ಭಾನುವಾರ, ಮೇ 22, 2022
29 °C

ರಕ್ತದಾನ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ರಕ್ತದಾನವೇ ಎಲ್ಲಕ್ಕಿಂತ ಶೇಷ್ಠವಾದ ದಾನ~ ಎಂದು ಭಾವಿಸಿ ಶಿಬಿರಗಳನ್ನು ಹಮ್ಮಿಕೊಂಡು ರಕ್ತ ಸಂಗ್ರಹಿಸಿ ಅದನ್ನು ಅಗತ್ಯವಿರುವ ಜನರಿಗೆ ನೀಡಿ ಅವರ ಜೀವ ಉಳಿಸುವ ಕೆಲಸ ಮಾಡುತ್ತಿರುವ ಉಡುಪಿ ಜಿಲ್ಲೆಯ `ಮೊಗವೀರ ಯುವ ಸಂಘಟನೆ~ ಕರಾವಳಿ ಕರ್ನಾಟಕದ ಜನರ ಗಮನ ಸೆಳೆದಿದೆ. ರಕ್ತ ಸಂಗ್ರಹಕ್ಕಾಗಿ ಈ ಸಂಘಟನೆ ದೊಡ್ಡ ಅಭಿಯಾನವನ್ನೇ ಕೈಗೆತ್ತಿಕೊಂಡಿದೆ.ರಸ್ತೆ ಅಪಘಾತಗಳು, ಶಸ್ತ್ರ ಚಿಕಿತ್ಸೆ ಮತ್ತಿತರ ಸಂದರ್ಭಗಳಲ್ಲಿ ವೈದ್ಯರು ರೋಗಿಗೆ ರಕ್ತದ ಅಗತ್ಯವಿದೆ. ತಕ್ಷಣ ರಕ್ತ ತನ್ನಿ ಎಂದು ರೋಗಿಯ ಸಂಬಂಧಿಗಳಿಗೆ ಹೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ  ಸಕಾಲದಲ್ಲಿ ರಕ್ತ ಸಿಕ್ಕರೆ ರೋಗಿಯ ಪ್ರಾಣ ಉಳಿಯುತ್ತದೆ.ಆದರೆ ಬಹುತೇಕ ಸಂದರ್ಭಗಳಲ್ಲಿ ರೋಗಿಗೆ ಅಗತ್ಯವಿರುವ ರಕ್ತ ಸಿಕ್ಕುವುದಿಲ್ಲ. ರಕ್ತ ನೀಡಲು ಅನೇಕರು ಸಿದ್ಧವಿದ್ದರೂ ಅವರ ರಕ್ತ ರೋಗಿಯ ರಕ್ತದ ಗುಂಪಿಗೆ ಹೊಂದಿಕೆ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಪ್ರತಿಯೊಂದು ಆಸ್ಪತ್ರೆಯಲ್ಲಿ ರಕ್ತ ಬ್ಯಾಂಕ್‌ಗಳನ್ನು ಆರಂಭಿಸಲಾಗಿದೆ. ಈ `ಬ್ಯಾಂಕ್~ಗಳಲ್ಲಿ ರಕ್ತ ಸಿಗಬೇಕು ಎಂದಾದರೆ ಯಾರಾದರೂ ರಕ್ತ ಕೊಡಬೇಕಾಗುತ್ತದೆ.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿವೆ. ಕಡಿಮೆ ಆದಾಯದ ಜನರಿಗೆ ಆಸ್ಪತ್ರೆಯ ಖರ್ಚುಗಳನ್ನು ನಿಭಾಯಿಸುವ ಶಕ್ತಿಯೇ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಡ ರೋಗಿಗಳಿಗೆ ರಕ್ತ ಪೂರೈಸಲು ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿದವರು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್. ಅವರೇ ಮೊಗವೀರ ಯುವ ಸಂಘಟನೆಯ ಹಿಂದಿನ ಚೇತನಾಶಕ್ತಿ. ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಈ ಅಭಿಯಾನ ರಕ್ತ ದಾನಿಗಳ ದೊಡ್ಡ ಜಾಲವನ್ನೇ ಜಿಲ್ಲೆಯಲ್ಲಿ ಸೃಷ್ಟಿಸಿದೆ. ಜಿಲ್ಲೆಯ ಯಾವುದೇ ಊರಿನ ರೋಗಿಗೆ ರಕ್ತದ ಅವಶ್ಯಕತೆ ಇದ್ದರೆ ಅದನ್ನು ಸಕಾಲದಲ್ಲಿ ಒದಗಿಸುವಷ್ಟು ಸಮರ್ಥವಾಗಿದೆ.ಮೊಗವೀರ ಯುವ ಸಂಘಟನೆಯ ರಕ್ತದಾನ ಶಿಬಿರಗಳಲ್ಲಿ ಸಮಾಜದ ಎಲ್ಲಾ ಸ್ತರಗಳ ಜನರೂ ಭಾಗವಹಿಸಿ ರಕ್ತದಾನ ಮಾಡುತ್ತಾರೆ. ಜನ ಪ್ರತಿನಿಧಿಗಳು, ಅಂಗವಿಕಲರೂ ರಕ್ತ ನೀಡಿದ ಉದಾಹರಣೆಗಳಿವೆ.ಮಾದರಿ ಶಿಬಿರ: ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರುವವರಿಗೆ ಮಣಿಪಾಲ ಆಸ್ಪತ್ರೆಯ ಸಹಯೋಗದಲ್ಲಿ ಕುಟುಂಬ ಸದಸ್ಯರಿಗೆ ಬಳಕೆಯಾಗುವ ಆರೋಗ್ಯ ಕಾರ್ಡ್‌ಗಳ ವಿತರಣೆಯಾಗುತ್ತಿದೆ.ರಕ್ತದಾನದ ಬಗೆಗೆ ಇರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕುವುದು ಅಭಿಯಾನದ ಇನ್ನೊಂದು ಉದ್ದೇಶ. ಈ ಅಭಿಯಾನ ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆ ನೀಡಿದೆ.ಕೆಲ ದಿನಗಳ ಹಿಂದೆ ಕುಂದಾಪುರದಲ್ಲಿ ಬಡ ಮಹಿಳೆಯೊಬ್ಬರು ಪ್ರಸವ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವವಾಗಿ ಕಂಗೆಟ್ಟಿದ್ದರು. ಅವರಿಗೆ ತುರ್ತಾಗಿ ರಕ್ತದ ಅಗತ್ಯವಿತ್ತು. ಈ ವಿಷಯದ ತಿಳಿದ ಸಂಘಟನೆಯ ಸದಸ್ಯರು ಆಸ್ಪತ್ರೆಗೆ ಧಾವಿಸಿ ಹತ್ತು ಬಾಟಲಿಗಳಷ್ಟು ರಕ್ತ ನೀಡಿದರು. ಸಂಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು ಎಂಬುದು ಸಂಘಟನೆ ಸದಸ್ಯರ ಆದರ್ಶ.ರಾಜ್ಯೋತ್ಸದ ಪ್ರಶಸ್ತಿ: ಜಿಲ್ಲಾ ಮೊಗವೀರ ಯುವ ಸಂಘಟನೆಯಲ್ಲಿ ಸಾವಿರಾರು ಸದಸ್ಯರಿದ್ದಾರೆ. ಸಂಘ ಆರಂಭದ ದಿನದಿಂದಲೂ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಸಂಘಟನೆಯ ರಕ್ತದಾನ ಅಭಿಯಾನವನ್ನು ಕರ್ನಾಟಕ ಸರ್ಕಾರ ಗುರುತಿಸಿದೆ. ಕಳೆದ ಸಾಲಿನಲ್ಲಿ ಸಂಘಟನೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.2008-09ರಲ್ಲಿ ಶಿಬಿರಗಳ ಮೂಲಕ ರಕ್ತವನ್ನು ಸಂಗ್ರಹಿಸಬೇಕು ಎನ್ನುವ ಚಿಂತನೆ ಸಂಘಟನೆಯ ಮುಖಂಡರಲ್ಲಿ  ಮೂಡಿದಾಗ ಅದಕ್ಕೆ ಉತ್ತೇಜನ ನೀಡಿದವರು ಡಾ.ಜಿ ಶಂಕರ್ ಹಾಗೂ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ರಕ್ತ ವಿಭಾಗದ ವೈದ್ಯರು ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಎಂ ನಾಯಕ್.2009-10ನೇ ಸಾಲಿನಲ್ಲಿ ಸಂಘಟನೆ 1200 ಯೂನಿಟ್ ರಕ್ತ ಸಂಗ್ರಹಿಸಿತ್ತು. 2010-11ರ ಸಾಲಿನಲ್ಲಿ 2588 ಯೂನಿಟ್ ಸಂಗ್ರಹ ಗುರಿ ತಲುಪಿತು. ಪ್ರಸ್ತುತ ವರ್ಷ 5000 ಕ್ಕೂ ಅಧಿಕ ಯುನಿಟ್‌ಗಳನ್ನು ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಈ ಸಾಲಿನಲ್ಲಿ  ಹದಿನೈದಕ್ಕೂ ಹೆಚ್ಚು ಶಿಬಿರಗಳನ್ನು ಹಮ್ಮಿಕೊಂಡಿದೆ. ಎರಡು ವಾರಗಳ ಹಿಂದೆ  ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.