ರಟ್ಟೀಹಳ್ಳಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

7

ರಟ್ಟೀಹಳ್ಳಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Published:
Updated:

ರಟ್ಟೀಹಳ್ಳಿ: ತುಂಗಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಕಾರ್ಯಕರ್ತರು ಗುರು­ವಾರ ಕರೆ ನೀಡಿದ್ದ ರಟ್ಟೀಹಳ್ಳಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಬಂದ್‌ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸರ್ಕಾರಿ ಹಾಗೂ ಖಾಸಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಶಾಲಾ ಕಾಲೇಜು­ಗಳು ಎಂದಿನಂತೆ ಕಾರ್ಯನಿರ್ವಹಿ­ಸಿದರೂ ಬ್ಯಾಂಕ್‌­­ಗಳು ವ್ಯವಹಾರ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದವು.ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗ್ರಾಮ­ದಲ್ಲಿ ಪ್ರತಿಭಟನಾ   ರಾ್ಯಲಿ ಹಮ್ಮಿಕೊಳ್ಳುವ ಜೊತೆಗೆ ಗ್ರಾಮದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ‘ತುಂಗಾ ಮೇಲ್ದಂಡೆ ಯೋಜನೆಗಾಗಿ ರೈತರು ಭೂಮಿ ಕಳೆದುಕೊಂಡು ವರ್ಷಗಳೇ ಕಳೆದಿವೆ. ಸಮರ್ಪಕ ಪರಿಹಾರ ವಿತರಿಸುವಲ್ಲಿ ಅಧಿಕಾರಿಗಳು ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ ಕುರಿತು ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಂದ ಕೇವಲ ಭರವಸೆ ಹೊರತುಪಡಿಸಿ ರೈತರಿಗೆ ಬೇರೆನೂ ಸಿಕ್ಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ರೈತರಿಗೆ ನ್ಯಾಯಯುತವಾಗಿ ಬರಬೇಕಾದ ಪರಿಹಾರವನ್ನು ಕೇಳಿದರೆ ರೈತರು ಕಿರುಕುಳ ನೀಡುತ್ತಿದ್ದಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಕಿರುಕುಳ ಹೆಚ್ಚಾಗಿದ್ದರಿಂದ ಸಾಮೂಹಿಕ ರಜೆ ಮೇಲೆ ತೆರಳಿದ್ದಾರೆ’ ಎಂದು ಅಧಿಕಾರಿಗಳ ವಿರುದ್ಧ ಪಾಟೀಲ ಗುಡುಗಿದರು.‘ಈ ಕೂಡಲೇ ರೈತರಿಗೆ ದೊರಕಬೇಕಾದ ಸಮರ್ಪಕ ಪರಿಹಾರದ ಕುರಿತು ಅಧಿಕಾರಿಗಳಿಂದ ಲಿಖಿತ ಭರವಸೆ ದೊರೆಯಬೇಕು. ಇಲ್ಲದಿದ್ದರೆ ಪ್ರತಿ­ಭಟನೆಯನ್ನು ಯಾವುದೇ ಕಾರಣಕ್ಕೂ ಮೊಟಕು­ಗೊಳಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.   ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಶೇಷ ಭೂಸ್ವಾಧೀನಾಧಿಕಾರಿ ಇಸ್ಮಾಯಿಲ್ ಶಿರಹಟ್ಟಿ ಪ್ರತಿಭಟನಾಕಾರರೊಂದಿಗೆ ಸಂಧಾನಕ್ಕೆ ಮುಂದಾ­ದರು. ಮೇಲಧಿಕಾರಿಗಳೊಂದಿಗೆ ಚೆರ್ಚಿಸಿ ಪರಿ­ಹಾರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಇಸ್ಮಾ­ಯಿಲ್ ತಿಳಿಸಿದರು.ಇಸ್ಮಾಯಿಲ್‌ ಅವರ ಭರವಸೆಗೆ ಒಪ್ಪದ ರೈತರು ನಿರ್ದಿಷ್ಟ ಅವಧಿಯಲ್ಲಿ ಪರಿಹಾರ ನೀಡುವ ಕುರಿತು ಲಿಖಿತವಾಗಿ ಭರವಸೆ ನೀಡುವಂತೆ ಆಗ್ರಹಿಸಿದರು. ಅಲ್ಲದೇ ಪ್ರತಿಭಟನಾ ಸ್ಥಳಕ್ಕೆ ಯೋಜನೆಯ ಸಿಇಒ ಭೇಟಿ ನೀಡಿ ಭರವಸೆ ನೀಡುವವರೆಗೂ ಪ್ರತಿಭಟನೆ­ಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ರಸ್ತೆ ಮಧ್ಯೆ­ದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದರು.

ಸಂಜೆ ಯೋಜನೆಯ ಸಿಇಒ ಎ.ಎಸ್.ಪಾಟೀಲ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು. ರೈತರ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ರೈತರು ಕಚೇರಿಗೆ ಲಿಖಿತ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಸಿಇಒ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ­ಯಿಂದ ಹಿಂದೆ ಸರಿದರು.ರಾಜಶೇಖರ ದೂದೀಹಳ್ಳಿ, ಚಂದ್ರಶೇಖರಪ್ಪ ತುಮ್ಮಿನಕಟ್ಟಿ, ಹನುಮಂತಗೌಡ ಪಾಟೀಲ, ಕುಬೇ­ರಪ್ಪ ಕರಿಯಣ್ಣನವರ, ಗದಿಗೆಪ್ಪ ದಾನಮ್ಮನವರ, ಬೀರಪ್ಪ ಪೂಜಾರ, ಲೋಕಪ್ಪ ಹುಲ್ಲತ್ತಿ, ರಾಮನ­ಗೌಡ ಪಾಟೀಲ, ಮಲ್ಲನಗೌಡ ಸೊರಟೂರ, ಉಮೇಶ ಹೊಸಮನಿ, ಪ್ರದೀಪ ನಾಯಕ, ವೀರನ­ಗೌಡ ಪ್ಯಾಟಿಗೌಡ್ರ, ರಾಮನಗೌಡ ಮೂಲಿಮನಿ, ಶೇಖಪ್ಪ ಬಳಗಾವಿ, ಬಸವರಾಜ ಬಳಗಾವಿ, ಪರ­ಸಪ್ಪ ಪುಟ್ಟಕ್ಕಳವರ, ತಿಮ್ಮನಗೌಡ ಮಾಜಿಗೌಡ್ರ, ಅಶೋಕ ಗುಬ್ಬಿ, ಮಹಿಳಾ ಪದಾಧಿಕಾರಿಗಳು ಮತ್ತು ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳಾದ ಯತಿಚಂದ್ರನ್, ಎಂಜಿನಿಯರ ಎಸ್‌.ಟಿ.ಓಲೇಕಾರ, ಡಿವೈಎಸ್‌ಪಿ ಜಯಪ್ರಕಾಶ ಅಕ್ಕರಕಿ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry