ರಕ್ಷಣಾ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ: ರೂ 69,000 ಕೋಟಿ ಮೀಸಲು

7

ರಕ್ಷಣಾ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ: ರೂ 69,000 ಕೋಟಿ ಮೀಸಲು

Published:
Updated:

ನವದೆಹಲಿ: ರಕ್ಷಣಾ ಕ್ಷೇತ್ರದ ಆಧುನೀಕರಣಕ್ಕಾಗಿ ಬಜೆಟ್‌ನಲ್ಲಿ 69,199 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಇದರಿಂದ ಸೇನಾ ಪಡೆಗೆ ಹೊಸ ಯುದ್ಧವಿಮಾನಗಳು, ಹೆಲಿಕಾಪ್ಟರ್‌ಗಳು, ಯುದ್ಧನೌಕೆಗಳು ಹಾಗೂ ಹೊವಿಟ್ಜರ್ ಬಂದೂಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿವೆ.

ರಕ್ಷಣಾ ಕ್ಷೇತ್ರಕ್ಕೆ ರೂ 1,64,415 ಕೋಟಿ ನಿಗದಿ ಮಾಡಿದ್ದು, ಇದರಲ್ಲಿ ರೂ 69,199 ಕೋಟಿಯನ್ನು ಆಧುನೀಕರಣಕ್ಕಾಗಿ ಕೊಡಲಾಗುವುದು. ಕಳೆದ ಸಾಲಿನಲ್ಲಿ ನವೀಕರಣಕ್ಕಾಗಿ ಮೀಸಲಿಟ್ಟಿದ್ದ ರೂ 60,833 ಕೋಟಿಗೆ ಹೋಲಿಸಿದರೆ ಈ ಬಾರಿಯ ಮೊತ್ತದಲ್ಲಿ ಶೇ 8.5ರಷ್ಟು ಹೆಚ್ಚಳವಾಗಿದೆ.

ತಮ್ಮ ಖಾತೆಗೆ ನೀಡಿರುವ ಮೊತ್ತದ ಬಗ್ಗೆ ರಕ್ಷಣಾ ಸಚಿವ ಎ.ಕೆ.ಆಂಟನಿ ಸಂತಸ ವ್ಯಕ್ತಪಡಿಸಿದ್ದಾರೆ. ಆಧುನೀಕರಣಕ್ಕಾಗಿ ನೀಡಲಾಗಿರುವ ರೂ 69,199 ಕೋಟಿಯಲ್ಲಿ ರೂ 28,000 ಕೋಟಿಯನ್ನು ಹೊಸ ಒಪ್ಪಂದಗಳಿಗಾಗಿ ಇರಿಸಿದ್ದರೆ ಉಳಿದ ಹಣವನ್ನು ಈಗಾಗಲೇ ಜಾರಿಯಾಗಿರುವ ಒಪ್ಪಂದಗಳ ಪರಿಷ್ಕೃತ ವೆಚ್ಚಕ್ಕೆ ಬಳಸಲು ಸೂಚಿಸಲಾಗಿದೆ.

ಮೂಲಸೌಕರ್ಯಕ್ಕೆ ಭಾರಿ ಮಹತ್ವ

ನವದೆಹಲಿ: ಮೂಲ ಸೌಕರ್ಯ ಕ್ಷೇತ್ರದ ಉತ್ತೇಜನಕ್ಕಾಗಿ ಮೂಲಸೌಕರ್ಯ ಸಾಲ ನಿಧಿ ಸ್ಥಾಪಿಸುವ ಹಾಗೂ ಕಾರ್ಪೊರೇಟ್ ಬಾಂಡ್‌ಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಮಿತಿಯನ್ನು ಹೆಚ್ಚಿಸುವ ಕ್ರಮ ಕೈಗೊಂಡಿದ್ದಾರೆ. 30 ಸಾವಿರ ಕೋಟಿ ರೂಪಾಯಿಗಳ ತೆರಿಗೆ ಮುಕ್ತ ಬಾಂಡ್ ನೀಡುವ ಹಾಗೂ ಆದಾಯ ತೆರಿಗೆ ವಿನಾಯಿತಿ ತರುವ ಗರಿಷ್ಠ 20 ಸಾವಿರ ರೂಪಾಯಿ ತನಕದ ಮೂಲಸೌಕರ್ಯ ಬಾಂಡ್ ನೀಡಿಕೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ನಿರ್ಧರಿಸಿದ್ದಾರೆ.ಎಫ್‌ಐಐ ಮಿತಿ ಹೆಚ್ಚಳದಿಂದ ಒಟ್ಟು 40 ಶತಕೋಟಿ ಡಾಲರ್‌ಗಳನ್ನು ಕಾರ್ಪೊರೇಟ್ ಬಾಂಡ್‌ಗಳಲ್ಲಿ ತೊಡಗಿಸಲು ಸಾಧ್ಯವಾಗಲಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry