ಮಂಗಳವಾರ, ಏಪ್ರಿಲ್ 20, 2021
26 °C

ರಂಗಿನಾಟಕ್ಕೆ ಸಂಭ್ರಮದ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನಗರದಲ್ಲಿ ಮೂರು ದಿನಗಳವರೆಗೆ ನಡೆದ ‘ರಂಗಸಂಭ್ರಮ’ವು ಮಂಗಳವಾರ ಶಾಂತಿಯುತವಾಗಿ ಸಮಾರೋಪಗೊಂಡಿತು. ಹಳೆ ಬಾಗಲಕೋಟೆಯ ಐದೂ ಪೇಟೆಗಳು, ನವನಗರ ಮತ್ತು ವಿದ್ಯಾಗಿರಿಯ ಸಾವಿರಾರು ಜನರು ಸಾಮೂಹಿಕ ರಂಗಿನಾಟದಲ್ಲಿ ಪಾಲ್ಗೊಂಡಿದ್ದರು. ಕಿಲ್ಲಾಪ್ರದೇಶದ ಸಾರ್ವಜನಿಕ ಕಾಮದಹನದ ಬಳಿಕ ಆರಂಭಗೊಂಡಿದ್ದ ಮೂರು ದಿನಗಳ ಸಾಂಪ್ರದಾಯಿಕ ಹೋಳಿ ಹಬ್ಬವು ಕೊನೆಯ ದಿನ ಹೊಸಪೇಟೆಯ ಓಕುಳಿ ಹಾಗೂ ಬಣ್ಣದ ಬಂಡಿಗಳ ಮೆರವಣಿಗೆಯೊಂದಿಗೆ ಕೊನೆಗೊಂಡಿತು.ಕಿಲ್ಲಾ, ವೆಂಕಟಪೇಟೆ, ಜೈನಪೇಟೆ ಹಾಗೂ ಹಳಪೇಟೆಯ ಜನರು ಎರಡು ದಿನಗಳಲ್ಲಿ ಸೋಗಿನ ಬಂಡಿ, ಸಾಮೂಹಿಕ ಓಕುಳಿ ಮತ್ತು ಬಣ್ಣದ ಬಂಡಿಗಳ ಮೂಲಕ ಹೋಳಿ ಹಬ್ಬಕ್ಕೆ ಮೆರಗು ತಂದರು. ಅದೇ ರೀತಿ ಮೂರನೇ ಹೊಸಪೇಟೆಯ ಜನರು ಸಾಮೂಹಿಕ ರಂಗಿನಾಟದ ಬಳಿಕ ಬಣ್ಣದ ಬಂಡಿ ಹೂಡಿದರು. ಹಬ್ಬದ ಕೊನೆಯ ದಿನವಾಗಿದ್ದರಿಂದ ಜಾತಿ-ಭೇದ, ವಯಸ್ಸಿನ ಅಂತರವನ್ನು ಮರೆತು ಎಲ್ಲ ಜನರೂ ಓಕುಳಿಯಲ್ಲಿ ಭಾಗವಹಿಸಿದ್ದರಿಂದ ಸಂಭ್ರಮ ತಾರಕಕ್ಕೇರಿತು.ಎರಡು ದಿನಗಳಿಂದ ಮನೆಬಿಟ್ಟು ಹೊರಗೆ ಬಾರದ ಮಕ್ಕಳು, ಮಹಿಳೆಯರು ಸೇರಿದಂತೆ ಬಹುತೇಕ ಜನರು ಬಣ್ಣದ ಪಾಕೀಟುಗಳನ್ನು ಹಿಡಿದುಕೊಂಡು ಬೀದಿಗಿಳಿದ ಪರಿಣಾಮ ಸಂಜೆಯವರೆಗೂ ಊರು ಬಣ್ಣಮಯವಾಗಿತ್ತು. ರಂಗಿನಾಟದ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಓಕುಳಿ ಸಂಭ್ರಮ ಹೊರತುಪಡಿಸಿದರೆ ಬೇರೇನೂ ಕಾಣಿಸಲಿಲ್ಲ.ಗುಂಡಿನ ಗಮ್ಮತ್ತು


ಎರಡು ದಿನಗಳ ರಂಗಿನಾಟಕ್ಕೆ ಹೋಲಿಸಿದರೆ ಮೂರನೇ ದಿನ ಗುಂಡಿನ ಗಮ್ಮತ್ತು ತುಸು ಜಾಸ್ತಿಯೇ ಕಂಡುಬಂದಿತು. ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆಯೇ ಮದ್ಯ ಮಾರಾಟ ನಿಷೇಧಿಸಿದ್ದರೂ ಅದರ ಗಮ್ಮತ್ತು ನಿಯಂತ್ರಿಸುವುದು ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಸಾಧ್ಯವಾಗಲಿಲ್ಲ. ಕಂಠಪೂರ್ತಿ ಕುಡಿದಿದ್ದ ಯುವಕರು ಗುಂಪು ಕಟ್ಟಿಕೊಂಡು ಊರು ತುಂಬ ಎರ್ರಾಬಿರ್ರಿಯಾಗಿ ಬೈಕುಗಳನ್ನು ಓಡಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಪೊಲೀಸರ ಬಿಗಿ ಬಂದೋಬಸ್ತ್ ಮಧ್ಯೆ ಓಕುಳಿಯು ಸಂಪೂರ್ಣ ಶಾಂತಿಯುತವಾಗಿ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.