ರಂಗಭೂಮಿ ಜನರಿಂದ ದೂರ ಸರಿದಿದೆ

7
ಹಿರಿಯ ವಿಮರ್ಶಕ ಶೇಷಗಿರಿ ರಾವ್ ವಿಷಾದ

ರಂಗಭೂಮಿ ಜನರಿಂದ ದೂರ ಸರಿದಿದೆ

Published:
Updated:

ಬೆಂಗಳೂರು: `ರಂಗಭೂಮಿ ಜನಸಾಮಾನ್ಯರಿಗೆ ಹತ್ತಿರ ಇರಬೇಕು ಎಂಬುದು ನಾಟಕಕಾರ ಪ್ರೊ.ಆರ್.ಗುರುರಾಜರಾಯರ ಆಶಯವಾಗಿತ್ತು. ಆದರೆ, ಈಗ ರಂಗಭೂಮಿ ಜನರಿಂದ ದೂರ ಸರಿದಿದೆ' ಎಂದು ಹಿರಿಯ ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಬೇಸರ ವ್ಯಕ್ತಪಡಿಸಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಆಶ್ರಯದಲ್ಲಿ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರೊ.ಆರ್. ಗುರುರಾಜರಾಯರ ಜನ್ಮಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಬೆಂಗಳೂರು, ಮೈಸೂರು ಸೇರಿದಂತೆ ನಗರಗಳಲ್ಲಿ ನಾಟಕಗಳ ಪ್ರದರ್ಶನವಾದಾಗ ರಂಗಮಂದಿರದಲ್ಲಿ ಸೀಟುಗಳು ಭರ್ತಿಯಾಗುತ್ತವೆ. ಆದರೆ, ಸಣ್ಣ ಪಟ್ಟಣ ಹಾಗೂ ಗ್ರಾಮಗಳಲ್ಲಿ ನಾಟಕ ಪ್ರದರ್ಶಿಸಿದಾಗ ಈ ಪರಿಸ್ಥಿತಿ ಇರುವುದಿಲ್ಲ. ರಂಗಭೂಮಿ ಹಾಗೂ ಸಮಾಜಕ್ಕೆ ಪರಸ್ಪರ ಸಂಬಂಧ ಇರಬೇಕು. ರಂಗಭೂಮಿ ಜನಸಮುದಾಯದ ಸಾಂಸ್ಕೃತಿಕ ಜೀವನದ ಭಾಗ ಆಗಬೇಕು. ಈ ಎಲ್ಲ ಅಂಶಗಳು ಗುರುರಾಜರಾಯರ `ಕನ್ನಡ ನಾಟಕದ ಮೇಲೆ ಪಾಶ್ಚಾತ್ಯ ಪ್ರಭಾವ' ಕೃತಿಯಲ್ಲಿದೆ' ಎಂದು ಅವರು ಅವರು ತಿಳಿಸಿದರು.`ಕನ್ನಡ ರಂಗಭೂಮಿಯು ಪಾಶ್ಚಾತ್ಯ ರಂಗಭೂಮಿಯ ಅನೇಕ ಉತ್ತಮ ಅಂಶಗಳನ್ನು ಸ್ವೀಕಾರ ಮಾಡಿದೆ. ಪಾಶ್ಚಾತ್ಯ ರಂಗಭೂಮಿಯಿಂದ ನಮ್ಮ ರಂಗಭೂಮಿಗೆ ಸಿಕ್ಕ ಉತ್ತಮ ಕೊಡುಗೆ ನಿರ್ದೇಶಕ ಸ್ಥಾನ. ಆದರೆ, ಈಚಿನ ದಿನಗಳಲ್ಲಿ ನಿರ್ದೇಶಕರು ಸರ್ವಾಧಿಕಾರಿಗಳು ಆಗಿದ್ದಾರೆ. ನಟರು ನಿರ್ದೇಶಕರ ಆಣತಿಯಂತೆ ಕೇಳಬೇಕಿದೆ. ಇದರಿಂದಾಗಿ ನಟರ ಸೃಜನಶೀಲತೆ ತೋರಿಸಲು ಅವಕಾಶ ದೊರಕುತ್ತಿಲ್ಲ' ಎಂದು ಅವರು ಪ್ರತಿಪಾದಿಸಿದರು.ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಆಶಯ ಭಾಷಣ ಮಾಡಿ, `ಈಗಿನ ಮಕ್ಕಳಲ್ಲಿ ವಿಚಾರವನ್ನು ಗ್ರಹಿಸುವ ಶಕ್ತಿ ಕಡಿಮೆ ಇದೆ. 12ನೇ ಶತಮಾನದ ವಚನಕಾರರಲ್ಲಿ ಈ ಗುಣ ವಿಶೇಷವಾಗಿತ್ತು. ನಾವು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಗ್ರಹಣಶಕ್ತಿ ವಿದ್ಯಾರ್ಥಿ ಸಮುದಾಯದಲ್ಲಿ ಅಧಿಕ ಪ್ರಮಾಣದಲ್ಲಿ ಇತ್ತು' ಎಂದು ಅಭಿಪ್ರಾಯಪಟ್ಟರು.`ವಿದ್ಯಾರ್ಥಿಗಳಿಗೆ ಪಾಠ ಅರ್ಥವಾಗಲಿದೆ ಎಂಬ ವಿಶ್ವಾಸದಿಂದ ಪಾಠ ಮಾಡುವವರು ಉತ್ತಮ ಶಿಕ್ಷಕರು. ವಿದ್ಯಾರ್ಥಿಗಳಿಗೆ ಪಾಠ ಅರ್ಥ ಮಾಡಿಕೊಳ್ಳುವ ಶಕ್ತಿ ಕಡಿಮೆ ಎಂಬ ಭಾವನೆಯಿಂದ ಪಾಠ ಮಾಡುವವರು ಉತ್ತಮ ಶಿಕ್ಷಕರು ಆಗಲಾರರು. ಗುರುರಾಜರಾಯರು ಮೊದಲ ಗುಂಪಿಗೆ ಸೇರಿದವರು. ವಿಷಯವನ್ನು ವಿಮರ್ಶಾತ್ಮಕವಾಗಿ ಹೇಳುವ ಕಲೆ ರಾಯರಿಗೆ ಸಿದ್ಧಿಸಿತ್ತು' ಎಂದು ಅವರು ನೆನಪಿಸಿಕೊಂಡರು.`ನಮಗೆ ಹಳೆ ಸಂಗತಿಗಳ ಸ್ಮರಣೆ ಅಗತ್ಯ. ಈ ಸ್ಮರಣೆ ಇದ್ದರೆ ಮಾತ್ರ ಭವಿಷ್ಯದ ವಿದ್ಯಾಭ್ಯಾಸ ಹೇಗಿರುತ್ತದೆ ಎಂದು ಹೇಳಬಹುದು. ಅಲ್ಲದೆ ನಾಡಿನ ಆಂಗ್ಲ ಪ್ರಾಧ್ಯಾಪಕರಿಂದ ಕನ್ನಡ ಸಾಹಿತ್ಯ ಬೆಳೆದಿದೆ' ಎಂದು ಅವರು ಪ್ರತಿಪಾದಿಸಿದರು.ಹಿರಿಯ ನಟ ಡಾ.ನ.ರತ್ನ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗನಟ ಬಿ.ಎಸ್.ಕೇಶವರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ, ಲೇಖಕ ಡಾ.ಎಸ್.ರಾಮಸ್ವಾಮಿ, ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry