ಬುಧವಾರ, ಜನವರಿ 29, 2020
29 °C

ರಂಗಾಸಕ್ತರ ಗಮನ ಸೆಳೆದ ‘ಹರಿಶ್ಚಂದ್ರ ಕಾವ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ಇಲ್ಲಿಗೆ ಸಮೀಪವಿರುವ ಶೇಷಗಿರಿ ಗ್ರಾಮದ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿ ಕೆ.ಜಿ.ಮಹಾಬಲೇಶ್ವರ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ರಂಗಾಯಣದ ವಿದ್ಯಾರ್ಥಿಗಳು ಪ್ರದರ್ಶಿಸಿದ ರಾಘವಾಂಕ ಕವಿಯ ‘ಹರಿಶ್ಚಂದ್ರ ಕಾವ್ಯ’ ಹಳಗನ್ನಡ ನಾಟಕ ನೆರೆದ ನೂರಾರು ರಂಗಾಸಕ್ತರನ್ನು ಬೆರಗು, ಕೌತುಕಗಳಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.ಭಾರತೀಯ ರಂಗಶಿಕ್ಷಣ ಕೇಂದ್ರ, ರಂಗಶಾಲೆಯ 2013–14 ನೇ ಸಾಲಿನ ವಿದ್ಯಾರ್ಥಿಗಳು ಮನೋಜ್ಞ ಅಭಿನಯವನ್ನು ಸಾದರ ಪಡಿಸುವ ಮೂಲಕ ತಮ್ಮೊಳಗಿನ ರಂಗಾಸಕ್ತಿಯನ್ನು ಪ್ರದರ್ಶಿಸಿದರು. ಗಣೇಶ ಮರಕಾಲ ಸಂಗೀತ, ಉಮೇಶ ಸಾಲಿಯಾನ ರಂಗ ವಿನ್ಯಾಸ, ಪ್ರಮೀಳಾ ಬೇಂಗ್ರೆ ವಸ್ತ್ರ ವಿನ್ಯಾಸ, ಸಂತೋಷಕುಮಾರ ಕುಸನೂರ ಪರಿಕರ, ತಲಕಾಡು ಗುರುರಾಜ್ ಅವರ ನಿರ್ವಹಣೆ, ಪ್ರಸಾದನ ಮತ್ತು ಬೆಳಕಿನೊಂದಿಗೆ ನಾಟಕ ಹಳಗನ್ನಡದಲ್ಲಿ ಮೂಡಿಬಂದರೂ ಕಲಾವಿದರ ಪ್ರಬುದ್ಧ ಅಭಿನಯ ರಂಗಾಸಕ್ತರನ್ನು ಕೆಲ ಸಮಯ ಸತ್ಯ ಹರಿಶ್ಚಂದ್ರನ ಕಾಲಘಟ್ಟಕ್ಕೆ ಕರೆದೊಯ್ಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಯಿತು.ಹಳಗನ್ನಡ ಕಾವ್ಯಾನುಭವಗಳ ಅಭಿವ್ಯಕ್ತಿ ಯೊಂದಿಗೆ ಪ್ರಯೋಗ ನಾಡಿನ ಹಿರಿಯ ರಂಗ ನಿರ್ದೇಶಕ ಕೆ.ಜಿ.ಮಹಾಬಲೇಶ್ವರ ಸಮರ್ಥ ತರಬೇತಿ, ನಿರ್ದೇಶನದಲ್ಲಿ ಮೂಡಿಬಂದಿತು. ರಾಘವಾಂಕನ ಕಥನ ಕೌಶಲ, ದೃಶ್ಯ ವಿಭಾಗ, ಪಾತ್ರಗಳ ಕ್ರಿಯೆ ಮತ್ತು ಅಭಿನಯ ಕ್ರಿಯೆಗಳ ವರ್ಣನೆ, ಸಂಭಾಷಣೆ, ಶೋಕ, ಕ್ರೋಧ, ಸತ್ಯಸಂಧತೆ, ಕರ್ತವ್ಯ ಪರಾಯಣತೆ, ಶ್ರದ್ಧೆ, ಭಕ್ತಿ ಒಟ್ಟಿನಲ್ಲಿ ಕಾವ್ಯದಲ್ಲಿ ಚೆಲ್ಲಿಸೂಸಿರುವ ನಾಟಕೀಯತೆ ಹೀಗೆ ಎಲ್ಲವೂ ಒಂದರ ಮೇಲೊಂದು ನುಗ್ಗಿ ಬಂದು ರಂಗಾಸಕ್ತರನ್ನು ಭಾವನಾ ಪ್ರಪಂಚಕ್ಕೆ ಕೊಂಡೊಯ್ದವು. ನಾಟಕದುದ್ದಕ್ಕೂ ಸನ್ನಿವೇಶಗಳು ನಗಿಸಿ, ಅಳಿಸಿ, ಸಿಟ್ಟು ತರಿಸಿ, ಸಂತೋಷಪಡಿಸಿ ಮನ ತಣಿಸುವಲ್ಲಿ ಯಶಸ್ವಿಯಾದವು. ರಾಘವಾಂಕನು ಸಂಪೂರ್ಣ ವಾಗಿ ನಮ್ಮವನಾಗುತ್ತಾನೆ.ನಾವು ಸಂಪೂರ್ಣ ವಾಗಿ ಅವನವರಾಗುತ್ತೇವೆ. ಪಾತ್ರಗಳು ಸಜೀವವಾಗಿ, ಸತ್ಯವಾಗಿ ಪ್ರೇಕ್ಷಕರ ಕಣ್ಣಮುಂದೆ ನಲಿದಾಡಿದವು. ಹರಿಶ್ಚಂದ್ರನಿಗೂ ಗಾನರಾಣಿ ಯರಿಗೂ ನಡೆದ ಸಂಭಾಷಣೆ, ಪರಂಪರೆ ಪ್ರಗತಿಗಳ ವಾದವೆಂದೇ ಭಾವಿಸಿತು. ಕವಿ ಪ್ರಗತಿಯ ವಾಣಿಯಾಗಿ ನಿಂತು ಅಸ್ಪೃಶ್ಯತಾ ನಿವಾರಣೆಗೆ ಹೋರಾಡಿದ್ದು ಕಂಡು ಬಂದಿತು.13 ನೇ ಶತಮಾನದ ಚಿಂತನೆಯನ್ನು ಸಾರ್ವ ಕಾಲಿಕ ಚಿಂತನೆಯಾಗಿಸಿ ನಮ್ಮನ್ನು ಆಲೋಚಿ ಸುವಂತೆ ಮಾಡುವಲ್ಲಿ ನಾಟಕ ಯಶಸ್ವಿ ಯಾಯಿತು. ಹರಿಶ್ಚಂದ್ರ ಕಾವ್ಯದಲ್ಲಿ ರಾಘವಾಂಕ ಸತ್ಯವನ್ನು ಪ್ರಮುಖವಾಗಿಸಿದರೆ ಪ್ರಸ್ತುತ ನಾಟಕದಲ್ಲಿ ನಿರ್ದೇಶಕರು ಕುಲವನ್ನು ಕೇಂದ್ರವಾಗಿಸಿದ್ದು ಗಮನ ಸೆಳೆಯಿತು. ಹೊಲೆತನ ಎನ್ನುವುದು ವ್ಯಕ್ತಿಯ ಅಂತರಂಗದ ಅವಗುಣಗಳಿಗೆ ಸಂಬಂಧಿಸಿದ್ದೇ ಹೊರತು ಅದು ಒಂದು ಜಾತಿಯನ್ನು ಕುರಿತ ಪ್ರಶ್ನೆಯಲ್ಲ ಎನ್ನುವ ಕವಿ ರಾಘವಾಂಕನ ತಾತ್ವಿಕ ದೃಷ್ಟಿ ನಾಟಕದಲ್ಲಿ ಒಡಮೂಡಿತು.ವಿವಿಧ ಪಾತ್ರಗಳಲ್ಲಿ ವಿದ್ಯಾರ್ಥಿಗಳಾದ ಅವಿನಾಶ ಬಿ.ಆರ್., ಚಾಂದಿನಿ, ದತ್ತರಾಜ್ ಹೆಗಡೆ, ಜಯಂತ ಟಿ., ಕವಿತಾ ಎ.ಎಂ., ಕಿರಣ ಬಾಲವ್ಯನವರ, ಕೆ.ಮಾಮುಸಾಹೇಬ, ಮಹ ದೇವಸ್ವಾಮಿ ಎಸ್.ಎಂ., ಮೀನಾಕ್ಷಿ, ಮೋಹನ ರಾಜ್ ಟಿ., ಪ್ರದೀಪ ಬಿ.ಎಂ., ರಾಧಾರಾಣಿ ಬಿ.ಎಸ್., ಸತೀಶ ಬಿ.ಪಿ., ಶಿವಕುಮಾರ ಎಂ., ವಿಶಾಲ ಪಾಲಾಪುರೆ, ವಿವೇಕಸಿಂಹ ಜೆ. ಅಭಿನಯ ಪ್ರೌಢಿಮೆ ಮೆರೆದರು. ಜನಾರ್ಧನ, ಪ್ರಸಾದ ಕೃಷ್ಣಾಪುರ, ರಂಗನಾಥ, ಮಹೇಶ ಕಲ್ಲತ್ತಿ, ಎನ್.ರಂಗನಾಥ, ರವಿ ಹಿಂದೂಪುರ ರಂಗದ ಹಿಂದೆ ವಿವಿಧ ವಿಭಾಗಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು.

ಪ್ರತಿಕ್ರಿಯಿಸಿ (+)