ಬುಧವಾರ, ಜೂನ್ 16, 2021
23 °C

ರಂಗಪಂಚಮಿ ಇಂದು: ಓಕುಳಿಯಾಟಕ್ಕೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಿಸಿಲಿನ ಝಳ ಕ್ರಮೇಣ ಹೆಚ್ಚಾಗು­ತ್ತಿದೆ. ಒಂದೆಡೆ ಲೋಕಸಭಾ ಚುನಾವಣೆಯ ಕಾವೇರುತ್ತಿದ್ದರೆ ಮತ್ತೊಂದೆಡೆ ದ್ವಿತೀಯ ಪಿಯುಸಿ ಪರೀಕ್ಷೆಯಿಂದಾಗಿ ವಿದ್ಯಾರ್ಥಿ ಸಮು­ದಾಯ ದುಗುಡದಲ್ಲಿದ್ದಾರೆ. ಈ ನಡುವೆ ವಾಣಿಜ್ಯ ನಗರಿ ಹುಬ್ಬಳ್ಳಿ ಇದೇ 20ರಂದು ರಂಗ ಪಂಚಮಿಯಂದು ನಡೆಯುವ ರಂಗಿನಾಟಕ್ಕೆ ಅಣಿಗೊಳ್ಳುತ್ತಿದೆ.



ಕಳೆದ ಭಾನುವಾರ ಹುಣ್ಣಿಮೆಯಂದು ರತಿ–ಮನ್ಮಥರ ಮೂರ್ತಿಗಳನ್ನು ವಿವಿಧೆಡೆ ಪ್ರತಿಷ್ಠಾ­ಪಿಸಲಾಗಿದೆಯಲ್ಲದೇ ಉಣಕಲ್‌, ಕೇಶ್ವಾಪುರ, ಹಳೇಹುಬ್ಬಳ್ಳಿ, ವಿದ್ಯಾನಗರಗಳಲ್ಲಿ ಸೋಮ­ವಾರವೇ ಜನರು ಬಣ್ಣಗಳಲ್ಲಿ ಮಿಂದೆದ್ದಿದ್ದಾರೆ. ಇದೇ 20ರಂದು ನಗರದಾದ್ಯಂತ ರಂಗಪಂಚಮಿ­ಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದ್ದು, ಇಡೀ ನಗರವೇ ಓಕುಳಿಯಲ್ಲಿ ಮುಳುಗೇಳಲಿದೆ.



ಕೊಪ್ಪೀಕರ ರಸ್ತೆ, ಬ್ರಾಡ್‌ವೇ, ದುರ್ಗದ ಬೈಲ್‌ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಣ್ಣದ ಪಾಕೇಟುಗಳ ಮಾರಾಟ ಜೋರಾಗಿ­ಯೇ ಸಾಗಿತ್ತು. ಪಿಚಕಾರಿಗಳು, ತರಹೇವಾರಿ ಮುಖವಾಡಗಳು, ವಿವಿಧ ವಿನ್ಯಾಸದ ಟೊಪ್ಪಿಗೆ­ಗಳ ಖರೀದಿಸುವ ಮೂಲಕ ನಾಳಿನ ಓಕುಳಿ­ಯಾಟಕ್ಕೆ ಸಿದ್ಧತೆ ನಡೆಸಿದ್ದು ಸಹ ಕಂಡು ಬಂದಿತು.



ವೈಶಿಷ್ಟ್ಯಪೂರ್ಣ ಆಚರಣೆ:  ಕಮರಿಪೇಟೆ­ಯಲ್ಲಿ ನಡೆಯುವ ಕಾಮ ದಹನ ವಿಶೇಷ­ವಾದದ್ದು. ಎಸ್‌ಎಸ್‌ಕೆ ಪಂಚ ಟ್ರಸ್ಟ್‌ ಕಮಟಿ ವತಿಯಿಂದ ನಡೆಯುವ ಕಾಮದಹನ ಜನ­ಪ್ರಿಯವೂ ಹೌದು. ಇದಕ್ಕಾಗಿ ಈಗಾಗಲೇ ಮರಗಳ ಒಣಗಿದ ಬೊಡ್ಡೆಗಳನ್ನು ಒಂದೆಡೆ ಒಟ್ಟಾಗಿ ಜೋಡಿಸಲಾಗಿದೆ. ‘ಡೋಂಟ್‌ ಗೊ ಎನಿವೇರ್, ಹೋಲಿ ಈಜ್‌ ಬ್ಯಾಕ್‌’ ಎಂಬ ಚಿಕ್ಕ ಫ್ಲೆಕ್ಸ್‌ ದಾರಿಹೋಕರ ಗಮನ ಸೆಳೆಯುತ್ತದೆ.

‘150 ವರ್ಷಗಳಿಂದಲೂ ಕಮರಿಪೇಟೆಯಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗು­ತ್ತಿದೆ. ಇಲ್ಲಿನ ಆಚರಣೆ ಹಿಂದೂ–ಮುಸ್ಲಿಂ ಭಾವೈಕ್ಯಕ್ಕೆ ಮಾದರಿ ಎನಿಸಿದೆ’ ಎಂದು ಕಮಿಟಿ ಉಪಾಧ್ಯಕ್ಷ ವಿಠ್ಠಲಸಾ ಸಿ.ಲದವಾ ‘ಪ್ರಜಾವಾಣಿ’ಗೆ ಹೇಳಿದರು.



‘ಗುಲಾಲು, ಬುಕ್ಕಿಟ್ಟುಗಳನ್ನು ಬಳಸಲಾಗು­ತ್ತಿದೆ. ಯಾವುದೇ ಕಾರಣಕ್ಕೂ ಬಣ್ಣದಾಟದ ಸಂದರ್ಭದಲ್ಲಿ ರಸಾಯನಿಕಗಳನ್ನು ಬಳಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.



‘ಗುರುವಾರ ಬೆಳಿಗ್ಗೆ ಬಣ್ಣದಾಟ ಆರಂಭ­ಗೊಳ್ಳುತ್ತದೆ. ನಂತರ ಮಧ್ಯಾಹ್ನದ ಹೊತ್ತಿಗೆ ರತಿ–ಮನ್ಮಥರ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಮುತ್ತೈದೆಯರಿಗೆ ಉಡಿ ತುಂಬಲಾಗುತ್ತದೆ’ ಎಂದ ಅವರು, ‘ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ನಡೆಯುವ ಕಂಕಣ ಧಾರಣೆಗಾಗಿ ಬೆಳಗಾವಿ, ಬೆಂಗಳೂರು, ಕೊಲ್ಹಾಪುರ ಮತ್ತಿತರ ದೂರದ ಊರುಗಳಿಂದ ಸಮಾಜ ಬಾಂಧವರು ಬರುತ್ತಾರೆ. ಇಲ್ಲಿ ಕಂಕಣ ಧರಿಸುವುದರಿಂದ ಮನದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ’ ಎಂದೂ ವಿವರಿಸಿದರು.



‘ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಮರಿಪೇಟೆಯ ಮಸೀದಿ ಬಳಿ ಬಂದಾಗ ಮುಸ್ಲಿಂ ಬಾಂಧವರು ಮೆರವಣಿಗೆಯನ್ನು ಬರ ಮಾಡಿ­ಕೊಳ್ಳು­ತ್ತಾರೆ. ಕಮಿಟಿಯ ಪ್ರಮುಖರಿಗೆ ಹೂಮಾ­ಲೆ ಹಾಕಿ ಗೌರವಿಸುತ್ತಾರೆ. ಇದಕ್ಕೆ ಪ್ರತಿ­ಯಾಗಿ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಹಾರ ಹಾಕಿ ಸನ್ಮಾನಿಸುತ್ತೇವೆ’ ಎಂದು ಈ ಕಾಮ­ದಹನ ನಡೆಯುವ ಸ್ಥಳದ ಬಳಿ ಅಂಗಡಿ ನಡೆಸುತ್ತಿ­ರುವ ಮಂಜುನಾಥ ವಿಷ್ಣುಸಾ ಹಬೀಬ ವಿವರಿಸಿದರು



‘ಚೆನ್ನಪೇಟೆಯಲ್ಲಿ ಸಹ ದೊಡ್ಡ ಪ್ರಮಾಣದ ಕಾರ್ಯಕ್ರಮ ನಡೆಯುತ್ತದೆ. ಆದರೆ, ನಮ್ಮ ಏರಿಯಾದಲ್ಲಿ (ಕಮರಿಪೇಟೆ) ನಡೆಯುವ ಬಣ್ಣದಾಟದಲ್ಲಿ ಸಹಸ್ರಾರು ಜನ ಪಾಲ್ಗೊಳ್ಳುತ್ತಾರೆ’ ಎಂದೂ ಹೇಳಿದರು.



ಕಾಮ ದಹನ ನಡೆಯುವ ಸ್ಥಳದಲ್ಲಿ ಬುಧ­ವಾರ ಮೂರು ಪೊಲೀಸ್‌ ವಾಹನಗಳನ್ನು ನಿಲ್ಲಿಸ­ಲಾಗಿತ್ತು. ಪೊಲೀಸ್‌ ಸಿಬ್ಬಂದಿಯನ್ನು ನಿಯೋ­ಜಿಸ­ಲಾಗಿದೆ. ಆಯ್ದ ಪ್ರದೇಶಗಳಲ್ಲಿ ತಡೆಗೋಡೆ­ ಅಳವಡಿಸುವ ಕಾರ್ಯವೂ ನಡೆದಿತ್ತು. ಇನ್ನು, ರಂಗ ಪಂಚಮಿ ಸಂಭ್ರಮಕ್ಕಾಗಿ ಕಲ್ಲಂಗಡಿ, ಕರಬೂಜ ಹಣ್ಣುಗಳ ಖರೀದಿಯೂ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.