ಶುಕ್ರವಾರ, ಮೇ 7, 2021
20 °C

ರಂಗಶಂಕರದಲ್ಲಿ ಸದಾರಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಶಂಕರ: ಮಂಗಳವಾರ, ಬುಧವಾರ ಸಮಷ್ಟಿ ತಂಡದಿಂದ `ಮಿಸ್.ಸದಾರಮೆ~ ಕನ್ನಡ ನಾಟಕ (ನಿರ್ದೇಶನ: ನೀನಾಸಂ ರಂಗ ಪದವೀಧರ ಮಂಜುನಾಥ ಬಡಿಗೇರ).

ಇದು ಬೆಳ್ಳಾವೆ ನರಹರಿ ಶಾಸ್ತ್ರಿಯವರಿಂದ ವಿರಚಿತವಾದ `ಸದಾರಮಾ ನಾಟಕಂ~ ಹಾಸ್ಯ ನಾಟಕದ ಪರಿಷ್ಕೃತ ಆವೃತ್ತಿ. ಮೂಲತಃ ಈ ನಾಟಕವು ಗುಬ್ಬಿ ಕಂಪೆನಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡಿತ್ತು.ನಂತರ ಹಿರಣ್ಣಯ್ಯನವರಿಂದ ಮತ್ತೆ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ಧವಾಗಿತ್ತು. ಮುಂದೆ ದಿ. ನೀನಾಸಂನ ಕೆ.ವಿ.ಸುಬ್ಬಣ್ಣನವರು ಪ್ರಸ್ತುತ ಸನ್ನಿವೇಶಕ್ಕೆ ಬದಲಾಯಿಸಿ `ಮಿಸ್. ಸದಾರಮೆ~ ಎಂದು ಹೆಸರಿಸಿ ದಿ. ಬಿ.ವಿ.ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನು ಮಾಡಿಸಿದರು. ಇದು ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ  ಭಾಷೆಗಳಲ್ಲೂ ಪ್ರಯೋಗವಾಗಿದೆ.ವರ್ತಕ ಬಂಗಾರ ಸೆಟ್ಟಿಯ ಮಗಳಾದ ಸದಾರಮೆಯ ಆಕರ್ಷಣೆಗೆ ಒಳಗಾಗುವ ರಾಜಕುಮಾರ, ರಾಜ್ಯ-ಕೋಶ ಬಿಟ್ಟು ಮದುವೆಯಾಗಿ ಅವಳೊಂದಿಗೆ ದೇಶಾಂತರ ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದ ಗಂಡ-ಹೆಂಡತಿಯರು ಒಬ್ಬರಿಂದೊಬ್ಬರು ಅಗಲುತ್ತಾರೆ.ಮುಗ್ದೆ ಸದಾರಮೆ ಹಲವಾರು ಕಷ್ಟ-ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲಾ   ಎದುರಿಸುವಲ್ಲಿ ಅವರು ಏನಾಗುತ್ತಾರೆ ಎಂಬುದೇ ಕ್ಲೈಮ್ಯಾಕ್ಸ್.ಇಡೀ ನಾಟಕವು ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪನಿ ನಾಟಕ ಶೈಲಿಯ ಹಾಡುಗಳಿಂದ ವಿಜೃಂಭಿಸಿದೆ. ನಿರ್ದೇಶಕರು ನಾಟಕದ ಮೂಲ ಕತೆಗೆ ಹೊಸ ವ್ಯಾಖ್ಯಾನ ನೀಡುವ ಪ್ರಯತ್ನ ಮಾಡಿದ್ದಾರೆ.ಇದು ಪ್ರಥಮ ಪ್ರದರ್ಶನ ಕಂಡದ್ದು 2007ರಲ್ಲಿ.  ಅದೇ ವರ್ಷ `ರಂಗಭೂಮಿ ಉಡುಪಿ~ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಆ ವರ್ಷದ ಅತ್ಯಧಿಕ ವೈಯುಕ್ತಿಕ ಪ್ರಶಸ್ತಿ ಗಳಿಸಿಕೊಂಡಿತ್ತು. ಇದುವರೆಗೂ ತನ್ನ ಎಲ್ಲಾ ಪ್ರದರ್ಶನಗಳಲ್ಲೂ ಹೆಚ್ಚೂ ಕಡಿಮೆ ಮೂಲ ನಟರನ್ನೇ ಉಳಿಸಿಕೊಂಡಿರುವುದು ತಂಡದ ಮತ್ತು ನಾಟಕದ ಇನ್ನೊಂದು ವಿಶೇಷ.ಸಮಷ್ಟಿ 2000ದಲ್ಲಿ ಹುಟ್ಟಿಕೊಂಡ ರಂಗ ತಂಡ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದು ಇದರ ಉದ್ದೇಶ. ಇದಕ್ಕಾಗಿ ಹಲವಾರು ಉಚಿತ ರಂಗಶಿಬಿರಗಳನ್ನು ನಡೆಸಿದೆ. ಪ್ರಸ್ತುತ ಭಾನುವಾರದ ರಂಗಶಾಲೆಯನ್ನೂ ಆರಂಭಿಸಿ ಎರಡನೆ ವರ್ಷದ ತರಗತಿಗಳನ್ನು ನಡೆಸುತ್ತಿದೆ. ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30 ಜ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.