘ಹರಟೆ’, ಈ ಟೀವಿಯಲ್ಲಿ ‘ಗೆಳತಿ’, ‘ಸವಿರುಚಿ’, ಮಂತ್ರಾಲಯ ನೇರಪ್ರಸಾರ, ಕಸ್ತೂರಿಯಲ್ಲಿ ‘ಸುಪ್ರಭಾತ’ ಮುಂತಾದ ಕಾರ್ಯಕ್ರಮಗಳಿಗೆ ನಿರೂಪಕಿಯಾದೆ. ಜೀ ಟೀವಿಯಲ್ಲೂ ಕೆಲಸ ಮಾಡಿದ ಅನುಭವವಿದೆ. ಸುವರ್ಣದಲ್ಲಿ ಕ್ರೈಂ ನ್ಯೂಸ್‌ ಓದಿದ ಮೊದಲ ಶಿಕ್ಷಕಿ ನಾನೇ ಇರಬಹುದು.

‘ಮುಕ್ತ’ ಸಂವಾದ ಕಾರ್ಯಕ್ರಮಗಳು ಜನಪ್ರಿಯವಾಗಿದ್ದವು. ಹಂಪಿ ಉತ್ಸವದಲ್ಲಿ ನಿರಂತರವಾಗಿ ನಿರೂಪಕಿಯಾಗಿದ್ದೆ. ನನ್ನ ಪ್ರಕಾರ ಯಾವುದೇ ಕಾರ್ಯಕ್ರಮದ ಸೋಲು ಗೆಲುವಿಗೆ ನಿರೂಪಕ ಕಾರಣನಾಗುತ್ತಾನೆ. ಅದೂ ಅಲ್ಲದೆ ಸರ್ಕಾರಿ, ಸರ್ಕಾರೇತರ ಹಾಗೂ ನೇರಪ್ರಸಾರದ ಕಾರ್ಯಕ್ರಮ ನಿರೂಪಣೆಯಲ್ಲಿ ವ್ಯತ್ಯಾಸವಿದೆ. ಹೀಗಾಗಿ ಪೂರ್ವತಯಾರಿ ಇರಲೇಬೇಕು.ರಂಗಭೂಮಿಯಲ್ಲಿ ಒಮ್ಮೆ ಗುರುತಿಸಿಕೊಂಡರೆ ಬೇರೆಲ್ಲಾ ಕ್ಷೇತ್ರದಲ್ಲಿ ಮಿಂಚಬಹುದು ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ನಾಟಕ ಕ್ಷೇತ್ರದಲ್ಲಿ ಶ್ರೀನಿವಾಸ ಜಿ. ಕಪ್ಪಣ್ಣ ನನ್ನ ಗುರು. ಜೂನಿಯರ್‌ ನಟರಂಗ ತಂಡದಲ್ಲಿದ್ದೆ ಕೂಡ. ಅದೇ ಸಂದರ್ಭದಲ್ಲಿ ಲಂಕೇಶ್‌ ಹಾಗೂ ಕಾರ್ನಾಡರು ಉತ್ತಮ ನಾಟಕಗಳನ್ನು ಬರೆದರು. ‘ಗುಣಮುಖ’, ‘ತಲೆದಂಡ’ ನಾಟಕಗಳನ್ನು ಮೊಟ್ಟಮೊದಲಿಗೆ ಅಭಿನಯಿಸಿದ್ದು ನಮ್ಮ ತಂಡ. ನಂತರ ಅಧ್ಯಾಪಕಿಯಾದ ನಂತರವೂ ಸುರಾನಾ ಕಾಲೇಜಿನಲ್ಲಿ ನಾಟಕ ತಂಡವನ್ನು ಹುಟ್ಟುಹಾಕಿದೆ.

ವಿದ್ಯಾರ್ಥಿಗಳಿಂದ ಅನೇಕ ನಾಟಕಗಳನ್ನೂ ಮಾಡಿಸಿದೆ. ‘ಮುಕ್ತ’ದಲ್ಲಿನ ಅವಕಾಶ ಮತ್ತೊಮ್ಮೆ ಬ್ರೇಕ್‌ ತಂದುಕೊಟ್ಟಿತು. ಅಲ್ಲಿಯೂ ಸಂಭಾಷಣೆ ಒಪ್ಪಿಸುವ ನನ್ನ ಶೈಲಿ ಜನಪ್ರಿಯವಾಯಿತು. ಇದುವರೆಗೆ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸಿದ್ದರೂ ಮುಜುಗರಕ್ಕೀಡಾದ ಸಂದರ್ಭವೂ ನಡೆದಿದೆ. ಬೇರೆಲ್ಲಾ ತಯಾರಿಯ ಜೊತೆ ಕಲಾವಿದರ ಮನಸ್ಸನ್ನೂ ಅರಿತುಕೊಳ್ಳುವುದು ಮುಖ್ಯ ಎಂಬುದು ಅರಿವಾದದ್ದು ಆಗಲೇ.

2007ರ ಹಂಪಿ ಉತ್ಸವದಲ್ಲಿ ಪದ್ಮಾ ಸುಬ್ರಹ್ಮಣ್ಯಂ ಅವರ ಕಾರ್ಯಕ್ರಮವಿತ್ತು. ಸುಮಾರು ಹೊತ್ತಿನ ಬಳಿಕ ಪದ್ಮಾ ಅವರ ಬಳಿ ‘ಇನ್ನು ಎಷ್ಟುಹೊತ್ತು’ ಎಂದಷ್ಟೇ ಕೇಳಿದೆ. ಸ್ವಲ್ಪಹೊತ್ತಿನ ನಂತರ ಅದೇನಾಯ್ತೋ ಏನೋ. ಕಿರುಚಾಡಿ ಎದ್ದು ಹೋದರು. ನನ್ನ ಮೇಲೆ ತುಸು ಕೋಪಿಸಿಕೊಂಡಿದ್ದಂತೆ ಕಂಡಿತು. ಕಾಲಿಗೆ ಬಿದ್ದು ನನ್ನಿಂದೇನು ತಪ್ಪಾಯಿತು ಎಂದು ಕೇಳಿದೆ. ಮಾತಾಡಲಿಲ್ಲ. ಪಕ್ಕವಾದ್ಯದವರೊಂದಿಗೆ ಸಹಕಾರ ಸರಿಯಾಗಿರದ ಕಾರಣ ಅವರು ಎದ್ದು ಹೋಗಿದ್ದರು. ಇದನ್ನು ಅವರೇ ಆನಂತರ ಕರೆದು ಹೇಳಿದರು. ಇದು ಮರೆಯಲಾರದ ಅನುಭವ.ಸ್ವಪ್ನಸುಂದರಿ ಅವರ ಕಾರ್ಯಕ್ರಮದ ನೆನಪು ನನ್ನನ್ನು ಖುಷಿಯಾಗಿಸುತ್ತದೆ. ಆ ದಿನ ಪ್ರೇಕ್ಷಕರಿಗೆ ಅವರದೇ ಮಾತೃಭಾಷೆಯಲ್ಲೇ ವಿವರಿಸಿದರೆ ಹೆಚ್ಚು ಇಷ್ಟವಾಗುತ್ತದೆ. ಹೀಗಾಗಿ ನಾನು ಆಂಗ್ಲ ಭಾಷೆಯಲ್ಲಿ ಹೇಳಿದ್ದನ್ನು ನೀನು ತರ್ಜುಮೆ ಮಾಡಬೇಕು ಎಂದರು. ಆಯ್ತು ಎಂದು ಧೈರ್ಯವಾಗಿ ನಿರ್ವಹಿಸಿದ್ದೆ. ಅಂಥ ಸಂದರ್ಭದಲ್ಲಿ ಭಾಷಾಜ್ಞಾನ, ಸ್ಪಷ್ಟ ಉಚ್ಚಾರ ನನ್ನನ್ನು ಕೈಹಿಡಿದಿತ್ತು. ಜಿ.ಎಸ್‌.ಎಸ್‌. ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಿರೂಪಣೆ ಮಾಡಿದ್ದೆ. ಅದು ನೇರ ಪ್ರಸಾರದ ಕಾರ್ಯಕ್ರಮ. ಇದೆಲ್ಲ ಮರೆಯಲಾರದ ಸಂದರ್ಭಗಳು.ನಿರೂಪಣಾ ಕ್ಷೇತ್ರದಲ್ಲಿ ಬೆಳೆದುಬಂದವರು ಅನೇಕರಿದ್ದಾರೆ. ಆದರೆ ಇಂದಿಗೆ ಯಾರು ಬೇಕಾದರೂ ನಿರೂಪಕರಾಗಬಹುದು ಎಂಬ ಜಾಯಮಾನ ಬೆಳೆದಿರುವುದು ತುಸು ಬೇಸರದ ಸಂಗತಿ. ಸಮಯಪ್ರಜ್ಞೆ, ಸಾಹಿತ್ಯದ ಓದು, ಆಸಕ್ತಿ ಹಾಗೂ ವಿಷಯದೆಡೆಗಿನ ಜ್ಞಾನ ಇಲ್ಲದೆ ನಿರೂಪಕರಾಗುವುದು ಇಂದಿಗೆ ಸುಲಭವಾಗಿದೆ.ನಿರೂಪಕರಾಗಿ ಗುರುತಿಸಿಕೊಂಡವರಲ್ಲಿ  (ಜನಪದ ಕಲಾವಿದ ಕಂಸಾಳೆ ಹೆಬ್ಬಳಿ ಮಾದಯ್ಯ– ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ಪ್ರಬಂಧವನ್ನು ಮಂಡಿಸಿ) ಪಿಎಚ್‌ಡಿ ಪದವಿ ಪಡೆದ ಮೊದಲ ಮಹಿಳೆ ನಾನೇ ಇರಬಹುದು. ಬದುಕಿನುದ್ದಕ್ಕೂ ನನ್ನ ಜೀವಾಳ, ಉಸಿರು ಹಾಗೂ ಬದುಕಾಗಿ ಕೈಹಿಡಿದದ್ದು ಮಾತು. 

ನಿರೂಪಣೆ: ಎಸ್.ಎಚ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry