ಭಾನುವಾರ, ನವೆಂಬರ್ 17, 2019
24 °C
ನೂರು ಕಣ್ನು ಸಾಲದು

ರಂಜನೆಯೊಟ್ಟಿಗೆ ಹೊಣೆಗಾರಿಕೆ

Published:
Updated:

ಒಂದೇ ಒಂದು ಭಾಷೆ ಜಗತ್ತಿಗೆ ಚಲನಚಿತ್ರವನ್ನು ಪರಿಚಯಿಸುತ್ತಿತ್ತು, ಅದು ಮೂಕ ಭಾಷೆ. ಯಾವಾಗ ಮಾತು ಸಿನಿಮಾಗೆ ಸೇರಿಕೊಂಡಿತೋ ಆಗ ಅದಕ್ಕೊಂದು ಪ್ರಾದೇಶಿಕತೆಯ ರೂಪ ದಕ್ಕಿತು. ಜೊತೆಗೆ ವಿವಿಧ ವಲಯಗಳಲ್ಲಿ ಆಯಾ ಪ್ರದೇಶ ಭಾಷೆ ಹಾಗೂ ಸಂಸ್ಕೃತಿಗೆ ಅನುಗುಣವಾಗಿ ಚಲನಚಿತ್ರ ಪಡಿಮೂಡಿತು.ಮಾತುಳ್ಳ-ಸಂಗೀತ ಸಮ್ಮಿಳನಗೊಂಡ ವಿಶಿಷ್ಟ ಕಲೆ ಮುಂಬೈ ಚಿತ್ರಮಂದಿರಗಳಲ್ಲಿ ನೋಡುಗರನ್ನು ತಲೆದೂಗುವಂತೆ ಮಾಡಿದ್ದೇ ತಡ, ದೇಶದ ಇತರ ಭಾಗಗಳಲ್ಲೂ ಚಲನಚಿತ್ರ ತಯಾರಿಕೆ ಸದ್ದು ಮಾಡಿತು. ಕಲೆ ಮಾತ್ರವಲ್ಲ, ವ್ಯಾಪಾರ ದೃಷ್ಟಿಯೂ ಇದ್ದ ಸಿನಿಮಾಗೆ ಅನೇಕ ನಗರಗಳು, ದೊಡ್ಡ ಪಟ್ಟಣಗಳು ತೆರೆದುಕೊಂಡವು. ಕಲ್ಕತ್ತಾ, ಪುಣೆ, ಮದ್ರಾಸ್, ಲಾಹೋರ್, ಸೇಲಂ, ಕೊಯಮತ್ತೂರು ಮೊದಲಾದ ಕಡೆಗಳಲ್ಲಿ ಟಾಕಿ ಚಲನಚಿತ್ರಗಳ ನಿರ್ಮಾಣಕ್ಕೆ ಅನೇಕ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.`ಆಲಂ ಅರಾ' ಮೊದಲ ಭಾರತೀಯ ಮಾತಿನ ಚಿತ್ರ. ಇದು ಅರೇಬಿಯನ್ ನೈಟ್ಸ್ ಮಾದರಿಯ ನಾಟಕ. ರಂಗಭೂಮಿಯ ಈ ಜನಪ್ರಿಯ ನಾಟಕವನ್ನು ಆಧರಿಸಿದ ಚಿತ್ರವನ್ನು ಇಂಪೀರಿಯಲ್ ಫಿಲಂ ಕಂಪೆನಿ ನಿರ್ಮಾಣ ಮಾಡಿ ಮುಂಬೈ ಜನಕ್ಕೆ ತೋರಿಸಿದ ಕೆಲವೇ ದಿನಗಳಲ್ಲಿ ಇಡೀ ದೇಶದ ತುಂಬೆಲ್ಲಾ ಅದೇ ಮಾತು. ಕೇವಲ ಮೂರೇ ವರ್ಷಗಳಲ್ಲಿ 50ಕ್ಕೂ ಹೆಚ್ಚು ಚಿತ್ರ ನಿರ್ಮಾಣ ಸಂಸ್ಥೆಗಳು ತಲೆ ಎತ್ತಿದವು. ಪ್ರಾದೇಶಿಕ ಭಾಷೆಗಳಲ್ಲಿ ಚಿತ್ರ ತಯಾರಿಕೆಯ ಪೈಪೋಟಿಯೇ ಶುರುವಾಯಿತು. ತಮಿಳು, ಮರಾಠಿ, ಪಂಜಾಬಿ, ಬಂಗಾಲಿ, ಗುಜರಾತಿ ಹೀಗೆ ಪ್ರಮುಖ ಭಾಷೆಗಳಲ್ಲಿ ಚಲನಚಿತ್ರಗಳು ಸೆಟ್ಟೇರಿದವು. ಒಂದೇ ವರ್ಷದಲ್ಲಿ 28 ಮಾತಿನ ಚಲನಚಿತ್ರಗಳು ಸಿದ್ಧಗೊಂಡವೆಂದರೆ ಅವುಗಳ ನಿರ್ಮಾಣದ ವೇಗ ಅರ್ಥವಾದೀತು.ಮದನ್ ಸಂಸ್ಥೆಯ `ಜಮಾಯ್ ಶಸ್ಟಿ' (ಬಂಗಾಲಿ), ಸಾಗರ್ ಅವರ `ನರ್ಸಿ ಮೆಹತಾ' (ಗುಜರಾತಿ), ಪ್ರಭಾತ್‌ನ `ಅಯೋಧ್ಯಾಚಾ ರಾಜಾ' (ಮರಾಠಿ), ಇಂಪೀರಿಯಲ್ ಸಂಸ್ಥೆಯ `ಕಾಳಿದಾಸ' (ತಮಿಳು), ಹಿಂದ್ ಮಾತಾ ಸಿನೇಟೋನ್‌ನ `ಮಿರ್ಜಾ ಸಾಹಿಬನ್' (ಪಂಜಾಬಿ) ಚಿತ್ರಗಳು ಮೊದಲಿಗೆ ಬಿಡುಗಡೆಗೊಂಡ ಚಿತ್ರಗಳಲ್ಲಿ ಕೆಲವು.ಬಂಡವಾಳ ಹೂಡಿದರೆ ಒಳ್ಳೆಯ ಫಸಲು ಪಡೆಯುವ ಭರವಸೆ ಮೂಡಿಸಿದ `ಸಿನಿಮಾ' ಎಲ್ಲೆಡೆ ಹಬ್ಬತೊಡಗಿತು. ನಿರ್ಮಾಣ ಸಂಸ್ಥೆಗಳು, ಚಲನಚಿತ್ರ ಮಂದಿರಗಳು ಶುರುವಾದವು. ಒಂದೇ ವರ್ಷಕ್ಕೆ 400 ಚಿತ್ರಮಂದಿರಗಳು ಪ್ರಾರಂಭಗೊಂಡವು. 1935ರ ವರ್ಷವಂತೂ ಭಾರತೀಯ ಚಲನಚಿತ್ರ ಇತಿಹಾಸದ್ಲ್ಲಲಿ ಒಂದು ಹೊಸ ಶಕೆ ಶುರುಮಾಡಿದ ಸಂವತ್ಸರ. ಆ ಕಾಲಾವಧಿಯಲ್ಲಿ 233 ಚಲನಚಿತ್ರಗಳು ನಮ್ಮ ದೇಶದೊಳಗೆ ತಯಾರಾದವು. ಇವುಗಳನ್ನು ಪ್ರದರ್ಶಿಸಲು 300 ಚಲನಚಿತ್ರ ಮಂದಿರಗಳು ನಿರ್ಮಾಣಗೊಂಡವು. ಆ ವರ್ಷದ ಕೊನೆ ವೇಳೆಗೆ ದೇಶದಲ್ಲಿ ಸ್ಥಾಪನೆಯಾದ ಚಿತ್ರಮಂದಿರಗಳ ಸಂಖ್ಯೆ 700ಕ್ಕೆ ಏರಿತ್ತು.ಮನರಂಜನೆಯ ಹೊಸ ಮಾಧ್ಯಮವಾಗಿ ಹೊರ ಹೊಮ್ಮಿದ ಸಿನಿಮಾ ಮೂಲಕ ವ್ಯಾಪಾರದ ನವ ನಮೂನೆ ಬಿಚ್ಚಿಕೊಂಡಿದ್ದರಿಂದ ಲಾಭ-ಆದಾಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಪಡೆಯಿತು. ಮೊದಲಿಗೆ ರಂಗಮಂಚದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಜನಪ್ರಿಯ ನಾಟಕಗಳೇ ಚಲನಚಿತ್ರಗಳಾಗಿ ಮೂಡಿಬರತೊಡಗಿದವು. ಪುರಾಣಗಳನ್ನು ಆಧರಿಸಿದ ವಿಷಯಗಳೇ ಸಿನಿಮಾಗಳಲ್ಲೂ ವಿಜೃಂಭಿಸಿದವು. ಸಿನಿಮಾ ಉದ್ಯಮವೂ ಇದರ ಸುತ್ತ ಗಿರಕಿ ಹೊಡೆಯತೊಡಗಿತು.ತಾಂತ್ರಿಕ ಕೌಶಲದಿಂದ ಹೊಸ ಮನರಂಜನೆಯ ಮಜಲಾದ ಚಲನಚಿತ್ರದಲ್ಲಿ ಏಕತಾನತೆಯ ಪುರಾವರ್ತನೆಯನ್ನು ದೂರ ಮಾಡಬೇಕಾದ ಅನಿವಾರ್ಯತೆಯನ್ನು ಕಂಡುಕೊಂಡ ಕೆಲ ನಿರ್ಮಾಪಕರು ಅತ್ತ ಹೆಜ್ಜೆಗಳನ್ನು ಹಾಕಿದರು. ಅವರು ಆ ಹಾದಿಯಲ್ಲಿ ಯಶ ಸಾಧಿಸುವುದು ತಡವಾಗಲಿಲ್ಲ.ರಂಗಭೂಮಿಗೆ ಜೋತು ಬಿದ್ದಿದ್ದ ಸಿನಿಮಾವನ್ನು ಬಿಡುಗಡೆಗೊಳಿಸಿ ನೆಲದ ಸೊಗಡು, ಸಾಮಾಜಿಕ ಕಳಕಳಿ, ಜನಪರ ಧೋರಣೆ ಹಾಗೂ ಜನತೆಗೆ ಸಂದೇಶ ನೀಡುವಂತಹ ವಿಷಯಗಳನ್ನು ಒಳಗೊಳ್ಳುವಂತೆ ಮಾಡಲು ಬೆರಳೆಣಿಕೆಯಷ್ಟು ಚಿತ್ರ ನಿರ್ಮಾಪಕರು ಪ್ರಯತ್ನ ಪ್ರಾರಂಭಿಸಿದರು.ಬಂಗಾಲಿ ಭಾಷೆಯಲ್ಲಿ `ಚಂಡೀದಾಸ್' (1932), `ಪೂರಣ್ ಭಗತ್' (1933) ಚಿತ್ರಗಳನ್ನು ನಿರ್ಮಿಸಿದ ದೇವಕಿ ಬೋಸ್ ತಮ್ಮ ಸಿನಿಮಾಗಳನ್ನು ಹೊಸ ಬಗೆಯ ಚಿಂತನೆಗೆ ತೊಡಗಿಸಿದರು. ನಮ್ಮದೇ ಸಮಾಜದ ವಿಷಯಗಳನ್ನು ಆಯ್ದುಕೊಂಡ ದೇವಕಿ ಬೋಸ್ ಕಲಾವಂತಿಕೆಯೊಡನೆ ಹೆಚ್ಚು ಪರಿಣಾಮಕಾರಿಯಾಗಿ ಸಿನಿಮಾ ಭಾಷೆಯನ್ನು ಬಳಸಿದರು. ಅದು ಪೌರಾಣಿಕವಾಗಲಿ, ಸಾಮಾಜಿಕವಾಗಲಿ ಹೇಳುವ ರೀತಿಯಲ್ಲಿ ಪ್ರತ್ಯೇಕತೆ ಇರುತ್ತಿತ್ತು. ಹೀಗಾಗಿ `ಸೀತಾ', `ವಿದ್ಯಾಪತಿ', `ಸಪೇರಾ' ಚಿತ್ರಗಳು ಬೋಸ್ ಅವರ ವಿಶಿಷ್ಟ ಬಗೆಯ ನಿರೂಪಣೆಯಿಂದ ಗಮನ ಸೆಳೆದವು.ರಂಗಭೂಮಿಯಲ್ಲಿ ಬದುಕು ಕಟ್ಟಿಕೊಂಡರೂ ಚಲನಚಿತ್ರ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದವರು ವಿ. ಶಾಂತಾರಾಂ. ನಾಟಕಗಳ ಮೂಲಕ ಸಾಮಾಜಿಕ ಧ್ಯೇಯೋದ್ದೇಶಗಳನ್ನು ಹೇಳುವುದನ್ನು ಕಲಿತಿದ್ದ ಶಾಂತಾರಾಂ ಸಿನಿಮಾವನ್ನು ಅದಕ್ಕೆ ಒಗ್ಗಿಸಲು ಶುರುವಿಟ್ಟುಕೊಂಡರು. ಪುರಾಣದ ಕಥೆ, ಸಾಮಾಜಿಕ ಸಮಸ್ಯೆ, ಸಮಕಾಲೀನ ವಸ್ತು- ಹೀಗೆ ಎಲ್ಲವನ್ನೂ ಚಲನಚಿತ್ರ ವ್ಯಾಕರಣದ ಮೂಲಕ ಉಪಯೋಗಿಸಿದ ಅವರು `ಅಮೃತ್‌ಮಂಥನ್', `ಅಮರ್ ಜ್ಯೋತಿ', `ದುನಿಯಾ ನ ಮಾನೆ', `ಆದ್ಮೀ', `ಪಡೋಸಿ'ಗಳಂತಹ ವಿಷಯ ಶ್ರೀಮಂತ ಚಿತ್ರಗಳನ್ನು ತೆರೆಗಿತ್ತರು.ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಚಿತ್ರ `ದೇವದಾಸ್' ಹಲವಾರು ವರ್ಷಗಳಿಂದ ನಾನಾ ಭಾಷೆಗಳಲ್ಲಿ ತಯಾರಾದರೂ ಇಂದಿಗೂ ಕಾಡುವ ಚಿತ್ರ ಅದು. ಶರತ್‌ಚಂದ್ರ ಚಟರ್ಜಿ ಅವರ ಬಂಗಾಲಿ ಕಾದಂಬರಿಯನ್ನು ಆಧರಿಸಿ `ದೇವದಾಸ್'ನನ್ನು ಬೆಳ್ಳಿತೆರೆಗಿತ್ತವರು ಪಿ.ಸಿ ಬರುವಾ.ಕುಂದನ್‌ಲಾಲ್ ಸೈಗಲ್ (ಕೆ.ಎಲ್.ಸೈಗಲ್) ಅವರಂತಹ ಹಾಡು ಕಲಾವಿದನ ಮೂಲಕ ದೇವದಾಸ್‌ನನ್ನು ಅನಾವರಣಗೊಳಿಸಿದ ಪಿ.ಸಿ. ಬರುವಾ ಅವರು `ಜಿಂದಗಿ', `ಮುಕ್ತಿ', `ಅಧಿಕಾರ್', `ಮಂಜಿಲ್'ನಂತಹ ಶ್ರೇಷ್ಠ ಕೃತಿಗಳನ್ನು ಚಲನಚಿತ್ರಗಳ ಮೂಲಕ ಕಟ್ಟಿಕೊಟ್ಟರು.ವ್ಯಾಪಾರ ವಹಿವಾಟಿನ ಹೊರತಾಗಿಯೂ ನಮ್ಮ ದೇಶದ ಚಲನಚಿತ್ರ ಉದ್ಯಮ ಗಟ್ಟಿಮುಟ್ಟಾಗಿ ಬೆಳೆಯಿತು. ಚಿತ್ರರಂಗದಲ್ಲಿ ಆಗಾಗ್ಗೆ ನಡೆಯುವ ಬದಲಾವಣೆಗಳಿಗೆ ತಕ್ಕಂತೆ ತಾಂತ್ರಿಕ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳುತ್ತಾ ಸಾಗುವುದರ ಜೊತೆ ಜೊತೆಗೆ ಒಳ್ಳೆಯ ಚಿತ್ರ ನಿರ್ದೇಶಕರ ಆಗಮನವೂ ಆಯಿತು. ರಂಜನೆಯ ರಸಪಾಕದೊಟ್ಟಿಗೆ ಸಮಾಜದ ಆಗು ಹೋಗುಗಳ ಮೇಲೆ ಬೆಳಕು ಚೆಲ್ಲುವ ಚಿತ್ರಗಳೂ ತಯಾರಾದವು. ನಿತಿನ್ ಬೋಸ್‌ರ `ಪ್ರೆಸಿಡೆಂಟ್', ಹೇಮಚಂದ್ರರ `ಅನಾಥಾಶ್ರಮ', ಪಿ. ಮಜೂಂದಾರ್ ಅವರ `ಸ್ಟ್ರೀಟ್ ಸಿಂಗರ್', ಹಂಸಾ ತಯಾರಿಕಾ ಸಂಸ್ಥೆ ನಿರ್ಮಿಸಿದ `ಜ್ವಾಲಾ', `ಛಾಯಾ' ಚಿತ್ರಗಳು ಸಿದ್ಧಗೊಂಡವು.ವ್ಯಾಪಾರಿ ದೃಷ್ಟಿಯಿಂದ ಪ್ರಗತಿ ಸಾಧಿಸಿದ ಭಾರತೀಯ ಚಿತ್ರಗಳು ಉತ್ತಮ ಉದ್ದೇಶಗಳನ್ನು ಪ್ರತಿಪಾದಿಸುವ ಚಲನಚಿತ್ರಗಳಾಗಿಯೂ ಹೆಸರು ಸಂಪಾದಿಸಿದವು.

ಪ್ರತಿಕ್ರಿಯಿಸಿ (+)