ಸೋಮವಾರ, ಏಪ್ರಿಲ್ 19, 2021
32 °C

ರಕ್ಷಣಾ ತರಬೇತಿ ವಿರುದ್ಧ ರಾಜಕೀಯ ಪಕ್ಷಗಳ ಪ್ರತಿಭಟನೆ:ವಿದೇಶಿ ಅಧಿಕಾರಿಗಳು ವಾಪಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ:  ತರಬೇತಿಗಾಗಿ ಭಾರತಕ್ಕೆ ಬಂದಿದ್ದ ಶ್ರೀಲಂಕಾದ ಇಬ್ಬರು  ಅಧಿಕಾರಿಗಳು ಸೇರಿದಂತೆ ವಿವಿಧ ದೇಶಗಳ 25 ರಕ್ಷಣಾ ಇಲಾಖೆಯ ಅಧಿಕಾರಿಗಳು, ತಮಿಳುನಾಡಿನ ರಾಜಕೀಯ ಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮಂಗಳವಾರ ನೀಲಗಿರಿ ಜಿಲ್ಲೆಯ ಕೂನೂರ್‌ನಿಂದ ತೆರಳಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.`ಶ್ರೀಲಂಕಾ ರಕ್ಷಣಾ ಇಲಾಖೆಯ ಇಬ್ಬರು ಉನ್ನತ ಅಧಿಕಾರಿಗಳು ಸೇರಿದಂತೆ ಎಲ್ಲಾ ವಿವಿಧ ದೇಶಗಳ ಎಲ್ಲಾ 25 ಅಧಿಕಾರಿಗಳು ಮಂಗಳವಾರ ಮುಂಜಾನೆ ತಮಿಳುನಾಡಿನಿಂದ ತೆರಳಿದ್ದಾರೆ~ ಎಂದು ಮೂಲಗಳು ಕೂನೂರ್‌ನಿಂದ ದೂರವಾಣಿ ಮೂಲಕ `ಪ್ರಜಾವಾಣಿ~ಗೆ ತಿಳಿಸಿವೆ.ತರಬೇತಿ ಕಾರ್ಯಕ್ರಮಕ್ಕಾಗಿ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ಭೇಟಿ ನೀಡಲು ಅವರು ಆಗಮಿಸಿದ್ದರು.ವಿವಿಧ ರಾಜಕೀಯ ಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಎಲ್ಲಾ 25 ರಕ್ಷಣಾ ಅಧಿಕಾರಿಗಳನ್ನು ಮಂಗಳವಾರ ಮುಂಜಾನೆ ಕಾರುಗಳಲ್ಲಿ ಕೊಯಮತ್ತೂರಿಗೆ ಕರೆ ತರಲಾಯಿತು. ಅಲ್ಲಿಂದ  ವಿಶೇಷ ವಿಮಾನದ ಮೂಲಕ ಅವರನ್ನು ಹೈದರಾಬಾದ್‌ಗೆ ಕಳುಹಿಸಲಾಯಿತು ಎಂದು ಅಧಿಕೃತ    ಮೂಲಗಳು ಹೇಳಿವೆ.ವಿದೇಶದ ರಕ್ಷಣಾ ಅಧಿಕಾರಿಗಳಿಗೆ ಭಾರತದಲ್ಲಿ ತರಬೇತಿ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ, ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ತರಬೇತಿಗಾಗಿ ಆಗಮಿಸಿದ್ದ ಅಧಿಕಾರಿಗಳನ್ನು ತಕ್ಷಣವೇ ವಾಪಸ್ ಕಳುಹಿಸಬೇಕು ಎಂದು ಬಲವಾಗಿ ಒತ್ತಾಯಿಸಿದ್ದರು.ಭಾರತವು  ಶ್ರೀಲಂಕಾ ರಕ್ಷಣಾ ಅಧಿಕಾರಿಗಳಿಗೆ ತರಬೇತಿ ನೀಡುವುದು ತಮಿಳರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದಂತೆ ಎಂದೂ ಜಯಲಲಿತಾ ಪತ್ರದಲ್ಲಿ ಬರೆದಿದ್ದರು.ತರಬೇತಿಗಾಗಿ ಆಗಮಿಸಿದ್ದ ಲಂಕಾ ವಾಯುಪಡೆಯ ಏರ್ ವೈಸ್ ಮಾರ್ಷಲ್ ಜಗತ್ ಜುಲಂಗಾ ಡಯಾಜ್ ಮತ್ತು ನೌಕಾ ಪಡೆಯ ಎಸ್. ರಣಸಿಂಘೆ ಅವರ ಹೆಸರನ್ನೂ ತಮಿಳುನಾಡು ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿದ್ದರು.ಶ್ರೀಲಂಕಾ ಅಧಿಕಾರಿಗಳಿಗೆ ಬಾರತದಲ್ಲಿ ತರಬೇತಿ ನೀಡುವುದನ್ನು ಯುಪಿಎಯ ಪ್ರಮುಖ ಮೈತ್ರಿ ಪಕ್ಷ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರೂ ವಿರೋಧಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.