ಮಂಗಳವಾರ, ಅಕ್ಟೋಬರ್ 22, 2019
21 °C

ರಣಜಿ ಕ್ರಿಕೆಟ್: ಮುಂಬೈ ಎದುರಾಳಿ ತಮಿಳುನಾಡು

Published:
Updated:

ಮುಂಬೈ (ಪಿಟಿಐ): ರಣಜಿ ಕ್ರಿಕೆಟ್‌ನಲ್ಲಿ 40ನೇ ಚಾಂಪಿಯನ್ ಆಗಬೇಕು ಎನ್ನುವ ಕನಸು ಹೊತ್ತಿರುವ ಮುಂಬೈ ತಂಡದವರು ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದ್ದಾರೆ.ಪ್ರಶಸ್ತಿ ಜಯಿಸುವ ಬಲಿಷ್ಠ ತಂಡ ಎನಿಸಿರುವ ಆತಿಥೇಯ ಮುಂಬೈ ತಂಡದಲ್ಲಿ ಸಾಕಷ್ಟು ಗಾಯದ ಸಮಸ್ಯೆಗಳಿವೆ.

1934ರಲ್ಲಿ ಆರಂಭವಾದ ರಣಜಿ ಟೂರ್ನಿಯಲ್ಲಿ ಮುಂಬೈ ಮೊದಲ ಸಲ ಟ್ರೋಫಿ ಎತ್ತಿ ಹಿಡಿದಿತ್ತು. ಈ ತಂಡ 1958-59ರಿಂದ 1972-73ರವರೆಗೆ ಸತತ 15 ವರ್ಷಗಳ ಕಾಲ ಟ್ರೋಫಿ ಜಯಿಸಿದೆ. ಒಟ್ಟು 39 ಸಲ ಚಾಂಪಿಯನ್ ಎನಿಸಿಕೊಂಡಿದೆ. ಆತಿಥೇಯರು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನ್ನುವುದಕ್ಕೆ ಈ ಅಂಕಿ ಅಂಶಗಳು ಸಾಕ್ಷಿ ನುಡಿಯುತ್ತವೆ.ಪ್ರವಾಸಿ ತಂಡದ ಮಧ್ಯಮ ವೇಗಿ ಜಗನ್ನಾಥ್ ಕೌಶಿಕ್ (ಒಟ್ಟು 20 ವಿಕೆಟ್), ಆಫ್ ಸ್ಪಿನ್ನರ್ ಸುನ್ನಿ ಗುಪ್ತಾ, ಎಡಗೈ ಸ್ಪಿನ್ನರ್ ಔಶಿಕ್ ಶ್ರೀನಿವಾಸ (ಒಟ್ಟು 18 ವಿಕೆಟ್) ತಂಡದ ಬೌಲಿಂಗ್ ಶಕ್ತಿ ಎನಿಸಿದ್ದಾರೆ.ಅಭಿನವ್ ಮುಕುಂದ್, ಮುರಳಿ ವಿಜಯ್ ಮಹಾರಾಷ್ಟ್ರ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಈ ಎಲ್ಲ ಬಲಗಳ ನೆರವಿನಿಂದ ಲಕ್ಷೀಪತಿ ಬಾಲಾಜಿ ನೇತೃತ್ವದ ತಮಿಳುನಾಡು ಆತಿಥೇಯರಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜುಗೊಂಡಿದೆ. ತಮಿಳುನಾಡು ಮೂರನೇ ಸಲ ರಣಜಿ ಚಾಂಪಿಯನ್ ಆಗುವ ವಿಶ್ವಾಸ ಹೊಂದಿದೆ.`ಮುಂಬೈ ಎದುರಿನ ಪಂದ್ಯ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಪ್ರದರ್ಶನ ನೀಡುವುದು ಅಗತ್ಯವಿದೆ~ ಎನ್ನುವುದು ನಾಯಕ ಬಾಲಾಜಿ ಅಭಿಪ್ರಾಯ.ರೋಹತಕ್ ವರದಿ:
ಕಳೆದ ಋತುವಿನ ಚಾಂಪಿಯನ್ ರಾಜಸ್ತಾನ ಹಾಗೂ ಹರಿಯಾಣ ತಂಡಗಳು ಬನ್ಸಿ ಲಾಲ್ ಕ್ರೀಡಾಂಗಣದಲ್ಲಿ ಇಂದು ನಡೆಯುವ ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ  ಮುಖಾಮಖಿಯಾಗಲಿವೆ.ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿ ಹರಿಯಾಣ ಸೆಮಿಫೈನಲ್ ಪ್ರವೇಶಿಸಿದೆ.2010-11ರಲ್ಲಿ ಚಾಂಪಿಯನ್ ಎನಿಸಿಕೊಂಡ ರಾಜಸ್ತಾನ ಈ ಸಲವೂ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದೆ. ಇಲ್ಲಿನ ಪಿಚ್ ವೇಗಿಗಳಿಗೆ ನೆರವು ನೀಡುವ ಸಾಧ್ಯತೆಯಿದೆ. ಉಭಯ ತಂಡಗಳು ಸಮಬಲ ಹೊಂದಿವೆ.ಹರಿಯಾಣದ ನಿತಿನ್ ಸೈನಿ (ಒಟ್ಟು 603 ರನ್), ರಾಹುಲ್ ದೆವಾನ್ (ಒಟ್ಟು 590 ರನ್) ಈ ಋತುವಿನ ಟೂರ್ನಿಯಲ್ಲಿ ಉತ್ತಮ ಮೊತ್ತ ಗಳಿಸಿದ್ದಾರೆ. ಎಂಟರ ಘಟ್ಟದ ಪಂದ್ಯವನ್ನು ಗೆಲ್ಲಿಸಿ ಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ ಹರ್ಷಲ್ ಪಟೇಲ್ ಇಲ್ಲಿಯೂ ಕೈ ಚಳಕ ತೋರಿದರೆ ಹರಿಯಾಣ ಪ್ರಶಸ್ತಿ ಸನಿಹ ಹೆಜ್ಜೆ ಹಾಕಬಹುದು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)