ರಂಗಬಿನ್ನಹ : ರಂಗನಂದನ ರಘುನಂದನ

7

ರಂಗಬಿನ್ನಹ : ರಂಗನಂದನ ರಘುನಂದನ

Published:
Updated:
ರಂಗಬಿನ್ನಹ : ರಂಗನಂದನ ರಘುನಂದನ

ತಮ್ಮದೇ ಆದ ರಂಗನಂಬಿಕೆಗಳನ್ನು ಹೊಂದಿರುವ ನಿರ್ದೇಶಕ ರಘುನಂದನರು, ತಮ್ಮ ರಂಗಪ್ರಯೋಗಗಳ ಮೂಲಕ ಮನುಕುಲದ ಉದಾತ್ತ ಮೌಲ್ಯಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ, ನುಲಿಯ ಚಂದಯ್ಯನ ಕಾಯಕತತ್ವದ ಕುರಿತ ವಿಶಿಷ್ಟ ಪ್ರಯೋಗ.ರಘುನಂದನ್ ಮೇಷ್ಟ್ರು ಎಂಬ ಹೆಸರು ರಂಗಕಾಯಕದಲ್ಲಿ ತೊಡಗಿರುವವರ ಕಿವಿಗೆ ಬಿದ್ದದ್ದೇ ತಡ ಕೆಲವರ ಕಿವಿ ನಿಮಿರುತ್ತದೆ, ಕೆಲವರ ಮೈ ನಡುಗುತ್ತದೆ, ಕೆಲವರ ಮೂಗು ಮುರಿಯುತ್ತದೆ, ಮತ್ತೆ ಕೆಲವರ ತೊಡೆ ಅದರುತ್ತದೆ. ಮುಲಾಜಿಲ್ಲದ ರಂಗಕರ್ಮಕ್ಕೆ, ವಸ್ತುನಿಷ್ಠ ವಿಚಾರಗಳಿಗೆ, ಯುವಕರನ್ನೇ ನಾಚಿಸುವ ವೃತ್ತಿಪರತೆಗೆ ಹೆಸರಾದ ರಂಗನಿರ್ದೇಶಕ ಹಾಗೂ ನಾಟಕಕಾರರು ರಘುನಂದನರು.

 

ಅವರು ಇತ್ತೀಚೆಗೆ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ `ಜಂಗಮದ ಹಂಗಿಗ ತಾನೆಂಬ ನುಲಿಯಚಂದಯ್ಯಗಳ ಸಂಪಾದನೆ~ ಎಂಬ ವಿಶಿಷ್ಟವಾದ ಪ್ರಯೋಗವನ್ನು ಮಾಡಿಸಿದರು. ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶೂನ್ಯಸಂಪಾದನೆಯಿಂದ ಆಯ್ದಭಾಗದ ರಂಗರೂಪವದು.ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಾದ ವಚನ ಸಂಗ್ರಾಮವನ್ನು, ಬಸವಣ್ಣ, ಅಕ್ಕಮಹಾದೇವಿ, ದಾಸಿಮಯ್ಯ, ಅಲ್ಲಮಪ್ರಭು, ಮೊದಲಾದ ವಚನಕಾರರನ್ನೂ, ಶರಣರನ್ನೂ, ಅವರ ವಾಗ್ವಾದಗಳನ್ನೂ ಕನ್ನಡ ಸಾಹಿತ್ಯ, ಚಳವಳಿಗಳು, ಮಠಮಾನ್ಯಗಳು ಇನ್ನಿಲ್ಲದಂತೆ ವರ್ಣಿಸಿವೆ.ಹಾಗಿದ್ದಾಗ್ಯೂ ಅನೇಕ ಶರಣರ ಬದುಕು-ವಿಚಾರಗಳು ಅದೇಕೋ ಯಾರ ಗಮನಕ್ಕೂ ಬಾರದೆ ಅಜ್ಞಾತವಾಗಿಯೇ ಉಳಿದಿವೆ. ಅಂತಹ ಒಬ್ಬ ಶರಣ ನುಲಿಯ ಚಂದಯ್ಯ. ಅವನ ಕಥೆಯೇ ಪ್ರಸ್ತುತ ಪ್ರಯೋಗ.ಅಂಗ-ಲಿಂಗ-ಜಂಗಮದ ಕುರಿತಾದ ಚಂದಯ್ಯನ ದೃಷ್ಟಿ, ನಂಬಿಕೆ, ವಿಚಾರಗಳ ಕುರಿತು ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ, ಮಡಿವಾಳ ಮಾಚಯ್ಯ ಮೊದಲಾದವರೊಂದಿಗೆ ಆದ ಘನಸಂವಾದಗಳ ಮೇಲೆ ಪ್ರಯೋಗವು ಬೆಳಕುಚೆಲ್ಲುತ್ತದೆ.

 

ಭ್ರಷ್ಟಾಚಾರ, ಅನೈತಿಕತೆ, ಚಾಡಿಕೋರತನ, ಅಗತ್ಯಕ್ಕಿಂತ ಹೆಚ್ಚು ಸಂಪತ್ತಿನ ಸಂಗ್ರಹಣೆ, ಪಟ್ಟಭದ್ರ ಹಿತಾಸಕ್ತಿಗಳ ಓಲೈಕೆಯಲ್ಲಿರುವ ಈವತ್ತಿನ ಸಮಾಜ-ವ್ಯವಸ್ಥೆಯಲ್ಲಿ ಚಂದಯ್ಯನ ಪಾರದರ್ಶಕ ಬದುಕು, ಆದರ್ಶ, ಸ್ಪಟಿಕದಂತೆ ಪ್ರಜ್ವಲಿಸುತ್ತದೆ.ವಿಶ್ವಾತ್ಮಕ ಜಂಗಮತತ್ವಗಳನ್ನು ಬದುಕಿ ಸಾರಿದ ಮಹಾಮಹಿಮರನ್ನೇ ಸ್ಥಾವರವನ್ನಾಗಿಸಿಕೊಂಡು ಆಳುತ್ತಿರುವ ಧಾರ್ಮಿಕ ಸಂಸ್ಥೆಗಳ ಮುಂದೆ,

`ಲಿಂಗವೆಂಬುದು ಗುರುವಿನ ಹಂಗು;

ಗುರುವೆಂಬುದು ಲಿಂಗದ ಹಂಗು.

ಈ ಉಭಯಕ್ಕತೀತ ಜಂಗಮಲಿಂಗದ ದಾಸೋಹ.

ಆ ಗುರುವು ಆ ಲಿಂಗವು ಜಂಗಮದ ಹಂಗಿಗರು!~

ಎನ್ನುವ ಚಂದಯ್ಯನ ಮಾತುಗಳು ಯಾವತ್ತಿಗೂ ಪ್ರಸ್ತುತವಾಗುತ್ತದೆ.ಜಂಗಮಪೂಜೆಯೇ ಲಿಂಗಪೂಜೆ, ಜಂಗಮಭಕ್ತಿಯೇ ಲಿಂಗಭಕ್ತಿ, ಜಂಗಮತೃಪ್ತಿಯೇ ಲಿಂಗತೃಪ್ತಿ, ಜಂಗಮದಾಸೋಹವೇ ಪರಮಪದವೆಂದು ತನ್ನ ನುಲಿ (ಹಗ್ಗ) ಮಾಡುವ ಕಾಯಕದಿಂದ ಬದುಕುತ್ತಿದ್ದವನು ಚಂದಯ್ಯ. ಒಂದು ದಿನ ಹೊಳೆಯ ದಂಡೆಯಲ್ಲಿ ನುಲಿಯ ಮಾಡಲೆಂದು ಹುಲ್ಲು ಕೊಯ್ಯುತ್ತಿರುವಾಗ ಅವನ ಇಷ್ಟಲಿಂಗವು ಇವನನ್ನು ಪರೀಕ್ಷಿಸಲೋಸುಗ ನೀರಿನಲ್ಲಿ ಬೀಳುತ್ತದೆ.ಚಂದಯ್ಯನು `ಚರಸೇವೆ ಬೇಕಿದ್ದರೆ ಲಿಂಗ ತಾನೇ ಬರಲಿ~ ಎಂದು ಅದನ್ನು ಬಿಟುಗೊಟ್ಟು ಹೋಗುತ್ತಿರಬೇಕಾದರೆ ಆ ಲಿಂಗವು `ಇಗೋ ಬಂದೆ, ನನ್ನ ಬಿಟ್ಟು ಹೋಗಬೇಡ ಚಂದಯ್ಯ~ ಎಂದು ಅವನನ್ನು ಬೆನ್ನಟ್ಟಿ ಬರುತ್ತದೆ. `ಮೊದಲು ಹೋಗಿ ಈಗ ಬಂದೆ ಎಂದರೆ ನಾನು ಕೇಳಲಾರೆ, ಇದೇ ದಾರಿಯಲ್ಲಿ ಮುಂದೆ, ಮಡಿವಾಳ ಮಾಚಯ್ಯ ಸೀರೆ ತೊಳೆಯುತ್ತಿದ್ದಾನೆ, ಅಲ್ಲಿಗೆ ಹೋಗಿ ನನ್ನ ಸೇವೆಯ ಮಾಡಿಕೊಂಡಿರುತ್ತೇನೆಂದು ಆಣೆಯ ಮಾಡಿ ಬಾ~ ಎಂದು ಹೇಳುತ್ತಾನೆ ಚಂದಯ್ಯ.

 

ಲಿಂಗವು, ಮಡಿವಾಳಯ್ಯನ ಬಳಿಹೋಗಿ ತನ್ನ ಸ್ಥಿತಿಯನ್ನು ಹೇಳಿಕೊಳ್ಳುತ್ತದೆ. ಅಲ್ಲಿಂದ ಮುಂದೆ ಮಡಿವಾಳಯ್ಯ ಮತ್ತು ಚಂದಯ್ಯನ ನಡುವೆ ಲಿಂಗಪೂಜೆ, ಜಂಗಮಪೂಜೆಗಳಲ್ಲಿ ಯಾವುದು ಹೆಚ್ಚು ಎಂಬ ಬಗ್ಗೆ ವಾಗ್ವಾದ ನಡೆದು, ಲಿಂಗವು ಕೂಡ ನುಲಿಯ ಕಾಯಕವನ್ನು ಮಾಡಬೇಕೆಂದೂ, ಹಾಗೆ ಮಾಡುವಾಗ ಲಿಂಗವು ತಂಟೆ ತಕರಾರು ಮಾಡಿದರೆ ಅದನ್ನು ಹೊರಹಾಕಬಹುದೆಂದೂ ಮಡಿವಾಳಯ್ಯ ಚಂದಯ್ಯಗಳ ನಡುವೆ ಒಪ್ಪಂದವಾಗಿ, ಕಡೆಗೂ ಚಂದಯ್ಯ ಲಿಂಗವನ್ನು ಮತ್ತೆ ಸ್ವೀಕರಿಸಿ ತನ್ನ ಕಾಯಕಕ್ಕೆ ಮರಳುತ್ತಾನೆ.ಹೀಗಿರುತ್ತ, ಒಂದು ದಿನ ಚಂದಯ್ಯನು `ನುಲಿಯನ್ನು ಮಾರಿಕೊಂಡು ಬಾ~ ಎಂದು ಲಿಂಗಕ್ಕೆ ಕೊಟ್ಟು ಕಳುಹಿಸುತ್ತಾನೆ. ಆ ಲಿಂಗವು ಅದನ್ನು ಬಸವಣ್ಣನವರ ಬಳಿ ತರುತ್ತಿರಬೇಕಾದರೆ ಬಸವಣ್ಣನವರು ಈ ಕಥೆಯೆಲ್ಲವನ್ನೂ ತಮ್ಮ ಇಷ್ಟಲಿಂಗದ ಮೂಲಕ ಕಂಡುಕೊಂಡು ಲಿಂಗವು ತಂದ ಆ ನುಲಿಯನ್ನು ಕೊಂಡು ಅದಕ್ಕೆ ಪ್ರತಿಯಾಗಿ ಸಾವಿರ ಹೊನ್ನು ಕೊಡುತ್ತಾರೆ.ಆ ಸಾವಿರ ಹೊನ್ನನ್ನು ಪಡೆದ ಲಿಂಗವು ಆನಂದದಿಂದ ತಂದು ಚಂದಯ್ಯನಿಗೆ ತಂದುಕೊಡುತ್ತದೆ. ಆಗ ಚಂದಯ್ಯನಿಗೆ ತುಂಬ ದುಃಖವಾಗಿ, ಆ ಲಿಂಗದ ಮೇಲೆ ಸಿಟ್ಟು ಬಂದು `ಇದೆಲ್ಲಿಂದ ತಂದೆಯಯ್ಯಾ? ಕಳವಿಂದ ತಂದೆಯೋ?~ ಎಂದು ಕೋಪಾವಿಷ್ಟನಾಗಿ, `ಕಾರೆಯ ಸೊಪ್ಪಾದಡೂ ಕಾಯಕದಿಂದ ಬಂದುದು ಲಿಂಗಕ್ಕರ್ಪಿತವಲ್ಲದೆ ದುರಾಸೆಯಿಂದ ಬಂದುದು ಅನರ್ಪಿತ~ ಎಂದು, `ದ್ರವ್ಯಕ್ಕೆ ಮಿಗಿಲಾದ ಬೆಲೆಯನ್ನು ತೆರುವುದು ಯಾವ ಕಾಲಕ್ಕೂ ಸಲ್ಲದು;

 

ಯಾವಾಗ ದ್ರವ್ಯದ ಮೌಲ್ಯಕ್ಕಿಂತ ಮಿಗಿಲಾದ ಬೆಲೆ ಉಂಟಾಗುತ್ತದೋ ಆಗ ಅದರ ಮೇಲೆ ಆಸೆ ಶುರುವಾಗುತ್ತದೆ; ಹೊನ್ನಿನ ಕ್ರೋಢೀಕರಣವಾಗುತ್ತದೆ; ಇದು ಕಾಯಕತತ್ವಕ್ಕೆ, ಜಂಗಮ ತತ್ವಕ್ಕೆ ಯಾವತ್ತೂ ಸರಿಹೊಂದುವುದಿಲ್ಲ~ ಎಂದು ಲಿಂಗಕ್ಕೆ ಹೇಳಿ, ನೀನಿನ್ನು ನನ್ನ ಬಳಿ ಇರಬೇಡ ಎಂದು ಅದನ್ನು ಹೊರಹಾಕುತ್ತಾನೆ.ತಗಾದೆ ಮತ್ತೆ ಮಡಿವಾಳಯ್ಯನ ಬಳಿಗೆ ಹೋಗುತ್ತದೆ. ಮಡಿವಾಳಯ್ಯನು ತನ್ನ ಶಕ್ತ್ಯಾನುಸಾರ ಪ್ರಯತ್ನಿಸಿ ಕಡೆಗೆ ಇದರ ಪರಿಹಾರಕ್ಕೇನಿದ್ದರೂ ಅನುಭವಮಂಟಪವೇ ಸೂಕ್ತವೆಂದು ಲಿಂಗ ಮತ್ತು ಚಂದಯ್ಯನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾನೆ.

 

ಅಲ್ಲಿ ಅಲ್ಲಮ, ಬಸವಣ್ಣ, ಚನ್ನಬಸವಣ್ಣರಾದಿಯಾಗಿ ಎಲ್ಲರೂ ಚಂದಯ್ಯನಿಗೆ ಲಿಂಗದ ಮಹತ್ವವನ್ನು ತಿಳಿಸಿಕೊಡಲು ಪ್ರಯತ್ನಿಸುತ್ತಾರೆ. ಆದರೆ ಅದಕ್ಕೆ ಪ್ರತಿಯಾಗಿ ಚಂದಯ್ಯನ `ಜಂಗಮತತ್ವ~ಕ್ಕೆ ಎಲ್ಲರೂ ಮನಸೋಲುತ್ತಾರೆ. ಇದಿಷ್ಟು ಪ್ರಯೋಗದ ಕಥಾಭಾಗ.ಪಠ್ಯದಲ್ಲಿ ಇದ್ದಿರಬಹುದಾದ ಸಂಕುಚಿತ ಕರ್ಮಠತ್ವದ ಕೆಲವು ಭಾಗಗಳನ್ನು ಮೀರಿ ನಿರ್ದೇಶಕರು ಉದಾತ್ತವಾದ ಮತ್ತು ಅಷ್ಟೇ ಪ್ರಖರವಾದ ಜಂಗಮತತ್ವದ ಮೂರ್ತಿಯನ್ನಾಗಿ ಚಂದಯ್ಯನನ್ನು ಚಿತ್ರಿಸುವುದರೊಂದಿಗೆ ಪ್ರಯೋಗವು ಮುಕ್ತಾಯವಾಗುತ್ತದೆ.ಪ್ರಯೋಗಕ್ಕೆ ಬಳಸಿರುವ `ಮೇಯರ್ ಮುತ್ತಣ್ಣ~ ಸಿನಿಮಾದ `ಹಳ್ಳಿಯಾದರೇನು ಶಿವ, ಡಿಳ್ಳಿಯಾದರೇನು ಶಿವ, ಜನರೆಲ್ಲ ಒಂದೇ ಶಿವ...~ ಹಾಡು, ಮತ್ತು ಸಾಕ್ಷಾತ್ ಶಿವಶಿವೆಯರೇ ವೇಷಭೂಷಣ ಸಹಿತರಾಗಿ ಪ್ರೇಕ್ಷಕರನ್ನು ಪ್ರೇಕ್ಷಾಂಗಣಕ್ಕೆ ಕರೆತಂದು ಇಡೀ ವೃತ್ತಾಂತಕ್ಕೆ ಸೂತ್ರಧಾರರಾಗಿ ನಿಲ್ಲುವುದು ಔಚಿತ್ಯಪೂರ್ಣವಾಗಿದ್ದು ಪ್ರಯೋಗದ ಒಟ್ಟೂ ಅರ್ಥವಿನ್ಯಾಸಕ್ಕೆ ಹೊಸಹೊಸ ಪದರಗಳನ್ನು ಸೃಷ್ಟಿಸುತ್ತದೆ.ಹೀಗೆ ಯಾವ ಪ್ರಯೋಗಕ್ಕೆ ಕೈ ಹಾಕಿದರೂ ಇಂಥಾ ವಿಶ್ವಾತ್ಮಕವಾದ, ಮನುಕುಲದ ಉದಾತ್ತ ನಂಬಿಕೆ, ತತ್ವಗಳ ಮೇಲೆ ಬೊಟ್ಟು ಮಾಡುವ ಮತ್ತು ಅಲ್ಲಿರುವ ರಾಜಕೀಯ ಏರುಪೇರುಗಳನ್ನೂ ಅಷ್ಟೇ ಮೊನಚಾಗಿ ಎತ್ತಿ ತೋರಿಸುವ ಜಾಯಮಾನದ ರಘುನಂದನರನ್ನ `ನುಲಿಯ ಚಂದಯ್ಯನ ಭಾಗವನ್ನೇ ಏಕೆ ಆರಿಸಿಕೊಂಡಿರಿ? ಹೇಗೆ ಪ್ರಸ್ತುತ?~ ಎಂದು ಕೇಳಿದರೆ, ಅವರು ಕೊಟ್ಟ ಉತ್ತರ.“ಚಂದಯ್ಯನಿಗೆ ಅಸಂಗ್ರಹ ಅನ್ನೋದು ಬಹಳ ಮುಖ್ಯವಾದದ್ದು. ಆಯಾ ದಿನಕ್ಕೆ ಎಷ್ಟು ಬೇಕೋ ಅಷ್ಟು ದುಡಿಯಬೇಕು, ಎಷ್ಟು ದುಡಿದಿದ್ದೇವೋ ಅಷ್ಟನ್ನ ಮಾತ್ರ ಪಡೆದುಕೊಳ್ಳಬೇಕು. ಅದಕ್ಕಿಂತ ಒಂದು ಕಾಸು ಹೆಚ್ಚಾದರೂ ಅವನು ಸಹಿಸೋವನಲ್ಲ ತೊಗೊಳ್ಳೋವನಲ್ಲ. ಅಂತಹ ಕಾಯಕಯೋಗಿ ಅವನು.ಜಂಗಮ ಅಂದ್ರೆ ಯಾರೋ ಬರಿದೇ ವಿಭೂತಿ ಹಚ್ಚಿಕೊಂಡು ಕಾವಿ ತೊಟ್ಟಿರುವ ಐನೋರಲ್ಲ; ಈ ಬ್ರಹ್ಮಾಂಡದ ಎಲ್ಲ ಚರಾಚರ ವಸ್ತುಗಳು; ಈ ನದಿ, ಕಾಡು, ಸೂರ‌್ಯ, ಪ್ರಾಣಿ, ಪಕ್ಷಿ, ಪಂಚಭೂತಗಳು ಎಲ್ಲವೂ ಒಂದಲ್ಲಾ ಒಂದು ಕಾಯಕ ಮಾಡ್ತಾಯಿವೆ. ಚಲನಶೀಲವಾಗಿವೆ, ಎಲ್ಲವೂ ಕೆಲಸ ಮಾಡ್ತಾ ಇವೆ. ನಾವು ಮನುಷ್ಯರು ಸುಮ್ನೆ ಮಾತಾಡ್ತಾ ಕೂರೋದಲ್ಲ; ಕೆಲಸಾ ಮಾಡಬೇಕು; ಇತರರಿಗೆ, ಈ ಸರ್ವಕ್ಕೆ ನೀಡಿಮಾಡಿ ಸಂದಳಿಯಬೇಕು ಅಂತ ಹೇಳ್ತಾನೆ:

ಗುರುಸೇವೆಯ ಮಾಡಿದಡೆ ಇಹದಲ್ಲಿಯ ಸುಖ.

ಲಿಂಗಸೇವೆಯ ಮಾಡಿದಡೆ ಪರದಲ್ಲಿಯ ಸುಖ.

ಜಂಗಮಸೇವೆಯ ಮಾಡಿದರೆ ಇಹಪರವೆಂಬುಭಯ ನಾಸ್ತಿ.

ಇದು ಚಂದೇಶ್ವರಲಿಂಗದ ಭಾವ ಕಾಣಾ.

ಈಶವಾಸ್ಯೋಪನಿಷತ್ತಿನ ಮೊದಲ ಶ್ಲೋಕ ಹೇಳುವುದು ಇದನ್ನೇ ಅಲ್ಲವೇ?

ಹಾಗಾಗಿ ಚಂದಯ್ಯಗಳ ಸಂಪಾದನೆಯನ್ನು ಆರಿಸಿಕೊಂಡೆ ಎಂದು ಬಿಟ್ಟರೆ ಸಾಲದು. ಇದಕ್ಕಿಂತ ಮುಖ್ಯವಾಗಿ ಆ ಸಂಪಾದನೆಯಲ್ಲಿ ಸಖತ್ ನಾಟಕೀಯತೆ ಇದೆ; ಸಖತ್ ಮಜಾ ಇದೆ. ವಜೆ ಜೊತೆಗೆ ಮಜವೂ ನನಗೆ ಮುಖ್ಯ. ವಜೆಯೇ ಮಜ, ಮಜವೇ ಎಲ್ಲ~ ಎಂದರು.ರಘುನಂದನರನ್ನು ಅವರ ಅಭಿನಯ ಪದ್ಧತಿ ಮತ್ತು ಅದರ ವಿಶೇಷತೆಯ ಬಗ್ಗೆ ಕೇಳಿದಾಗ-`ನನ್ನ ಅಭಿನಯ ಪದ್ಧತಿ ಅನ್ನೋದು, ಅದು ಬರಿಯ ನನ್ನದಲ್ಲ, ಅದು ಸತ್ ಎಂಬ ಅರ್ಥದಲ್ಲಿ ಇರೋದು, ಇರಬೇಕಾದ್ದು ಅಷ್ಟೇ. ಆ ಪ್ರೊಸೆಸ್ ಅಲ್ಲಿ ಅದು ಮಾಡಿಸ್ಕೊಳ್ಳತ್ತೆ. ಅದಕ್ಕೆ ನಮ್ಮನ್ನ ನಾವು ಒಡ್ಡಿಕೊಳ್ಳಬೇಕು, ಕೊಟ್ಟುಕೊಳ್ಳಬೇಕು ಅಷ್ಟೆ! ಪ್ರತಿದಿನ ಗಿಲೀಟಿನ ಪಲಾವು, ಘೀರೈಸು, ಫ್ರೈಡ್‌ರೈಸು, ಗೋಬಿ ಮಂಚೂರಿ ಥರದ್ದೇ ತಿಂದು ತಿಂದು ಅಭ್ಯಾಸ ಆದವರಿಗೆ ಶುದ್ಧವಾದ ಅನ್ನವೋ, ಅನ್ನದ ಪಾಯಸವೋ ಮಾಡಿಕೊಟ್ಟರೆ, ಅರೆ! ಇದೇನಿದು ನಿಮ್ಮ ಅನ್ನ ಏನೋ ವಿಶೇಷವಾಗಿದೆಯಲ್ಲಾ ಅಂತಾರೆ. ಇದಕ್ಕೇನನ್ನೋಣ ಸ್ವಾಮಿ~ ಎಂದು ವಿಷಾದದ ನಗೆ ಬೀರಿದರು.ಅಂದಹಾಗೆ, ರಘುನಂದನರ ಕಾರ್ಯಕ್ಷಮತೆ ಅಪಾರವಾದದ್ದು ಮತ್ತು ಹೆಚ್ಚಿನ ದೈಹಿಕ ಹಾಗೂ ಅಂತಃಶಕ್ತಿ ಬೇಡುವಂತಹದು. ಒಂದು ಅಂಗಸಂಜ್ಞೆಯನ್ನು ಇಡೀದಿನ ಅಭ್ಯಾಸ ಮಾಡಿಸುವ ಅವರ ಕಾಯಕದ ಪರ್ಫೆಕ್ಷನ್ ಬಗ್ಗೆ ಅವರು ಹೇಳುವುದು ಹೀಗೆ-

`ಕುಡಿಯೋ ಹಾಲು ಅಸಲಿಯಾದದ್ದು, ಹಸುವಿನ ಕೆಚ್ಚಲಿನಿಂದಲೇ ಬಂದದ್ದು ಎಂಬುದನ್ನು ಖಾತ್ರಿ ಮಾಡಿಕೊಂಡೇ ಕುಡಿ.

 

ಅಂಥದನ್ನು ಮಾತ್ರ ಮಾರು ಇಲ್ಲವೇ ಬೇರೆಯವರಿಗೆ ಉಣಿಸು; ಬೆಳ್ಳಗಿರೋದೆಲ್ಲ ಹಾಲೆಂದು ನಂಬಬೇಡ, ಹಾಗೆಂದು ನಂಬಿಸಿ ಉಣಿಸಬೇಡ ಎನ್ನುವುದಾಗಲಿ, ಪ್ಲಾಸ್ಟಿಕ್ ಕೂಸನ್ನು ಹಡೆಯಬೇಡ, ಹಡೆಯುವುದಾದರೆ ಅಸಲಿ ಕೂಸನ್ನೇ ಹಡೆ ಎಂದು ಹೇಳುವುದಾಗಲಿ, ಮತ್ತು ಹಾಗೆ ಹೇಳಿದಂತೆ ಮಾಡಲು ಹವಣಿಸುವುದಾಗಲಿ, ಅಂಥದನ್ನು ಪರ್‌ಫೆಕ್ಷನಿಸಮ್ ಎಂದು ಬೈಯುತ್ತಾ ಕರೆದರೆ, ತಾತ್ಸಾರ ಮಾಡಿದರೆ ನಾನೇನಪ್ಪ ಮಾಡಲಿ~ ಎನ್ನುತ್ತಾ ತಮ್ಮದೇ ವೃತ್ತಿಬದುಕಿನ ಹಲವು ಉದಾಹರಣೆಗಳನ್ನು ಹೆಕ್ಕಿಕೊಟ್ಟರು.`ಎತ್ತ ಹಾರಿದೆ ಹಂಸ~ ಎಂಬ ತಮ್ಮ ಹೊಸ ನಾಟಕವನ್ನು ಇತ್ತೀಚೆಗಷ್ಟೇ ಪ್ರಕಟಿಸಿರುವ ರಘುನಂದನರು ನಿಜವಾಗಿ ಆ ನಾಟಕ ಬರೆದದ್ದು ಹತ್ತಾರು ವರ್ಷಗಳ ಹಿಂದೆ! ನಿರ್ದೇಶನ, ಅಭಿನಯ ಕಮ್ಮಟ, ಕನ್ನಡ ಸಾಹಿತ್ಯ ಹೀಗೆ ಹಲವು ವಿಷಯಗಳಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಈಚೀಚೆಗೆ ಬರೆದದ್ದನ್ನು ಪ್ರಕಟಿಸಬೇಕು ಅನ್ನಿಸುತ್ತಿದೆಯಂತೆ.`ಎತ್ತ ಹಾರಿದೆ ಹಂಸ~ ಮತ್ತು `ಸತ್ತವರ ಕಥೆಯಲ್ಲ~ ಎಂಬ ಸ್ವತಂತ್ರ ನಾಟಕಗಳನ್ನೂ, ಕ್ಲಿಫೋರ್ಡ್ ಒಡೆಟ್ಸ್‌ನ `ವೆಯಿಟಿಂಗ್ ಫಾರ್ ಲೆಫ್ಟಿ~ಯನ್ನು `ತಂಗವೇಲು ಬಂದಮೇಲೆ~ಯನ್ನಾಗಿ, ಬ್ರೆಕ್ಟ್‌ನ ದಿ ಕಕೇಶಿಯನ್ ಚಾಕ್‌ಸರ್ಕಲ್ ಅನ್ನು `ಅಲಾಮನ ಅದ್ಭುತ ನ್ಯಾಯ~ವಾಗಿ (ದೊಡ್ಡವರಿಗಾಗಿ) `ನಿರಾಳಶಿವ~ವಾಗಿ (ಚಿಕ್ಕವರಿಗಾಗಿ), ಇಬ್ಸೆನ್‌ನ ಪಿಯರ್ ಗ್ಯೋಂಟ್ ಅನ್ನು `ಗುಂಡೇಗೌಡನ ಚರಿತ್ರೆ~ಯಾಗಿ, ಬೆಕೆಟ್‌ನ ವೆಯಿಟಿಂಗ್ ಫಾರ್ ಗೊದೋ~ ಅನ್ನು `ಅನಾಹತನಾದ~ವನ್ನಾಗಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ.

 

ಇಷ್ಟೇ ಅಲ್ಲದೆ ಯೂರಿಪಿಡೀಸ್‌ನ `ಹಿಪ್ಪೋಲಿಟೋಸ್~, ಚೆಕೋಫ್‌ನ `ದಿ ಚೆರ‌್ರಿ ಆರ್ಚರ್ಡ್~, ಐಯೋನೆಸ್ಕೋನ `ದಿ ಚೇರ್ಸ್‌~, ಭಾಸನ `ಪ್ರತಿಮಾನಾಟಕ~, ಕಾಳಿದಾಸನ `ಅಭಿಜ್ಞಾನ ಶಾಕುಂತಲ~, ಇಬ್ಸೆನ್‌ನ `ಆ್ಯನ್ ಎನಿಮಿ ಆಫ್ ದಿ ಪೀಪಲ್~, ಬ್ರೆಕ್ಟ್‌ನ `ಹೀ ಹು ಸೇಸ್ ಯಸ್~, `ಹೀ ಹು ಸೇಸ್ ನೋ~, `ದಿ ಮೆಷರ್ಸ್‌ ಟೇಕನ್~, `ದಿ ಟ್ರಯಲ್ ಆಫ್ ಲ್ಯೂಕ್ಯುಲ್ಲಸ್~ ಮುಂತಾದವನ್ನು ಕನ್ನಡದ ಜಾಯಮಾನಕ್ಕೆ ತಕ್ಕ ಹಾಗೆ ಅನುವಾದಿಸಿರುವ ರಘುನಂದನರು ಆದಷ್ಟು ಬೇಗ ಇವನ್ನೆಲ್ಲ ಅಚ್ಚುಹಾಕಿಸಿ ಕನ್ನಡ ರಂಗಭೂಮಿಯೆಂಬ ನಿಜ ಜಂಗಮಕ್ಕರ್ಪಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry