ಬುಧವಾರ, ನವೆಂಬರ್ 20, 2019
26 °C
ಐ ಲೀಗ್ ಎರಡನೇ ಡಿವಿಷನ್ ಫುಟ್‌ಬಾಲ್: ಜೆರಿಬ್ ಕೆಲೆಚಿ ಗೆಲುವಿನ ರೂವಾರಿ

ರಂಗ್‌ದಜೀದ್ ಯುನೈಟೆಡ್‌ಗೆ ಜಯ

Published:
Updated:
ರಂಗ್‌ದಜೀದ್ ಯುನೈಟೆಡ್‌ಗೆ ಜಯ

ಬೆಂಗಳೂರು: ಜೆರಿಬ್ ಕೆಲೆಚಿ ಅವರು ಪಂದ್ಯದ ಎರಡನೇ ಅವಧಿಯಲ್ಲಿ ತಂದಿತ್ತ ಗೋಲಿನ ನೆರವಿನಿಂದ ರಂಗ್‌ದಜೀದ್ ಯುನೈಟೆಡ್ ತಂಡ ಐ-ಲೀಗ್ ಎರಡನೇ ಡಿವಿಷನ್ ಫುಟ್‌ಬಾಲ್ ಲೀಗ್ ಅಂತಿಮ ಹಂತದ ಟೂರ್ನಿಯಲ್ಲಿ ಮುಂಬೈ ಟೈಗರ್ಸ್ ಎದುರು 1-0 ರಲ್ಲಿ ಗೆಲುವು ಪಡೆಯಿತು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದ 48ನೇ ನಿಮಿಷದಲ್ಲಿ ನೈಜೀರಿಯದ ಮಿಡ್‌ಫೀಲ್ಡರ್ ಕೆಲೆಚಿ ಗೆಲುವಿನ ಗೋಲು ತಂದಿತ್ತರು. ಈ ಜಯದ ಮೂಲಕ ಶಿಲ್ಲಾಂಗ್‌ನ ತಂಡ ಏಳು ಪಂದ್ಯಗಳಿಂದ ತನ್ನ ಪಾಯಿಂಟ್‌ಗಳನ್ನು 10ಕ್ಕೆ ಹೆಚ್ಚಿಸಿಕೊಂಡಿತು.ಭವಾನಿಪುರ್ ಫುಟ್‌ಬಾಲ್ ಕ್ಲಬ್ ಕೂಡಾ ಇಷ್ಟೇ ಪಾಯಿಂಟ್‌ಗಳನ್ನು ಹೊಂದಿದೆ. ಟೈಗರ್ಸ್‌ಗೆ ಎದುರಾದ ಸತತ ಎರಡನೇ ಸೋಲು ಇದು. ಈ ತಂಡ ಏಳು ಪಂದ್ಯಗಳಿಂದ ಒಂಬತ್ತು ಪಾಯಿಂಟ್ ಕಲೆಹಾಕಿದೆ.ರಂಗ್‌ದಜೀದ್ ತಂಡಕ್ಕೆ ಈ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಅಂತರದಿಂದ ಗೆಲ್ಲುವ ಅವಕಾಶವಿತ್ತು. ಆದರೆ ಒಂದು ಪೆನಾಲ್ಟಿ ಶೂಟೌಟ್ ಹಾಗೂ ಮೂರು ಅತ್ಯುತ್ತಮ ಅವಕಾಶಗಳನ್ನು ಈ ತಂಡದ ಆಟಗಾರರು ಹಾಳುಮಾಡಿಕೊಂಡರು. ಇದರಿಂದ ಕೊನೆಯ ನಿಮಿಷದವರೆಗೂ ಒತ್ತಡದಲ್ಲೇ ಆಡಬೇಕಾಯಿತು.ಪಂದ್ಯದ ಮೊದಲ ಅವಧಿಯಲ್ಲಿ ಸಮಬಲದ ಪೈಪೋಟಿ ಕಂಡುಬಂದರೂ, ಗೋಲು ಮಾತ್ರ ಬರಲಿಲ್ಲ. ಎರಡನೇ ಅವಧಿಯ ಆರಂಭದಲ್ಲೇ ರಂಗ್‌ದಜೀದ್ ಮುನ್ನಡೆ ಪಡೆಯಿತು. ನಾಯಕ ರೆಸ್ತೊಮ್ ಕರಿಯಾಮ್ ನೀಡಿದ ಕ್ರಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಕೆಲೆಚಿ ಯಶಸ್ವಿಯಾಗಿ ನೆಟ್‌ನೊಳ್ಳಕ್ಕೆ ತಳ್ಳಿದರು.ಸ್ಟ್ರೈಕರ್ ಬಾಬಾತುಂದೆ ಕೂಡಾ ಅತ್ಯುತ್ತಮ ಆಟ ತೋರಿದರು. ಅದೇ ವೇಳೆ ಗೋಲು ಗಳಿಸುವ ಕೆಲವೊಂದು ಅವಕಾಶಗಳನ್ನು ಅವರು ಕಳೆದುಕೊಂಡರು. 54ನೇ ನಿಮಿಷದಲ್ಲಿ ಟೈಗರ್ಸ್ ತಂಡದ ಕರಣ್ ಅತ್ವಾಲ್ ರಂಗ್‌ದಜೀದ್ ಪೆನಾಲ್ಟಿ ಆವರಣದಲ್ಲಿ ಕೊರಿಯಾದ ಸ್ಟ್ರೈಕರ್ ಶಿನ್ ಹುಜೊನ್ ಅವರನ್ನು ಕೆಳಕ್ಕೆ ಬೀಳಿಸಿದರು. ಈ ವೇಳೆ ರೆಫರಿ ಪೆನಾಲ್ಟಿ ಅವಕಾಶ ನೀಡಿದರು. ಆದರೆ ಬಾಬಾತುಂದೆ ಚೆಂಡನ್ನು ಗುರಿ ಸೇರಿಸುವಲ್ಲಿ ಎಡವಿದರು.ಇದಾದ ಬಳಿಕ ಪಂದ್ಯದ 58, 75 ಮತ್ತು 82ನೇ ನಿಮಿಷಗಳಲ್ಲಿ ರಂಗ್‌ದಜೀದ್ ಗೋಲು ಗಳಿಸುವ ಸುಲಭ ಅವಕಾಶಗಳನ್ನು ಕಳೆದುಕೊಂಡಿತು. ಟೈಗರ್ಸ್ ಗೋಲ್‌ಕೀಪರ್ ಅವಿಜಿತ್ ಘೋಷ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು.ಶನಿವಾರ ವಿರಾಮದ ದಿನವಾಗಿದ್ದು, ಭಾನುವಾರ ನಡೆಯುವ ಪಂದ್ಯಗಳಲ್ಲಿ ಭವಾನಿಪುರ್ ಎಫ್‌ಸಿ- ಸದರ್ನ್ ಸಮಿತಿ (ಆರಂಭ: ಮಧ್ಯಾಹ್ನ 1.30ಕ್ಕೆ) ಮತ್ತು ಮಹಮ್ಮಡನ್ ಸ್ಪೋರ್ಟಿಂಗ್- ಮುಂಬೈ ಟೈಗರ್ಸ್ (ಸಂಜೆ 4.00ಕ್ಕೆ) ತಂಡಗಳು ಎದುರಾಗಲಿವೆ.

ಪ್ರತಿಕ್ರಿಯಿಸಿ (+)