ಶನಿವಾರ, ನವೆಂಬರ್ 23, 2019
18 °C

ರಘು ಆಚಾರ್‌ಗೆ ಟಿಕೆಟ್ ನೀಡಲು ಒತ್ತಾಯ

Published:
Updated:

ಮೈಸೂರು: ವಿಶ್ವಕರ್ಮ ಜನಾಂಗಕ್ಕೆ ಸೇರಿದ ಯುವ ಮುಖಂಡ ಜಿ.ರಘು ಆಚಾರ್ ಅವರಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಮೈಸೂರು ಜಿಲ್ಲಾ ವಿಶ್ವಕರ್ಮ ಮಹಾಮಂಡಳ ನಗರದ ಸಯ್ಯಾಜಿರಾವ್ ರಸ್ತೆಯ ಪಕ್ಷದ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿತು.ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚು ವಿಶ್ವಕರ್ಮ ಜನಾಂಗದವರು ಇದ್ದಾರೆ. ಮೈಸೂರು ಜಿಲ್ಲೆಯ ಅವಿಭಾಜಿತ 16 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ 1.76 ಲಕ್ಷಕ್ಕೂ ಹೆಚ್ಚು ಮಂದಿ ಮತದಾರರು ಇದ್ದಾರೆ. ವಿವಿಧ ಕಾರ್ಯಕ್ರಮ, ಸಭೆ-ಸಮಾರಂಭಗಳನ್ನು ನಡೆಸುವ ಮೂಲಕ ವಿಶ್ವಕರ್ಮ ಜನಾಂಗವನ್ನು ರಾಜ್ಯದಲ್ಲಿ ಸಂಘಟಿಸಲಾಗಿದೆ.ಚುನಾವಣೆಗೂ ಮುನ್ನವೇ ವಿಶ್ವಕರ್ಮ ಜನಾಂಗಕ್ಕೆ ಸೇರಿದವರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್‌ಗೆ ಒತ್ತಾಯಿಸಲಾಯಿತು. ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಾದರೂ ವಿಶ್ವಕರ್ಮ ಜನಾಂಗಕ್ಕೆ ಟಿಕೆಟ್ ಲಭಿಸುತ್ತದೆಂಬ ನಿರೀಕ್ಷೆ ಜನಾಂಗಕ್ಕೆ ಇತ್ತು. ಆದರೆ ಕಾಂಗ್ರೆಸ್ ಕೊನೆ ಹಂತದಲ್ಲಿ ಜನಾಂಗಕ್ಕೆ ಟಿಕೆಟ್ ನಿರಾಕರಿಸಿದೆ. ಇದರಿಂದ ರಾಜಕೀಯವಾಗಿ ಹಿಂದುಳಿದ ವಿಶ್ವಕರ್ಮ ಜನಾಂಗವನ್ನು ಕಡೆಗಣಿಸಿದೆ.ರಘು ಆಚಾರ್ ಅವರಿಗೆ ಟಿಕೆಟ್ ನೀಡದಿದ್ದ ಪಕ್ಷದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ವಿಶ್ವಕರ್ಮ ಜನಾಂಗದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಕಾಂಗ್ರೆಸ್ ಸೋಲಿಸಲು ಪಣ ತೊಡಲಾಗುವುದು. ಎಲ್ಲ ಕ್ಷೇತ್ರಗಳಲ್ಲಿ ಟಿಕೆಟ್ ನೀಡದಿದ್ದರೂ ಕೆ.ಆರ್.ಕ್ಷೇತ್ರದಲ್ಲಾದರೂ ರಘು ಅವರಿಗೆ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ಪರಿಣಾಮವನ್ನು ಪಕ್ಷ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಮಹಾಮಂಡಲ ಜಿಲ್ಲಾಧ್ಯಕ್ಷ ಸಿ.ಟಿ.ಆಚಾರ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹುಚ್ಚಪ್ಪಾಚಾರ್, ಗೌರವ ಅಧ್ಯಕ್ಷ ಆರ್.ಜಯಕುಮಾರ್, ಕೋಟೆ ರಾಜು, ವಕೀಲ ಟಿ.ನಾಗರಾಜ್, ತಂಬಾಕು ಮಂಡಳಿ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಾಣೇಶ್, ಸಂಚಾಲಕ ಗೋಪಾಲಾಚಾರ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)