ಭಾನುವಾರ, ಮೇ 9, 2021
18 °C

ರಕ್ಷಣೆಗೆ ಒತ್ತಾಯಿಸಿ ವೈದ್ಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವೈದ್ಯಕೀಯ ಸಿಬ್ಬಂದಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಜಂಟಿ ಕ್ರಿಯಾ ಸಮಿತಿ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಈಚೆಗೆ ಮೃತಪಟ್ಟ ರೋಗಿಯ ಕುಟುಂಬದ ಸದಸ್ಯರು ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಬೆಂಬಲಿಸಿ ಖಾಸಗಿ ವೈದ್ಯಕೀಯ ಸಿಬ್ಬಂದಿ ಶುಕ್ರವಾರ ರಸ್ತೆಗೆ ಇಳಿದರು. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ವಿವಿಧ ಆಸ್ಪತ್ರೆಯ ಶುಶ್ರೂಷಕಿಯರು, ಅರೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಜೆ.ಕೆ. ಮೈದಾನದಲ್ಲಿರುವ ಮೈಸೂರು ವೈದ್ಯ ಕೀಯ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ದಿವಾನ್ಸ್ ರಸ್ತೆ, ದೇವರಾಜ ಅರಸು ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. `ವೈದ್ಯೋ ನಾರಾಯಣೋ ಹರಿ ಅಂದು, ವೈದ್ಯರ ಮೇಲೆ ಹಲ್ಲೆ ಇಂದು', `ನಿಮ್ಮನ್ನು ಉಪಚರಿ ಸುವ ವರು ನಾವು, ಹಾಗಾದರೆ ಹಲ್ಲೆ ಏಕೆ' ಎಂಬ ಭಿತ್ತಿಚಿತ್ರಗಳನ್ನು ಹಿಡಿದ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಸಾಗಿದರು. ಜಿಲ್ಲಾಧಿಕಾರಿ ಡಾ.ರಾಮೇಗೌಡ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿದರು.`ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾ ಗುತ್ತಿವೆ. ಹುಬ್ಬಳ್ಳಿಯ `ಕಿಮ್ಸ' ಆಸ್ಪತ್ರೆಯಲ್ಲಿ ಶಾಸಕರೇ ವೈದ್ಯರಿಗೆ ಹಲ್ಲೆ ಮಾಡಿದ್ದರು. ಇದರಿಂದ ಸಿಬ್ಬಂದಿಗೆ ಕೆಲಸ ಮಾಡಲು ಕಿರಿಕಿರಿಯಾಗುತ್ತಿದೆ. ಅರ್ಧದಷ್ಟು ಮಹಿಳಾ ಸಿಬ್ಬಂದಿಯೇ ಇರುವ ವೈದ್ಯಕೀಯ ಕ್ಷೇತ್ರದಲ್ಲಿ ರಾತ್ರಿ ಪಾಳೆಯಲ್ಲಿ ಕೆಲಸ ಮಾಡಲು ಹಿಂಜರಿಯುವಂತಾಗಿದೆ. ಸರ್ಕಾರ ಕೂಡಲೇ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕು' ಎಂದು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಡಾ.ಸಿ. ಶರತ್‌ಕುಮಾರ ಒತ್ತಾಯಿಸಿದರು.ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಬಸವನಗೌಡಪ್ಪ, ಭಾರತೀಯ ವೈದ್ಯರ ಸಂಘದ ಕಾರ್ಯದರ್ಶಿ ಡಾ.ಬಿ. ಪುಟ್ಟಸ್ವಾಮಿ, ಉಪಾಧ್ಯಕ್ಷ ಡಾ.ಸುರೇಶ್ ರುದ್ರಪ್ಪ, ಸರ್ಕಾರಿ ವೈದ್ಯರುಗಳ ಸಂಘದ ಅಧ್ಯಕ್ಷ ಡಾ.ಶಿವಶಂಕರ್, ಕಿರಿಯ ವೈದ್ಯರುಗಳ ಸಂಘದ ಅಧ್ಯಕ್ಷ ಡಾ.ರವೀಂದ್ರ, ವಿಕ್ರಂ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್.ಎನ್. ಭಾಸ್ಕರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.