ರಂಗನಟ ಗುಡಿಗೇರಿ ಬಸವರಾಜ ನಿಧನ

7

ರಂಗನಟ ಗುಡಿಗೇರಿ ಬಸವರಾಜ ನಿಧನ

Published:
Updated:

ಬೆಂಗಳೂರು;  ವೃತ್ತಿರಂಗಭೂಮಿಯ ಹಿರಿಯ ನಟ ಗುಡಿಗೇರಿ ಬಸವರಾಜ (74) ಅವರು ನಗರದಲ್ಲಿ ಮಂಗಳವಾರ ನಿಧನರಾದರು.ಕ್ಯಾನ್ಸರ್‌ನಿಂದಾಗಿ ಹತ್ತು ದಿನಗಳ ಹಿಂದೆ ಅವರನ್ನು ಗ್ಲೋಬಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಪತ್ನಿ ಉಮಾದೇವಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.ನಟ, ನಾಟಕಕಾರ ಬಸವರಾಜ ಅವರು 1963ರಲ್ಲಿ ಶ್ರೀ ಸಂಗಮೇಶ್ವರ ನಾಟ್ಯ ಸಂಘ ಸ್ಥಾಪಿಸಿ ನಿರಂತರವಾಗಿ ಅದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಂಪೆನಿಯು ಸದ್ಯ ಬದಾಮಿಯ ಬನಶಂಕರಿ ಜಾತ್ರೆಯಲ್ಲಿ ಕ್ಯಾಂಪ್ ಮಾಡಿತ್ತು. ಅವರೇ ರಚಿಸಿದ ‘ರೈತನ ಮಕ್ಕಳು’, ‘ಸೂಳೆಯ ಮಗ’, ‘ನೀ ಹುಟ್ಟಿದ್ದು ಯಾರಿಗೆ?’, ‘ದುಡ್ಡಿನ ದರ್ಪ’, ‘ಸತ್ಯ ಸತ್ತಿತು’ ಸೇರಿದಂತೆ ವೃತ್ತಿರಂಗಭೂಮಿಯ ಪ್ರಮುಖ ನಾಟಕಕಾರರ ಜನಪ್ರಿಯ ನಾಟಕಗಳನ್ನು ಅದು ಪ್ರದರ್ಶಿಸುತ್ತಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳನ್ನು ಗೆದ್ದ ನಂತರ ರಂಗಭೂಮಿ ಪ್ರವೇಶಿಸಿದ್ದ ಗುಡಿಗೇರಿ ಬಸವರಾಜ ಅವರು ರಂಗದ ಮೇಲೂ ಪೈಲ್ವಾನರೆಂದೇ ಪ್ರತೀತಿಯಾಗಿದ್ದರು.ಗುಬ್ಬಿ ವೀರಣ್ಣ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು ಎಂದು  ಅವರ ಅಳಿಯ ಹಾಗೂ ನಾಟಕಕಾರ ಪಕ್ಕಣ್ಣ ಅರಗೋಳ ತಿಳಿಸಿದ್ದಾರೆ.

ಹುಬ್ಬಳ್ಳಿಗೆ ಪಾರ್ಥಿವ ಶರೀರ: ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ರಾತ್ರಿ 8.30ರವರೆಗೆ ಬಸವರಾಜ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.ಬುಧವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನದವರೆಗೆ ಹುಬ್ಬಳ್ಳಿಯಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಸಂಜೆ 4ಕ್ಕೆ ಕುಂದಗೋಳ ತಾಲ್ಲೂಕಿನ ಗುಡಿಗೇರಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.ಸಂತಾಪ: ಗುಡಿಗೇರಿ ಬಸವರಾಜ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಬಸವರಾಜ ಅವರು ನಾಟಕ, ಚಲನಚಿತ್ರ ಎರಡೂ ಕ್ಷೇತ್ರಗಳಲ್ಲಿ ನಟರಾಗಿ, ನಾಟಕ ನಿರ್ದೇಶಕರಾಗಿ ಜನರ ಮೇಲೆ ಪ್ರಭಾವ ಬೀರುವ ಮೂಲಕ ಎಲ್ಲರ ಪ್ರಶಂಸೆಗೆ ಒಳಗಾಗಿದ್ದರು. ನಾಟಕ ಕಲೆಯನ್ನು ಶ್ರೀಮಂತಗೊಳಿಸಿದ, ಶಾಂತಿ ಮಂತ್ರವನ್ನು ಕಲೆಯ ಮೂಲಕ ಪಠಿಸಿದ ಕಲಾವಿದರಾಗಿದ್ದರು. ಇವರ ನಿಧನ ಕರ್ನಾಟಕ ರಾಜ್ಯಕ್ಕೆ, ವಿಶೇಷವಾಗಿ ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ’ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.  ಭಾರಿ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ~ಮುಖ್ಯಮಂತ್ರಿ’ ಚಂದ್ರು, ಹಿರಿಯ ಕಲಾವಿದ ಏಣಗಿ ಬಾಳಪ್ಪ, ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, ಕಾರ್ಯದರ್ಶಿ ರಮೇಶ್ ಝಳಕಿ, ನಟಿ ಮಾಲತಿ ಸುಧೀರ್ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry