ರಂಗಶಂಕರದಲ್ಲಿ ಮಾವಿನ ಸವಿ

7

ರಂಗಶಂಕರದಲ್ಲಿ ಮಾವಿನ ಸವಿ

Published:
Updated:
ರಂಗಶಂಕರದಲ್ಲಿ ಮಾವಿನ ಸವಿ

ಎಲ್ಲೆಲ್ಲೂ ಮಾವಿನದ್ದೇ ಭರಾಟೆ. ಮಾವಿನ ಹಣ್ಣಿನ ರುಚಿ ಸವಿಯಲು ಇದು ಸೂಕ್ತ ಸಮಯ. ಹೀಗೆನ್ನುತ್ತಾ ಜನರಿಗೆ ಮಾವಿನ ವಿಭಿನ್ನ ರುಚಿಯನ್ನು ನೀಡಿತ್ತು `ರಂಗಶಂಕರ~.

ಅಲ್ಲಿ ಮಾವಿನ ಘಮಲು ತುಂಬಿಕೊಂಡಿತ್ತು. ಆವರಣವು ಪೂರ್ತಿಯಾಗಿ ಹಳದಿ ಬಣ್ಣದಿಂದ ಅಲಂಕಾರಗೊಂಡಿತ್ತು.

 

ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲರೂ ಮಾವಿನ ಹಣ್ಣು ತಿನ್ನುವುದರಲ್ಲೇ ಕಳೆದುಹೋಗಿದ್ದರು. ಕಚ್ಚಿ ತಿನ್ನುತ್ತಿದ್ದರೆ ಮಾವಿನ ಹಣ್ಣಿನ ರಸ ಗಲ್ಲದಿಂದ ಬಟ್ಟೆ ಮೇಲೆ ಹರಿದು ಬಂದಿದ್ದೂ ಗಮನಕ್ಕೆ ಬಂದಿರಲಿಲ್ಲ. ತಾವೂ ತಿನ್ನುವುದಲ್ಲದೆ ತಮ್ಮ ಜೊತೆಗೆ ಬಂದಿದ್ದವರಿಗೂ ಸಿಹಿ ಹಣ್ಣಿನ ರುಚಿ ಉಣಿಸುತ್ತಾ ನಗುತ್ತಾ ಸವಿಯುತ್ತಿದ್ದರು. ಅಂತಹ ಗಮ್ಮತ್ತಿತ್ತು ಈ ಮಾವಿನ ಪಾರ್ಟಿಗೆ.ನಗರದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಆದರೆ `ಮಾವಿನ ಪಾರ್ಟಿ~ ತೀರಾ ವಿಭಿನ್ನ ಚಿಂತನೆ. `ಎಷ್ಟು ಖುಷಿಯಾಗುತ್ತಿದೆ ಗೊತ್ತಾ~ ಎಂದು ಅಲ್ಲಿಗೆ ಬಂದವರೆಲ್ಲಾ ಮಾತು ಹಂಚಿಕೊಳ್ಳುತ್ತಿದ್ದರು. ಒಂದಾದ ಬಳಿಕ ಒಂದರಂತೆ ಮಾವನ್ನು ಕಚ್ಚಿ ತಿನ್ನುತ್ತಿದ್ದದ್ದು ಅಲ್ಲಿದ್ದ ಇತರರಿಗೂ ಪ್ರೇರಣೆಯಾಗಿರಬೇಕು. ಸ್ಪರ್ಧೆಗೆ ಬಿದ್ದವರಂತೆ ಅವರೂ ಹೆಚ್ಚು ಮಾವು ಕೊಂಡು ತಿನ್ನುತ್ತಿದ್ದರು.ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರೂ ಮಾವು ತಿನ್ನಲು ಅಲ್ಲಿ ಸೇರಿದ್ದರು. ಅಲ್ಲಿದ್ದ ಅದೆಷ್ಟೋ ಬಗೆಯ ಮಾವುಗಳಲ್ಲಿ ತಮ್ಮ ನೆಚ್ಚಿನ  ಮಾವಿನಹಣ್ಣನ್ನು ಆರಿಸಿ ಒಂದು ಕೆ.ಜಿ. ಖರೀದಿಸಿ ಅಲ್ಲೇ ಇಟ್ಟಿದ್ದ ನೀರಿನಲ್ಲಿ ಚೆನ್ನಾಗಿ ತೊಳೆದು ತಮಗೆ ಇಷ್ಟವಾದ ಜಾಗದಲ್ಲಿ ಕುಳಿತು ಮೈ ಮನ ತಣಿಯುವಂತೆ ತಿಂದು ಓಟೆ ಚೀಪುತ್ತಿದ್ದರು.ಅಷ್ಟೇ ಅಲ್ಲ, ವಾತಾವರಣವನ್ನು ಮಾವುಮಯ ಮಾಡಲು ಅಲ್ಲಿಗೆ ಬಂದಿದ್ದವರು ಹಾಗೂ ಅತಿಥಿಗಳು ಹಳದಿ, ಕೇಸರಿ ಮತ್ತು ಹಸಿರು ಬಣ್ಣದ ಬಟ್ಟೆಗಳನ್ನೇ ತೊಟ್ಟು ಮಾವಿನ ಹಣ್ಣನ್ನೇ ಪ್ರತಿನಿಧಿಸಿದರು.ವಿವಿಧ ತಳಿಯ ಮಾವಿನ ಹಣ್ಣುಗಳ ಪರಿಚಯ ಅಲ್ಲಿ ಜನರಿಗೆ ಆಯಿತು. ಬಾದಾಮಿ, ಮಲ್ಲಿಕಾ ತರಹದ ಸಾಮಾನ್ಯ ತಳಿಯ ಮಾವು ಮಾತ್ರವಲ್ಲ, ಶುಗರ್ ಬೇಬಿ, ಲಂಗಾರ, ಇಮಾಮ್ ಪಸಂದ್ ಅಂತಹ ಅಪರೂಪದ ತಳಿಗಳನ್ನೂ ಇಲ್ಲಿರಿಸಲಾಗಿತ್ತು.`ಈ ಮಾವಿನ ಪಾರ್ಟಿಗೆ ಸುಮಾರು ಐದು ವರ್ಷಗಳಿಂದಲೂ ತಪ್ಪದೆ ಕುಟುಂಬದೊಂದಿಗೆ ಬರುತ್ತಿದ್ದೇನೆ. ಮಾವಿನ ಹಣ್ಣಿನ ರುಚಿಯ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಇದಕ್ಕಿಂತ ಉತ್ತಮ ಸ್ಥಳವಿಲ್ಲ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಎಲ್ಲಾ ರೀತಿಯ ಜನರೂ ಇಲ್ಲಿ ಒಟ್ಟಾಗಿ ಸೇರುತ್ತಾರೆ. ನನ್ನ ಮಗ ಪ್ರಣವ್‌ಗೂ ಇಲ್ಲಿಗೆ ಬರುವುದೆಂದರೆ ತುಂಬಾ ಇಷ್ಟ~ ಎಂದರು ಆರ್ಕಿಟೆಕ್ಟ್ ಶಿಲ್ಪಾ.ಮಕ್ಕಳಿಗಾಗಿ ಪಾರ್ಟಿಯಲ್ಲಿ ಮಾವಿನ ಹಣ್ಣಿನ ವಿಷಯಕ್ಕೆ ಸಂಬಂಧಿಸಿದತೆ ಹಲವು ಆಟಗಳನ್ನೂ ಆಯೋಜಿಸಲಾಗಿತ್ತು. `ಗೆಸ್ ದಿ ಮ್ಯಾಂಗೊ~, `ದಿ ಫಾಸ್ಟೆಸ್ಟ್ ಮ್ಯಾಂಗೊ ಈಟರ್~ ಮೊದಲಾದ ಆಟಗಳನ್ನು ಮಾವಿನ ಸಿಹಿ ಸವಿಯುತ್ತಾ ಮಕ್ಕಳು ಖುಷಿ ಪಡುತ್ತಿದ್ದರು.ಇಂತಹ ಆಟಗಳು ಮಕ್ಕಳಿಗೆ ಹಣ್ಣಿನ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿವೆ ಎಂಬುದು ಭಾಗವಹಿಸಲು ಬಂದ ಹಲವರ ಅಭಿಪ್ರಾಯ. ಅರುಂಧತಿ ನಾಗ್ ಅವರ ಮಗಳು ಕಾವ್ಯಾ ಕೂಡ ಮಾವಿನ ರುಚಿ ಸವಿಯಲು ಬಂದಿದ್ದರು.`ಮಾವು ತಿನ್ನುವಾಗ ನಾವೂ ಮಕ್ಕಳಾಗಿ ಹೋಗುತ್ತೇವೆ. ಯಾವುದೇ ಮುಜುಗರವಿಲ್ಲದೆ, ಟೇಬಲ್ ಮ್ಯಾನರ್ಸ್‌ನ ಪರಿವೆಯಿಲ್ಲದೆ ತುಂಬಾ ಖುಷಿಯಾಗಿ ತಿಂದೆ~ ಎಂದು ಸಂತಸ ಹಂಚಿಕೊಂಡರು ಕಾವ್ಯಾ. ಅರುಂಧತಿ ನಾಗ್ ಅವರೂ ಜನರೊಂದಿಗೆ ಬೆರೆತು ಮಾವಿನ ರುಚಿಯನ್ನು ಅನುಭವಿಸುತ್ತಾ ಕುಳಿತರು.ಕಳೆದ ಹತ್ತು ವರ್ಷಗಳಿಂದ ರಂಗಶಂಕರದೊಂದಿಗೆ ನಡೆದುಕೊಂಡು ಬಂದಿರುವ ಈ ಪಾರ್ಟಿ ಜನರಲ್ಲಿ ಒಂದಾಗಿ ಬೆರೆತುಹೋಗಿದೆ. ಇದೇ ರೀತಿ ಇನ್ನೂ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆಯಿದೆ, ಮುಂದೆ `ಕಾರ್ನ್ ಪಾರ್ಟಿ~ ಬರಬಹುದು ಎಂದು ಗುಟ್ಟು ಬಿಟ್ಟುಕೊಟ್ಟರು ಅರುಂಧತಿ ನಾಗ್. ಇವೆಲ್ಲವುಗಳ ಮಧ್ಯೆಯೇ ದೊಡ್ಡ ಮಾವಿನ ಹಣ್ಣನ್ನು ಪುಟ್ಟ ಕೈಯಲ್ಲಿ ಹಿಡಿದಿದ್ದ ಪುಟಾಣಿ ಇಡಿಯಾಗಿ ಅದನ್ನು ತಿನಿಸುವಂತೆ ಅಮ್ಮನ ಬಳಿ ಹಟ ಮಾಡುತ್ತಿತ್ತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry