ರಂಗಾಯಣವನ್ನು ಅಭದ್ರತೆಯ ಕಡೆ ದೂಕುವುದೇಕೇ?

7

ರಂಗಾಯಣವನ್ನು ಅಭದ್ರತೆಯ ಕಡೆ ದೂಕುವುದೇಕೇ?

Published:
Updated:

ಮೈಸೂರು ರಂಗಾಯಣಕ್ಕೆ ದೀರ್ಘ ಕಾಲದ ಸ್ಮೃತಿ ಇದೆ. ಅಲ್ಲಿನ ಸಾಹಿತ್ಯ, ರಂಗಭೂಮಿ, ಅಲ್ಲಿನ ಪ್ರೇಕ್ಷಕರು ಮತ್ತು ಕಲಾವಿದರ ಜೊತೆ ಬೆರೆತು ಜಗಳ, ಪ್ರೀತಿ, ಸಂಭ್ರಮ, ಸಂಸಾರ ಮಾಡಿಕೊಂಡಿರುವ ಕಲಾವಿದರು ರಂಗಾಯಣದ ಜೊತೆ 25 ವರ್ಷ ಹೆಜ್ಜೆ ಹಾಕಿದ್ದಾರೆ. ಕನ್ನಡದ ಕೆಲಸಗಳನ್ನು ರಂಗಭೂಮಿಯ ಮೂಲಕ ಸಮರ್ಥವಾಗಿ ಮಾಡಿದ್ದಾರೆ ಮತ್ತು ಮಾಡುತ್ತಲೂ ಇದ್ದಾರೆ.ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ರಂಗಕ್ಕೆ ತಂದ ಹೆಗ್ಗಳಿಕೆ ಇವರದ್ದು. ಮಹಾದೇವರ  ಕುಸುಮಬಾಲೆ , ಕುವೆಂಪುರವರ  ಮಲೆಗಳಲ್ಲಿ ಮದುಮಗಳು  ಶಿವರಾಮ ಕಾರಂತರ  ಸರಸಮ್ಮನ ಸಮಾಧಿ  ಮುಂತಾದ  ರಂಗಕೃತಿಗಳು ಇನ್ನು ನಿನ್ನೆ ಮೊನ್ನೆಯ ನೆನಪುಗಳ ಹಾಗೆ ಇದೆ. ಅಂಥ ನಟ-ನಟಿಯರಿಗೆ ದಣಿವಾದಾಗ ಸಾಂತ್ವನ ಮತ್ತು ಚಿಕಿತ್ಸೆಯನ್ನು ರಂಗ ಸಮಾಜ ಸೃಜನಶೀಲವಾಗಿ ಮಾಡುವುದು ಕರ್ತವ್ಯ.ಅದನ್ನು ಬಿಟ್ಟು ಅವರೆಲ್ಲ ಅಭದ್ರತೆಯಿಂದ ನರಳುವ ಹಾಗೆ ಮಾಡುವುದು ಅವಿವೇಕದ ಕೆಲಸ. ಇಂದು ಅಭಿವೃದ್ಧಿಯ ಹೆಸರಿನಲ್ಲಿ ಮನೆ, ಭೂಮಿ, ನೆನಪು ಸಂಬಂಧ, ನೆಲೆ ಕಳೆದುಕೊಳ್ಳುತ್ತಿರುವ ಅಪಾರ ಜನ ಸಮುದಾಯಗಳ ಜೊತೆಯೇ ಇದನ್ನೂ ಹೋಲಿಸಬಹುದು. ರಂಗಾಯಣದ ಕಲಾವಿದರನ್ನು ಆರಾರು ಜನರಾಗಿ ಒಡೆದು  ಬೇರೆಕಡೆ ಸ್ಥಳಾಂತರ ಮಾಡುತ್ತಿರುವ ಅಧಿಕಾರಶಾಹಿ ಮತ್ತು ರಂಗ ಸಮಾಜದ ನೀತಿ ಪ್ರಜ್ಞಾವಂತಿಕೆಯಿಂದ ಕೂಡಿಲ್ಲ. ಆ ಎಲ್ಲಾ ಕಲಾವಿದರಿಗೆ ರಜೆ ಕೊಟ್ಟು ಈ ರೀತಿ ಮಾಡುತ್ತಿರುವ ರಂಗ ಸಮಾಜದ ಆಡಳಿತದ ನೀತಿಯನ್ನು ಪ್ರಶ್ನಿಸಬೇಕಾಗಿದೆ. ರಂಗ ಸಮಾಜ ತನ್ನ ಕಾಲಾವಧಿಯನ್ನು ಮುಗಿಸಿ ಹೋಗುತ್ತಿರುವ ತುದಿಯಲ್ಲಿ 6 ಜನ ಕಲಾವಿದರುಗಳನ್ನು ಶಿವಮೊಗ್ಗ, ಧಾರವಾಡದ ರಂಗಾಯಣಗಳಿಗೆ ಕಳುಹಿಸುತ್ತಿರುವುದು ಆತುರದ ನಿರ್ಧಾರ. ಇದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಕೈವಾಡವಿದೆ.  ಕಲಾವಿದರನ್ನು ಬೇರೆ ಕಡೆಗೆ ವರ್ಗಾಯಿಸುವಂತಹ ಮಹತ್ವದ ನಿರ್ಧಾರಗಳನ್ನು ಮುಂಬರುವ ಹೊಸ ರಂಗಸಮಾಜಕ್ಕೆ ಬಿಡುವುದು ಒಳಿತು ಮತ್ತು ಕರ್ನಾಟಕದ ಪ್ರಜ್ಞಾವಂತ ರಂಗಕರ್ಮಿಗಳನ್ನು ಗಮನದಲ್ಲಿರಿಸಿಕೊಂಡು ಮಾಡಬೇಕಾಗಿದೆ.ರಂಗ ಸಮಾಜ ಕಾಲ-ಕಾಲಕ್ಕೆ  ಕನಿಷ್ಟ ಇಷ್ಟಾದರೂ ಕೆಲಸ ಮಾಡಬೇಕಾಗಿತ್ತು:ನಟ-ನಟಿಯರು ಕೆಲಸ ಮಾಡಲು ಸರಿಯಾದ ಫ್ಲೋರ್‌ಗಳುActors Guild ಗಳ ಮೂಲಕ ದೇಶ-ವಿದೇಶದ ನಟ-ನಟಿಯರ ಜೊತೆ ಸಂವಾದ ಮತ್ತು ವಿನಿಮಯಗ್ರಂಥಾಲಯದ ಸಮರ್ಥ ಬಳಕೆದೇಶದ ರಂಗ ಸಂಪನ್ಮೂಲ ವ್ಯಕ್ತಿಗಳ ಜೊತೆ ನಿರಂತರ ಒಡನಾಟ.ಧ್ವನಿ, ದೇಹದ ಥೆರಪಿಗೆ ಬೇಕಾದ ಲ್ಯಾಬ್‌ಗಳು.ನಾಟಕ ಪ್ರೇಕ್ಷಕರ ಜೊತೆಗಿನ ಸಂಬಂಧದ ನವೀಕರಣ.ರಂಗಾಯಣ ನಡೆಸುತ್ತಿರುವ ರಂಗಶಾಲೆಗೆ ಸೌಲಭ್ಯಗಳು.ತಾಲ್ಲೂಕು ಕಚೇರಿಗಳು ನಡೆಯುವ ಹಾಗೆ ನಡೆಯುತ್ತಿರುವ ನಡಾವಳಿಗಳ ಪರಾಮರ್ಶೆರಂಗಾಯಣದ ನಟ-ನಟಿಯರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಬೇರೆ ಬೇರೆ ಕಡೆ ಕಳುಹಿಸುವುದು.ರಂಗಾಯಣಕ್ಕೆ ಇದು 25ನೇ  ರಜತ ವರ್ಷ . ಈ ವರ್ಷದಲ್ಲಿ ಕಲಾವಿದರನ್ನು ಎತ್ತಂಗಡಿ ಮಾಡುತ್ತಿರುವುದನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾಗಿದೆ. ಈ ವರ್ಷ ಅವರು ತಮ್ಮ ಹಳೆಯ ರಂಗಕೃತಿಗಳನ್ನು ಪ್ರಸ್ತುತ ಪಡಿಸಬೇಕಾಗಿದೆ.ಇಂಥ  ಭಾವನಾತ್ಮಕ ವರ್ಷದಲ್ಲಿ  ಅನುಸರಿಸುತ್ತಿರುವ ಈ ಕ್ರಮ ಸರ್ವಾಧಿಕಾರಿ ರೀತಿಯದ್ದಾಗಿದೆ. ರಂಗ ಸಮಾಜ  ಮೂರ್ಖರ ಮತ್ತು ಸಮಯ ಸಾಧಕರ, ಪಕ್ಷ ಪುಡಾರಿಗಳ ಗುಂಪಾಗಿ ಪರಿವರ್ತಿತವಾಗಿರುವುದು ಬೇಸರದ ಸಂಗತಿ. ರಂಗ ಉತ್ಸವಗಳನ್ನು ನಡೆಸಿ ಪ್ರಭುತ್ವವನ್ನು ತೃಪ್ತಿ ಪಡಿಸುವ ಕೆಲಸಗಳಾಗಿದೆಯೇ ವಿನಾ ಯಾವುದೇ ಸೃಜನಶೀಲ ಕೆಲಸಗಳಾಗಿಲ್ಲ.ಧಾರವಾಡದ ರಂಗಾಯಣ, ಶಿವಮೊಗ್ಗ ರಂಗಾಯಣ ಎಂದು ಪ್ರಾರಂಭಿಸಿರುವುದೇ ಸರಿಯಾಗಿಲ್ಲ. ಆಯಾಯ ಸ್ಥಳಿಯ ರುಚಿ, ಸಂಸ್ಕೃತಿಗಳ ಮೂಲಕ ಹೆಸರು ಮತ್ತು ಕೆಲಸದ ವಿಧಾನಗಳನ್ನು ರೂಪಿಸಬೇಕೇ ಹೊರತು, ಮೈಸೂರಿನ ರಂಗಾಯಣದ ಮಾಡಲ್‌ನ್ನು ವಿಸ್ತರಿಸುವುದಲ್ಲ. ಬೇರೆ ಬೇರೆ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ರಂಗ ಸಂಸ್ಕೃತಿ ರೂಪಿತವಾಗುವ ಹಾಗೆ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ರಂಗಾಯಣ-ಸರ್ಕಾರ ಮಾಡಬೇಕು.ಅದನ್ನು ಬಿಟ್ಟು ಸಂಸ್ಕೃತಿ ಮಳಿಗೆಗಳನ್ನು ತೆರೆಯುತ್ತಾ ಹೋಗುವುದಲ್ಲ. ನಾಲ್ಕು ಪೂರ್ಣಾವಧಿ ಶಾಲೆಗಳಿರುವ ಈ ಕರ್ನಾಟಕದಲ್ಲಿ ಹೆಗ್ಗೋಡಿನ ನೀನಾಸಂ ತಿರುಗಾಟ, ಸಾಣೇಹಳ್ಳಿಯ ಶಿವಸಂಚಾರ, ರಂಗಾಯಣ ಮುಂತಾದ ರೆಪರ್ಟರಿಗಳ ಸಹಾಯದಿಂದ ಹೊಸ ಹೊಸ ರೆಪರ್ಟರಿಗಳನ್ನು ಪ್ರಾರಂಭಿಸುವುದರ ಬಗ್ಗೆ ಮಾತುಕತೆ ನಡೆಸಬೇಕು.ಆಧಿಕಾರಿಗಳು ಮತ್ತು ಅಧಿಕಾರಶಾಹಿಗಳು ಸಾಂಸ್ಕೃತಿಕ ನೀತಿಗಳನ್ನು ರೂಪಿಸುವುದನ್ನು ಸರ್ಕಾರ ಬಿಡಬೇಕು. ಶಿವಮೊಗ್ಗ, ಧಾರವಾಡದ ರಂಗಾಯಣಗಳು ತಮ್ಮ ಸಂಪನ್ಮೂಲಗಳನ್ನು ಸ್ಥಳೀಯವಾಗಿ, ತಮ್ಮ ಸಂಸ್ಕೃತಿ, ಸಮುದಾಯಗಳಿಂದಲೇ ರೂಪಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು.ಕಲಾವಿದರನ್ನು ನೇಮಿಸಿಕೊಳ್ಳಲು  ಏಜನ್ಸಿ  ಮೂಲಕ ಹೋಗಬಾರದು. ಸರ್ಕಾರ ಅಥವಾ ಸಂಸ್ಕೃತಿ ಇಲಾಖೆ ಏಜನ್ಸಿಗಳ ಮೂಲಕ ಕಲಾವಿದರ ನೇಮಕಾತಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬಾರದು.ಶಿವಮೊಗ್ಗ, ಧಾರವಾಡದ ರಂಗಾಯಣಗಳು ತಮಗೆ ಬೇಕಾದ ಕಲಾವಿದರನ್ನು ತಾವೇ ನೇಮಿಸಿಕೊಳ್ಳಬೇಕು.ಹಾಗೆ ನೇಮಿಸಿ ಕೊಳ್ಳಲು ಹಲವಾರು ರಂಗ ಶಾಲೆಗಳಿಂದ ಬಂದ ರಂಗ ವಿದ್ಯಾರ್ಥಿಗಳು ಒಂದು ದೊಡ್ಡ ಗುಂಪೇ ಕರ್ನಾಟಕದ್ಲ್ಲಲಿದೆ.ಪೂರ್ಣಾವಧಿ ರಂಗ ಶಾಲೆಯಲ್ಲಿ ಓದಿದ ಅನುಭವವಿರುವ ವಿದ್ಯಾರ್ಥಿಗಳಿಗೆ ಈ ಏಜನ್ಸಿಗಳು ಮಾರಕವಾಗಿ ಪರಿಣಮಿಸಲಿದೆ.ಸರ್ಕಾರದ ಸಂಸ್ಕೃತಿ ಇಲಾಖೆ ಮತ್ತು ಸರ್ಕಾರ ಈ ಕೂಡಲೇ ಗಮನಹರಿಸಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry