ರಕ್ಷಿತ್-ಐಶ್ವರ್ಯಗೆ ಪ್ರಶಸ್ತಿ

7

ರಕ್ಷಿತ್-ಐಶ್ವರ್ಯಗೆ ಪ್ರಶಸ್ತಿ

Published:
Updated:
ರಕ್ಷಿತ್-ಐಶ್ವರ್ಯಗೆ ಪ್ರಶಸ್ತಿ

ಹುಬ್ಬಳ್ಳಿ: `ಸ್ಥಳೀಯ ಹುಡುಗ~ ರಕ್ಷಿತ್ ಬಾರಿಗಿಡದ ಹಾಗೂ ಬೆಂಗಳೂರು ಸ್ಟಾರ್ ಕ್ಲಬ್‌ನ ಎನ್.ಐಶ್ವರ್ಯ ನಗರದ ಡಾ.ಕೆ.ಎಸ್.ಶರ್ಮಾ ಸಭಾಗೃಹದಲ್ಲಿ ನಡೆದಿರುವ ಸಂಜಯ್ ಪೈ ಸ್ಮಾರಕ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಕ್ರಮವಾಗಿ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ ಚಾಂಪಿಯನ್ ಪಟ್ಟ ಅಲಂಕರಿಸಿದರು.ಹುಬ್ಬಳ್ಳಿ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಮಹಾರಾಷ್ಟ್ರ ಮಂಡಲ ಜಂಟಿಯಾಗಿ ಸಂಘಟಿಸಿರುವ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ರಕ್ಷಿತ್ 11-8, 10-12, 11-6, 11-7ರಿಂದ ಹೊರೈಜಾನ್ ಕ್ಲಬ್‌ನ ಸುಚೇತ್ ಶೆಣೈ ವಿರುದ್ಧ ಜಯಭೇರಿ ಬಾರಿಸಿದರು.ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಆರನೇ ತರಗತಿ ಓದುತ್ತಿರುವ ರಕ್ಷಿತ್ ಪಾಲಿಗೆ ಸಬ್ ಜೂನಿಯರ್ ವಿಭಾಗದಲ್ಲಿ ಒಲಿದ ಮೊದಲ ಪ್ರಶಸ್ತಿ ಇದು.ಸೆಮಿ ಫೈನಲ್‌ನಲ್ಲಿ ರಕ್ಷಿತ್ 10-12, 6-11, 11-6, 11-9, 11-9ರಿಂದ ಸ್ಟಾರ್ ಕ್ಲಬ್‌ನ ಶ್ರೇಯಸ್ ಹರ್ಲೆ ಅವರನ್ನು ಪರಾಭವಗೊಳಿಸಿದರು.

ಮೊದಲ ಎರಡು ಗೇಮ್‌ಗಳಲ್ಲಿ ಸೋತರೂ ದೃತಿಗೆಡದೆ ಆಡಿದ `ಹುಬ್ಬಳ್ಳಿ ಹುಡುಗ~ ಮುಂದಿನ ಮೂರು ಗೇಮ್‌ಗಳನ್ನು ಸತತವಾಗಿ ಜಯಿಸುವ ಮೂಲಕ ಗೆಲುವಿನ ನಗೆ ಚೆಲ್ಲಿದರು. ಇನ್ನೊಂದು ಸೆಮಿ ಫೈನಲ್‌ನಲ್ಲಿ ಸುಚೇತ್ 11-7, 11-7, 11-8ರಿಂದ ತಮ್ಮದೇ ಕ್ಲಬ್‌ನ ಜಿ.ಎಸ್. ಸಂಕೇತ್ ವಿರುದ್ಧ ಜಯ ಸಾಧಿಸಿದರು.ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಐಶ್ವರ್ಯ 11-3, 11-6, 11-6ರಿಂದ ಒಎಂಟಿಟಿಯ ಪ್ರಿಯಾ ರಾವ್ ವಿರುದ್ಧ ಸುಲಭವಾಗಿ ಗೆಲುವು ಪಡೆದರು. ಸೆಮಿಫೈನಲ್‌ಗಳಲ್ಲಿ ಐಶ್ವರ್ಯ 12-10, 11-9, 14-12ರಿಂದ ಬಿಎನ್‌ಎಂನ ದಿಶಾ ಗುಪ್ತಾ ಮೇಲೂ; ಪ್ರಿಯಾ 16-14, 11-6, 13-11ರಿಂದ ಸ್ಟಾರ್ ಕ್ಲಬ್‌ನ ಅಂಜನಾ ಎಸ್. ವಿರುದ್ಧವೂ ಜಯಭೇರಿ ಬಾರಿಸಿದರು.ಪ್ರಶಸ್ತಿ ಗೆಲ್ಲದವರ ವಿಭಾಗದ ಫೈನಲ್‌ನಲ್ಲಿ ಹೊರೈಜಾನ್ ಕ್ಲಬ್‌ನ ರಾಹುಲ್ ಎಸ್. 8-11, 11-8, 11-5, 114ರಿಂದ ಗುಲ್ಬರ್ಗದ ಮಂಜುನಾಥ್ ರಾಠೋಡ್ ವಿರುದ್ಧ ಜಯಿಸಿದರು. ಸೆಮಿಫೈನಲ್‌ಗಳಲ್ಲಿ ಮಂಜುನಾಥ್ 11-6, 7-11, 14-12, 13-11ರಿಂದ ದಿನಕರ ನಾಯ್ಡು ಅವರನ್ನು; ರಾಹುಲ್ 11-9, 9-11, 6-11, 13-11, 11-4ರಿಂದ ಜೆಟಿಟಿಎಯ ರಕ್ಷಿತ್ ಅವರನ್ನು ಸೋಲಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry