ಶುಕ್ರವಾರ, ಡಿಸೆಂಬರ್ 6, 2019
18 °C

ರಣಜಿ ಕ್ರಿಕೆಟ್: ಹರ್ಷಲ್ ದಾಳಿಗೆ ಕಂಗೆಟ್ಟ ಕರ್ನಾಟಕ

Published:
Updated:
ರಣಜಿ ಕ್ರಿಕೆಟ್: ಹರ್ಷಲ್ ದಾಳಿಗೆ ಕಂಗೆಟ್ಟ ಕರ್ನಾಟಕ

ಬೆಂಗಳೂರು: ಹರ್ಷಲ್ ಪಟೇಲ್ ಎಂಬ `ಹೀರೊ~ ಉದಯಿಸಲು ವೇದಿಕೆಯಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡಕ್ಕೆ ಅನಿರೀಕ್ಷಿತ ಆಘಾತ. ರಣಜಿ ಟ್ರೋಫಿ ಗೆಲ್ಲಬೇಕೆಂಬ ಕನಸಿನೊಂದಿಗೆ ಆರಂಭಗೊಂಡ ಯಾತ್ರೆಗೆ ಅರ್ಧಹಾದಿಯಲ್ಲೇ ತೆರೆಬೀಳುವ ಆತಂಕ ಎದುರಾಗಿದೆ.ಉದ್ಯಾನನಗರಿಯಲ್ಲಿ ಸೋಮವಾರ ಆರಂಭವಾದ ಹರಿಯಾಣ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 151 ರನ್‌ಗಳಿಗೆ ಆಲೌಟಾಯಿತು. ಕೇವಲ 49.5 ಓವರ್‌ಗಳಲ್ಲಿ ಎದುರಾಳಿ ತಂಡದ ಎಲ್ಲ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗಟ್ಟಿದ ಹರಿಯಾಣ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದೆ.ಕರ್ನಾಟಕ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಶ್ರೇಯ ಯುವ ಬೌಲರ್ ಹರ್ಷಲ್‌ಗೆ ಸಲ್ಲಬೇಕು. ಮೂರು ಸ್ಪೆಲ್‌ಗಳ ದಾಳಿಯಲ್ಲಿ  ಬ್ಯಾಟ್ಸ್‌ಮನ್‌ಗಳ ಮೇಲೆ `ಥೇನ್~ ಚಂಡಮಾರುತದಂತೆ ಅಪ್ಪಳಿಸಿದ ಅವರು 40 ರನ್‌ಗಳಿಗೆ ಎಂಟು ವಿಕೆಟ್ ಪಡೆದರು. ಇದು ಪ್ರಸಕ್ತ ಋತುವಿನಲ್ಲಿ ಕರ್ನಾಟಕದ ಕನಿಷ್ಠ ಮೊತ್ತ.ಮೊದಲ ಇನಿಂಗ್ಸ್ ಆರಂಭಿಸಿರುವ ಅಮಿತ್ ಮಿಶ್ರಾ ಬಳಗ ದಿನದಾಟದ ಅಂತ್ಯಕ್ಕೆ 38 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್ ಗಳಿಸಿದೆ. ಇನಿಂಗ್ಸ್ ಮುನ್ನಡೆ ಪಡೆಯಲು 32 ರನ್‌ಗಳು ಬೇಕು. ಆರಂಭಿಕ       ಬ್ಯಾಟ್ಸ್‌ಮನ್‌ಗಳಾದ ನಿತಿನ್ ಸೈನಿ (55, 114 ಎಸೆತ, 11 ಬೌಂ) ಮತ್ತು ರಾಹುಲ್ ದೆವಾನ್ (63, 114 ಎಸೆತ, 10 ಬೌಂ) ಅಜೇಯ ಅರ್ಧಶತಕ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಪರದಾಟ ನಡೆಸಿದ ಅದೇ ಪಿಚ್‌ನಲ್ಲಿ ಇವರಿಬ್ಬರು ಸೊಗಸಾದ ಆಟವಾಡಿದರು. ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವ ಕರ್ನಾಟಕದ ಕನಸು ಹೆಚ್ಚುಕಡಿಮೆ ಅಸ್ತಮಿಸಿದೆ. ಇನ್ನು ಏನಿದ್ದರೂ ಸ್ಪಷ್ಟ ಗೆಲುವಿಗೆ ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ರಣಜಿ ಟ್ರೋಫಿಯೆಡೆಗಿನ ಯಾತ್ರೆ ಇಲ್ಲಿಗೇ ಕೊನೆಗೊಳ್ಳಲಿದೆ.ಬಿರುಗಾಳಿಯಾದ ಹರ್ಷಲ್:  ಟಾಸ್ ಗೆದ್ದ ಕರ್ನಾಟಕ ನಿರೀಕ್ಷೆಯಂತೆಯೇ ಬ್ಯಾಟಿಂಗ್ ಆಯ್ದುಕೊಂಡಿತು. ಪಂದ್ಯದ ಮೊದಲ ಎರಡು ಅವಧಿಯ ಆಟದಲ್ಲಿ ಪಿಚ್ ಬೌಲರ್‌ಗಳಿಗೆ ನೆರವು ನೀಡಲಿದೆ ಎಂದು ಕ್ಯುರೇಟರ್ ಹೇಳಿದ್ದರು.ಆದ್ದರಿಂದ ಈ ಅವಧಿಯಲ್ಲಿ ಎಚ್ಚರಿಕೆಯ ಆಟವಾಡಿ ಬಳಿಕ ಇನಿಂಗ್ಸ್ ಬೆಳೆಸುವ ಲೆಕ್ಕಾಚಾರ ತಂಡದ್ದಾಗಿತ್ತು. ಆದರೆ ಎರಡು ಅವಧಿಗಳ ಒಳಗೆಯೇ ಆಲೌಟ್ ಆದ್ದ್ದದು ವಿಪರ್ಯಾಸ!ಹರ್ಷಲ್ ಬೌಲಿಂಗ್‌ನಲ್ಲಿ ವಿಕೆಟ್‌ಗಳು ಪಟಪಟನೇ ಉರುಳಿದವು. ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ನೆರವು ನೀಡಿದ್ದು ನಿಜ. ಕೆ.ಬಿ. ಪವನ್ ಮತ್ತು ಗಣೇಶ್ ಸತೀಶ್ ಅತ್ಯುತ್ತಮ ಎಸೆತಗಳಿಗೆ ವಿಕೆಟ್ ಒಪ್ಪಿಸಿದರು. ಇತರ ಬ್ಯಾಟ್ಸ್‌ಮನ್‌ಗಳು ಔಟಾಗಲು ಎಚ್ಚರಿಕೆಯ ಕೊರತೆ ಕೂಡಾ ಕಾರಣ. ಪವನ್ ಖಾತೆ ತೆರೆಯಲು ವಿಫಲರಾದರೆ, ನಾಯಕನ ಕಾಣಿಕೆ ಕೇವಲ ಐದು ರನ್. ಇಬ್ಬರೂ ವಿಕೆಟ್    ಕೀಪರ್‌ಗೆ ಕ್ಯಾಚಿತ್ತರು. ಈ ಹಂತದಲ್ಲಿ ಜೊತೆಯಾದ ರಾಬಿನ್ ಉತ್ತಪ್ಪ ಮತ್ತು ಭರತ್ ಚಿಪ್ಲಿ ಇನಿಂಗ್ಸ್‌ಗೆ ಮರುಜೀವ ನೀಡುವ ಪ್ರಯತ್ನ ಆರಂಭಿಸಿದರು. ಹರ್ಷಲ್ ಎಸೆದ ಎಂಟನೇ ಓವರ್‌ನಲ್ಲಿ ರಾಬಿನ್ ಕವರ್ ಡ್ರೈವ್ ಮತ್ತು ಸ್ಟ್ರೇಟ್ ಡ್ರೈವ್ ಮೂಲಕ ಎರಡು ಬೌಂಡರಿ ಗಿಟ್ಟಿಸಿದರೆ, ಭರತ್ ಮುಂದಿನ ಓವರ್‌ನಲ್ಲಿ ಇದೇ ಪರಾಕ್ರಮ ತೋರಿದರು. ತಮ್ಮ ಮೇಲಿನ ಒತ್ತಡವನ್ನು ಎದುರಾಳಿ ಬೌಲರ್‌ಗಳ ಮೇಲೆ ಹೇರುವುದು ಇವರ ಉದ್ದೇಶವಾಗಿತ್ತು.ಆದರೆ ಅದು ನಡೆಯಲಿಲ್ಲ. ತಂಡದ ಮೊತ್ತ 40 ಆಗಿದ್ದಾಗ ಭರತ್ (11) ಮರಳಿದರು. ಈ ಮೊತ್ತಕ್ಕೆ 11 ರನ್ ಸೇರಿಸಿದ ಬಳಿಕ ರಾಬಿನ್ (35, 50 ಎಸೆತ, 6 ಬೌಂ) ಕೂಡಾ ನಿರ್ಗಮಿಸಿದರು. ಈ ಮಹತ್ವದ ವಿಕೆಟ್ ಮೋಹಿತ್ ಶರ್ಮ ಪಾಲಾಯಿತು. ರಾಬಿನ್ ಬಿರುಸಿನ ಹೊಡೆತಕ್ಕೆ ಪ್ರಯತ್ನಿಸಿ ವಿಫಲರಾದಾಗ ಚೆಂಡು ಎರಡನೇ ಸ್ಲಿಪ್‌ನಲ್ಲಿದ್ದ ಸಚಿನ್ ರಾಣಾ ಕೈಸೇರಿತು.ಸ್ಟುವರ್ಟ್ ಬಿನ್ನಿ (22, 24 ಎಸೆತ, 4 ಬೌಂ) ಹಾಗೂ ಅಮಿತ್ ವರ್ಮಾ (5) ಒಂದು ರನ್ ಅಂತರದಲ್ಲಿ ಔಟಾಗುವುದೊಂದಿಗೆ ಕರ್ನಾಟಕ ಅತೀವ ಒತ್ತಡಕ್ಕೆ ಸಿಲುಕಿತು. ಆರು ವಿಕೆಟ್‌ಗೆ 99 ರನ್ ಗಳಿಸಿ ಭೋಜನ ವಿರಾಮಕ್ಕೆ ತೆರಳಿದ ಸತೀಶ್ ಬಳಗದ ಆಟ ಬಳಿಕ ಹೆಚ್ಚು ಹೊತ್ತು ಇರಲಿಲ್ಲ. ಸಿ.ಎಂ. ಗೌತಮ್ (26, 37 ಎಸೆತ) ಮತ್ತು ಸುನಿಲ್ ರಾಜು (21, 41 ಎಸೆತ) ಏಳನೇ ವಿಕೆಟ್‌ಗೆ 40 ರನ್ ಸೇರಿಸಿದ್ದು ಕರ್ನಾಟಕದ ಪರ ದಾಖಲಾದ ಅತ್ಯುತ್ತಮ ಜೊತೆಯಾಟ.ಭೋಜನ ವಿರಾಮದ ಬಳಿಕದ 70 ನಿಮಿಷಗಳ ಆಟದಲ್ಲಿ ಕೊನೆಯ ನಾಲ್ಕು ವಿಕೆಟ್‌ಗಳು ಉರುಳಿದವು. 21 ರ ಹರೆಯದ ಹರ್ಷಲ್ ಎಸೆತಗಳು ಕರ್ನಾಟಕಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದವು. ಭಾರತ 19 ವರ್ಷ ವಯಸ್ಸಿನೊಳಗಿನವರ ತಂಡದಲ್ಲಿದ್ದ ಹರ್ಷಲ್‌ಗೆ ಇದು ಚೊಚ್ಚಲ ರಣಜಿ ಋತು. ಮಹತ್ವದ ಪಂದ್ಯದಲ್ಲೇ ತಂಡದ ನೆರವಿಗೆ ಬಂದಿದ್ದಾರೆ.ಅವರ ಮೂರು ಸ್ಪೆಲ್‌ಗಳು ಕರ್ನಾಟಕಕ್ಕೆ ಮಾರಕ ಎನಿಸಿದವು. ಮೊದಲ ಸ್ಪೆಲ್‌ನಲ್ಲಿ (7-4-18-3) ಮೂರು ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದರೆ, ಅಲ್ಪ ವಿಶ್ರಾಂತಿಯ ಬಳಿಕ ಎರಡನೇ ಸ್ಪೆಲ್‌ನ್ಲ್ಲಲಿ (5-2-13-2) ಮತ್ತೆರಡು ವಿಕೆಟ್ ಪಡೆದು ಕರ್ನಾಟಕ  ತಲೆಎತ್ತದಂತೆ ಮಾಡಿದರು. ಭೋಜನ ವಿರಾಮದ ಬಳಿಕದ ಸ್ಪೆಲ್‌ನಲ್ಲೂ (4.5-1-9-3) ಬೆಂಕಿಯುಗುಳಿದ ಈ ಬೌಲರ್ ಕರ್ನಾಟಕ `ಬಾಲ~ ಬಿಚ್ಚದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಕರ್ನಾಟಕದ ಅಲ್ಪ ಮೊತ್ತಕ್ಕೆ ಕೆಲವು ಬ್ಯಾಟ್ಸ್‌ಮನ್‌ಗಳ ಬೇಜವಾಬ್ದಾರಿಯ ಆಟದ ಜೊತೆಗೆ ಹರಿಯಾಣದ ಶಿಸ್ತಿನ ದಾಳಿಯೂ ಕಾರಣ.ಭರತ್ ಮತ್ತು ಸ್ಟುವರ್ಟ್ ಅವರನ್ನು ಔಟ್ ಮಾಡಲು ಹರ್ಷಲ್ ಪ್ರಯೋಗಿಸಿದ ಎಸೆತಗಳು ಸೊಗಸಾಗಿದ್ದವು. ಲೀಗ್‌ನಲ್ಲಿ ರನ್ ಮಳೆ ಸುರಿಸಿರುವ ಸ್ಟುವರ್ಟ್ ಬಿನ್ನಿ ಅವರು ಹರ್ಷಲ್ ಎಸೆತದಲ್ಲಿ ಚೆಂಡನ್ನು ಆಡದಿರಲು ನಿರ್ಧರಿಸಿದರು. ಆದರೆ ಕೊನೆಯ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಒಳನುಗ್ಗಿದ ಚೆಂಡು ಬೇಲ್ಸ್‌ನ್ನು ಗಾಳಿಯಲ್ಲಿ ತೇಲಿಸಿತು.

 

`ಇನ್ನೂ ಮೂರು ದಿನಗಳ ಆಟ ಬಾಕಿ ಇದೆ~

ಬೆಂಗಳೂರು: `ಮೂರು ದಿನಗಳ ಆಟ ಬಾಕಿಯುಳಿದಿವೆ. ಕರ್ನಾಟಕ ತಂಡಕ್ಕೆ ಮರುಹೋರಾಟ ನಡೆಸುವ ಅವಕಾಶವಿದೆ. ಆಟ ಇನ್ನೂ ಮುಗಿದಿಲ್ಲ~- ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮೂಲಕ ಕರ್ನಾಟಕದ ಪತನಕ್ಕೆ ಕಾರಣರಾದ ಹರಿಯಾಣ ತಂಡದ ಹರ್ಷಲ್ ಪಟೇಲ್ ಅವರ ಪ್ರತಿಕ್ರಿಯೆ ಇದು.ಮೊದಲ ದಿನದಾಟದಲ್ಲಿ ಮೇಲುಗೈ ಪಡೆದರೂ ಪಂದ್ಯದ ಮೇಲೆ ಇನ್ನೂ ಸಂಪೂರ್ಣ ಹಿಡಿತ ಲಭಿಸಿಲ್ಲ ಎನ್ನುವ ಎಚ್ಚರಿಕೆಯನ್ನು ಅವರು ಸಹ ಆಟಗಾರರಿಗೆ ನೀಡಿದ್ದಾರೆ. `ಆರಂಭದಲ್ಲಿ ಪಿಚ್‌ನಿಂದ ಸಾಕಷ್ಟು ನೆರವು ಲಭಿಸಿತು. ನಾನು ಲೈನ್ ಮತ್ತು ಲೆಂಗ್ತ್ ಮೇಲೆ ಮಾತ್ರ ಗಮನ ನೀಡಿದೆ. ವಿಕೆಟ್‌ಗಳು ತಾನಾಗಿಯೇ ಲಭಿಸಿದವು~ ಎಂದರು.`ನಮ್ಮ ಬೌಲಿಂಗ್ ಶ್ರೇಷ್ಠ ಮಟ್ಟದಲ್ಲಿತ್ತು. ಎದುರಾಳಿ ತಂಡದ ಬೇಜವ್ದಾಬಾರಿಯುತ ಬ್ಯಾಟಿಂಗ್ ಕೂಡಾ ನಮಗೆ ಮೇಲುಗೈ ಸಾಧಿಸಲು ನೆರವು ನೀಡಿತು~ ಎಂದು ನುಡಿದರು.

ಸ್ಕೋರ್ ವಿವರ;

ಕರ್ನಾಟಕ: ಮೊದಲ ಇನಿಂಗ್ಸ್

49.5 ಓವರ್‌ಗಳಲ್ಲಿ 151

ರಾಬಿನ್ ಉತ್ತಪ್ಪ ಸಿ ರಾಣಾ ಬಿ ಮೋಹಿತ್ ಶರ್ಮ  35

ಕೆ.ಬಿ. ಪವನ್ ಸಿ ನಿತಿನ್ ಸೈನಿ ಬಿ ಹರ್ಷಲ್ ಪಟೇಲ್  00

ಗಣೇಶ್ ಸತೀಶ್ ಸಿ ನಿತಿನ್ ಸೈನಿ ಬಿ ಹರ್ಷಲ್ ಪಟೇಲ್ 05

ಭರತ್ ಚಿಪ್ಲಿ ಸಿ ನಿತಿನ್ ಸೈನಿ ಬಿ ಹರ್ಷಲ್ ಪಟೇಲ್  11

ಅಮಿತ್ ವರ್ಮಾ ಸಿ ರಾಣಾ ಬಿ ಹರ್ಷಲ್ ಪಟೇಲ್  05

ಸ್ಟುವರ್ಟ್ ಬಿನ್ನಿ ಬಿ ಹರ್ಷಲ್ ಪಟೇಲ್  22

ಸಿ.ಎಂ. ಗೌತಮ್ ಎಲ್‌ಬಿಡಬ್ಲ್ಯು ಬಿ ಹರ್ಷಲ್  26

ಸುನಿಲ್ ರಾಜು ಸಿ ಸನ್ನಿ ಸಿಂಗ್ ಬಿ ಅಮಿತ್ ಮಿಶ್ರಾ  21

ಎಸ್.ಎಲ್. ಅಕ್ಷಯ್ ಸಿ ಮೋಹಿತ್ ಬಿ ಹರ್ಷಲ್ 16

ಕೆ.ಪಿ. ಅಪ್ಪಣ್ಣ ಸಿ ನಿತಿನ್ ಸೈನಿ ಬಿ ಹರ್ಷಲ್ ಪಟೇಲ್  09

ಎನ್.ಸಿ. ಅಯ್ಯಪ್ಪ ಔಟಾಗದೆ  00

ಇತರೆ: (ನೋಬಾಲ್-1)  01

ವಿಕೆಟ್ ಪತನ: 1-6 (ಪವನ್; 3.4), 2-14  (ಸತೀಶ್; 5.5), 3-40 (ಭರತ್; 11.4), 4-51 (ರಾಬಿನ್; 17.2), 5-77 (ಬಿನ್ನಿ; 25.4), 6-78 (ಅಮಿತ್; 27.5), 7-118 (ಸುನಿಲ್; 38.4), 8-126 (ಗೌತಮ್; 41.4), 9-148 (ಅಪ್ಪಣ್ಣ; 47.6), 10-151 (ಅಕ್ಷಯ್; 49.5)

ಬೌಲಿಂಗ್: ಆಶೀಶ್ ಹೂಡಾ 9-1-31-0, ಹರ್ಷಲ್ ಪಟೇಲ್ 16.5-7-40-8, ಸಚಿನ್ ರಾಣಾ 7-3-12-0, ಮೋಹಿತ್ ಶರ್ಮ 8-1-35-1, ಅಮಿತ್ ಮಿಶ್ರಾ 9-1-33-1

ಹರಿಯಾಣ: ಮೊದಲ ಇನಿಂಗ್ಸ್ 38 ಓವರ್‌ಗಳಲ್ಲಿ

ವಿಕೆಟ್ ನಷ್ಟವಿಲ್ಲದೆ 120

ನಿತಿನ್ ಸೈನಿ ಬ್ಯಾಟಿಂಗ್  55

ರಾಹುಲ್ ದೆವಾನ್ ಬ್ಯಾಟಿಂಗ್  63

ಇತರೆ: (ಲೆಗ್‌ಬೈ-1, ವೈಡ್-1)  02

ಬೌಲಿಂಗ್: ಎಸ್.ಎಲ್. ಅಕ್ಷಯ್ 9-1-36-0, ಎನ್.ಸಿ. ಅಯ್ಯಪ್ಪ 7-2-33-0, ಸ್ಟುವರ್ಟ್ ಬಿನ್ನಿ 7-1-23-0, ಕೆ.ಪಿ. ಅಪ್ಪಣ್ಣ 9-3-13-0, ಸುನಿಲ್ ರಾಜು 6-2-14-0

ಪ್ರತಿಕ್ರಿಯಿಸಿ (+)