ರಕ್ತ ಸಂಬಂಧಿಕರಿಂದ ಅತ್ಯಾಚಾರ: ಹೆಚ್ಚಳ

7

ರಕ್ತ ಸಂಬಂಧಿಕರಿಂದ ಅತ್ಯಾಚಾರ: ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ರಕ್ತ ಸಂಬಂಧಿಗಳಿಂದಲೇ ನಡೆದಿರುವ ಅತ್ಯಾಚಾರ ಪ್ರಕರಣಗಳು 2009ರಲ್ಲಿ ಶೇ 30ರಷ್ಟು ಹೆಚ್ಚಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯಿಂದ ಬಹಿರಂಗವಾಗಿದೆ. 2008ರಲ್ಲಿ 309 ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು, 2009ರಲ್ಲಿ 404ರನ್ನು ಮೀರಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ ಬಿಡುಗಡೆ ಮಾಡಿರುವ ‘ಕ್ರೈಂ ಇನ್ ಇಂಡಿಯಾ -2009’ರಲ್ಲಿ ಈ ಮಾಹಿತಿ ಲಭ್ಯವಾಗಿದೆ. ಇದು ಶೇ 30.7ರಷ್ಟು ಹೆಚ್ಚಳವನ್ನು ತಿಳಿಸುತ್ತದೆ.ಈ ಪೈಕಿ 21,397 ಅತ್ಯಾಚಾರ ಪ್ರಕರಣಗಳಲ್ಲಿ ಶೇ 94.9ರಷ್ಟು ಮಂದಿ ಅತ್ಯಾಚಾರಕ್ಕೆ ಒಳಗಾದವರಿಗೆ ಗೊತ್ತಿರುವ ವ್ಯಕ್ತಿಗಳೇ ಈ ಕೃತ್ಯವನ್ನು ಎಸಗಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿಯನ್ನೂ ಘಟಕ ಬಹಿರಂಗಗೊಳಿಸಿದೆ. ಅಂಕಿಸಂಖ್ಯೆಗಳ ಪ್ರಕಾರ ರಕ್ತ ಸಂಬಂಧಿಕರಿಂದಲೇ ನಡೆದಿರುವ ಅತ್ಯಾಚಾರ ಪ್ರಕರಣಗಳಲ್ಲಿ ಛತ್ತೀಸ್‌ಗಡ ರಾಜ್ಯ ಮೊದಲ ಸ್ಥಾನದಲ್ಲಿದೆ. ಇಲ್ಲಿ 2009ರಲ್ಲಿ ಇಂತಹ 107 ಪ್ರಕರಣಗಳು ಹೆಚ್ಚಾಗಿವೆ. ಇದು ದೇಶದ ಶೇ 26.5ರಷ್ಟು ಹೆಚ್ಚಳವನ್ನು ತೋರಿಸುತ್ತದೆ. ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. 2009ರಲ್ಲಿ 77 ಪ್ರಕರಣಗಳು ಈ ರಾಜ್ಯದಲ್ಲಿ ಹೆಚ್ಚಳವಾಗಿದೆ.

ನಂತರದ ಸ್ಥಾನ ರಾಜಸ್ತಾನ (36), ಜಾರ್ಖಂಡ್ (22), ಗುಜರಾತ್ (18), ಹರಿಯಾಣ (12) ಮತ್ತು ಹಿಮಾಚಲ ಪ್ರದೇಶ (10) ಪ್ರಕರಣಗಳು ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಹೆಚ್ಚಳವಾಗಿದೆ ಎಂದು ದಾಖಲೆಗಳು ತಿಳಿಸುತ್ತವೆ. ಹೆಚ್ಚಳವಾಗಿರುವ 404 ಪ್ರಕರಣಗಳಲ್ಲಿ 182 ಪ್ರಕರಣಗಳಲ್ಲಿ 18ರಿಂದ 30ರ ವಯೋಮಾನದವರ ಮೇಲೆಯೇ ನಡೆದಿದೆ.14ರಿಂದ 18ರ ವಯೋಮಾನದ 95 ಮಂದಿ ಇಂತಹ ಕೃತ್ಯಕ್ಕೆ ಬಲಿಯಾಗಿದ್ದಾರೆ. 10ರಿಂದ 14ರ ವಯೋಮಾನದ 56 ಮಂದಿ ಹಾಗೂ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ 24 ಮಂದಿ ಈ ಅವಧಿಯಲ್ಲಿ ಸಂಬಂಧಿಕರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂದು ದಾಖಲೆಗಳು ಸ್ಪಷ್ಟ ಪಡಿಸಿವೆ.


ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry