ರಂಗ ಕಲಾವಿದೆ ನಾಗರತ್ನಮ್ಮ ಇನ್ನಿಲ್ಲ

7

ರಂಗ ಕಲಾವಿದೆ ನಾಗರತ್ನಮ್ಮ ಇನ್ನಿಲ್ಲ

Published:
Updated:

ಬೆಂಗಳೂರು: ಖ್ಯಾತ ರಂಗಭೂಮಿ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಆರ್. ನಾಗರತ್ನಮ್ಮ ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ಶನಿವಾರ ಇಲ್ಲಿನ ರಾಜಾಜಿನಗರದಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.ಪುರುಷರಿಗೆ ಸರಿಸಮಾನರಾಗಿ ನಾಟಕಸಂಸ್ಥೆ ಕಟ್ಟಿ ಮಹಿಳೆಯರಿಂದಲೇ ನಾಟಕ ಮಾಡಿಸಿ ಪುರುಷ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದ ನಾಗರತ್ನಮ್ಮ ಅವರು `ಭೀಮನ ಪಾತ್ರಧಾರಿ ನಾಗರತ್ನಮ್ಮ~ ಎಂದೇ ಹೆಸರುವಾಸಿಯಾಗಿದ್ದರು.  ಈ ವರ್ಷದ ಏಪ್ರಿಲ್‌ನಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ `ಪದ್ಮಶ್ರೀ~ ಪ್ರಶಸ್ತಿಯನ್ನು ನಾಗರತ್ನಮ್ಮ  ಸ್ವೀಕರಿಸಿದ್ದರು.  ನಾಗರತ್ನಮ್ಮ ಅವರು ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ನಾಟಕ ಅಕಾಡೆಮಿ ಪ್ರಶಸ್ತಿ, ರವೀಂದ್ರ ರತ್ನ ನಾಟಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.ನಾಗರತ್ಮಮ್ಮ ಅವರು 1958ರಲ್ಲಿ ಕಟ್ಟಿದ್ದ ಶ್ರೀ ಸ್ತ್ರೀನಾಟಕ ಮಂಡಳಿಯು ಎಲ್ಲೇ ಹೋದರೂ 50 ರಿಂದ 100 ಪ್ರದರ್ಶನಗಳನ್ನು ಕಾಣುತ್ತಿದ್ದುದು ವಿಶೇಷ. ಅವರ ತಂಡದಲ್ಲಿ ಮಹಿಳೆಯರೇ ಪುರುಷ ಪಾತ್ರಗಳನ್ನು ನಿರ್ವಹಿಸುತ್ತಿದ್ದುದು ಒಂದು ಐತಿಹಾಸಿಕ ದಾಖಲೆ. ಇವರ ನಾಟಕಗಳನ್ನು ಜನ ಮಳೆ ಸುರಿದರೂ ಕೊಡೆ ಹಿಡಿದುಕೊಂಡು ವೀಕ್ಷಿಸುತ್ತಿದ್ದರು.ಮೈಸೂರಿನಲ್ಲಿ 1926ರಲ್ಲಿ ಕೃಷ್ಣಭಟ್ಟ- ರುಕ್ಮಿಣಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ ನಾಗರತ್ನಮ್ಮ ಅವರು ಕಲಾಸೇವಾ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿದ್ದರು. ವರನಟ ರಾಜಕುಮಾರ್ ಅವರಂತಹ ಹಿರಿಯ ನಟರೊಂದಿಗೆ ಅಭಿನಯಿಸಿದ ಇವರು, ಮಂಜುನಾಥ ಕೃಪಾಪೋಷಿತ ನಾಟಕ ಸಂಸ್ಥೆ, ಚಾಮುಂಡೇಶ್ವರಿ ನಾಟಕ ಸಂಸ್ಥೆ, ಹಿರಣ್ಣಯ್ಯ ಮಿತ್ರಮಂಡಳಿ, ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಕಂಪೆನಿ ಇತ್ಯಾದಿ ಹಲವಾರು ಕಂಪೆನಿಗಳ ಮೂಲಕ ರಾಜ್ಯಾದ್ಯಂತ ತಿರುಗಾಡಿ ಅಸಂಖ್ಯಾತ ನಾಟಕಗಳಲ್ಲಿ ಪಾತ್ರ ವಹಿಸಿದ್ದರು.ಕೃಷ್ಣಲೀಲಾ ನಾಟಕದಲ್ಲಿ ಕೃಷ್ಣನ ಪಾತ್ರ, ಕೃಷ್ಣ ಗಾರುಡಿಯಲ್ಲಿ ಭೀಮ, ಸುಭದ್ರಾ ಪರಿಣಯದಲ್ಲಿ ಬಲರಾಮ, ಬೇಡರ ಕಣ್ಣಪ್ಪದಲ್ಲಿ ಕಣ್ಣಪ್ಪ, ಸದಾರಮೆಯಲ್ಲಿ ಕಳ್ಳ, ಸಂಸಾರ ನೌಕೆಯಲ್ಲಿ ಸುಂದರನಂತಹ ಪುರುಷ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುತ್ತಿದ್ದುದು ಇವರನ್ನು ರಂಗಭೂಮಿ ಕ್ಷೇತ್ರದ ಧ್ರುವತಾರೆಯನ್ನಾಗಿ ಮಾಡಿತು. ಮಾಸ್ಟರ್ ಹಿರಿಯಣ್ಣಯ್ಯ ಅವರು ನಾಗರತ್ನಮ್ಮ ಅವರನ್ನು `ರಂಗಭೂಮಿಯ ಸಿಂಹಿಣಿ~ ಎಂದೇ ಕರೆಯುತ್ತಿದ್ದರು. ನಾಗರತ್ನಮ್ಮ ಅವರ ಪತಿ ಪಾರ್ಥಸಾರಥಿ ಕೆಲ ಸಮಯದ ಹಿಂದೆ ತೀರಿಕೊಂಡಿದ್ದರು. ಅವರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಅಪಾರ ಸಂಖ್ಯೆಯ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry