ಗುರುವಾರ , ಜೂನ್ 24, 2021
22 °C
ಕಾರ್ಯಕರ್ತರ ಪಡೆ ಕಟ್ಟಿದ ‘ಆಪ್‌’

ರಜೆ ಹಾಕಿ ಪ್ರಚಾರಕ್ಕೆ ಸಜ್ಜಾದ ಎಂಜಿನಿಯರ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಮ್‌ ಆದ್ಮಿ ಪಕ್ಷ ಲೋಕಸಭಾ ಚುನಾವಣೆಗಾಗಿ ವಿಭಿನ್ನ ರೀತಿಯ ಪ್ರಚಾರಕ್ಕೆ ಸುಶಿಕ್ಷಿತರ ಪಡೆಯನ್ನು ಅಣಿಗೊಳಿಸಿದೆ.

ಪ್ರಚಾರಕ್ಕಾಗಿಯೇ 300ಕ್ಕೂ ಹೆಚ್ಚು ವೃತ್ತಿಪರ ಎಂಜಿನಿಯರ್‌ಗಳು ರಜೆ ಹಾಕಿ ದಿನನಿತ್ಯದ ಚಟುವಟಿಕೆ­ಗಳಲ್ಲಿ ಸಕ್ರಿಯವಾಗಿ ತೊಡಗಿಸಿ­ಕೊಂ­ಡಿ­­­ದ್ದಾರೆ. ಕೆಲವರು ದೆಹಲಿ ವಿಧಾನ­ಸಭೆ ಚುನಾವಣೆಗಿಂತ ಮುಂಚಿ­ನಿಂದಲೂ ರಜೆ ತೆಗೆದುಕೊಂಡಿದ್ದರು.  ಇನ್ನು ­ಕೆಲವರು 2–3 ತಿಂಗಳು ಕಾಲ ತಾತ್ಕಾಲಿಕ ರಜೆ ಪಡೆದಿದ್ದಾರೆ.ಬೆಂಗಳೂರು ನಗರದಲ್ಲಿ 15 ಸಾವಿರ ಕಾರ್ಯ­ಕರ್ತರು ನೋಂದಣಿ­ಯಾಗಿದ್ದಾರೆ. ಇವರಲ್ಲಿ 6000­ಕ್ಕೂ ಹೆಚ್ಚು ಮಂದಿ ಕೆಲಸದ ವೇಳೆಗೆ ಮುನ್ನ ಮತ್ತು ಮುಗಿದ ನಂತರ ಪಕ್ಷದ ಚಟು­ವಟಿ­ಕೆಗಳು ಮತ್ತು ಪ್ರಚಾರ ಕಾರ್ಯ­ದಲ್ಲಿ ತೊಡಗಿಸಿ­ಕೊಂಡಿ­ದ್ದಾರೆ. ಬಹು­ತೇಕ ಮಂದಿ ವಾರಾಂತ್ಯದ ದಿನ­ಗಳಲ್ಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿ­ಕೊಳ್ಳುತ್ತಿದ್ದಾರೆ.ಐಬಿಎಂ, ವಿಪ್ರೊ, ಇನ್ಫೊಸಿಸ್‌, ಬಯೋಕಾನ್‌ ಮುಂತಾದ ಪ್ರತಿಷ್ಠಿತ ಕಂಪೆನಿ­ಗಳಲ್ಲಿನ ಉದ್ಯೋಗಿಗಳು ಎಎಪಿ ಪ್ರಚಾರದಲ್ಲಿ ತೊಡಗಿಸಿ­ಕೊಂಡಿ­ದ್ದಾರೆ. ಜತೆಗೆ ವೈದ್ಯರು, ವ್ಯಾಪಾರಿ­ಗಳು, ಉದ್ದಿಮೆ­ದಾರರು, ಆಟೊ ಚಾಲಕರು, ಎಲೆಕ್ಟ್ರೀಷಿಯನ್‌­ಗಳು, ಗೃಹಿಣಿಯರು, ವಿದ್ಯಾರ್ಥಿ­ಗಳು,  ಸೇನೆಯ ನಿವೃತ್ತ ಯೋಧರು ಮತ್ತು ಅಧಿಕಾರಿಗಳು, ಬ್ಯಾಂಕ್‌ ನೌಕರರು, ಸಾಫ್ಟ್‌ವೇರ್‌ ಎಂಜಿನಿಯ­ರ್‌­­ಗಳು ಹೀಗೆ ಸಮಾಜದ ವಿವಿಧ ಕ್ಷೇತ್ರಗಳ ಜನರು ಪಕ್ಷದಲ್ಲಿದ್ದಾರೆ. 20 ಯುವಕರಿಂದ 75 ವರ್ಷಗಳ ವೃದ್ಧರವರೆಗೂ ಇದ್ದಾರೆ. ಎಲ್ಲ ಹಂತದ ದುಡಿಯುವ ವರ್ಗ ಪ್ರಚಾರ­ದಲ್ಲಿ ತೊಡಗಿಸಿಕೊಂಡಿದೆ  ಎಂದು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೃಥ್ವಿರೆಡ್ಡಿ ತಿಳಿಸಿದರು.‘ಪಕ್ಷದಲ್ಲಿ 100 ಮಂದಿ ಪೂರ್ಣಾವಧಿ ಕಾರ್ಯ­ಕರ್ತ­ರಿದ್ದಾರೆ.  ಎಲ್ಲ ಕ್ಷೇತ್ರಗಳಲ್ಲಿರುವವರು ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ಇವರೆಲ್ಲ ಸ್ವಂತ ದುಡ್ಡು ಹಾಕಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೊಟ್ಟೆ ತುಂಬಿದ­ವರೇ ಆಮ್‌ ಆದ್ಮಿ ಪಕ್ಷದಲ್ಲಿದ್ದಾರೆ ಎಂದು ನಮ್ಮನ್ನು ಟೀಕಿಸುವವರೂ ಇದ್ದಾರೆ. ಆದರೆ, ಬಡವರು ಪಕ್ಷದ ಕೆಲಸ ಮಾಡುವುದಾದರೆ ಅವರ ಹೊಟ್ಟೆ ತುಂಬು­ವುದು ಹೇಗೆ? ಮುಖ್ಯವಾಗಿ ಹೊಟ್ಟೆ ತುಂಬಿದ­ವರು ಇಂತಹ ಪಕ್ಷಕ್ಕೆ ಏಕೆ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು’ ಎಂದು ಅವರು ಹೇಳುತ್ತಾರೆ.‘ಬೆಂಗಳೂರಿನಲ್ಲಿ ಸಾಮಾಜಿಕ ತಾಣಗಳ ಮೂಲಕ ಮತ್ತು ಮನೆ–ಮನೆಗೆ ತೆರಳಿ ಪ್ರಚಾರ ಮಾಡುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಜಿಲ್ಲಾ ಕೇಂದ್ರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವೈಯಕ್ತಿಕವಾಗಿ ಮತದಾರರನ್ನು ಭೇಟಿಯಾಗುವ ಮೂಲಕ ಪ್ರಚಾರ ಕಾರ್ಯಕೈಗೊಳ್ಳುತ್ತೇವೆ’ ಎಂದು ವಿವರಿಸುತ್ತಾರೆ.*ಒಂದೂವರೆ ತಿಂಗಳಿನಿಂದ ರಜೆ ಹಾಕಿದ್ದೇನೆ. ಗೋವಿಂದರಾಜ ನಗರ­ದಲ್ಲಿ ಆಮ್‌ ಆದ್ಮಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ­ಕೊಂಡಿದ್ದೇನೆ.

–ಬಸವಂತ ಸಾಫ್ಟ್‌ವೇರ್ ಎಂಜಿನಿಯರ್‌

*ಶಿಫ್ಟ್‌ ಪ್ರಕಾರ ನಮ್ಮ ಕೆಲಸ. ಒಂದು ವೇಳೆ ಬೆಳಿಗ್ಗೆ 12ರಿಂದ 8ರವರೆಗೆ ಕೆಲಸದ ಅವಧಿ ಇದ್ದರೆ, ಬೆಳಿಗ್ಗೆ 11 ಗಂಟೆಯವರೆಗೂ ಪಕ್ಷದ ಕೆಲಸ ಮತ್ತು ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತೇನೆ. ಕೆಲಸ ಮುಗಿದ ನಂತರ ರಾತ್ರಿ 11 ಗಂಟೆಯ­ವರೆಗೂ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತೇವೆ.

– ಮಹಾಂತೇಶ್‌. ಸಾಫ್ಟ್‌ವೇರ್‌ ಎಂಜಿನಿಯರ್‌

*ನಾನು ಬಿಡುವಿನ ವೇಳೆಯಲ್ಲಿ ಪಕ್ಷದ ಕೆಲಸ ಮಾಡುತ್ತಿದ್ದೇನೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಪಕ್ಷದ ಚಟುವಟಿಕೆ­ಗಳಲ್ಲಿ ತೊಡಗಿಸಿಕೊಂಡಿರುತ್ತೇನೆ. ಜನಲೋಕಪಾಲ್‌ ಮಸೂದೆಗೆ ಆರಂಭವಾದ ಚಳವಳಿಯ­ಲ್ಲೂ ಪಾಲ್ಗೊಂಡಿದ್ದೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುವ ಧ್ಯೇಯ ಹೊಂದಿರುವ ಆಮ್‌ ಆದ್ಮಿ ಪಕ್ಷ ಜನಪರವಾಗಿ­ರು­ವುದರಿಂದ ಈ ಪಕ್ಷದ ಪರ ದುಡಿಯುತ್ತಿರುವೆ.

– ಶಿವಗಂಗಾ, ಸಾಫ್ಟ್‌ವೇರ್‌ ಎಂಜಿನಿಯರ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.