ಬುಧವಾರ, ಮೇ 19, 2021
26 °C

ರಂಗಭೂಮಿಗೆ ಸ್ವಾಮೀಜಿ ಕೊಡುಗೆ ಅನನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಶ್ರೀಸಾಮಾನ್ಯರಿಗೆ ರಂಗಭೂಮಿ ತಲುಪಿಸುವಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪಾತ್ರ ಪ್ರಮುಖವಾದದ್ದು ಎಂದು ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಅಭಿಪ್ರಾಯಪಟ್ಟರು.ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೆಳೆಯರ ಬಳಗದ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಣೇಹಳ್ಳಿಯ `ಶಿವಸಂಚಾರ~ ತಂಡ ದೇಶಾದ್ಯಂತ `ಭಾರತ ಸಂಚಾರ~ ಮಾಡಿ ಬಸವಣ್ಣನವರ ಬೆಳಕನ್ನು ಪಸರಿಸಿದೆ. ಜಂಗಮದೆಡೆಗೆ, ಮಹಾಚೈತ್ರ, ತಲೆದಂಡ, ಸಂಕ್ರಾತಿ- ನಾಲ್ಕು ನಾಟಕಗಳನ್ನು ಹಿಂದಿ ಭಾಷೆಯಲ್ಲಿ ಕಲಿಸಿ ದೇಶಾದ್ಯಂತ ಸಂಚಾರ ಮಾಡಿ ಬಸವಣ್ಣ ಅವರ ಚಿಂತನೆಗಳನ್ನು ಪ್ರಚಾರ ಮಾಡಲಾಯಿತು. ಈ ಮೂಲಕ ರಂಗಭೂಮಿಯನ್ನು ಶ್ರೀಸಾಮಾನ್ಯರಿಗೆ ತಲುಪಿಸಲಾಗಿದೆ. ಇಂತಹ  ಶಿವಸಂಚಾರ ರೂಪಿಸಿದ ಪಂಡಿತಾರಾಧ್ಯ ಶ್ರೀಗಳು, ರಂಗಭೂಮಿ ಕ್ಷೇತ್ರದಲ್ಲಿ ದೊಡ್ಡ ಪವಾಡವನ್ನೇ ಸೃಷ್ಟಿಸಿದ್ದಾರೆ ಎಂದು ಹೇಳಿದರು.ಇತ್ತೀಚೆಗೆ ಅನೇಕ ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್‌ಗಳನ್ನು ರಾಜಕಾರಣಿಗಳನ್ನು ಪುಸಲಾಯಿಸಿ ಪಡೆಯುವುದು ಸಾಮಾನ್ಯ. ಆದರೆ, ಪಂಡಿತಾರಾಧ್ಯ ಸ್ವಾಮೀಜಿ ಸಚಿವರು ಅಥವಾ ಅಧಿಕಾರಿಗಳನ್ನು ಓಲೈಸದೆ ತಮ್ಮ ನಿಲುವಿಗೆ ಬದ್ಧರಾಗಿ ಉಳಿದು ಗೌರವ ಡಾಕ್ಟರೇಟ್ ಪಡೆಯುವ ಮೂಲಕ ಪದವಿಯ ಗೌರವ ಹೆಚ್ಚಿಸಿದ್ದಾರೆ ಎಂದು ನುಡಿದರು.ಮಠಾಧೀಶರು ಮತ್ತು ಮಠಗಳು ದಟ್ಟ ದಾರಿದ್ರ್ಯರ ಪಾಲಿಗೆ ಇಲ್ಲ. ಕೇವಲ ಶ್ರೀಮಂತರ ಮತ್ತು ರಾಜಕಾರಣಿಗಳ ಮಾತ್ರ ಸೀಮಿತವಾಗಿವೆ ಎನ್ನುವ ಭಾವನೆ ತಮ್ಮಲ್ಲಿ ಮೂಡಿದ್ದಾಗ ಸಾಣೇಹಳ್ಳಿ ಮಠದ ಜತೆ ಸಂಪರ್ಕ ಬೆಳೆಯಿತು.ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ಉತ್ತರದಿಂದ ವಲಸೆ ಬಂದವರಿಂದ ದೇಶದಲ್ಲಿ ಜಾತೀಯತೆಯ ಹುಟ್ಟಿಗೆ ಮುಖ್ಯ ಕಾರಣವಾಯಿತು. ದಕ್ಷಿಣದಲ್ಲಿ ಜಾತಿ ಇರಲಿಲ್ಲ. ವೃತ್ತಿ ಮಾತ್ರ ಇತ್ತು. ವೃತ್ತಿ ಆಧಾರಿತ ಧರ್ಮವಿತ್ತು. ಜಾತೀಯತೆ ಇರಲಿಲ್ಲ. ಕುರಿ ಕಾಯುವುದು ಸೇರಿದಂತೆ ಹತ್ತಾರು ಕಸಬುಗಳನ್ನು ಮಾಡಿಕೊಂಡ ಜನ ಇದ್ದರು. ಆದರೆ ಉತ್ತರದಿಂದ ವಲಸೆ ಬಂದವರಲ್ಲಿ ಜಾತಿಗಳಿದ್ದವು. ಇದರಿಂದ ಇಲ್ಲಿ ಜಾತಿಯತೆ ಬಲವಾಗಿ ನೆಲೆಯೂರಿತು.

ಈ ಹಿನ್ನೆಲೆಯಲ್ಲಿ ಶ್ರಮಿಕರನ್ನು ಒಗ್ಗೂಡಿಸಿ ಹೋರಾಟ ನಡೆಸಿದ್ದು ಶರಣ ಧರ್ಮ ಅಥವಾ ವಚನ ಧರ್ಮ. ಇಂತಹ ಶರಣ ಧರ್ಮ ನಿಂತ ನೀರಾಯಿತು. ಆ ಧರ್ಮಕ್ಕೆ ಹೊಸ ಸಂಚಲನ ನೀಡಬೇಕಾಗಿದೆ. 12ನೇ ಶತಮಾನದ ಹೋರಾಟದ ರೀತಿಯಲ್ಲಿ ಸ್ವಾಮೀಜಿ ಅನಿಷ್ಟಗಳ ಜತೆ ಹೋರಾಟ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.ಸಾಂಸ್ಕೃತಿಕ ಒಗ್ಗೂಡುವಿಕೆಯನ್ನು ತರಲು ಶ್ರೀಗಳು `ಶಿವಸಂಚಾರ~ ರೂಪಿಸಿದರು. ಸಾಣೇಹಳ್ಳಿಯ ಹೆಸರೇ ವಿಶಿಷ್ಟವಾದದ್ದು. ದಿಕ್ಕು ತಪ್ಪಿದವರನ್ನು ಸರಿದಾರಿಗೆ ತರುವ ಮತ್ತು ಅವರಲ್ಲಿ ನೈತಿಕತೆಯನ್ನು ಬೆಳೆಸುವ ಕೆಲಸ ಮಾಡುತ್ತಿರುವ ಪಂಡಿತಾರಾಧ್ಯ ಶ್ರೀಗಳು ನಿಜಕ್ಕೂ ಒಬ್ಬ ಸಮಾಜ ಮುಖಿ ಚಿಂತಕರಾಗಿ ಕಾಣುತ್ತಾರೆಂದು ಬಣ್ಣಿಸಿದರು.ಗಣಿ ಮಾಫಿಯಾ ಇಡೀ ವ್ಯವಸ್ಥೆಯನ್ನು ಹಾಳು ಮಾಡಿದೆ. ರಾಜಕೀಯ ಕ್ಷೇತ್ರವನ್ನೂ ಮಲೀನ ಮಾಡಿದೆ. ಇಂತಹ ದಂಧೆಯ ವಿರುದ್ಧ ಶ್ರೀಗಳು ದನಿ ಎತ್ತಿದ್ದಾರೆ. ರೈತರ ಸಂಕಷ್ಟಗಳ ಬಗ್ಗೆಯೂ ಸ್ಪಂದಿಸಿದ್ದಾರೆ. ತಳ ಸಮುದಾಯದ ಜನರು ಮೌಢ್ಯಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಿರುವುದ ಬಗ್ಗೆಯೂ ಹೋರಾಟ ಮಾಡಿದ್ದಾರೆ ಎಂದು ಅವರು ನುಡಿದರು.ರಾಜ್ಯ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಹಾಗೂ ಗೆಳೆಯರ ಬಳಗದ ಜಿ.ಎಸ್. ಮಂಜುನಾಥ್ ಮಾತನಾಡಿ, ಪಂಡಿತಾರಾಧ್ಯಶ್ರೀಗಳ ಸೂಚನೆಯಂತೆ ಗೆಳೆಯರ ಬಳಗದ ವತಿಯಿಂದ 25 ಜನರ ಬಡ ಮಕ್ಕಳನ್ನು ದತ್ತು ಪಡೆದುಕೊಳ್ಳಲಾಗಿದೆ. ಈ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ತಿಳಿಸಿದರು.ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಅವರು ನಾಟಕದ ಸಂಭಾಷಣೆ ಮೂಲಕ ಸಭಿಕರನ್ನು ರಂಜಿಸಿದರು.ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಶೇ. 95 ಗೌರವ ಡಾಕ್ಟರೇಟ್‌ಗಳು ಮಾರಾಟವಾಗುತ್ತವೆ. ಉಳಿದ ಶೇ. 5ರಷ್ಟನ್ನು ಮಾತ್ರ ಉತ್ತಮ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಇಂತಹ ಶೇ. 5ರಷ್ಟು ಜನರಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಸೇರಿದ್ದಾರೆ. ಅರ್ಹರಿಗೆ ಗೌರವ ಡಾಕ್ಟರೇಟ್ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದರು.ಇಂದು ಅನೇಕ ಮಠಾಧೀಶರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ಕೆಟ್ಟ ಸಂಸಾರಿಗಿಂತ ಕೆಟ್ಟ ಸನ್ಯಾಸಿ ಅಪಾಯಕಾರಿ. ಇಂತಹ ಸನ್ನಿವೇಶದಲ್ಲಿ ಪಂಡಿತಾರಾಧ್ಯ ಶ್ರೀಗಳು ವೈಚಾರಿಕತೆ ನೆಲೆಯಲ್ಲಿ ಮತ್ತು ರಂಗಭೂಮಿ ಚಟುವಟಿಕೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ, ಸಂಸತ್ ಸದಸ್ಯರಾದ ಜನಾರ್ದನಸ್ವಾಮಿ, ಜಿ.ಎಂ. ಸಿದ್ದೇಶ್ವರ, ಶಾಸಕ ಎಂ. ಚಂದ್ರಪ್ಪ, ಜಿ.ಎಚ್. ತಿಪ್ಪಾರೆಡ್ಡಿ, ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಗೆಳೆಯರ ಬಳಗದ ಅಧ್ಯಕ್ಷ ರುದ್ರೇಶ್ ಐಗಳ್, ಸುಧಾ ಬರಗೂರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್, ಬಿ.ಟಿ. ಪುಟ್ಟಪ್ಪ, ಲಕ್ಷ್ಮೀಕಾಂತರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.