ಭಾನುವಾರ, ನವೆಂಬರ್ 17, 2019
21 °C
ಫುಟ್‌ಬಾಲ್: ಡ್ರಾ ಪಂದ್ಯದಲ್ಲಿ ಮಹಮ್ಮಡನ್ ಸ್ಪೋರ್ಟಿಂಗ್

ರಂಗ್‌ದಜೀದ್ ಯುನೈಟೆಡ್‌ಗೆ ಜಯ

Published:
Updated:

ಬೆಂಗಳೂರು: ಬಾಬಾತುಂದೆ ತಂದಿತ್ತ ಏಕೈಕ ಗೋಲಿನ ನೆರವಿನಿಂದ ರಂಗ್‌ದಜೀದ್ ಯುನೈಟೆಡ್ ತಂಡದವರು ಐ-ಲೀಗ್ ಫುಟ್‌ಬಾಲ್ ಎರಡನೇ ಡಿವಿಷನ್ ಟೂರ್ನಿಯ ಅಂತಿಮ ಹಂತದ ತನ್ನ ಮೊದಲ ಪಂದ್ಯದಲ್ಲಿ ಭವಾನಿಪುರ್ ತಂಡದ ವಿರುದ್ಧ ಜಯ ಪಡೆದರು.



ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದ 43ನೇ ನಿಮಿಷದಲ್ಲಿ ಗೋಲು ಗಳಿಸಿದ ಬಾಬಾತುಂದೆ ಅವರು ರಂಗ್‌ದಜೀದ್ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ಗೆಲುವಿನ ಮೂಲಕ ಶಿಲ್ಲಾಂಗ್‌ನ ರಂಗ್‌ದಜೀದ್ ತಂಡ ಆರು ಪಂದ್ಯಗಳಿಂದ ತನ್ನ ಪಾಯಿಂಟ್‌ಗಳನ್ನು ಏಳಕ್ಕೆ ಹೆಚ್ಚಿಸಿಕೊಂಡಿತು. ಭವಾನಿಪುರ್ ಇಷ್ಟೇ ಪಂದ್ಯಗಳಿಂದ ಒಂಬತ್ತು ಪಾಯಿಂಟ್‌ಗಳನ್ನು ಹೊಂದಿದೆ.

ಪ್ರಬಲ ಹೋರಾಟ ಕಂಡುಬಂದ ಪಂದ್ಯದ ಎರಡನೇ ಅವಧಿಯಲ್ಲಿ ಭವಾನಿಪುರ್ ಸಮಬಲದ ಗೋಲಿಗಾಗಿ ಕಠಿಣ ಪ್ರಯತ್ನ ನಡೆಸಿತಾದರೂ ಯಶ ಕಾಣಲಿಲ್ಲ. ಡ್ರಾ ಪಂದ್ಯದಲ್ಲಿ ಮಹಮ್ಮಡನ್: ದಿನದ ಮತ್ತೊಂದು ಪಂದ್ಯದಲ್ಲಿ ಲ್ಯಾಂಗ್‌ಸ್ನಿಂಗ್ ಕ್ಲಬ್ ತಂಡ ಪ್ರಬಲ ಮಹಮ್ಮಡನ್  ಸ್ಪೋರ್ಟಿಂಗ್ ಜೊತೆ 1-1 ಗೋಲಿನ ಡ್ರಾ ಸಾಧಿಸಲು ಯಶಸ್ವಿಯಾಗಿತು.



ಪಂದ್ಯ ಡ್ರಾದಲ್ಲಿ ಕೊನೆಗೊಂಡ ಕಾರಣ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸುವ ಅವಕಾಶವನ್ನು ಸ್ಪೋರ್ಟಿಂಗ್ ತಂಡ ಕಳೆದುಕೊಂಡಿತು. ಕೋಲ್ಕತ್ತದ ತಂಡ ಇದೀಗ ಆರು ಪಂದ್ಯಗಳಿಂದ 11 ಪಾಯಿಂಟ್ ಹೊಂದಿದೆ. ಮೊದಲ ಹಂತದಲ್ಲಿ `ಎ' ಗುಂಪಿನಲ್ಲಿ ಆಡಿದ್ದ ಮಹಮ್ಮಡನ್ 10 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದಿತ್ತು. ಲ್ಯಾಂಗ್‌ಸ್ನಿಂಗ್ ಬಳಿ ಎಂಟು ಪಾಯಿಂಟ್‌ಗಳಿವೆ.



ಮಹಮ್ಮಡನ್ ತಂಡದ ಕೊರಿಯಾದ ಸ್ಟ್ರೈಕರ್ ವಿ ಹ್ಯುಜು 35ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದಿತ್ತರು. ಲ್ಯಾಂಗ್‌ಸ್ನಿಂಗ್ ಎರಡನೇ ಅವಧಿಯಲ್ಲಿ ಮರುಹೋರಾಟ ನಡೆಸಲಿತು. ಮಾತ್ರವಲ್ಲ, ಜೊಯೆಲ್ 60ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ತಂದಿತ್ತರು.

ಮಹಮ್ಮಡನ್ ತಂಡ ಇಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಆಡಲಿಳಿದಿತ್ತು. ಮೊರಕ್ಕೊದ ಸ್ಟ್ರೈಕರ್ ಯೂನೆಸ್ ಬಲ್ತಾಮ್ ಮತ್ತು ಆಲ್ಫ್ರೆಡ್ ಜರ್ಯನ್ ಕಣಕ್ಕಿಳಿಯಲಿಲ್ಲ. ಈ ಹಿಂದಿನ ಪಂದ್ಯದಲ್ಲಿ ಯೂನೆಸ್ ಕೆಂಪು ಕಾರ್ಡ್ ಪಡೆದಿದ್ದರೆ, ಆಲ್ಫ್ರೆಡ್ ಎರಡು ಹಳದಿ ಕಾರ್ಡ್ ಪಡೆದಿದ್ದರು.



ಇವರ ಅನುಪಸ್ಥಿತಿಯಿಂದ ತಂಡದ ಸಮತೋಲನ ತಪ್ಪಿತು. ಆದರೂ ಸೋಲಿನಿಂದ ಪಾರಾಗುವಲ್ಲಿ ಯಶಸ್ವಿಯಾಯಿತು.    ವಿರಾಮದ ವೇಳೆಗೆ ಕೋಲ್ಕತ್ತ ತಂಡ 1-0 ರಲ್ಲಿ ಮೇಲುಗೈ  ಸಾಧಿಸಿತ್ತು. ಪದೇ ಪದೇ ಮರುಹೋರಾಟ ನಡೆಸುತ್ತಿದ್ದ ಲ್ಯಾಂಗ್‌ಸ್ನಿಂಗ್ ತಂಡಕ್ಕೆ 60ನೇ ನಿಮಿಷದಲ್ಲಿ ಯಶಸ್ಸು ಲಭಿಸಿತು. ಅದ್ಭುತ ರೀತಿಯಲ್ಲಿ ಕಾಲ್ಚಳಕ ಮೆರೆದ ಜೊಯೆಲ್ ಎದುರಾಳಿ ತಂಡದ ಮೂವರು ರಕ್ಷಣಾ ಆಟಗಾರರು ಮತ್ತು ಗೋಲ್‌ಕೀಪರ್ ಅರ್ನಾಬ್ ದಾಸ್ ಶರ್ಮ ಅವರನ್ನು ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದರು.



ಮಂಗಳವಾರ ನಡೆಯುವ ಪಂದ್ಯದಲ್ಲಿ (ಮಧ್ಯಾಹ್ನ 2.00 ಗಂಟೆಗೆ ಆರಂಭ) ಸದರ್ನ್ ಸಮಿತಿ ಮತ್ತು ಮುಂಬೈ ಟೈಗರ್ಸ್ ತಂಡಗಳು ಪೈಪೋಟಿ ನಡೆಸಲಿವೆ.

ಪ್ರತಿಕ್ರಿಯಿಸಿ (+)