ಬುಧವಾರ, ನವೆಂಬರ್ 13, 2019
17 °C
ಎಎಸ್‌ಐ ಹವ್ಯಾಸದ ಫಲ

ರಕ್ತದಾನಿಗಳ ನೆಟ್‌ವರ್ಕ್

Published:
Updated:

ಸದಾ ಜೇಬಲ್ಲೊಂದು ಪೆನ್ನು, ಕೈಯಲ್ಲೊಂದು ಬುಕ್‌ಹಿಡಿದು ಓಡಾಡುವ ವ್ಯಕ್ತಿ ಬೆಂಗಳೂರಿನಲ್ಲಿ ಎಲ್ಲಾದರೂ ನಿಮಗೆ ಕಾಣಿಸಬಹುದು. ಈ ವ್ಯಕ್ತಿ ಬೇರಾರೂ ಅಲ್ಲ. ಒಬ್ಬ ಪೊಲೀಸ್ ಅಧಿಕಾರಿ. ರಸ್ತೆಯಲ್ಲಿ ಇವರನ್ನು ನೋಡಿದವರಿಗೆ, ಇವರ‌್ಯಾಕೆ ಪೆನ್ನು ಬುಕ್ ಹಿಡಿದುಕೊಂಡು ಓಡಾಡುತ್ತಾರೆ ಎನ್ನುವ ಪ್ರಶ್ನೆ ಮೂಡಬಹುದು.ಈ ಬುಕ್ ರಕ್ತದಾನಿಗಳ ನೋಂದಣಿಗಾಗಿ. ಒಬ್ಬ ಪೊಲೀಸ್ ಅಧಿಕಾರಿ ಕೈಯಲ್ಲಿ ರಕ್ತದಾನಿಗಳ ಪಟ್ಟಿ ಹೇಗೆ ಬಂತು ಎಂದು ಆಶ್ಚರ್ಯ ಆಗಬಹುದು. ಸಿಟಿ ಮಾರುಕಟ್ಟೆ ಸಂಚಾರ ಠಾಣೆಯ ಎಎಸ್‌ಐ ಕೃಷ್ಣ ಸಿಂಗ್ ವೃತ್ತಿಯಲ್ಲಿ ಪೊಲೀಸ್, ಪ್ರವೃತ್ತಿಯಲ್ಲಿ ರಕ್ತದಾನಿ. ಸಾವಿರಾರು ಮಂದಿಗೆ ರಕ್ತದಾನ ಮಾಡುವಂತೆ ಪ್ರೇರೇಪಿಸುವ ಹೃದಯವಂತ. ತಮ್ಮ ಬಳಿ ಇರುವ ಬುಕ್‌ನಲ್ಲಿ ರಕ್ತದಾನ ಮಾಡಲು ಬಯಸುವವರ ಹೆಸರು ಹಾಗೂ ರಕ್ತದ ಗುಂಪು ಬರೆದಿಟ್ಟುಕೊಂಡು ಆಸ್ಪತ್ರೆಯಿಂದ ಫೋನ್ ಬಂದ ತಕ್ಷಣ ಅವರಿಗೆ ಕರೆ ಮಾಡಿ ಅಗತ್ಯ ಇರುವವರಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.ದಾನದ ಕಹಾನಿ

ಕೃಷ್ಣ ಸಿಂಗ್ ಮೊದಲಿಂದಲೂ ರಕ್ತದಾನ ಮಾಡಿದವರೇನೂ ಅಲ್ಲ. ಇವರ ಕಹಾನಿಯಲ್ಲೂ ಒಂದು ತಿರುವು ಇದೆ. ಇವರ ಮಗಳು ಆಸ್ಪತ್ರೆಯೊಂದರಲ್ಲಿ ಚಿಕ್ಕವಯಸ್ಸಿನಲ್ಲೇ ನ್ಯೂಮೋನಿಯಾದಿಂದ ಸಾವನ್ನಪ್ಪಿದಳು. ಆ ನೋವಿನಲ್ಲೂ ಪಕ್ಕದ ಹಾಸಿಗೆಯಲ್ಲಿ ಒಬ್ಬ ಗರ್ಭಿಣಿ ಅನುಭವಿಸುತ್ತಿದ್ದ ಯಾತನೆ ಕಾಣಿಸಿತು. ತಕ್ಷಣ ಆಕೆಗೆ ರಕ್ತ ಕೊಟ್ಟು, ತಾಯಿ ಮಗು ಇಬ್ಬರ ಉಳಿವಿಗೆ ಕಾರಣರಾದರು. ಮಗಳನ್ನು ಕಳೆದುಕೊಂಡ ದುಃಖವನ್ನು ರಕ್ತದಾನ ಮಾಡುವ ಮೂಲಕ ಮರೆತರು. ಅಂದಿನಿಂದಲೇ ಅವರು ರಕ್ತ ಕೊಡುವುದನ್ನು ಪ್ರವೃತ್ತಿಯಾಗಿಸಿಕೊಳ್ಳಬೇಕು ಎಂದು ದೃಢ ಸಂಕಲ್ಪ ಮಾಡಿದರು.ಸಿಂಗ್ ಅವರು ತಮ್ಮ ಈ ಪ್ರವೃತ್ತಿಯನ್ನು 1985ರಿಂದ ಮುಂದುವರಿಸಿಕೊಂಡು ಬಂದಿದ್ದಾರೆ. `ನನ್ನ ನಿವೃತ್ತಿ ನಂತರವೂ ಈ ಕಾಯಕವನ್ನು ಮುಂದುವರಿಸುತ್ತೇನೆ' ಎನ್ನುತ್ತಾರೆ ಕೃಷ್ಣ.ಇವರ ಕುಟುಂಬವೇ ರಕ್ತದಾನಕ್ಕಾಗಿ ಮೀಸಲು. ಸಿಂಗ್ ಇದುವರೆಗೆ 17 ಬಾರಿ ರಕ್ತ ಕೊಟ್ಟಿದ್ದರೆ, ಅವರ ಮಗ 40 ಬಾರಿ ರಕ್ತ ಕೊಟ್ಟಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಅವರಿಗೂ ಈ ಅಪರೂಪದ ಕೆಲಸದಲ್ಲಿ ಭಾಗಿಯಾಗಿರುವ ಸಂತೃಪ್ತಿ.ಇದುವರೆಗೆ 2,432 ಜನರಿಂದ ರಕ್ತದಾನ ಮಾಡಿಸಿರುವ ಇವರು, ರಸ್ತೆಯಲ್ಲಿ ಸಿಗುವ ಹಲವರಿಗೆ ಕೇಳುವುದು ಒಂದೇ ಪ್ರಶ್ನೆ: `ಏನಯ್ಯಾ ಇಲ್ಲಿಯವರೆಗೂ ಯಾವುದಾದರೂ ಒಳ್ಳೇ ಕೆಲಸ ಮಾಡಿದ್ದೀಯಾ?' `ಇಲ್ಲ' ಎಂದು ಯಾರಾದರೂ ಹೇಳಿದರೆ ಕೃಷ್ಣ ಸಿಂಗ್, `ಹಾಗಾದರೆ, ನಾನು ಹೇಳಿದ ಹಾಗೆ ಮಾಡು.ನಿನ್ನ ರಕ್ತದ ಗುಂಪು ಯಾವುದೆಂದು ಹೇಳು. ಕರೆದಾಗ ಬಂದು ರಕ್ತ ಕೊಡು' ಎಂದು ಅವರ ಅನುಮತಿ ಪಡೆದು ಪುಸ್ತಕದಲ್ಲಿ ಫೋನ್ ನಂಬರ್ ಸಮೇತ ವಿವರಗಳನ್ನು ಬರೆದುಕೊಳ್ಳುತ್ತಾರೆ. ಈ ರೀತಿ ಅವರಿಗೆ ಸಿಕ್ಕ ಆಟೊ ಚಾಲಕರು, ಮಾರುಕಟ್ಟೆ ವರ್ತಕರು, ತಮ್ಮ ಸಹೋದ್ಯೋಗಿಗಳ ಬಳಗ... ಹೀಗೆ ಹಲವರು ಈ ರಕ್ತದಾನ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.`ರಾಯಚೂರಿನ ಪೊಲೀಸರೊಬ್ಬರ ಮೂರು ವರ್ಷದ ಮಗುವಿಗೆ ಕ್ಯಾನ್ಸರ್ ಇದೆ. ಪ್ರತಿ ತಿಂಗಳ ನಾಲ್ಕನೇ ತಾರೀಖು ಮಗುವಿಗೆ ರಕ್ತ ಕೊಡಿಸಬೇಕು. ಇಲ್ಲಿಗೆ ಬರುವ ಮೊದಲು ಅವರು ನನಗೆ ಫೋನ್ ಮಾಡುತ್ತಾರೆ' ಎಂದು ಸಿಂಗ್ ನುಡಿಯುತ್ತಾರೆ. ಇದೇ ರೀತಿ ರಕ್ತಕ್ಕಾಗಿ ಹಾತೊರೆಯುವ ನೂರಾರು ಕುಟುಂಬಕ್ಕೆ ಸಿಂಗ್ ಆಪದ್ಬಾಂಧವ ಆಗಿದ್ದಾರೆ.ರಾಜ್ಯ ಸರ್ಕಾರ ಹಲವು ಬಾರಿ ಇವರನ್ನು ಗೌರವಿಸಿದೆ. ಹಾಗೆಯೇ ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ 72ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಇವರಿಗೆ ಸನ್ಮಾನ ಮಾಡಿ, ಪ್ರಶಸ್ತಿ ನೀಡಿ ಗೌರವಿಸಿವೆ. `ರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ದೇವರಾದರೆ, ನನಗೆ ರಕ್ತದಾನಿಗಳೇ ದೇವರು' ಎನ್ನುತ್ತಾರೆ ಸಿಂಗ್.

ಪೊಲೀಸ್ ಆದಾಕ್ಷಣ ಗೌರವ ಸಂಪಾದನೆ ಮಾಡಿಬಿಡಬಹುದು ಅನ್ನುವುದು ತಪ್ಪು. ಒಳ್ಳೆ ಕೆಲಸ ಮಾಡಿದರೆ ಮಾತ್ರ ಜನರು ಹಾರೈಸುತ್ತಾರೆ, ಗುರುತಿಸುತ್ತಾರೆ ಎನ್ನುವ ಕೃಷ್ಣ ಸಿಂಗ್ ಅಪರೂಪದ ವ್ಯಕ್ತಿ. 

ಪ್ರತಿಕ್ರಿಯಿಸಿ (+)