ರಜೆ ಬಂತು ರಜೆ...

7

ರಜೆ ಬಂತು ರಜೆ...

Published:
Updated:

ಅಷ್ಟಮಿ, ಚೌತಿ ಹಬ್ಬಗಳು ಮುಗಿದ ಬೆನ್ನಿಗೆ ಬಂದಿದೆ ದಸರಾ. ಇನ್ನೇನು ವಾರ ಕಳೆದರೆ ಮಂಗಳೂರೆಂಬ ಮಹಾನಗರದ ಕಳೆಯೇ ಬದಲಾಗಲಿದೆ. ಸುಮಾರು 2 ಕಿ.ಮೀ.ಗೂ ಅಧಿಕ ಉದ್ದಕ್ಕೆ ಚಾಚಿರುವ ನಗರದ ಮಹಾತ್ಮಾ ಗಾಂಧಿ ಮಾರ್ಗದ ಇಕ್ಕೆಲಗಳಲ್ಲೂ ವಿದ್ಯುದಲಂಕಾರಕ್ಕೆ ಭರದ ಸಿದ್ಧತೆ ನಡೆದಿದೆ. ಬೆಲೆ ಏರಿಕೆ, ಬಂದ್‌ಗಳ ಬಿಸಿಯ ನಡುವೆಯೂ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ದಸರಾ ರಜೆಗೆ ಸಜ್ಜಾಗಿದ್ದಾರೆ.....ಬೇಸಿಗೆ ರಜೆಗೆ ಹೋಲಿಸಿದರೆ ಮಕ್ಕಳ ಪಾಲಿಗೆ ದಸರಾ ರಜೆ ತುಂಬಾ ವಿಭಿನ್ನ. ಈ ರಜೆಯ ಅವಧಿ ಕಡಿಮೆಯಾದರೂ ಜಾಗರದಲ್ಲಿ ಮೂಡುವ ಹೊಂಗನಿಸಿನ ರೀತಿ ಈ ರಜೆ ಕಳೆದು ಹೋಗುತ್ತದೆ. ಈ ರಜೆಯ ಅವಧಿಯಲ್ಲೇ ತುಳುವರು ಆಚರಿಸುವ `ಕುರಲ್ ಪರ್ಬ~, ನವರಾತ್ರಿ, ದಸರಾ ಮೊದಲಾದ ವರ್ಣರಂಜಿತ ಹಬ್ಬಗಳು ಬರುವುದೂ ಇದಕ್ಕೆ ಕಾರಣವಿರಬಹುದು. ಮೂರು ತಿಂಗಳು ಎಡೆಬಿಡದೆ ಸುರಿಯುವ ಧಾರಾಕಾರ ಮಳೆಯ ಅಬ್ಬರ ತುಸು ಕಡಿಮೆಯಾಗುವುದು ಈ ರಜೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸುತ್ತದೆ.ಆದರೆ, ಅದೇಕೋ ಏನೋ ಒಂದೆರಡು ದಶಕದ ಹಿಂದೆ ವಿದ್ಯಾರ್ಥಿಗಳು ರಜೆಯ ಬಗ್ಗೆ ಹೊಂದಿದ್ದ ಕುತೂಹಲ, ಖುಷಿ ಈಗಿನ ಮಕ್ಕಳಲ್ಲಿ ಉಳಿದಿಲ್ಲ. ವಿದ್ಯುನ್ಮಾನ ಮಾಧ್ಯಮಗಳು, ಶಾಲೆಯಲ್ಲಿ ಕಲಿಕೆಯ ಒತ್ತಡ, ಅರ್ಥಕಳೆದುಕೊಳ್ಳುತ್ತಿರುವ ಸಂಬಂಧಗಳು, ಪೇಟೆಯ ಅಪಾರ್ಟ್‌ಮೆಂಟ್‌ಗಳ ಹತ್ತಾರು ಮನೆಗಳ ನಡುವೆ ನಡುವೆಯೂ `ಏಕಾಂಗಿ~ಯಾಗಿಬಿಟ್ಟಿರುವ `ಮೈಕ್ರೊ ಕುಟುಂಬ~ಗಳೂ ಇವೆಲ್ಲವೂ ಇದಕ್ಕೆ ಕಾರಣವಿರಬಹುದು. ರಜೆ ಬಂದರೂ ಅರಳದ ಪೇಟೆಯ ಎಳೆಯರ ಮುಖಗಳನ್ನು ಗಮನಿಸಿದರೆ ಮಕ್ಕಳು ಸೃಜನಶೀಲವಾಗಿ ಯೋಚಿಸುವುದನ್ನೇ ಕಳೆದುಕೊಂಡು ಬಿಟ್ಟಿವೆಯೋ ಏನೋ ಎಂಬಂತೆ ಭಾಸವಾಗುತ್ತದೆ.ಹಳ್ಳಿಯಲ್ಲಿ ಬೆಳೆದು ಬಂದವರ ಪಾಲಿಗೆ ದಸರ ರಜೆ ಎಂಬುದು ಅಚ್ಚರಿಗಳ ಪ್ರಪಂಚ. ಚೌತಿಯ ಬಳಿಕ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಳೆಗಾಲದಲ್ಲಿ ತುಂಬಿ ಹರಿದ ಹಳ್ಳಕೊಳ್ಳಗಳು ಬತ್ತಿರುತ್ತವೆ. ಪುಟ್ಟ ಹಳ್ಳಗಳ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಸೇರಿಕೊಂಡ ಮೀನುಗಳನ್ನು ಹಿಡಿಯುವುದು ಮಕ್ಕಳ ಪಾಲಿಗೆ ಅಮಿತಾನಂದ ನೀಡುವ ಕ್ರಿಯೆ. ಮೀನನ್ನು ಹಿಡಿದು ಬಾವಿಗೆ ಹಾಕಿ ಬಳಿಕ ಅವುಗಳ ಬೆಳವಣಿಗೆ ಚಲನವಲನ ಗಮನಿಸುವ ಪ್ರಕ್ರಿಯೆ ಮಗುವಿನ ಬದುಕಿನಲ್ಲಿ ಹುಟ್ಟಿಸುವ ಜೀವನ ಪ್ರೀತಿಯನ್ನು ಅಳೆಯುವುದು ಸಾಧ್ಯವಿಲ್ಲ.ದಸರಾ ಸಮೀಪಿಸುವ ವೇಳೆಗಾಗಲೇ ಹಳ್ಳಿಯ ಅಷ್ಟೂ ಗದ್ದೆಗಳು ಹಚ್ಚಹಸುರಿನ ಹೊದಿಕೆಯನ್ನು ಕಳಚಿ ಹೊಂಬಣ್ಣದ ಭತ್ತದ ತೆನೆ ಧರಿಸಿ ಬಾಗಲು ಆರಂಭಿಸಿರುತ್ತವೆ. ಬತ್ತದ ಪೈರು ಕಟಾವಾಗಿ ಮನೆ ಸೇರುವಾಗಿನ ಸಂಭ್ರಮವೇ ಬೇರೆ. ಗದ್ದೆಗಳು ಕಟಾವಾಗುತ್ತಿದ್ದಂತೆಯೇ ಅವು ಆಟದ ಬಯಲುಗಳಾಗುತ್ತವೆ.ಅಲ್ಲಿ ಬಳಿಕ, ಕ್ರಿಕೆಟ್, ಚಿನ್ನದಾಂಡು, ಲಗೋರಿ ಮುಂತಾದ ಕ್ರೀಡೆಗಳದೇ ಕಾರುಬಾರು. ಕೊತ್ತಲಿಗೆಯ ಬ್ಯಾಟು, ಪ್ಲಾಸ್ಟಿಕ್ ತೊಟ್ಟೆಗಳನ್ನು ಒಳಗೊಳಗೆ ಸೇರಿಸಿ ಬಾಳೆದಿಂಡಿನ ದಾರದಿಂದ ಬಿಗಿದು ನಿರ್ಮಿಸುವ ಚೆಂಡುಗಳು ಮಕ್ಕಳ ಸೃಜನಶೀಲ ಕೌಶಲಗಳನ್ನು ಇನ್ನಷ್ಟು ಪಕ್ವಗೊಳಿಸುತ್ತವೆ. ಆಡುವ ಅವಕಾಶ ಸಿಗುವುದಿದ್ದರೆ ಹಳ್ಳಿಯ ಮಕ್ಕಳು ಎಂತಹ ಸಾಹಸ ಮಾಡುವುದಕ್ಕೂ ಹಿಂದೇಟು ಹಾಕುವುದಿಲ್ಲ. ಕ್ರೀಡೆಯ ಬಗ್ಗೆ ಮಕ್ಕಳಿಗಿರುವ ಈ ಅಮಿತೋತ್ಸಾಹದ ಭರದಲ್ಲೇ ಕೃಷಿಕರು ಸಣ್ಣ ಪುಟ್ಟ ಕೃಷಿ ಕಾರ್ಯಗಳನ್ನು ಮಕ್ಕಳ ನೆರವಿನಿಂದ ಸಲೀಸಾಗಿ ಮಾಡಿ ಮುಗಿಸುತ್ತಾರೆ. ಇನ್ನು ಗಾಳಿಪಟ ರಚಿಸುವ ಹಾಗೂ ಅದನ್ನು ಬಾನೆತ್ತರ ಹಾರಿಸುವ ಚಟುವಟಿಕೆಯಂತೂ ಮಕ್ಕಳಲ್ಲಿ ನಿರ್ವಹಣಾ ಕೌಶಲಗಳನ್ನು ಕಲಿಸುತ್ತವೆ.ಆದರೆ ಪೇಟೆಯ ವಾತಾವರಣ ಇದಕ್ಕೆ ತದ್ವಿರುದ್ಧ. ಇಲ್ಲಿ ಮನೆಯ ಮಗು ಪಕ್ಕದ ಅಪಾರ್ಟ್‌ಮೆಂಟ್‌ನ ಮಕ್ಕಳ ಜತೆ ಬೆರೆಯುವುದಕ್ಕೂ ಅವಕಾಶವಿಲ್ಲ. ಶಾಲಾ ವಾಹನ ಮನೆ ಬಾಗಿಲಿಗೆ ಬಂದು ಶಾಲೆಗೆ ಕರೆದೊಯ್ಯುವುದರಿಂದ ಬೆಳೆಯುವ ಗೆಳೆತನಕ್ಕೂ ಕತ್ತರಿ. ವ್ಯಾನಿನಲ್ಲಿ, ಹಾಗೂ ಶಾಲೆಯಲ್ಲಿ ಸಿಗುವ ಸಹಪಾಠಿಗಳಷ್ಟೇ ಮಕ್ಕಳ ಗೆಳೆಯರು. ಇನ್ನು ಮಂಗಳೂರು ನಗರದಲ್ಲಿ ಮಕ್ಕಳು ಆಡುವುದಕ್ಕೆ ಸೂಕ್ತ ಕ್ರೀಡಾಂಗಣಗಳೇ ಇಲ್ಲ. ಶಾಲೆಗಳೂ ಈ ನ್ಯೂನತೆಯಿಂದ ಹೊರತಾಗಿಲ್ಲ. ಹಾಗಾಗಿ ಮನರಂಜನೆಯೇನಿದ್ದರೂ ವಿದ್ಯುನ್ಮಾನ ಮಾಧ್ಯಮಗಳಿಂದಲೇ ಬರಬೇಕು. ಅದು ಟಿ.ವಿ.ಯ ಕಾರ್ಟೂನು ಇರಬಹುದು ಅಥವಾ ವಿಡಿಯೋ ಗೇಂ ಇರಬಹುದು.ಎರಡೂ ಪ್ರಕಾರಗಳಲ್ಲೂ ಮಕ್ಕಳಿಗೆ ಬಯಲಿನಲ್ಲಿ ಕೇಕೆ ಹಾಕುತ್ತಾ ಆಟದ ಮಜಾ ಪಡೆಯುವ ಅವಕಾಶವಿಲ್ಲ. ನಾಲ್ಕುಗೋಡೆಗಳ ನಡುವೆ ಬಂಧಿಯಾಗಿ ಮನವನ್ನು ಅರಳಿಸುವ ಬದಲು ಕೆರಳಿಸುವ ಕ್ರೀಡೆಗಳವು. ಅದರಲ್ಲೂ ಮಕ್ಕಳು ಇಷ್ಟಪಡುವ ವಿಡಿಯೋ ಗೇಂಗಳಲ್ಲಿ ಬಹುತೇಕ ಹಿಂಸಾ ಪ್ರಧಾನವಾದುವುಗಳು.ಅಜ್ಜಿಮನೆ ನೆನಪು ಉಳಿದಿಲ್ಲ: ಅಜ್ಜಿಮನೆಗೆ ಅಥವಾ ಮಾನವ ಮನೆಗೆ ತೆರಳಿ ರಜೆ ಕಳೆಯುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಇತ್ತಿಚೆಗೆ ಈ ಪರಿಪಾಠವೂ ಕಡಿಮೆಯಾಗುತ್ತಿದೆ.  ಅದರ ಬದಲು ಪೇಟೆಗಳಲ್ಲಿ ಅಜ್ಜಿ ಮನೆ ಹೆಸರಿನ ಶಿಬಿರಗಳು ಹುಟ್ಟಿಕೊಂಡಿವೆ. ಕೆಲವು ಶಿಬಿರಗಳಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ ಪ್ರಯತ್ನನಡೆಯುತ್ತಿರುವುದು ಸುಳ್ಳಲ್ಲ. ಆದರೆ, ಬಹುತೇಕ ಶಿಬಿರಗಳಲ್ಲಿ ಮಕ್ಕಳ ಎಳೆಯ ಮನದಲ್ಲಿ ಇನ್ನಿಲ್ಲದ ಕೌಶಲಗಳನ್ನು ತುಂಬಲು ಯತ್ನಿಸಲಾಗುತ್ತಿದೆ. ಇವು ಯಾವುದೇ ಒತ್ತಡಗಳಿಲ್ಲದೆ ಒಂದಷ್ಟು ದಿನಗಳನ್ನು ಕಳೆಯಲು ಮಕ್ಕಳಿಗೆ ಅವಕಾಶ ಕಲ್ಪಿಸಬೇಕಾದ ರಜೆಯನ್ನು ಸಜೆಯನ್ನಾಗಿ ಪರಿವರ್ತಿಸುತ್ತಿವೆ. ಈ ಶಿಬಿರಗಳ ಹಿಂದಿನ ಇನ್ನೊಮದು ಕಹಿ ಸತ್ಯವೆಂದರೆ, ಬಹುಪಾಲು ಪೋಷಕರು ಮಕ್ಕಳ ಕಿರಿಕಿರಿ ಸಹಿಸಲಾಗದೆ ಅವರನ್ನು ಶಿಬಿರಗಳಿಗೆ ಅಟ್ಟುತ್ತಿರುವುದು.   ಮರೆತು ಹೋದ ಪುಸ್ತಕ: ಹಿಂದೆ ಪ್ರೌಢಾವಸ್ಥೆಯ ಸಂಕ್ರಮಣ ಕಾಲದಲ್ಲಿರುವ ಮಕ್ಕಳು ಪುಸ್ತಕ ಓದಲು ದಸರಾ ರಜೆಯನ್ನು ಬಳಸಿಕೊಳ್ಳುತ್ತಿದ್ದರು. ಚಂದಮಾಮ, ಪಂಚತಂತ್ರ ಕಥೆಗಳು ಮೊದಲಾದ ಕಥಾ ಪುಸ್ತಕಗಳ ಎಳೆಯರ ಕಲ್ಪನಾ ಲೋಕದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತಾರಗೊಳಿಸುತಿದ್ದವು. ಪುಸ್ತಕಗಳಲ್ಲಿನ ವಿವರಣೆಗಳು ಪ್ರತಿ ಮಗುವಿನ ಮನಸ್ಸಿನಲ್ಲೂ ಕಲ್ಪನಾ ಲೋಕವೊಂದನ್ನು ಸೃಷ್ಟಿಸುತ್ತಿತ್ತು. ಈಗ ಪುಸ್ತಕದ ಜಾಗವನ್ನು ಟಿ.ವಿ ಆವರಿಸಿದೆ.

 

ಇಲ್ಲಿ ಕಲ್ಪನಾವಿಲಾಸಕ್ಕೆ ಅವಕಾಶ ಕಡಿಮೆ. ಟಿ.ವಿ. ಕಾರ್ಯಕ್ರಮ ಮಕ್ಕಳ ಮನಸ್ಸಿಗೆ ಒಂದಷ್ಟು ಖುಷಿ ಕೊಡಬಹುದಾದರೂ ಅವರ ಚಿಂತನಾ ಲಹರಿಯನ್ನು ಅದರಾಚೆಗೆ ವಿಸ್ತಿರಿಸುವ ಕೆಲಸವನ್ನು ಅದು ಮಾಡುವುದಿಲ್ಲ.

ಅದರಲ್ಲೂ ಮಂಗಳೂರಿನ ಮಕ್ಕಳು ಈ ರಜೆಯನ್ನು ಹೆಚ್ಚು ಇಷ್ಟಪಡಲು ಕಾರಣವಿದೆ. ಅತ್ಯಂತ ವೈಭೋವೋಪೇತವಾಗಿ ನಡೆಯುವ ದಸರಾ ಹಬ್ಬ ಈ ರಜೆಗೆ ವಿಶೇಷ ಕಳೆ ಒದಗಿಸುತ್ತದೆ. ಈ ದಸರಾ ಸಂದರ್ಭದಲ್ಲಿ ಕಳೆಗಟ್ಟುವ ಮಂಗಳೂರು ಮಕ್ಕಳ ಮನದಲ್ಲೂ ಒಂದಷ್ಟು ವರ್ಣರಂಜಿತ ಕನಸುಗಳನ್ನು ತುಂಬಬಲ್ಲುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry