ಮಂಗಳವಾರ, ಮಾರ್ಚ್ 2, 2021
31 °C
ರಾಜೀನಾಮೆಗೆ ಬಲವಂತ: ರಾಜ್ಯಸಭೆಯಲ್ಲಿ ಅಳಲು ತೋಡಿಕೊಂಡ ಶಶಿಕಲಾ ಪುಷ್ಪಾ

ರಕ್ಷಣೆ ಕೋರಿ ಕಣ್ಣೀರಿಟ್ಟ ಎಐಎಡಿಎಂಕೆ ಸಂಸದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಕ್ಷಣೆ ಕೋರಿ ಕಣ್ಣೀರಿಟ್ಟ ಎಐಎಡಿಎಂಕೆ ಸಂಸದೆ

ನವದೆಹಲಿ (ಪಿಟಿಐ): ಮುಖಂಡರೊಬ್ಬರು ತಮಗೆ ಕಪಾಳಕ್ಕೆ ಹೊಡೆದಿದ್ದಾರೆ  ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಎಐಎಡಿಎಂಕೆ ಸಂಸದೆ ಶಶಿಕಲಾ ಪುಷ್ಪಾ ಅವರು ಸೋಮವಾರ ರಾಜ್ಯಸಭೆಯಲ್ಲಿ ಕಣ್ಣೀರು ಹಾಕುತ್ತಾ ದೂರಿದರು.ಸಭಾಪತಿ ಅವರ ಪೀಠದ ಎದುರು ಧಾವಿಸಿದ ಪುಷ್ಪಾ ಅವರು, ‘ತಮಿಳುನಾಡಿನಲ್ಲಿ ನನಗೆ ಜೀವ ಬೆದರಿಕೆ ಇದೆ ಹಾಗೂ ರಾಜ್ಯಸಭಾ ಸದಸ್ಯತ್ವ ತ್ಯಜಿಸುವಂತೆ ಬಲವಂತ ಮಾಡಲಾಗುತ್ತಿದೆ’ ಎಂದು ಹೇಳಿದರು.ರಾಜ್ಯ ಸರ್ಕಾರದಿಂದಲೇ ತಮಗೆ ಜೀವ ಬೆದರಿಕೆ ಇದೆ ಮತ್ತು ಮುಖಂಡರೊಬ್ಬರು ಕಪಾಳಕ್ಕೆ ಹೊಡೆದಿದ್ದಾರೆ ಎಂದು ಕಣ್ಣೀರು ಹಾಕುತ್ತಾ ಆಪಾದಿಸಿದರು. ಯಾವ ಮುಖಂಡರು ಎಲ್ಲಿ ಕಪಾಳಕ್ಕೆ ಹೊಡೆದರು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.‘ಒಬ್ಬ ಸಂಸದೆಗೆ ಮುಖಂಡನೊಬ್ಬ ಕಪಾಳಕ್ಕೆ ಹೊಡೆದರೆ  ಮನುಷ್ಯನ ಘನತೆಗೆ ಏನು ಅರ್ಥ’ ಎಂದು ಪುಷ್ಪಾ ಕೇಳಿದಾಗ ಎಐಎಡಿಎಂಕೆ  ಸದಸ್ಯರು ಭಾರಿ ಪ್ರತಿಭಟನೆ ನಡೆಸಿದರು. ಆದರೆ ವಿರೋಧ ಪಕ್ಷಗಳ ಸದಸ್ಯರು ಪುಷ್ಪಾ ಅವರ ಬೆಂಬಲಕ್ಕೆ ನಿಂತರು.ಈ ಸಂದರ್ಭದಲ್ಲಿ ಎಐಎಡಿಎಂಕೆ ಸದಸ್ಯ ನವನೀತಕೃಷ್ಣ ಅವರು ಪದೆಪದೇ ಸಭಾಪತಿ ಅವರ ಪೀಠದತ್ತ ತೆರಳಿ ಪುಷ್ಪಾ ಅವರ ಹೇಳಿಕೆಯನ್ನು ದಾಖಲೆಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿ ದರು. ಸಂಸದೆಯಾಗಿರುವ ತಮಗೆ ಮುಖಂಡರೊಬ್ಬರು ಕಪಾಳಕ್ಕೆ ಹೊಡೆದಿ ರುವುದರಿಂದ ಸರ್ಕಾರ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಉಪ ಸಭಾಪತಿ ಪಿ. ಜೆ. ಕುರಿಯನ್ ಅವರು, ‘ಸಭಾಪತಿಗಳು ಎಲ್ಲಾ ಸದಸ್ಯರ ರಕ್ಷಕರು, ಆದ್ದರಿಂದ ನಿಮಗೂ ರಕ್ಷಣೆ ದೊರೆಯುತ್ತದೆ’ ಎಂದು ಹೇಳಿದರು. ಈ ಸದನಕ್ಕೆ ಬಂದು ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಯ ಹೆಸರನ್ನು ಹೇಳಬಾರದು ಎಂದು ಸಲಹೆ ಮಾಡಿದ ಅವರು, ಪುಷ್ಪಾ ಅವರು ಸಭಾಪತಿ ಅವರಿಗೆ ಪತ್ರ ಬರೆದು ಸೂಕ್ತ ಕ್ರಮ ತೆಗೆದುಕೊಳ್ಳಲು ಮನವಿ ಮಾಡಬೇಕು ಎಂದರು.ಆದರೆ ವಿರೋಧ ಪಕ್ಷದ ಸದಸ್ಯರು ಅದರಲ್ಲೂ ಕಾಂಗ್ರೆಸ್‌ನ ಮಹಿಳಾ ಸದಸ್ಯರು ಪುಷ್ಪಾ ಅವರಿಗೆ ಪೂರ್ತಿ ಹೇಳಿಕೆ ನೀಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಗದ್ದಲವೆಬ್ಬಿಸಿದರು.ಯಾವುದೇ ಸದಸ್ಯ ತಮ್ಮ ವೈಯಕ್ತಿಕ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಬಹುದಾಗಿದೆ ಎಂದು ಸಮಾಜವಾದಿ ಪಕ್ಷದ ನರೇಶ್ ಅಗರ್‌ವಾಲ್ ಹೇಳಿ ದರು. ಆದರೆ ಎಐಎಡಿಎಂಕೆ ಸದಸ್ಯರು ಪುಷ್ಪಾ ಅವರ ಹೇಳಿಕೆಯನ್ನು ದಾಖಲೆಯಿಂದ ತೆಗೆದುಹಾಕಬೇಕು ಎಂದು ಪದೆಪದೇ ಒತ್ತಾಯಿಸಿದರು.ವಾರ್ತಾ ಮತ್ತು ಪ್ರಸಾರ ಖಾತೆ  ಸಚಿವ ವೆಂಕಯ್ಯ ನಾಯ್ಡು ಅವರು, ಚರ್ಚೆ ಮಾಡುವುದರಿಂದ ಪ್ರಯೋಜನ ವಿಲ್ಲ, ಸಮಸ್ಯೆ ಇರುವ ಸದಸ್ಯರು ಸಭಾಪತಿ ಅವರಿಗೆ ಲಿಖಿತವಾಗಿ ತಿಳಿಸಬೇಕು ಎಂದರು. ವಿಷಯವನ್ನು ಪೂರ್ತಿ ಹೇಳಲು ಸದಸ್ಯೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಒತ್ತಾಯಿಸಿದಾಗ, ‘ಸಭಾಪತಿ ಅವರಿಗೆ ಲಿಖಿತ ದೂರು ನೀಡಲು ಸೂಚಿಸಿದ್ದೇನೆ’ ಎಂದು ಕುರಿಯನ್ ಹೇಳಿದರು.ಎಐಎಡಿಎಂಕೆಯಿಂದ  ಶಶಿಕಲಾ   ವಜಾ

ಚೆನ್ನೈ (ಪಿಟಿಐ):
ದೆಹಲಿ ವಿಮಾನ ನಿಲ್ದಾಣದಲ್ಲಿ ಡಿಎಂಕೆ ಸಂಸದರೊಬ್ಬರ ಕೆನ್ನೆಗೆ ಹೊಡೆದ ಆರೋಪ ಹೊತ್ತಿರುವ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪಾ ಅವರನ್ನು ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ.

ಪಕ್ಷದ ನೀತಿ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿ ಪಕ್ಷಕ್ಕೆ ಕೆಟ್ಟ ಹೆಸರು ತಂದ ಕಾರಣಕ್ಕೆ ಪುಷ್ಪಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ ಎಂದು ಜಯಲಲಿತಾ ಅವರು ತಿಳಿಸಿದ್ದಾರೆ. ಪುಷ್ಪಾ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಡಿಎಂಕೆ ಸಂಸದ ತಿರುಚಿ ಶಿವಾ ಅವರ ಜತೆ ಜಟಾಪಟಿ ನಡೆಸಿ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂಬ ಆಪಾದನೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.