ಶನಿವಾರ, ಆಗಸ್ಟ್ 24, 2019
23 °C

`ರಂಗ ಕಲಾವಿದರು ಸಂಸ್ಕೃತಿ ವಕ್ತಾರರು'

Published:
Updated:

ಮೈಸೂರು (ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳ ವೇದಿಕೆ): `ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರೀತಿಗಾಗಿ, ಚಪ್ಪಾಳೆಗಾಗಿ, ರೋಮಾಂಚನ್ಕಗಿ ತುಡಿವ ರಂಗಭೂಮಿ ಕಲಾವಿದರು ಸಂಸ್ಕೃತಿಯ ವಕ್ತಾರರು' ಎಂದು ಸೇಂಟ್ ಫಿಲೊಮಿನ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕೃಷ್ಣೇಗೌಡ ಮಂಗಳವಾರ ಶ್ಲಾಘಿಸಿದರು.ಕರ್ನಾಟಕ ರಂಗ ಸಂಗೀತ ಪರಿಷತ್ತು ನಗರದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ 2 ದಿನಗಳ ರಾಜ್ಯಮಟ್ಟದ 6ನೇ ರಂಗ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.`ಉಪಭೋಗದ ಜಗತ್ತು ಇದು. ಮಕ್ಕಳು ಹೋಂವರ್ಕ್ ಮಾಡುವಾಗಲೂ ಏನು ಸಿಗುತ್ತದೆ ಎಂದು ಕೇಳುತ್ತಾರೆ. ಇಂಥದರಲ್ಲಿ ನಿರಂತರವಾಗಿ ರಂಗಭೂಮಿಗೆ ದುಡಿದವರಿಗೆ ದೊಡ್ಡ ಗೌರವ ಸಲ್ಲಬೇಕು. ದೇಹಕ್ಕೆ ವಯಸ್ಸಾದರೂ ಕಂಠಕ್ಕೆ ವಯಸ್ಸಾಗುವುದಿಲ್ಲ ಎಂಬುವುದಕ್ಕೆ ರಂಗಗೀತೆ ಹಾಡಿದವರು ಸಾಕ್ಷಿ. ಅಂಥ  ಸಿರಿಕಂಠದವರಿಗೆ ನಮನ' ಎಂದು ಕೈಮುಗಿದರು.`ರಾಜ್ಯದ ರಂಗಭೂಮಿ ಚರಿತ್ರೆ ದೊಡ್ಡದು, ತೇಜೋಪೂರ್ಣವಾದುದು. ಜಗತ್ತಿಗೆ ಅದ್ವಿತೀಯ ನಾಟಕ ಕಂಪನಿ ಕಟ್ಟಿದವರು ಗುಬ್ಬಿ ವೀರಣ್ಣ. ಅವರ ಕೊಡುಗೆ ಎಂದರೆ ಅವರ ಕಂಪನಿಯಲ್ಲಿ ತಯಾರಾದ ಮಹನೀಯರು. ಜಿ.ವಿ. ಅಯ್ಯರ್, ಬಾಲಕೃಷ್ಣ, ಆರ್. ಪರಮಶಿವನ್, ಬಿ.ವಿ. ಕಾರಂತ, ಹಿರಣ್ಣಯ್ಯ, ಡಾ.ರಾಜ್‌ಕುಮಾರ್ ಮೊದಲಾದವರು ಗುಬ್ಬಿ ಕಂಪನಿಯಲ್ಲಿ ಪಳಗಿದರು. ಅದು ಅದ್ಭುತವಾದ ನಾಟಕ ಶಾಲೆ ಜತೆಗೆ ಪಾಠಶಾಲೆಯೂ ಆಗಿತ್ತು. ಕನ್ನಡವನ್ನು ಸರಿಯಾಗಿ ಮಾತನಾಡಲು ಹೇಳಿಕೊಟ್ಟರು' ಎಂದು ಹೆಮ್ಮೆಯಿಂದ ಹೇಳಿದರು.`ಸಾಹಿತ್ಯಕ್ಕಿಂತ ನಾಟಕ ಹಳೆಯದು. ಕಾವ್ಯದ ಚರ್ಚೆ, ಮೀಮಾಂಸೆಗೆ ನಾಟಕವೇ ಆಧಾರ. ಅಲ್ಲದೇ, ಸಿನಿಮಾದ ಮೇಲೆ ನಾಟಕದ ಪ್ರಭಾವ ಬಹಳ ದೊಡ್ಡದು' ಎಂದರು. ಕರ್ನಾಟಕ ರಂಗ ಸಂಗೀತ ಪರಿಷತ್ ಅಧ್ಯಕ್ಷ ಎಚ್.ಎಸ್. ಗೋವಿಂದಗೌಡ, ಸಲಹಾ ಸಮಿತಿ ಅಧ್ಯಕ್ಷ ರಾಜಶೇಖರ ಕದಂಬ, ಕಾರ್ಯದರ್ಶಿ ಬಿ.ಎಂ. ರಾಮಚಂದ್ರ ಮೊದಲಾದವರು ವೇದಿಕೆ ಮೇಲಿದ್ದರು.ರಂಗ ಕಲಾವಿದರಾದ ಪರಶಿವಮೂರ್ತಿ, ರಂಗಶೆಟ್ಟರು, ಸಿ.ಟಿ. ರಾಮಕೃಷ್ಣಾಚಾರ್, ಕೆ. ಮಹದೇವಪ್ಪ, ಕೆ.ಆರ್. ಸುಂದರ,  ಕೆ.ಎಸ್. ತಿಮ್ಮೇಗೌಡ, ಗೂರ‌್ನಹಳ್ಳಿ ರಾಮಯ್ಯ, ವೈ.ಆರ್. ಮಹೇಶ್, ಎಸ್.ಆರ್. ಜಗದೀಶ್, ಪಾಪೇಗೌಡ ಹಾಗೂ ಮೂರ್ತಿ ಅವರನ್ನು ಇದೇ ಸಂದರ್ಭದಲ್ಲಿ ರಂಗ ಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪರಿಷತ್ ಪ್ರಧಾನ ಕಾರ್ಯದರ್ಶಿ ಡಬ್ಲು.ಎಚ್. ಶಾಂತಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಮೈಸೂರಿನ ವೃತ್ತಿ ಕಲಾವಿದೆಯರ ಸಂಘದ ಪದಾಧಿಕಾರಿಗಳು `ಕುರುಕ್ಷೇತ್ರ' ನಾಟಕವನ್ನು ಪ್ರದರ್ಶಿಸಿದರು.`ರಂಗಾಯಣ ಕಲಾವಿದರನ್ನು ವಾಪಸ್ ಕರೆಯಿಸಿ'

`ಶಿವಮೊಗ್ಗ ಮತ್ತು ಧಾರವಾಡಕ್ಕೆ ಅಕ್ರಮವಾಗಿ ನಿಯೋಜನೆ ಮಾಡಿರುವ ರಂಗಾಯಣ ಕಲಾವಿದರನ್ನು ವಾಪಸ್ ಕರೆಯಿಸಬೇಕು' ಎಂದು ರಂಗಕರ್ಮಿ ಎಚ್. ಜನಾರ್ದನ್ (ಜನ್ನಿ) ಒತ್ತಾಯಿಸಿದರು.ನಗರದ ಜಗನ್ಮೋಹನ ಅರಮನೆಯಲ್ಲಿ ಕರ್ನಾಟಕ ರಂಗ ಸಂಗೀತ ಪರಿಷತ್ತು ಏರ್ಪಡಿಸಿದ್ದ 6ನೇ ರಾಜ್ಯಮಟ್ಟದ ರಂಗ ಸಂಗೀತ ಸಮ್ಮೇಳನದ ಎರಡನೇ ದಿನವಾದ ಸೋಮವಾರ `ಕನ್ನಡ ಹವ್ಯಾಸಿ ರಂಗಭೂಮಿ' ವಿಷಯ ಕುರಿತು ಅವರು ಮಾತನಾಡಿದರು.`ಕೆಲವರು ತಮ್ಮ ಸ್ವಾರ್ಥಕ್ಕಾಗಿ ರಂಗಾಯಣವನ್ನು ಒಡೆದಿದ್ದಾರೆ. ರಂಗಾಯಣ ತಾಯಿ ಒಡಲು ಇದ್ದಂತೆ. ಆದರೆ, ತಾಯಿಯ ಜೀವವನ್ನೇ ತೆಗೆಯಲಾಗುತ್ತಿದೆ. ಒಂದೆಡೆ ಕೆಲಸ ಮಾಡುತ್ತಿದ್ದ ಕಲಾವಿದರನ್ನು ಬೇರೆಡೆಗೆ ನಿಯೋಜನೆ ಮಾಡಿದ್ದು ಸರಿಯಲ್ಲ. ರಂಗಾಯಣ ಜೀವ ತೆಗೆಯಲು ಹಕ್ಕು ಕೊಟ್ಟವರು ಯಾರು?' ಎಂದು ಕಿಡಿಕಾರಿದರು.`ಮನಸ್ಸು-ದೇಹವನ್ನು ಹದ್ದುಬಸ್ತಿಗೆ ತರುವುದು ನಾಟಕ ಸಂಗೀತ. ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ನಡುವೆ ಬೆಸುಗೆ ಆಗುತ್ತಿಲ್ಲ. ಹವ್ಯಾಸಿ ರಂಗಭೂಮಿ ಸಹ ಕುಂಠಿತವಾಗುತ್ತಿದೆ. ರಂಗಭೂಮಿ ಸಂಸ್ಕೃತಿಯನ್ನು ಒಟ್ಟಿಗೆ ಕೊಂಡೊ ಯ್ಯುವ ಅಗತ್ಯ ಇದೆ' ಎಂದು ಹೇಳಿದರು.`ರಾಗಗಳನ್ನು ಒಡೆಯುವುದೇ ಆಧುನಿಕ ರಂಗ ಸಂಗೀತ ಎಂದು ಆಧುನಿಕ ರಂಗಭೂಮಿ ಭೀಷ್ಮ ಶಿವರಾಮ ಕಾರಂತರು ಹೇಳಿದ್ದರು. ಯಾವ ದೇಶ ನಾಟಕ-ಸಂಗೀತಕ್ಕೆ ಪ್ರಾಧಾನ್ಯತೆ ನೀಡುವುದಿಲ್ಲವೊ ಆ ದೇಶ ರೋಗಗ್ರಸ್ತವಾಗುತ್ತದೆ' ಎಂದರು.ರಂಗಕರ್ಮಿ ಕೆ.ಜೆ. ನಾರಾಯಣ ಕಿಕ್ಕೇರಿ `ಪೌರಾಣಿಕ ನಾಟಕಗಳಲ್ಲಿ ಪಾತ್ರ ನಿರ್ವಹಣೆ' ಕುರಿತು ಮಾತನಾಡಿ, `ಪೌರಾಣಿಕ ನಾಟಕ ಗೆಲ್ಲಬೇಕಾದರೆ ನಾಟಕ ರಚನೆ ಬಹಳ ಮುಖ್ಯ. ನಟನೆಯೂ ಮುಖ್ಯ. ನಟನೆ ಅನ್ನುವುದು ಸುಲಭವಾಗಿ ದಕ್ಕುವುದಿಲ್ಲ. `ನಡೆದಷ್ಟಿದೆ ನೆಲ, ಪಡೆದಷ್ಟಿದೆ ಫಲ' ಎಂಬ ಮಾತಿನಂತೆ ಪಾತ್ರಧಾರಿಯ ಸಾಧನೆ ಬೆಳೆಯುತ್ತಾ ಹೋಗುತ್ತದೆ. ನಟ ವಹಿಸಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಪಾತ್ರದ ಒಳಮನಸ್ಸು ಅರಿತು ಅಭಿನಯ ಮಾಡಬೇಕು. ನಟನ ಭಾಷೆಯನ್ನು ತಿದ್ದಿ, ತೀಡುವ ಜವಾಬ್ದಾರಿ ನಾಟಕ ಮಾಸ್ತರರಿಗೆ ಇದೆ. ಉಸಿರು ಬಿಗಿ ಹಿಡಿದು ಪದಗಳನ್ನು ಉಚ್ಚಾರಣೆ ಮಾಡಲು ಮಾಸ್ತರರು ನಟನಿಗೆ ಕೆಲ ಸೂತ್ರಗಳನ್ನು ಹೇಳಿಕೊಡಬೇಕು' ಎಂದು ಸಲಹೆ ನೀಡಿದರು.`ಪೌರಾಣಿಕ ನಾಟಕ ಮಾಡುವವರಿಗೆ ಭಾಷಾ ತರಬೇತಿ, ಗುಣಮಟ್ಟ ಹೆಚ್ಚಿಸುವ ಕಡೆ ತರಬೇತಿ ನೀಡುವ ಅಗತ್ಯ ಇದೆ. ಬೇರೆ ಸಂಗೀತಕ್ಕಿಂತ ರಂಗ ಸಂಗೀತ ಉತ್ತಮ ಎಂಬ ಮಾತನ್ನು ಎಸ್.ಎಲ್. ಭೈರಪ್ಪ ಹೇಳಿದ್ದಾರೆ' ಎಂಬುದರತ್ತ ಗಮನ ಸೆಳೆದರು.ಕರ್ನಾಟಕ ನಾಟಕ ಅಕಾಡೆಮಿ ನಿವೃತ್ತ ರಿಜಿಸ್ಟ್ರಾರ್ ಎ.ಎಸ್. ನಾಗರಾಜ್ `ಪೌರಾಣಿಕ ನಾಟಕಗಳ ಅಸ್ತಿತ್ವ' ವಿಷಯ ಕುರಿತು ಮಾತನಾಡಿ, `ಎಲ್ಲ ವರ್ಗದ ಜನರನ್ನು ತನ್ನತ್ತ ಸೆಳೆಯುವ ಶಕ್ತಿ ನಾಟಕಕ್ಕೆ ಇದೆ. ಗ್ರಾಮೀಣ ಭಾಗದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಪಾತ್ರಧಾರಿಗಳು ಹಾಸಿಗೆ ಪಥ್ಯದ ಜೊತೆಗೆ ಕೆಟ್ಟ ಚಟಗಳನ್ನು ಬಿಡುತ್ತಿದ್ದರು.ಈ ಪದ್ಧತಿ ಇನ್ನೂ ಇದೆ. ನಾಟಕ ಕಲಿಯುವ ವೇಳೆ ಮಾಸ್ತರರು ಕೆಲವೊಮ್ಮೆ ತಪ್ಪು ಮಾಡಿದರೆ ಏಟು ಸಹ ಕೊಡುತ್ತಿದ್ದರು. ಕಲಿಯುವವರು ಸಹ ಶ್ರದ್ಧೆ-ಗೌರವದಿಂದ ಕಲಿಯುತ್ತಿದ್ದರು. ಪಾರಂಪರಿಕ ಕಲೆಯಾದ ಪೌರಾಣಿಕ ನಾಟಕವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದರು.

Post Comments (+)