ರಜೆ: ಕೃಷಿ ಕಾಯಕದಲ್ಲಿ ಗ್ರಾಮೀಣ ವಿದ್ಯಾರ್ಥಿ

7

ರಜೆ: ಕೃಷಿ ಕಾಯಕದಲ್ಲಿ ಗ್ರಾಮೀಣ ವಿದ್ಯಾರ್ಥಿ

Published:
Updated:

ಶ್ರೀನಿವಾಸಪುರ: ಈಗ ಶಾಲೆಗಳಿಗೆ ದಸರಾ ರಜೆ. ಮಕ್ಕಳು ಶಾಲೆಯ ಶಿಸ್ತು ಮತ್ತು ಕಲಿಕೆಯ ಹೊರೆಯಿಂದ ಮುಕ್ತವಾಗಿ ಒಂದಷ್ಟು ಕಾಲ ಮನೆಯಲ್ಲಿ ನಿರಾಳವಾಗಿ ಕಾಲ ಕಳೆಯುವ ಸಮಯ.  ಆದರೆ ಫಲಿತಾಂಶದಾಹಿ ಶಿಕ್ಷಣ ವ್ಯವಸ್ಥೆ ಮಕ್ಕಳು ರಜೆಯ ಮಜ ಸವಿಯಲು ಬಿಡುತ್ತಿಲ್ಲ. ರಜೆ ಘೊಷಿಸುವ ಮುನ್ನ ಪ್ರತಿ ವಿಷಯದ ಶಿಕ್ಷಕರೂ ಹೋಂವರ್ಕ ಕೊಡುವುದು ಸಾಮಾನ್ಯ. ಮಕ್ಕಳು ರಜಾ ಅವಧಿಯ ಹೆಚ್ಚು ಸಮಯವನ್ನು ಹೋಂ ವರ್ಕ ಮಾಡುವುದರಲ್ಲಿಯೇ ಕಳೆಯುತ್ತಾರೆ.ರಜೆ ಕಳೆಯುವುದರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ವ್ಯತ್ಯಾಸವಿದೆ. ನಗರ ಅಥವಾ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳು ರಜೆ ಬಂದರೆ ಕಂಪ್ಯೂಟರ್ ಕಲಿಯುತ್ತಾರೆ, ಸ್ಪೋಕನ್ ಇಂಗ್ಲಿಷ್ ತರಗತಿಗಳಿಗೆ ಹೋಗುತ್ತಾರೆ.

ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಬೇರೆ ಬೇರೆ ಶಿಬಿರಗಳು ಕೈಬೀಸಿ ಕರೆಯುತ್ತವೆ. ಕೆಲವರು ಬೇರೆಡೆಗೆ ಪ್ರವಾಸ ಹೋಗುವುದುಂಟು. ವೀಡಿಯೋ ಗೇಮ್ಸ ಆಡುತ್ತ, ಟಿವಿ ನೋಡುತ್ತ ಕಾಲ ಕಳೆಯುವ ವಿದ್ಯಾರ್ಥಿಗಳಿಗೂ ಕೊರತೆಯಿಲ್ಲ.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕತೆಯೇ ಬೇರೆ. ರಜೆ ಬಂದರೆ ಕೆಲಸದ ಹೊರೆ ಅವರ ಹೆಗಲಿಗೆ ಬೀಳುತ್ತದೆ. ದಸರಾ ರಜಾ ಕಾಲದಲ್ಲಿ ಕೃಷಿ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಹಿರಿಯರೊಂದಿಗೆ ಹೋಗಿ ಕೃಷಿ ಕ್ಷೇತ್ರದಲ್ಲಿ ದುಡಿಯಬೇಕಾಗುತ್ತದೆ. ಕೃಷಿ ಕೂಲಿಕಾರರ ಸಮಸ್ಯೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ರಜೆ ಬಂದಾಗ ಪೋಷಕರು ತಮ್ಮ ಮಕ್ಕಳನ್ನು ಕೃಷಿ ಕೆಲಸಕ್ಕೆ ಹಚ್ಚುವುದು ಸಾಮಾನ್ಯವಾಗಿದೆ.ಬಾಲಕಿಯರು ಬೆಳಿಗ್ಗೆ ಹುಲ್ಲಿಗೆ ಹೋಗುತ್ತಾರೆ. ಬಾಲಕರು ಸೌದೆಗೆ ಹೋಗುತ್ತಾರೆ. ಹೊರೆಗಳನ್ನು ಹೊತ್ತು ತಂದು ಮನೆಯ ಸಮೀಪ ಹಾಕಿದ ಮೇಲೆಯೇ ಊಟ. ಊಟವಾದ ಬಳಿಕ ಸುಮ್ಮನೆ ಕೂರುವಂತಿಲ್ಲ. ಹಿರಿಯರು ಈ ಹುಡುಗರನ್ನು ದನ ಕಾಯಲು ಕಳುಹಿಸಿ ತಾವು ಕೃಷಿ ಚಟುವಟಿಕೆಯಲ್ಲಿ ನಿರತರಾಗುತ್ತಾರೆ.

ಕೆಲವು ಬಾಲಕರು ಸಂಜೆ ಮನೆಗೆ ಬರುವಾಗ ಒಂದು ಮಕ್ಕರಿ ಸಗಣಿ ತಂದು ತಿಪ್ಪೆಗೆ ಹಾಕುತ್ತಾರೆ. ಹಸುಗಳಿಂದ ಹಾಲು ಕರೆಯುವ, ಅದನ್ನು ಡೈರಿಗಳಿಗೆ ಹಾಕುವ, ರೇಷ್ಟೆ ಹುಳುಗಳಿಗೆ ಸೊಪ್ಪು ತರುವ ಕಾಯಕದಲ್ಲೂ ಇವರು ತೊಡಗಿದ್ದಾರೆ. ಕರೆ ಕುಂಟೆಗಳಲ್ಲಿ ನೀರಿದ್ದರೆ ಕೆಲವು ಹಿರಿಯ ವಿದ್ಯಾರ್ಥಿಗಳು ಗಾಳ ಹಾಕಿ ಮೀನು ಹಿಡಿಯುವುದೂ ಉಂಟು.ಗ್ರಾಮೀಣ ವಿದ್ಯಾರ್ಥಿಗಳಿಗೆ ಮನರಂಜನೆ ಗಗನ ಕುಸುಮ. ವಿದ್ಯುತ್ ಅಭಾವದಿಂದ ಕನಿಷ್ಠ ಟಿವಿ ನೋಡಲೂ ಸಾಧ್ಯವಾಗುವುದಿಲ್ಲ. ಆರ್ಥಿಕ ತೊಂದರೆಯಿಂದ ಪ್ರವಾಸ, ಶಿಬಿರ ಇತ್ಯಾದಿ ಕನಸಿನ ಮಾತು. ದುಡಿದು ಮನೆಗೆ ಬರುವ ಮಕ್ಕಳು ರಾತ್ರಿ ಊಟ ಮಾಡಿ ಉಸ್ಸಪ್ಪ ಎಂದು ಮಲಗುತ್ತಾರೆ.ದುಡಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಮಾನ್ಯ. ಶಾಲೆ ಇರುವಾಗಲೂ ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ ಹುಲ್ಲು ಅಥವಾ ಸೌದೆ ತರುವುದು ಹಿಂದಿನಿಂದಲೂ ನಡೆದು ಬಂದಿದೆ. ದುಡಿಯುತ್ತ ಕಲಿಯಬೇಕಾದ ಅನಿವಾರ್ಯತೆಗೆ ಗ್ರಾಮೀಣ ವಿದ್ಯಾರ್ಥಿಗಳು ಒಳಗಾಗಿದ್ದಾರೆ.

ಇದು ಗ್ರಾಮೀಣ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಲು ಅಥವಾ ನಿಧಾನ ಕಲಿಕೆಗೆ ಕಾರಣವಾಗಿದೆ.ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಆದರೆ ಗುಣಾತ್ಮಕ ಫಲಿತಾಂಶದ ವಿಷಯ ಬಂದಾಗ ನಗರ ಪ್ರದೇಶದ ಮಕ್ಕಳನ್ನು ಮೀರಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತನ್ನು ಅಲ್ಲಗಳೆಯಲಾಗದು.

- ಆರ್.ಚೌಡರೆಡ್ಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry