ರಣಜಿಗೆ ಮೈದಾನ ಸಜ್ಜು; ಮುಕ್ತ ಪ್ರವೇಶ

7
ಡೆಲ್-ಕೆಎಸ್‌ಸಿಎ ಕ್ರಿಕೆಟ್ ಅಕಾಡೆಮಿ, ಅಂಗಣ 22ರಂದು ಉದ್ಘಾಟನೆ

ರಣಜಿಗೆ ಮೈದಾನ ಸಜ್ಜು; ಮುಕ್ತ ಪ್ರವೇಶ

Published:
Updated:

ಹುಬ್ಬಳ್ಳಿ: ಕರ್ನಾಟಕ ಹಾಗೂ ಹರಿಯಾಣ ತಂಡಗಳ ನಡುವೆ ನಡೆಯಲಿರುವ ಕುತೂಹಲಕಾರಿ ರಣಜಿ ಪಂದ್ಯಕ್ಕೆ ನಗರದ ರಾಜನಗರ ಕ್ರಿಕೆಟ್ ಮೈದಾನ ಸರ್ವ ಸಜ್ಜುಗೊಂಡಿದ್ದು ಪ್ರೇಕ್ಷಕರ ಅನುಕೂಲಕ್ಕಾಗಿ ಗ್ಯಾಲರಿ, ಪಾರ್ಕಿಂಗ್, ಆಹಾರ ಮಳಿಗೆ ಇತ್ಯಾದಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.


 

`ಇದೇ 22ರಂದು ಪಂದ್ಯ ಆರಂಭವಾಗುವ ಮುನ್ನ ಬೆಳಿಗ್ಗೆ 8.30ಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೈದಾನ ಹಾಗೂ ಪೆವಿಲಿಯನ್ ಉದ್ಘಾಟಿಸಲಿದ್ದು ಡೆಲ್-ಕೆಎಸ್‌ಸಿಎ ಕ್ರಿಕೆಟ್ ಅಕಾಡೆಮಿ ಚಟುವಟಿಕೆಗಳಿಗೆ ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಚಾಲನೆ ನೀಡುವರು' ಎಂದು ಕೆಎಸ್‌ಸಿಎ ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

 

`ಮೈದಾನಕ್ಕೆ ಒಟ್ಟು ನಾಲ್ಕು ಗೇಟ್‌ಗಳನ್ನು ನಿರ್ಮಿಸಲಾಗಿದೆ. ಪೆವಿಲಿಯನ್ ಹಿಂದೆ ಮುಖ್ಯ ಗೇಟ್ (ನಂ-1) ಇದ್ದು ಆಟಗಾರರು ಹಾಗೂ ವಿಶಿಷ್ಟ ಅತಿಥಿಗಳಿಗೆ ಈ ಗೇಟ್‌ಗಳ ಮೂಲಕ ಪ್ರವೇಶ ನೀಡಲಾಗುವುದು. ಇದರ ಸಮೀಪದಲ್ಲೇ ಎರಡನೇ ಗೇಟ್ ಇದ್ದು ಪತ್ರಕರ್ತರು ಇದರ ಮೂಲಕ ಪ್ರವೇಶ ಪಡೆಯಲಿದ್ದಾರೆ. ಮೂರು ಹಾಗೂ ನಾಲ್ಕನೇ ಗೇಟ್ ಪೆವಿಲಿಯನ್‌ನ ವಿರುದ್ಧ ದಿಕ್ಕಿನಲ್ಲಿದ್ದು ಕ್ರಮವಾಗಿ ಹಿರಿಯ ಆಟಗಾರರು ಹಾಗೂ ಸಾರ್ವಜನಿಕರು ಈ ಗೇಟ್‌ಗಳ ಮೂಲಕ ಪ್ರವೇಶಿಸಬಹುದಾಗಿದೆ' ಎಂದು ಅವರು ತಿಳಿಸಿದರು.

 

`ಗ್ಯಾಲರಿಯಲ್ಲಿ ವಿಶಿಷ್ಟ ಅತಿಥಿಗಳಿಗೆ ಪ್ರತ್ಯೇಕ ಸ್ಥಳವನ್ನು ಕಾಯ್ದಿರಿಸಲಾಗಿದೆ. ಕೇಂದ್ರೀಯ ವಿದ್ಯಾಲಯ ಹಾಗೂ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಮೈದಾನದ ಹೊರಗೆ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರಿಗೆ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗುವುದು' ಎಂದು ಸವಡಿ ಹೇಳಿದರು.

 

ಅಂಗವಿಕಲರಿಗೆ ಪ್ರತ್ಯೇಕ ಸೌಲಭ್ಯ

ವಲಯ ಸಂಚಾಲಕ ಬಾಬಾ ಬೂಸದ ಮಾತನಾಡಿ, ಪಂದ್ಯ ವೀಕ್ಷಣೆಗೆ ಬರುವ ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುವುದು, ಪೊಲೀಸರೊಂದಿಗೆ ಎನ್‌ಎಸ್‌ಎಸ್ ಕಾರ್ಯಕರ್ತರು ಕೂಡ ಸಾರ್ವಜನಿಕರಿಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು. `ಒಟ್ಟು ಹದಿನೈದು ಎಕರೆ ಪ್ರದೇಶದಲ್ಲಿ ಮೈದಾನ ತಲೆ ಎತ್ತಿದ್ದು 15 ಸಾವಿರ ಮಂದಿಗೆ ಕುಳಿತುಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದೆ. 

 

ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದ್ದು ಗ್ಯಾಲರಿಗಳ ಪೈಕಿ ಶೇಕಡಾ 70ಕ್ಕೂ ಅಧಿಕ ಭಾಗವನ್ನು ಸಾರ್ವಜನಿಕರಿಗಾಗಿ ಮೀಸಲಿಡಲಾಗಿದೆ. ಈ ಪಂದ್ಯ ನಿರೀಕ್ಷಿತ ಯಶಸ್ಸು ಕಂಡರೆ ಇಲ್ಲಿ ಇನ್ನೂ ಕೆಲವು ಪಂದ್ಯಗಳನ್ನು ಆಡಿಸಲು ಅವಕಾಶ ಸಿಗಲಿದೆ' ಎಂದು ಅವರು ಹೇಳಿದರು.

 

ಮಾಜಿ ಆಟಗಾರರಿಗೆ ಗೌರವ

`ಪಂದ್ಯದ ಮೊದಲ ದಿನ ಭೋಜನ ವಿರಾಮದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಮಾಜಿ ರಣಜಿ ಆಟಗಾರರಾದ ಸುನಿಲ್ ಜೋಶಿ, ಅವಿನಾಶ ವೈದ್ಯ, ರಾಜೇಶ ಕಾಮತ್, ಸುರೇಶ ಶಾನದಾಳ, ಆನಂದ ಕಟ್ಟಿ ಹಾಗೂ ಸೋಮಶೇಖರ ಶಿರಗುಪ್ಪಿ,  ಕ್ರಿಕೆಟ್‌ಗೆ ಉತ್ತಮ ಕಾಣಿಕೆ ನೀಡಿದ ಹಿರಿಯರನ್ನು ಸನ್ಮಾನಿಸಲಾಗುವುದು' ಎಂದು ಬೂಸದ ತಿಳಿಸಿದರು.

 

`ಉಭಯ ತಂಡಗಳ ಆಟಗಾರರು 20ರಂದು ರಾತ್ರಿ ನಗರಕ್ಕೆ ತಲುಪಲಿದ್ದು 21ರಂದು ಬೆಳಿಗ್ಗೆಯಿಂದ ನೆಟ್ಸ್‌ನಲ್ಲಿ ಅಭ್ಯಾಸ ಮಾಡಲಿದ್ದಾರೆ' ಎಂದು ಅವರು ಹೇಳಿದರು.

 

ಕೆಎಸ್‌ಸಿಎ ಧಾರವಾಡ ವಲಯ ಟೂರ್ನಮೆಂಟ್ ಸಮಿತಿ ಅಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರ, ಶಿವಾನಂದ ಗುಂಜಾಳ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry