ಸೋಮವಾರ, ನವೆಂಬರ್ 18, 2019
20 °C

ರಂಗನಾಥಸ್ವಾಮಿ ದೊಡ್ಡತೇರು ಉತ್ಸವ ನಾಳೆ

Published:
Updated:

ಯಳಂದೂರು: ಕಳೆದ ವರ್ಷ ಸ್ಥಗಿತಗೊಂಡಿದ್ದ ರಂಗನಾಥಸ್ವಾಮಿಯ ದೊಡ್ಡತೇರಿನ ಉತ್ಸವ ಏ.25 ರಂದು ವಿಜೃಂಭಣೆಯಿಂದ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಆಗಮಿಸುವ ರಂಗಪ್ಪನ ಭಕ್ತರ ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ.ಈಗಾಗಲೇ ಏ.18ರಿಂದ ಆರಂಭವಾಗಿರುವ ಜಾತ್ರೆಗೆ ಏ.28 ರಂದು ತೆರೆಬೀಳಲಿದೆ. ಏ.25 ರಂದು ದೊಡ್ಡ ತೇರಿನ ಉತ್ಸವ ನಡೆಯಲಿದೆ. ದೊಡ್ಡತೇರಿನ ಉತ್ಸವವು ಭಕ್ತರು ನಿರ್ಮಿಸಿದ ರಥದ ಗಾಲಿ, ಗರುಡಗಂಭ, ಮುಖ್ಯದ್ವಾರದ ನವೀಕರಣದೊಂದಿಗೆ ಹೊಸತನ ಪಡೆದುಕೊಂಡಿದೆ.ಏ.25 ರಂದು ಬೆಳಿಗ್ಗೆ 11.10ರಿಂದ 11.25ರ ನಡುವೆ ಮಿಥುನ ಲಗ್ನದಲ್ಲಿ ರಥಾರೋಹಣಕ್ಕೆ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ರಥದ ಬೀದಿಗೆ ಜಲ್ಲಿ ಸುರಿದು ಹಸನುಗೊಳಿಸಲಾಗಿದೆ. ಏ.24 ರಂದು ರಥ  ಅಲಂಕರಿಸುವ ಕೆಲಸ ನಡೆಯುತ್ತದೆ. ಸೋಲಿಗರ ಸಂಪ್ರದಾಯ ಹಾಗೂ ರಂಗಪ್ಪನ ದಾಸರು ಹರಕೆ ತೀರಿಸಲು ಸಿದ್ಧತೆ ನಡೆಸಿದ್ದಾರೆ.

ಯಳಂದೂರಿನಿಂದ 100 ಬಸ್‌ಗಳು ಭಕ್ತರ ಸೇವೆಗೆ ಸಜ್ಜುಗೊಂಡಿವೆ. ಶೌಚಾಲಯ ಸುಸ್ಥಿತಿಯಲ್ಲಿದೆ. ಶುದ್ಧ ಕುಡಿಯುವ ನೀರಿಗೂ ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್ ಹಾಗೂ ಪ್ರಾಣಿಬಲಿ ನಿಷೇಧಿಸಲಾಗಿದೆ. ಭಕ್ತರ ಸೇವೆಗೆ ಅರವಟ್ಟಿಗೆಗಳು ಹಾಗೂ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.ಚಂದ್ರಗ್ರಹಣ ಬಾಧಿತ ಇಲ್ಲ

ಏ.25ರಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸುವುದರಿಂದ ರಥೋತ್ಸವಕ್ಕೆ ಯಾವುದೇ ತೊಂದರೆ ಇಲ್ಲ. ದೇವಸ್ಥಾನದ ಧಾರ್ಮಿಕ ಆಚರಣೆಗಳು ಎಂದಿನಂತೆ ನಡೆಯುತ್ತವೆ. ರಥೋತ್ಸವ ಕಾರ್ಯಗಳು ಏ.25 ರಂದು ಮುಂಜಾನೆಯಿಂದಲೇ ವಾಡಿಕೆಯಂತೆ ನಡೆಯುತ್ತವೆ. ರಾತ್ರಿ 11 ಗಂಟೆ ನಂತರವಷ್ಟೇ ಗ್ರಹಣ ಸಂಭವಿಸುವುದರಿಂದ ರಥೋತ್ಸವ ಆಚರಣೆಗೆ ತೊಂದರೆ ಇಲ್ಲ. ಭಕ್ತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಬಿಳಿಗಿರಿಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ವೆಂಕಟೇಶ ಪ್ರಸಾದ್ ಹೇಳಿದ್ದಾರೆ. ಚಂದ್ರಗ್ರಹಣ ನೋಡಲು ಅಡ್ಡಿ ಇಲ್ಲ

ಏ.25 ರಂದು ರಾತ್ರಿ ನಭೋಮಂಡಲದಲ್ಲಿ ಸಂಭವಿಸುವ ಪಾರ್ಶ್ವ ಚಂದ್ರ ಗ್ರಹಣವನ್ನು ಕಣ್ಣಿನಿಂದ ನೋಡಬಹುದು. ಆಸಕ್ತರು ಟೆಲಿಸ್ಕೋಪ್ ಬಳಸಬಹುದು. ರಾತ್ರಿ 11.30ರ ನಂತರ ಪ್ರಾರಂಭವಾಗಿ ಸುಮಾರು 4 ಗಂಟೆಯೊಳಗೆ ಕೊನೆಗೊಳ್ಳುತ್ತದೆ. ಮೂಡನಂಬಿಕೆ ಭಿತ್ತಿ ಜನರಲ್ಲಿ ಗೊಂದಲ ಉಂಟು ಮಾಡುವ ಮೂಲಕ ಗ್ರಹಣ ಕಾಲವನ್ನು ಕೆಟ್ಟದು ಎಂಬುವವರ ಮಾತಿಗೆ ಕಿವಿಗೊಡಬೇಡಿ. ಇದರ ವೀಕ್ಷಣೆಯಿಂದ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಇದರಿಂದ ರಥೋತ್ಸವದ ಆಚರಣೆಗೆ ಧಕ್ಕೆ ಆಗದು ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಎಸ್. ಚಿನ್ನಸ್ವಾಮಿ.

ಪ್ರತಿಕ್ರಿಯಿಸಿ (+)