ಶನಿವಾರ, ಮೇ 15, 2021
22 °C

ರಂಗಶಂಕರದಲ್ಲಿ ಸಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸ್ಯ, ವಿಡಂಬನೆಗಳಿಂದ ಕೂಡಿದ ವಿಚಾರಾತ್ಮಕ ನಾಟಕ `ಸಂತೆಯೊಳಗೊಂದು ಮನೆಯ ಮಾಡಿ~ ಗುರುವಾರ (ಏಪ್ರಿಲ್ 26) ಸಂಜೆ 7:30ಕ್ಕೆ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.2010ರಲ್ಲಿ ಈ ನಾಟಕವನ್ನು ಎಂ.ಸಿ.ಆನಂದ್ ಅವರು ಮೊದಲ ಬಾರಿಗೆ ಪ್ರಸ್ತುತ ಪಡಿಸಿದಾಗ ಅಪಾರ ಜನ ಮನ್ನಣೆ ಹಾಗೂ ಒಳ್ಳೆಯ ವಿಮರ್ಶೆ ಗಳಿಸಿತ್ತು. ಇದು ಇತ್ತೀಚೆಗೆ ಅತ್ಯಂತ ಜನ ಪ್ರಿಯತೆ ಪಡೆದ `ಋಣವೆಂಬ ಸೂತಕವು~ ನಾಟಕದ ಮೊದಲ ಭಾಗ.  ಜಗತ್ತಿನಾದ್ಯಂತ ಸಾಂಕ್ರಾಮಿಕ ಪಿಡುಗಿನಂತೆ ಹರಡಿರುವ ಬೆಲೆ ಏರಿಕೆ, ನಿರುದ್ಯೋಗ, ಕೊಳ್ಳುಬಾಕ ಸಂಸ್ಕೃತಿ ಇವುಗಳಿಂದ ಜನ ಸಾಮಾನ್ಯರಿಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಅರ್ಥಶಾಸ್ತ್ರ ಪಂಡಿತರು, ರಾಷ್ಟ್ರ ನಾಯಕರು, ರಾಜಕೀಯ ಧುರೀಣರು ಜನರಿಗೆ ಅರ್ಥವಾಗದ ಪಾರಿಭಾಷಿಕ ಶಬ್ಧಗಳನ್ನು ಉಪಯೋಗಿಸಿ ಮಬ್ಬುಗೊಳಿಸುತ್ತಿದ್ದಾರೆ.

 

ಗ್ಲೋಬಲ್ ಫೆನಾಮಿನನ್, ಜಾಗತಿಕ ಅರ್ಥವ್ಯವಸ್ಥೆ, ಮುಕ್ತ ಮಾರುಕಟ್ಟೆ ಮೊದಲಾದ ಪಾಶಗಳಿಂದ ಜನಗಳು ತಮ್ಮ ಸರಳ ಬದುಕಿನ ಸುಖ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿ ನರಳುತ್ತಿದ್ದಾರೆ.ನಾಟಕದಲ್ಲಿ ರಮಾ-ರಂಗಸ್ವಾಮಿ ದಂಪತಿ ಜನಸಾಮಾನ್ಯರ ಪ್ರತಿನಿಧಿಗಳಾಗಿ, ತಮ್ಮ ನಿಯಂತ್ರಣದಲ್ಲಿ ಇಲ್ಲದ ರಾಜಕೀಯ, ಆರ್ಥಿಕ, ಜಾಗತಿಕ ಮ್ಯಾನಿಪ್ಯುಲೇಶನ್‌ಗಳಿಂದಾಗಿ ಹಲವಾರು ಕಷ್ಟಗಳಿಗೆ ಒಳಗಾಗುತ್ತಾರೆ.ಅತಿ ಯಾಂತ್ರಿಕತೆ, ಅತಿ ವೇಗಗಳಿಂದಾಗಿ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಕೃತಕವಾಗುತ್ತಿರುವುದರ ವಿರುದ್ಧ, ಶ್ರೀಮಂತ ರಾಷ್ಟ್ರಗಳ ಆದೇಶದಂತೆ ನಮ್ಮ ದೇಶದ ಜನತೆಯ ಮೇಲೆ ಒಲ್ಲದ, ಒಗ್ಗದ, ಅನವಶ್ಯಕವಾದ ಜೀವನ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹೇರುತ್ತಿರುವುದರ ವಿರುದ್ಧ ಪ್ರತಿಭಟನೆಯ ಧ್ವನಿ ಇಲ್ಲಿದೆ.ಕಥಾವಸ್ತು ಗಂಭೀರ ಹಾಗೂ ಸಂಕೀರ್ಣವಾಗಿದ್ದರೂ ಹಾಸ್ಯ, ವಿಡಂಬನೆಗಳ ಮೂಲಕ ಈ ನಾಟಕವನ್ನು ರಂಜನೀಯವಾಗಿ ಪ್ರಸ್ತುತ ಪಡಿಸಲಾಗಿದೆ.ಈಗಾಗಲೇ ಈ ನಾಟಕ ತುಂಬಿದ ರಂಗ ಮಂದಿರಗಳಲ್ಲಿ ಹಲವಾರು ಪ್ರದರ್ಶನಗಳನ್ನು ಕಂಡಿದ್ದು ಜನಪ್ರಿಯತೆ ಗಳಿಸಿದೆ. ಪ್ರವೇಶ ದರ ರೂ. 50. ಎನ್.ಮಂಗಳ, ವಿಜಯ್, ರಾಘವೇಂದ್ರ, ಪ್ರವೀಣ್ ಶೆಟ್ಟಿ, ಸಂತೋಷ್ ಮುಖ್ಯ ಭೂಮಿಕೆಯಲ್ಲಿದ್ದಾರೆ.ನಾಟಕಕ್ಕೆ ಬೆಳಕಿನ ವಿನ್ಯಾಸ : ಅರುಣ್ ಮೂರ್ತಿ, ಸಂಗೀತ ಹಾಗೂ ಶಬ್ಧ ವಿನ್ಯಾಸ ಗಣೇಶ್ ಶಣೈ, ರಚನೆ-ವಿನ್ಯಾಸ-ನಿರ್ದೇಶನ ಎಂ.ಸಿ.ಆನಂದ್ ಅವರದ್ದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.