ಗುರುವಾರ , ನವೆಂಬರ್ 21, 2019
27 °C

ರಂಗಭೂಮಿಯಿಂದ ಮಕ್ಕಳ ಭಾವ ಪ್ರಪಂಚ ವಿಸ್ತಾರ

Published:
Updated:

ಸಾಗರ: ಬೇಸಗೆ ಶಿಬಿರಗಳಲ್ಲಿ ಮಕ್ಕಳಿಗೆ ರಂಗಭೂಮಿಯ ಪಾಠಗಳನ್ನು ಹೇಳಿ ಕೊಡುವುದರಿಂದ ಅವರ ಭಾವ ಪ್ರಪಂಚ ವಿಸ್ತಾರಗೊಳ್ಳುತ್ತದೆ ಎಂದು ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಕೆ.ಜಿ. ಮಹಾಬಲೇಶ್ವರ ಹೇಳಿದರು.ಪ್ರಜ್ಞಾ ರಂಗತಂಡ ಹಾಗೂ ವಿ.ಆರ್.ವಿ ಟ್ರಸ್ಟ್ ಹತ್ತು ದಿನಗಳ ಕಾಲ ಈಚೆಗೆ ಏರ್ಪಡಿಸಿದ್ದ ಮಕ್ಕಳ ಬೇಸಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ    ಅವರು ಮಾತನಾಡಿದರು.ಮಕ್ಕಳ ಭಾವ ಪ್ರಪಂಚ ವಿಸ್ತಾರಗೊಂಡಲ್ಲಿ ಅವರ ವ್ಯಕ್ತಿತ್ವ ಕೂಡ ವಿಭಿನ್ನವಾಗಿ ಬೆಳೆಯಲು ಸಾಧ್ಯ ಎಂದರು.ನಾಲ್ಕು ಗೋಡೆಗಳ ನಡುವೆ ಶಾಲೆಯಲ್ಲಿ ನೀಡುವ ಶಿಕ್ಷಣ ಕೇವಲ ಅಂಕ ಗಳಿಸಲು ನೆರವು ನೀಡುವ ತರಬೇತಿ ಅಷ್ಟೆ ಎನ್ನುವಂತಾಗಿದೆ. ಇದನ್ನು ಮೀರಿದ ಹಲವು ಕಲಿಕೆಯ ಅಂಶಗಳು ಇಂತಹ ಶಿಬಿರಗಳಿಂದ ಮಕ್ಕಳಿಗೆ ದೊರಕುತ್ತದೆ. ತನ್ಮೂಲಕ ಹೊಸ ಸಂವೇದನೆಗಳು ಮಕ್ಕಳಲ್ಲಿ ಮೊಳಕೆಯೊಡುತ್ತದೆ ಎಂದು ಹೇಳಿದರು.ಶಿಬಿರದ ಸಂಪನ್ಮೂಲ ವ್ಯಕ್ತಿ ಚೌಡಿಮನೆ ನಾಗರಾಜ್ ಮಾತನಾಡಿ ಮಕ್ಕಳಿಗೆ ದೊಡ್ಡವರಾದ ನಾವು ಎಲ್ಲವನ್ನೂ ಕಲಿಸುತ್ತೇವೆ ಎಂದು ಭಾವಿಸುವುದು ತಪ್ಪು. ಮಕ್ಕಳಿಂದಲೂ ವಯಸ್ಕರು ಕಲಿಯುವುದು ಸಾಕಷ್ಟು ಇದೆ. ವಿಶೇಷವಾಗಿ ಮಕ್ಕಳಿಂದ ವಯಸ್ಕರು ತಾಳ್ಮೆ, ಸಹನೆಯನ್ನು ಕಲಿಯಬಹುದು ಎಂದರು.ಪ್ರಜ್ಞಾ ರಂಗತಂಡದ ಎಚ್.ಬಿ. ರಾಘವೇಂದ್ರ, ಪಿ.ಎಂ. ಲಕ್ಷ್ಮೀನಾರಾಯಣ ಬೇಳೂರು, ವಿ.ಆರ್.ವಿ ಟ್ರಸ್ಟ್‌ನ ಡಾ.ವಿವೇಕ್, ಸಂಪನ್ಮೂಲ ವ್ಯಕ್ತಿ ರಂಗ ಕಲಾವಿದ ಸೂರ್ಯ ಕುಂದಾಪುರ ಹಾಜರಿದ್ದರು.

ಪ್ರತಿಕ್ರಿಯಿಸಿ (+)