ರಂಗನತಿಟ್ಟಿನಲ್ಲಿ ದೋಣಿ ವಿಹಾರ ಸ್ಥಗಿತ

7
ಕೆಆರ್‌ಎಸ್‌ನಿಂದ ನದಿಗೆ ನೀರು

ರಂಗನತಿಟ್ಟಿನಲ್ಲಿ ದೋಣಿ ವಿಹಾರ ಸ್ಥಗಿತ

Published:
Updated:
ರಂಗನತಿಟ್ಟಿನಲ್ಲಿ ದೋಣಿ ವಿಹಾರ ಸ್ಥಗಿತ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ 17 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಹರಿಯ ಬಿಡ­ಲಾಗಿದ್ದು, ಜಲಾಶಯದ ತಗ್ಗಿನಲ್ಲಿರುವ ರಂಗನ­ತಿಟ್ಟು ಪಕ್ಷಿಧಾಮದಲ್ಲಿ ಭಾನುವಾರ ಬೆಳಿಗ್ಗೆಯಿಂದ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ.ಜಲಾಶಯಕ್ಕೆ ಶನಿವಾರ ಸಂಜೆಯಿಂದ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಶನಿವಾರ ಸಂಜೆ 24 ಸಾವಿರ ಕ್ಯೂಸೆಕ್‌ ಹಾಗೂ ಭಾನುವಾರ ಬೆಳಿಗ್ಗೆ 17 ಸಾವಿರ ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಜಲಾಶಯದಲ್ಲಿ 124.63 ಅಡಿ (ಗರಿಷ್ಠ 124. 80) ನೀರಿನ ಸಂಗ್ರಹ ಇದ್ದು, ಪ್ಲಸ್‌ 106 ಅಡಿ ಮಟ್ಟದ ಮೂರು ಗೇಟ್‌ಗಳ ಮೂಲಕ 10 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ವಿಜಯಕುಮಾರ್‌ ’ ಪ್ರಜಾವಾಣಿ’ಗೆ  ತಿಳಿಸಿದ್ದಾರೆ.‘ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಜಲಾಶಯದ ತಗ್ಗಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಭಾನುವಾರ ಬೆಳಿಗ್ಗೆ 11.30ರಿಂದ ದೋಣಿ ವಿಹಾರ ಸ್ಥಗಿತಗೊಳಿಸಿದ್ದೇವೆ. ಇಲ್ಲಿ ಒಟ್ಟು 12 ದೋಣಿಗಳಿದ್ದು, ಎಲ್ಲವೂ ದಡ ಸೇರಿವೆ. ಪಕ್ಷಿಧಾಮದ ಬಳಿ ನದಿಯ ಮಟ್ಟ 3 ಅಡಿಗಳಷ್ಟು ಹೆಚ್ಚಾಗಿದೆ. ವ್ಯೂ ಪಾಯಿಂಟ್‌ಗೆ 60 ಮೀಟರ್‌ ದೂರದಲ್ಲಿರುವ ನಡುಗಡ್ಡೆಯೊಂದು ಭಾಗಶಃ ಮುಳುಗಿದೆ’ ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮೀಶ್‌ ಹೇಳಿದ್ದಾರೆ.‘ಪಕ್ಷಿಧಾಮದಲ್ಲಿ ವೈಟ್‌ ಐಬಿಸ್‌, ಇಗ್ರೆಟ್‌ಸ, ಕಾರ್ಮೊರೆಂಟ್‌, ಹೆರಾನ್‌ ಜಾತಿಯ ಪಕ್ಷಿಗಳಿವೆ. ಗುರುವಾರ 625, ಶುಕ್ರವಾರ 352, ಶನಿವಾರ 630 ಮಂದಿ ಪಕ್ಷಿಧಾಮಕ್ಕೆ ಭೇಟಿ ನೀಡಿದ್ದಾರೆ’ ಎಂದು  ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry