ರಂಜಾನ್: ವಿಶೇಷ ಪ್ರಾರ್ಥನೆಯ ಸಮಯ

ಭಾನುವಾರ, ಮೇ 26, 2019
31 °C

ರಂಜಾನ್: ವಿಶೇಷ ಪ್ರಾರ್ಥನೆಯ ಸಮಯ

Published:
Updated:

ಮುಂಜಾವಿನ ಮೂರರ ಆಸುಪಾಸು. ಚುಮುಚುಮು ಚಳಿ. ಗಡಿಯಾರದ ಅಲಾರಂ ಬಾರಿಸುತ್ತಿದ್ದಂತೆ ಮಸೀದಿಯ ಮೈಕ್ ಸದ್ದು ಮಾಡುತ್ತದೆ. ಜೋರು ಧ್ವನಿಯಲ್ಲಿ ಧಾರ್ಮಿಕ ವ್ಯಕ್ತಿಯೊಬ್ಬರೂ ಅಲ್ಲಾನ ಧ್ಯಾನದಲ್ಲಿ ಮಲಗಿರುವ ಮುಸ್ಲಿಮರನ್ನು ನಿದ್ದೆಯಿಂದ ಎಚ್ಚರಿಸುವ ಕಾಯಕದಲ್ಲಿ ನಿರತ...ಈ ಪ್ರಕ್ರಿಯೆ ಆರಂಭಗೊಂಡ ದಿನವೇ ಜಗತ್ತಿಗೆ ರಂಜಾನ್ ಮಾಸಾಚರಣೆ ಆರಂಭವಾಗಿದೆ ಎಂಬ ಅರಿವು.

ಮೈಕ್‌ನಲ್ಲಿ ಸಂದೇಶ ಬಿತ್ತರವಾಗುತ್ತಿದ್ದಂತೆ ಮನೆಯೊಳಗೆ ಬೆಚ್ಚಗೆ ಮಲಗಿದ್ದವರೆಲ್ಲ ಎಚ್ಚರಗೊಂಡು, ತಕ್ಷಣದಿಂದಲೇ ಅಲ್ಲಾನ ಧ್ಯಾನದೊಂದಿಗೆ ದಿನಚರಿಗೆ ಚಾಲನೆ ನೀಡುತ್ತಾರೆ.ಪುರುಷರು `ತಹರ್ಜುದ್~ ನಮಾಜ್‌ನೊಂದಿಗೆ ದಿನಚರಿ ಆರಂಭಿಸಿದರೆ; ಮಹಿಳೆಯರು ಸ್ನಾನ ಮುಗಿಸಿ ಉಪಹಾರ ತಯಾರಿಸಲು ಮುಂದಾಗುತ್ತಾರೆ. ನಸುಕಿನ ನಾಲ್ಕೂವರೆ ಗಂಟೆಯೊಳಗೆ ಮನೆ-ಮಂದಿ ಮಕ್ಕಳ ಉಪಾಹಾರ ಪ್ರಕ್ರಿಯೆ ಮುಗಿಯಬೇಕು. ಜತೆಗೆ ಧರ್ಮಾಚರಣೆಯ ಧಾರ್ಮಿಕ ವಿಧಿ-ವಿಧಾನಗಳು ಸಕಾಲಕ್ಕೆ ಆರಂಭಗೊಳ್ಳಬೇಕು ಎಂಬ ತವಕ.ಮುಂಜಾವಿನ ಮೊದಲ ನಮಾಜ್ `ಫಜರ್~ಗೆ ಪುರುಷರು, ಏಳು ವರ್ಷ ಮೇಲ್ಪಟ್ಟ ಚಿಣ್ಣರು ಮಸೀದಿಗೆ ತೆರಳುವುದು ವಾಡಿಕೆ. ಶುಭ್ರ ವಸ್ತ್ರಗಳಲ್ಲಿ ಕಂಗೊಳಿಸುವ ಮುಸ್ಲಿಂರು, ಮನೆ-ಮಂದಿ, ಬಂಧು-ಬಳಗ, ನೆರೆಹೊರೆಯವರೊಟ್ಟಿಗೆ ಸಾಮೂಹಿಕವಾಗಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಗುಂಪು ಗುಂಪಾಗಿ ಮರಳುತ್ತಾರೆ. ಈ ಸಮಯ ಸಾಲು ಸಾಲು ತೆರಳುವ ಮುಸ್ಲಿಂ ಸಹೋದರರನ್ನು ನೋಡುವುದೇ ಸಂಭ್ರಮ.ಜಗತ್ತಿನ ಎಲ್ಲೆಡೆ ವಾಸವಾಗಿರುವ ಮುಸ್ಲಿಂ ಸಮುದಾಯಕ್ಕೆ `ರಂಜಾನ್~ ಧಾರ್ಮಿಕ ಆಚರಣೆಯ ಪವಿತ್ರ ಮಾಸ. ಇಸ್ಲಾಂ ಧರ್ಮದ ಪ್ರವರ್ತಕ ಪ್ರವಾದಿ ಮಹಮದ್ ಪೈಗಂಬರ್ ಅವರಿಗೆ `ಕುರಾನ್~ನ ಹೊಳಹು ಸಿಕ್ಕ ಮಾಸವಾದ್ದರಿಂದ ಇದಕ್ಕೆ ಹೆಚ್ಚು ಆದ್ಯತೆ. ರಂಜಾನ್ ಮಾಸದ 26ನೇ ರಾತ್ರಿ ಪ್ರವಾದಿ ಮಹಮದರಿಗೆ ಕುರಾನ್ ಸಂಪೂರ್ಣ ಸಿದ್ಧಿಸಿದ ದಿನ. ಆದ್ದರಿಂದಲೇ ಪ್ರತಿ ರಂಜಾನ್ ಮಾಸದ 26ನೇ ರಾತ್ರಿಯನ್ನು ನಮಾಜ್, ದೇವರ ಧ್ಯಾನದ ಜಾಗರಣೆ ರಾತ್ರಿಯನ್ನಾಗಿ ಆಚರಿಸುವುದು ಇಂದಿಗೂ ಮುಸ್ಲಿಂರಲ್ಲಿ ಅನೂಚಾನಾಗಿ ನಡೆದು ಬಂದಿದೆ.

ರಂಜಾನ್ ಕುರಿತು...ಮುಸ್ಲಿಂರು ರಂಜಾನ್ ಮಾಸಾಚರಣೆಯನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಂಡು ಧಾರ್ಮಿಕ ವಿಧಿ-ವಿಧಾನಗಳನ್ವಯ ಕಟ್ಟು ನಿಟ್ಟಿನಿಂದ ಪಾಲಿಸುತ್ತಾರೆ. ಈ ಸಂಪ್ರದಾಯ ಪಾಲನೆ ಕುರಿತು ತುಮಕೂರಿನ ಗೆಳೆಯ ಸಯ್ಯದ್ ಅತಿಕ್ ಅಹಮದ್ ವಿವರಿಸಿದ್ದಾರೆ.ರಂಜಾನ್‌ನ ಮೊದಲ ಹತ್ತು ದಿನ ಪ್ರತಿಯೊಬ್ಬ ಮುಸ್ಲಿಂ ಸಹ `ಅಲ್ಲಾ~ (ದೇವರ) ಬಳಿ ಕರುಣೆ ತೋರುವಂತೆ ನಿರಂತರವಾಗಿ ಪ್ರಾರ್ಥಿಸುತ್ತಾರೆ. ಈ ಸಮಯ ತಾನು ಮಾಡಿರುವ ತಪ್ಪಿಗೆ ಕ್ಷಮೆ ಯಾಚನೆ, ತನ್ನಿಂದಾದ ಮೋಸಕ್ಕೆ ಕ್ಷಮೆ, ಯಾರ ಮನಸ್ಸಿಗಾದರೂ ನೋವುಂಟು ಮಾಡಿದ್ದರೇ ಈ ಪಾಪಿಯನ್ನು ಕ್ಷಮಿಸು ಎಂದು ಪರಿ ಪರಿಯಾಗಿ ಬೇಡುತ್ತಾನೆ. ಮುಂದಿನ ದಿನಗಳಲ್ಲಿ ತೊಂದರೆ ನೀಡಬೇಡ, ಯಾರಿಗೂ ಕೆಡುಕನ್ನುಂಟು ಮಾಡಬೇಡ... ಎಂಬ ಪ್ರಾರ್ಥನೆ ಅಹೋರಾತ್ರಿ ನಡೆಯುತ್ತದೆ.ಈ ಸಮಯ ಅಲ್ಲಾ `ಕರುಣಾಮಯಿ~ ಆಗಿರುತ್ತಾನೆ. ನಾವು ಮಾಡಿದ ತಪ್ಪನ್ನೆಲ್ಲ ಕ್ಷಮಿಸುತ್ತಾನೆ. ಎಪ್ಪತ್ತು ತಾಯಂದಿರ ಪ್ರೀತಿಗಿಂತ ಅಲ್ಲಾನ ಪ್ರೀತಿ ಹೆಚ್ಚಿರುತ್ತದೆ. ಇದರಿಂದಲೇ ಪ್ರತಿಯೊಬ್ಬ ಮುಸ್ಲಿಂ ಸಹ ರಂಜಾನ್ ವೇಳೆ 99 ಹೆಸರುಗಳಿಂದ ಕರುಣಾಮಯಿ ಅಲ್ಲಾನನ್ನು ಪ್ರಾರ್ಥಿಸುತ್ತಾರೆ. ತಪ್ಪುಗಳನ್ನೆಲ್ಲ ಕ್ಷಮಿಸುವಂತೆ ಕೋರುತ್ತಾರೆ.ಎರಡನೇ ಹತ್ತು ದಿನದ ಅವಧಿ `ಮಗ್‌ಫಿರತ್~. ಅಲ್ಲಾನು ನಾವು ಮಾಡಿದ ಎಲ್ಲ ತಪ್ಪುಗಳನ್ನು ಕ್ಷಮಿಸುವ ಅವಧಿ. ಜತೆಗೆ ಉತ್ತಮ ಭವಿಷ್ಯ ನೀಡುತ್ತಾರೆ ಎಂಬ ಭರವಸೆಯ ಬೆಳಕು ಮೂಡುವ ಸಮಯ. ಎಲ್ಲ ಪಾಪ, ತಪ್ಪುಗಳಿಗೆ ಕ್ಷಮೆ ನೀಡುವ ಕಾಲವಿದು. ಅಲ್ಲಾನಿಂದ ಕ್ಷಮೆಗೊಳಪಟ್ಟ ಪ್ರತಿಯೊಬ್ಬ ಮುಸ್ಲಿಂ ಸಹ ಈ ಜಗತ್ತಿನಲ್ಲಿ ಆಗ ತಾನೇ ಜನಿಸಿದ ಮಗುವಿಗೆ ಸಮಾನ. ಅಂದರೇ ಯಾವುದೇ ಪಾಪ-ತಪ್ಪು, ಕೆಟ್ಟ ಕೆಲಸ ಮಾಡದ ವ್ಯಕ್ತಿಗೆ ಸಮ ಎಂದರ್ಥ.

ನರಕದಿಂದ ಬಿಡುಗಡೆ...ರಂಜಾನ್‌ನ ಕೊನೆ ದಿನಗಳು ಪ್ರತಿಯೊಬ್ಬ ಮುಸ್ಲಿಂನಿಗೂ ಅತ್ಯಂತ ಮಹತ್ವದ ದಿನಗಳು. ಈ ಅವಧಿಯಲ್ಲಿ `ಅಲ್ಲಾ~ ನರಕದಲ್ಲಿರುವವರನ್ನು ಸ್ವರ್ಗಕ್ಕೆ ಕಳುಹಿಸುತ್ತಾನೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ.ಮಾಡಿರುವ ತಪ್ಪುಗಳ ಕುರಿತು ಆಲೋಚನೆ, ಇನ್ನೂ ಮುಂದೆ ಅಂಥ ತಪ್ಪು ಪುನರಾವರ್ತನೆ ಆಗದ ರೀತಿ ನಡೆದುಕೊಳ್ಳುವ ಆತ್ಮವಿಶ್ವಾಸ, ಈಗಾಗಲೇ ತಮ್ಮಿಂದ ನಡೆದ ತಪ್ಪಿಗೆ ಅಲ್ಲಾನ ಬಳಿ ಕ್ಷಮೆ ಕೋರಿ, ನಮ್ಮನ್ನು ನರಕಕ್ಕೆ ಕಳುಹಿಸಬೇಡ ಪ್ರಭು. ಸರ್ವರಿಗೂ ಒಳಿತನ್ನುಂಟು ಮಾಡು. ನನ್ನ ಕುಟುಂಬ, ಬಂಧು-ಬಳಗ, ಮಿತ್ರರು, ನೆರೆ ಹೊರೆಯವರು, ಜಗತ್ತಿನ ಎಲ್ಲರನ್ನೂ ಸ್ವರ್ಗಕ್ಕೆ ಕಳುಹಿಸು. ನನ್ನ ಪೂರ್ವಿಕರು ನರಕದಲ್ಲಿ ನರಳುತ್ತಿದ್ದರೆ, ಅವರನ್ನು ಸ್ವರ್ಗಕ್ಕೆ ಕಳುಹಿಸು ಎಂದು ಪರಿ ಪರಿಯಾಗಿ ದೇವರನ್ನು ಮನದಲ್ಲೇ ಬೇಡುತ್ತಾರೆ. ಈ ಸಮಯ ಸಲ್ಲಿಸುವ ಪ್ರಾರ್ಥನೆಗೆ ವಿಶೇಷ ಶಕ್ತಿಯಿದೆ ಎಂಬುದು ಪ್ರತಿಯೊಬ್ಬ ಮುಸ್ಲಿಂನ ನಂಬಿಕೆ.ರಂಜಾನ್ ರಾತ್ರಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಇದಕ್ಕೆ `ತರಾವಿ~ ಎನ್ನುತ್ತಾರೆ. ಈ ಅವಧಿಯಲ್ಲಿ ಕುರಾನ್ ಓದಲಾಗುತ್ತದೆ. ಅಲ್ಲಾನ ಧ್ಯಾನ ಮಾಡಲಾಗುತ್ತದೆ. ಪ್ರಸಕ್ತ ವರ್ಷದ ರಂಜಾನ್ ಜುಲೈ 21ರಿಂದ ಆರಂಭಗೊಂಡಿದ್ದು, ಆಗಸ್ಟ್ 19ಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಇದು ಚಂದ್ರ ದರ್ಶನದ ಮೇಲೆ ನಿರ್ಧರಿತಗೊಳ್ಳಲಿದೆ. ರೋಜಾ (ಉಪವಾಸ) ಅವಧಿ ಮುಂಜಾನೆ 4.40ರಿಂದ ಸಂಜೆ 6.50ರವರೆಗೆ ಇದೆ.ಷಬೆ ಖದರ್: ರಂಜಾನ್ ಮಾಸದ ಕೊನೆಯ ಹತ್ತು ರಾತ್ರಿಗಳಿಗೆ ಎಲ್ಲಿಲ್ಲದ ಮಹತ್ವ. ಈ ರಾತ್ರಿಗಳಲ್ಲಿ ಅಲ್ಲಾನ ಧ್ಯಾನದಲ್ಲಿ ಜಾಗರಣೆ ನಡೆಸುವ ಮಂದಿಗೆ ಒಂದು ಸಾವಿರ ತಿಂಗಳ ಕಾಲ ಕುರಾನ್ ಓದಿದರೆ, ಒಳ್ಳೆ ಆಲೋಚನೆ ನಡೆಸಿದರೆ, ದಾನ-ಧರ್ಮ ಕಾರ್ಯ ನಡೆಸಿದರೆ ಸಿಗುವ ಪುಣ್ಯ ದೊರಕುತ್ತದೆ ಎಂಬ ಅಚಲ ನಂಬಿಕೆ ಮುಸ್ಲಿಂರಲ್ಲಿದೆ.

ಏತೇಕಾಫ್: ರಂಜಾನ್‌ನ ಕೊನೆ ಹತ್ತು ದಿನ ಪುರುಷರು ಮಸೀದಿಯಲ್ಲೇ ಉಳಿದು, ಮಹಿಳೆಯರು ಮನೆಯ ಪ್ರತ್ಯೇಕ ಕೊಠಡಿಯೊಳಗೆ ಉಳಿದು, ಪ್ರಪಂಚದ ಲೌಕಿಕ ಜೀವನ ಮರೆತು ದೇವರ ಧ್ಯಾನದಲ್ಲಿ ತಲ್ಲೆನರಾಗುವುದೇಏತೇಕಾಫ್.

ಹತ್ತು ದಿನ ಏತೇಕಾಫ್ ಕೂರುವುದಕ್ಕೆ `ಸುನ್ನತ್~ ಎನ್ನುತ್ತಾರೆ. ಈ ಅವಧಿಯಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಅವರನ್ನೇ ಅನುಸರಿಸುತ್ತಾರೆ. ಊಟ, ತಿಂಡಿ, ಶೌಚ, ಸ್ನಾನ ಎಲ್ಲ ಚಟುವಟಿಕೆಗಳಲ್ಲೂ ಪ್ರವಾದಿ ಅವರನ್ನೇ ಅನುಸರಿಸುತ್ತಾರೆ. ಅಲ್ಲಾನ ಧ್ಯಾನ ಹೊರತುಪಡಿಸಿ ಬೇರ‌್ಯಾವ ಚಿಂತೆ ಇವರ ಬಳಿ ಸುಳಿಯಲ್ಲ.ಹರಕೆ: ಮುಸ್ಲಿಂರಲ್ಲೂ ಹರಕೆ ಹೊರುವ ಪದ್ಧತಿ ಇದೆ. ಹರಕೆ ಹೊತ್ತವರು ರಂಜಾನ್‌ನಲ್ಲೇ ತೀರಿಸುತ್ತಾರೆ. ಅಲ್ಲಾನನ್ನು ಪ್ರಾರ್ಥಿಸುವಾಗ ತನ್ನ ತೊಂದರೆ ನಿವಾರಿಸಿದರೆ, ಕಷ್ಟ ಪರಿಹರಿಸಿದರೆ ಬಡವರಿಗೆ ಊಟ ಹಾಕುತ್ತೇನೆ. ದಾನ ಮಾಡುತ್ತೇನೆ ಎಂದು ಬಹುತೇಕರು ಹರಕೆ ಹೊರುತ್ತಾರೆ. ಇನ್ನೂ ಕೆಲವರು ಏತೇಕಾಫ್ ಕೂರುವ ಹರಕೆ ಹೊರುತ್ತಾರೆ. ಇದಕ್ಕೆ ನಫೀಲ್ ಏತೇಕಾಫ್ ಎನ್ನುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry