ರಕ್ಷಣಾ ಸಚಿವ, ಅಸಾದ್ ಸಂಬಂಧಿ ಹತ್ಯೆ

ಗುರುವಾರ , ಜೂಲೈ 18, 2019
29 °C

ರಕ್ಷಣಾ ಸಚಿವ, ಅಸಾದ್ ಸಂಬಂಧಿ ಹತ್ಯೆ

Published:
Updated:

ಡಮಾಸ್ಕಸ್ (ಎಎಫ್‌ಪಿ): ಸಿರಿಯಾ ಸರ್ಕಾರ ಹಾಗೂ ಸೇನೆ ವಿರುದ್ಧ ಬಂಡುಕೋರರು ನಡೆಸುತ್ತಿರುವ ಹೋರಾಟ ಉಗ್ರ ರೂಪ ತಾಳಿದೆ. ರಾಜಧಾನಿ ಡಮಾಸ್ಕಸ್‌ನ ಹೃದಯ ಭಾಗದಲ್ಲಿ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ಬಿಗಿ ಭದ್ರತೆಯಲ್ಲಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದು, ರಕ್ಷಣಾ ಸಚಿವ ಜನರಲ್ ದಾವುದ್ ರಜ್ಹಾ ಹಾಗೂ ಅಧ್ಯಕ್ಷ ಬಷರ್-ಅಲ್ -ಅಸಾದ್ ಅವರ ಭಾವ ಆಸೀಫ್ ಶೌಕತ್ ಮೃತಪಟ್ಟಿದ್ದಾರೆ.ಒಳಾಡಳಿತ ಸಚಿವ ಮೊಹಮ್ಮದ್-ಅಲ್- ಶಾರ್ ಹಾಗೂ ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಜನರಲ್ ಹಿಶಾಮ್ ಸೇರಿದಂತೆ ಈ ದಾಳಿಯಲ್ಲಿ ಸಿರಿಯಾ ಸರ್ಕಾರದ ಹಲವು ಹಿರಿಯ ಸಚಿವರು ಹಾಗೂ ಅಧಿಕಾರಿಗಳು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.  ಡಮಾಸ್ಕಸ್ ವಶಪಡಿಸಿಕೊಂಡು, ಸಿರಿಯಾ ಸರ್ಕಾರ ಉರುಳಿಸಲು ನಾಲ್ಕು ದಿನಗಳಿಂದ ಹಿಂಸಾಚಾರದಲ್ಲಿ ತೊಡಗಿಕೊಂಡಿದ್ದ ವಿರೋಧಿ ಪಡೆಗಳು ಬುಧವಾರ ಅಸಾದ್ ಅವರ ಕೋಟೆಗೇ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿವೆ.ದಾಳಿಯಲ್ಲಿ ಮೃತಪಟ್ಟ ರಕ್ಷಣಾ ಸಚಿವ ದಾವುದ್ ರಜ್ಹಾ  ಸೇನೆಯ ಉಪ ಮುಖ್ಯಸ್ಥರಾಗಿದ್ದರು.

ಅಸಾದ್ ಅವರ ಭಾವ ಆಸೀಫ್ ಶೌಕತ್ ಉಪ ರಕ್ಷಣಾ ಸಚಿವರಾಗಿದ್ದು, ಬಂಡುಕೋರರ ದಂಗೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸಾವಿನಿಂದ ಸಿರಿಯಾ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ ಎಂದು ಈಗ ವಿಶ್ಲೇಷಿಸಲಾಗುತ್ತಿದೆ.

 

ಬಂಡುಕೋರರ ದಾಳಿಗೆ ಪ್ರತಿಕ್ರಿಯೆ ನೀಡಿರುವ ಸಿರಿಯಾ ಸೇನೆ, ಇದರಿಂದ ತಾನು ವಿಚಲಿತವಾಗಿಲ್ಲ. ಭಯೋತ್ಪಾದನೆಯನ್ನು ಬಗ್ಗುಬಡಿಯಲು ಹೋರಾಟ ಮುಂದುವರಿಸುವುದಾಗಿ ತಿಳಿಸಿದೆ.

ಬಂಡುಕೋರರ ಜತೆಗಿನ ಹೋರಾಟದಲ್ಲಿ 60ಕ್ಕೂ ಹೆಚ್ಚು ಸೈನಿಕರು ಸತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry