ಮಂಗಳವಾರ, ಅಕ್ಟೋಬರ್ 15, 2019
26 °C

ರಂಗರೂಪಕವಾಗಿ ಕಂಬಾರರ ಶಿಖರ ಸೂರ್ಯ

Published:
Updated:

ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ ಡಾ.ಚಂದ್ರಶೇಖರ ಕಂಬಾರರ ಜಾನಪದ ಹಿನ್ನೆಲೆಯುಳ್ಳ ಮಹತ್ವಾಕಾಂಕ್ಷಿ ಕಾದಂಬರಿ `ಶಿಖರ ಸೂರ್ಯ~ ಮೊಟ್ಟ ಮೊದಲ ಬಾರಿಗೆ ನಾಟಕವಾಗಿ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ.ಮೈಸೂರಿನ ರಂಗಾಯಣವು ಜ. 14 ರಿಂದ 22ರ ವರೆಗೆ ನಡೆಸಲು ಉದ್ದೇಶಿಸಿರುವ `ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವ~ದ ಮೊದಲ ದಿನ ಈ ನಾಟಕ ಪ್ರದರ್ಶನ ಗೊಳ್ಳಲಿದೆ. ಪ್ರತಿ ವರ್ಷ ಒಂದೊಂದು ಪರಿಕಲ್ಪನೆಯಲ್ಲಿ ನಾಟಕೋತ್ಸವವನ್ನು ಹಮ್ಮಿ ಕೊಳ್ಳಲಾಗುತ್ತಿದ್ದು, ಈ ಬಾರಿ `ಜ್ಞಾನಪೀಠ ರಂಗೋತ್ಸವ~ ಶೀರ್ಷಿಕೆಯಡಿ ನಾಟಕೋತ್ಸವ ಆಯೋಜಿಸಲಾಗಿದೆ.ಕಂಬಾರರ ಕಾದಂಬರಿಯನ್ನು ರಂಗಾಯಣ ಕಲಾವಿದ ಎಸ್. ರಾಮನಾಥ್ ರಂಗರೂಪಕ್ಕೆ ತಂದಿದ್ದು, ಬಸವಲಿಂಗಯ್ಯ ಹಿರೇಮಠ ಸಂಗೀತ ಸಂಯೋಜನೆ ಮಾಡಿದ್ದಾರೆ. ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಕಾದಂಬರಿಯಲ್ಲಿ ಆಧುನಿಕ ಕಾಲದ ಆಲೋಚನೆಗಳನ್ನು ಜಾನಪದೀಯ ಹಂದರದಲ್ಲಿ ಕಂಬಾರರು ಕಟ್ಟಿಕೊ ಟ್ಟಿದ್ದಾರೆ. ಅಧಿಕಾರದಾಹದ ಚಿನ್ನಮುತ್ತ ಹಣದ ಶಕ್ತಿಯನ್ನು ಪಡೆಯಲು ನಡೆಸುವ ಹುನ್ನಾರ, ಸೈನಿಕ ಶಕ್ತಿಯಿಂದ ರಾಜ್ಯಗಳನ್ನು ಕಬಳಿಸುವ ಆಕ್ರಮಣಿಕೆಯನ್ನು `ಶಿಖರ ಸೂರ್ಯ~ದ ಮೂಲಕ ರಂಗಕ್ಕೆ ತರಲಾಗುತ್ತಿದೆ.ಜ.14 ರಂಗಾಯಣದ ಸಂಸ್ಥಾಪನಾ ದಿನ. 1989ರಲ್ಲಿ ಬಿ.ವಿ.ಕಾರಂತರು ತಮ್ಮ ಕನಸಿನ ರಂಗಾಯಣವನ್ನು ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಜ. 14 ರಂದು ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಜ. 15 ರಂದು ಸಂಜೆ 6.30 ಗಂಟೆಗೆ `ಶಿಖರ ಸೂರ್ಯ~ ರಂಗದ ಮೇಲೆ ಪ್ರಯೋಗ ಕಾಣಲಿದೆ.ಸಾಮಾನ್ಯ ವರ್ಗಕ್ಕೆ 30 ರೂಪಾಯಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 10, 20 ರೂಪಾಯಿ ಪ್ರವೇಶ ದರ ನಿಗದಿ ಪಡಿಸಲಾಗಿದೆ. ಸಾಹಿತ್ಯ, ರಂಗಭೂಮಿಯಿಂದ ಯುವ ವಿದ್ಯಾರ್ಥಿಗಳು ವಿಮುಖರಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ರಂಗಭೂಮಿಯತ್ತ ಅವರನ್ನು ಸೆಳೆಯಲು, ಸಾಹಿತ್ಯದ ಬಗ್ಗೆ ಅವರಲ್ಲಿ ಆಸಕ್ತಿ ಮೂಡಿಸಲು ಪ್ರವೇಶ ದರದಲ್ಲಿ ರಿಯಾಯಿತಿ ನೀಡಲಾಗಿದೆ. ನಗರದ ಸುಮಾರು 25ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ, `ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರ ಶಿಖರ ಸೂರ್ಯ ನಾಟಕವನ್ನು ಮೊಟ್ಟ ಮೊದಲ ಬಾರಿಗೆ ರಂಗಭೂಮಿಗೆ ತರಲಾಗುತ್ತಿದೆ. ನಾಟಕದ ತಾಲೀಮು ಈಗಾಗಲೇ ಆರಂಭವಾಗಿದ್ದು, ಜ. 15ರಂದು ಸಂಜೆ 6.30ಕ್ಕೆ ರಂಗಾಯಣದಲ್ಲಿ ಪ್ರದರ್ಶನಗೊಳ್ಳಲಿದೆ~ ಎಂದು ಹೇಳಿದರು.

Post Comments (+)