ಮಂಗಳವಾರ, ಮಾರ್ಚ್ 9, 2021
23 °C
4 ವರ್ಷ ಕಳೆದರೂ ಅಪೂರ್ಣ: ಜನಪ್ರತಿನಿಧಿಗಳು, ರಂಗಾಸಕ್ತರ ಮರೆವು

ರಂಗಮಂದಿರ ನಿರ್ಮಾಣ ನನೆಗುದಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಮಂದಿರ ನಿರ್ಮಾಣ ನನೆಗುದಿಗೆ

ಕೊಪ್ಪಳ: ಜಿಲ್ಲಾ ರಂಗಮಂದಿರ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. 2011ರಲ್ಲಿ ಚಾಲನೆ ಸಿಕ್ಕಿದ ಕಾಮಗಾರಿ, ನಾಲ್ಕು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ನಿರ್ಮಿತಿ ಕೇಂದ್ರ ಕಾಮಗಾರಿ ನಡೆಸುತ್ತಿದೆ.ಸುಮಾರು 1 ಸಾವಿರ ಆಸನ ಸಾಮರ್ಥ್ಯದ, ಆಧುನಿಕ ವಿನ್ಯಾಸದ ರಂಗ ಮಂದಿರದ ಬಾಲ್ಕನಿ, ಗೋಡೆಗಳು ನಿರ್ಮಾಣಗೊಂಡಿವೆ. ಆದರೆ, ಛಾವಣಿ ನಿರ್ಮಾಣವಾಗಿಲ್ಲ. ₨ 3 ಕೋಟಿ ವೆಚ್ಚದ ಯೋಜನೆಯಿದು.ನಗರದ ಎಸ್‌ಎಫ್‌ಎಸ್‌ ಶಾಲೆಯ ಸಮೀಪ ರಂಗಮಂದಿರ ನಿರ್ಮಾಣಗೊಳ್ಳುತ್ತಿದೆ. ಹಣ ಪೂರ್ಣ ಬಿಡುಗಡೆ ಆಗಿದೆ. ಮೊದಲು ಸಣ್ಣ ಗಾತ್ರದಲ್ಲಿದ್ದ ವಿನ್ಯಾಸ ಕಾಮಗಾರಿ ವೇಳೆ ಬದಲಾಗಿ ದೊಡ್ಡ ಪ್ರಮಾಣ ಯೋಜನೆ ಸಿದ್ಧವಾಗಿದೆ. ಸಹಜವಾಗಿ ಸ್ವಲ್ಪ ಹಣಕಾಸಿನ ಅಡಚಣೆ ಆಗಿರಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ಹೇಳಿವೆ.ಆದರೂ ಕಾಮಗಾರಿಯನ್ನು ಒಂದು ನಿರ್ಣಾಯಕ ಹಂತಕ್ಕೆ ತಂದಿದ್ದರೆ ಅಂತಿಮ ಹಂತಕ್ಕೆ ಬೇಕಾದ ಹಣವನ್ನು ವಿವಿಧ ಮೂಲಗಳಿಂದ ತರಬಹುದಿತ್ತು. ಆದರೆ, ನಿರ್ಮಿತಿ ಕೇಂದ್ರ ತನ್ನ ‘ಸಹಜ’ ಧೋರಣೆ ಮುಂದುವರಿಸಿರುವುದರಿಂದ ಇದೂ ಪೂರ್ಣಗೊಳ್ಳುವುದು ಅನುಮಾನ ಎನ್ನುತ್ತಾರೆ ಇಲ್ಲಿನ ಹಿರಿಯ ರಂಗಕರ್ಮಿಗಳು.ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್‌ ಹೇಳುವಂತೆ, ರಂಗಮಂದಿರ ತಾಂತ್ರಿಕವಾಗಿ ಉತ್ತಮವಾಗಿರಬೇಕು. ಇಲ್ಲಿ ಅಂತಿಮ ಕಾಮಗಾರಿಗಳು (ಫಿನಿಷಿಂಗ್) ಪ್ರಧಾನಪಾತ್ರ ವಹಿಸುತ್ತವೆ. ಅದರಲ್ಲೂ ಧ್ವನಿ ವ್ಯವಸ್ಥೆ ಅತ್ಯುತ್ತಮವಾಗಿರಬೇಕು. ಪ್ರತಿಧ್ವನಿ ನಿಯಂತ್ರಣಕ್ಕೆ ಗೋಡೆಗಳಿಗೆ ಅಕಸ್ಟಿಕ್‌ (ಪ್ರತಿಧ್ವನಿ ನಿಯಂತ್ರಿಸಲು ಗಾಜಿನ ನಾರು ತುಂಬಿದ ಫ್ಲೈವುಡ್‌ ಪದರ) ಪರಿಕರಗಳನ್ನು ಬಳಸಲೇಬೇಕು. ಅತ್ಯುತ್ತಮ ರಂಗಮಂದಿರ ವಿನ್ಯಾಸಕರ ಸಲಹೆ ಪ್ರಕಾರವೇ ವಿನ್ಯಾಸ ನಡೆಯಬೇಕು.ಇಲ್ಲಿ ತಾಲೀಮು ಹಾಲ್‌ ಬೇಕು. ಕಾಮಗಾರಿ ಮುಗಿಸುವ ಭರದಲ್ಲಿ ಸ್ಥಳೀಯವಾಗಿ ಸಿಗುವ ಧ್ವನಿ, ಬೆಳಕಿನ ಸಾಮಗ್ರಿಗಳನ್ನೇ ಬಳಸಿದರೆ ಮಂದಿರ ಇದ್ದೂ ಇಲ್ಲದಂತಾಗುತ್ತದೆ ಎಂದು ಹೇಳಿದರು.ಈಗ ನಡೆಸಿರುವ ಕಾಮಗಾರಿ ಮುಂದುವರಿಯಲಿ. ಮುಂದೆ ‘ಫಿನಿಷಿಂಗ್‌’ (ಆಸನ, ಒಳಾಂಗಣ ವಿನ್ಯಾಸ) ಕಾಮಗಾರಿಗೆ ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಅನುದಾನ ಬಿಡುಗಡೆ ಮಾಡುವ ವಿಶ್ವಾಸವಿದೆ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳು.ಈಗ ಸಾಹಿತ್ಯ ಭವನ ಇದೆಯಾದರೂ ಅಲ್ಲಿ ರಂಗ ಚಟುವಟಿಕೆ ಕಷ್ಟಸಾಧ್ಯ. ಅದಕ್ಕಾಗಿ ಜಿಲ್ಲಾ ರಂಗಮಂದಿರದ ಕಾಮಗಾರಿಗೆ ಸಾಂಸ್ಕೃತಿಕ ಮನಸ್ಸುಳ್ಳ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು ಎಂದು ರಂಗಾಸಕ್ತರು ಬಯಸಿದ್ದಾರೆ.ಕೊಪ್ಪಳದ ಜಿಲ್ಲಾ ರಂಗಮಂದಿರ ವಿನ್ಯಾಸ ತಾಂತ್ರಿಕವಾಗಿ ತೃಪ್ತಿಕರವಾಗಿಲ್ಲ.  ಅದು ರಂಗ ಮಂದಿರವಾಗಬೇಕೇ ವಿನಃ ಗೋದಾಮು ಅಲ್ಲ.

ಹಾಲ್ಕುರಿಕೆ ಶಿವಶಂಕರ್‌,
ರ್ನಾಟಕ ನಾಟಕ ಅಕಾಡೆಮಿ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.